ADVERTISEMENT

ಪರೀಕ್ಷೆ ಭಯವೇ, ಸಂಗೀತ ಕೇಳಿ!

ಡಾ.ವಿಜಯದಾಸ್
Published 11 ಏಪ್ರಿಲ್ 2018, 19:30 IST
Last Updated 11 ಏಪ್ರಿಲ್ 2018, 19:30 IST
ಪರೀಕ್ಷೆ ಭಯವೇ, ಸಂಗೀತ ಕೇಳಿ!
ಪರೀಕ್ಷೆ ಭಯವೇ, ಸಂಗೀತ ಕೇಳಿ!   

‘ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು’, ‘ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ’, ‘ನಾದಮಯ ಈ ಲೋಕವೆಲ್ಲಾ’ ಹೀಗೆ ಸೊಗಸಾದ ಹಾಡುಗಳು ತೇಲಿಬರುತ್ತಿದ್ದರೆ, ಕೇಳುಗರು ಭಾವಪರವಶತೆಯಿಂದ ಆ ಸಂಗೀತದಲ್ಲಿಯೇ ಮುಳುಗಿ ಹೋಗುವುದನ್ನು ನಾವು ಕಾಣುವುದುಂಟು. ಸುಶ್ರಾವ್ಯ ಸಂಗೀತದಲ್ಲಿರುವ ಆನಂದ ನೀಡುವಂತಹ ಅದ್ಭುತ ಗುಣವೇ ಇದಕ್ಕೆ ಕಾರಣ.

ಸಂಗೀತ ನಮ್ಮ ಭಾವನೆಗಳೊಂದಿಗೆ ಸಂಬಂಧ ಹೊಂದಿರುತ್ತದೆ ಹಾಗೂ ಎಲ್ಲೋ ಸುಪ್ತವಾಗಿರುವ ಸುಮಧುರ ಭಾವವನ್ನು ಜಾಗೃತಗೊಳಿಸುತ್ತದೆ. ಆ ಮೂಲಕ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಉಲ್ಲಾಸವನ್ನೂ ಉಂಟು ಮಾಡುತ್ತದೆ.

ಭಾರತದ ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಸೇರಿದಂತೆ, ಈ ಕಲೆಯ ಬೇರೆ ಬೇರೆ ಪ್ರಕಾರಗಳಾದ ಭಾವಗೀತೆ, ಭಕ್ತಿಗೀತೆ, ಚಿತ್ರಗೀತೆ, ಜಾನಪದ ಹಾಗೂ ವಾದ್ಯ ತಾಳದ ಅಲೆಗಳು ವಿವಿಧ ರೂಪಗಳಲ್ಲಿ, ವಿವಿಧ ವ್ಯಕ್ತಿತ್ವದ ಜನರಿಗೆ ಮುದವನ್ನು ನೀಡುತ್ತವೆ. ಆದರೆ ರಾಗ, ತಾಳ ತಪ್ಪಿದ ಗಾನ, ಕರ್ಕಶವಾಗಿ, ಕೇಳುಗರಿಗೆ ಮಾನಸಿಕ ಹಿಂಸೆಯನ್ನು ಉಂಟುಮಾಡಬಹುದು.

ADVERTISEMENT

ಉತ್ತಮ ಸಂಗೀತ ಎಲ್ಲರ ಗಮನ ಸೆಳೆಯುತ್ತದೆ. ಅದು ಕೋಗಿಲೆಗಾನ, ಪಕ್ಷಿಗಳ ಕಲರವ ಅಥವಾ ಹರಿಯುವ ನದಿಯ ಜುಳು ಜುಳು ನಾದ... ಯಾವುದೂ ಆಗಿರಬಹುದು. ಮನುಷ್ಯನನ್ನು ಧ್ಯಾನದಲ್ಲಿ ಲೀನವಾಗಿಸಲೂ ಸಂಗೀತ ಸಹಕಾರಿ.

ಸಂಗೀತ ಚಿಕಿತ್ಸೆ ಎಂಬ ಪದ್ಧತಿ ಇತ್ತೀಚೆಗೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪ್ರಚಲಿತವಾಗುತ್ತಿದೆ ಹಾಗೂ ಇದರ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆದಿವೆ. ಭಾರತದಲ್ಲಿ ಸಂಗೀತವು ಅನಾದಿ ಕಾಲದಿಂದ, ಸಾಂಸ್ಕೃತಿಕ ಹಾಗೂ ಮನರಂಜನಾ ಕಲೆಯಾಗಿ ಜನಸಾಮಾನ್ಯರಲ್ಲಿ ಹಾಸು ಹೊಕ್ಕಾಗಿದೆ.

ಸಂಗೀತವನ್ನು ನಿರ್ದಿಷ್ಟ ರೀತಿಯಲ್ಲಿ, ನಿರ್ದಿಷ್ಟ ಬಗೆಯ ರೋಗಿಗಳಿಗೆ, ನಿರ್ದಿಷ್ಟ ಕಾಲದಲ್ಲಿ, ಅಳವಡಿಸಿದರೆ ಅದು ಸಂಗೀತ ಚಿಕಿತ್ಸೆಯಾಗುತ್ತದೆ. ಇದರಿಂದ ಆರೋಗ್ಯಕರ ಅನುಭವಗಳು ಹಲವಾರು ರೋಗಿಗಳಲ್ಲಿ ಕಂಡು ಬಂದಿರುವುದನ್ನು ದಾಖಲಿಸಲಾಗಿದೆ.

ಮನಸ್ಸಿಗೆ ಮುದ ನೀಡುವ ಧ್ವನಿತರಂಗಗಳು ಯಾವುದೇ ಚಿಕಿತ್ಸೆಗೂ ಪೂರಕವಾಗಿ ಸಹಾಯ ಮಾಡಬಲ್ಲವು. ಇದರ ಪ್ರಯೋಜನ ಪಡೆಯಲು ಆಸಕ್ತಿ ಮತ್ತು ವಿಶ್ವಾಸ ಮುಖ್ಯ. ಸಂಗೀತವನ್ನು ಕೇಳಿಯಾದರೂ, ನುಡಿಸಿಯಾದರೂ ಅಥವಾ ಹಾಡಿಯಾದರೂ ಪ್ರಯೋಜನ ಪಡೆಯಬಹುದು. ಇದರಿಂದ ಮಾನಸಿಕ ಒತ್ತಡ ನಿಯಂತ್ರಣ ಹೊಂದಿ ಮನೋದೈಹಿಕ ವ್ಯತ್ಯಾಸಗಳನ್ನು ತಕ್ಕಮಟ್ಟಿಗೆ ತಡೆಗಟ್ಟುವಲ್ಲಿ ಸಾಧ್ಯವಾಗುತ್ತದೆ ಎಂಬುದು ಸಂಶೋಧನೆಗಳಿಂದ ಕಂಡುಬಂದ ವರದಿ.

ಸಂಗೀತಕ್ಕೆ ಸಂಬಂಧಪಟ್ಟಂತೆ ಹಲವಾರು ಸಂಶೋಧನೆಗಳು ನಡೆದಿದ್ದು, ಅಲ್ಲಿ ಕಂಡುಬಂದ ಕೆಲವು ಅಂಶಗಳು ಹೀಗಿವೆ:

*ಸಂಗೀತ ಕೇಳುವುದರಿಂದ ಮಾನಸಿಕ ಒತ್ತಡದಲ್ಲಿರುವವರಿಗೆ ನೆಮ್ಮದಿ ಹೊಂದಲು ಸಹಕಾರಿ. ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಎದುರಿಸುವ ಒತ್ತಡವೂ ಸಂಗೀತ ಕೇಳುವುದರಿಂದ ಕಡಿಮೆ ಆಗುತ್ತದೆ.

*ಸಂಗೀತ ಕೇಳುವುದರಿಂದ ಡೋಪಮಿನ್ ಎಂಬ ಹಾರ್ಮೋನ್ ಮತ್ತು ಇತರೆ ರಾಸಾಯನಿಕ ದ್ರವ್ಯಗಳು ಮೆದುಳಿನಲ್ಲಿ ಸ್ರವಿಸುವ ಕಾರಣ ನೆನಪಿನ ಶಕ್ತಿ ವೃದ್ಧಿಸುತ್ತದೆ. ಕಲಿಕೆ ಹಾಗೂ ಬಯೋಫೀಡ್‍ಬ್ಯಾಕ್‌ಗೆ ಇದರಿಂದ ತುಂಬಾ ಅನುಕೂಲವಾಗುವುದು.

*ಶಸ್ತ್ರಚಿಕಿತ್ಸೆಯ ಮೊದಲು ಮತ್ತು ನಂತರದಲ್ಲಿ ಹೆಡ್‍ಫೋನ್ ಮೂಲಕ ಸಂಗೀತ ಕೇಳುವುದರಿಂದ ಚಿಕಿತ್ಸೆಯ ಭಯ ಮತ್ತು ಆತಂಕ ಕಡಿಮೆಯಾಗುವುದು.

*ವೃದ್ಧಾಪ್ಯದಲ್ಲಿ, ಖಿನ್ನತೆ ಹೊಂದಿದವರಿಗೆ ಸಂಗೀತ ಆತ್ಮಸ್ಥೈರ್ಯ ಹೊಂದಲು ಅನುಕೂಲವಾಗುವುದು.

*ಕ್ಯಾನ್ಸರ್ ರೋಗಿಗಳಲ್ಲಿ, ಅವರು ಜೀವಭಯ ತೊರೆದು ಗುಣಮಟ್ಟದ ಜೀವನ ನಡೆಸಲು ಸಂಗೀತ ಪ್ರಭಾವ ಬೀರುವುದು.

*ಸ್ತನ್ಯಪಾನ ಮಾಡಿಸುವ ತಾಯಂದಿರಲ್ಲಿ ಹೆಚ್ಚಿನ ಹಾಲು ಸ್ರವಿಸಲು ನೆರವಾಗುವುದು.

*ಅಧಿಕ ರಕ್ತದೊತ್ತಡ ನಿಯಂತ್ರಿಸುವಲ್ಲಿ ಶಾಸ್ತ್ರೀಯ ಸಂಗೀತ (ಅದರ ಕೆಲವು ರಾಗಗಳು) ಸಹಕಾರಿಯಾಗುವುದು.

ಇಷ್ಟೆಂದ ಮಾತ್ರಕ್ಕೆ ಸಂಗೀತವೇ ಸರ್ವಬಾಧೆಗೂ ಪರಿಹಾರವಲ್ಲ. ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಇದು ಸಹಕಾರಿ. ಚಿಕಿತ್ಸೆಗೆ ಪೂರಕವಾಗಿ ಆಸ್ಪತ್ರೆಯ ಚಿಕಿತ್ಸಾ ಘಟಕಗಳಲ್ಲಿ ಮೆದುಧ್ವನಿಯಲ್ಲಿ ಸುಶ್ರಾವ್ಯ ಸಂಗೀತ ತೇಲಿ ಬರುತ್ತಿದ್ದರೆ, ರೋಗಿ, ಶುಶ್ರೂಷಕ ಸಿಬ್ಬಂದಿ, ವೈದ್ಯ ಎಲ್ಲರಿಗೂ ಹೊಸ ಚೈತನ್ಯ ಉಂಟಾಗಬಹುದು.

(ಲೇಖಕರು: ಸಹಪ್ರಾಧ್ಯಾಪಕರು, ಶರೀರ ಕ್ರಿಯಾಶಾಸ್ತ್ರ ವಿಭಾಗ, ಎಂ.ಎಸ್.ರಾಮಯ್ಯ ಮಹಾವಿದ್ಯಾಲಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.