ವಿದ್ಯಾರ್ಥಿ ಜೀವನದ ಸವಿ ಅನುಭವಿಸಲು ಹಾಸ್ಟೆಲ್‌ಗಳಿಗೆ ಸೇರಬೇಕು. ಹಾಸ್ಟೆಲ್ ನೆನಪುಗಳು ಕಥೆಯೊಳಗಿನ ಕಥೆಗಳಿದ್ದ ಹಾಗೆ. ಅದರಲ್ಲೂ ಬಿಸಿಎಂ ಹಾಸ್ಟೆಲ್ ಎಂದರೆ ಅದರ ಮಜವೇ ಬೇರೆ. 
ಪದವಿ ಅಥವಾ ವಿಶ್ವವಿದ್ಯಾನಿಲಯಗಳಲ್ಲಿ ಓದಲು ಬರುವ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳು ಕೋರ್ಸ್ ಮುಗಿಯುವ ವೇಳೆಗೆ ಒಂದೇ ತಾಯಿ ಮಕ್ಕಳಂತಾಗಿಬಿಡುತ್ತಾರೆ. ಇದು ಹಾಸ್ಟೆಲ್ ಮಹಿಮೆ.  
ಅದೇ ಹುಡುಗಿಯರು, ಹಿಂದಿನ ಬೆಂಚಿನ ತರ‌್ಲೆ ಹುಡುಗರು, ಅದೇ ಕ್ಲಾಸ್ ರೂಮ್‌ನ ಕಾಲೇಜು ನಿಧಾನವಾಗಿ ಬೇಸರವಾಗಬಹುದು. ಆದರೆ, ಬಿಸಿಎಂ ಹಾಸ್ಟೆಲ್ ಜೀವನ ಬೇಸರವಾಗುವುದೇ ಇಲ್ಲ.  ಕ್ಲಾಸ್ ಮುಗಿಸಿ ಹಾಸ್ಟೆಲ್‌ಗೆ ಬಂದರೆ ಮುಗಿಯಿತು, ನಿಜವಾದ ಕದನ ಆರಂಭ. ಮುಖ ತೊಳೆಯುವುದರಿಂದ ಹಿಡಿದು ರಾತ್ರಿ ಊಟ ಮಾಡಿ ಮಲಗುವವರೆಗೂ ಗದ್ದಲ ತಪ್ಪಿದ್ದಲ್ಲ. 
ಇದರ ನಡುವೆ, ಎಲ್ಲಿಂದಲೋ ಕಲಿಯಲು ಬಂದ ವಿದ್ಯಾರ್ಥಿಗಳಿಗೆ ತೀರ ಆತ್ಮೀಯರಾಗುವ ವಾರ್ಡನ್ ತಮ್ಮ ಮಕ್ಕಳಂತೆ ವಿದ್ಯಾರ್ಥಿಗಳೊಂದಿಗೆ ಹುಡುಗಾಟದಲ್ಲಿ ತೊಡಗುವ ಘಳಿಗೆಗಳೂ ಮರೆಯಲು ಅಸಾಧ್ಯ.
ಮೊದ ಮೊದಲು ಹಾಸ್ಟೆಲ್‌ನಲ್ಲಿ ಕೊಡುವ ಬಿಸಿ ರಾಗಿಮುದ್ದೆ ಊಟವನ್ನು ಪಂಚಾಮೃತವೆಂದು ಊಟ ಮಾಡುವ ವಿದ್ಯಾರ್ಥಿಗಳು,  ಕೊನೆ ಕೊನೆಗೆ ಇದೇನಿದು ರಾಗಿ ಮುದ್ದೆಯೂ ಅಥವಾ ಲೆದರ್ ಬಾಲೋ ? ಎಂಬ ಪ್ರಶ್ನೆಗಳನ್ನು ಹಾಕುವುದು ಇಲ್ಲಿನ ವಿಶೇಷ. ಊಟದ ವಿಷ್ಯ ಬದಿಗಿರಲಿ, ಮಧ್ಯರಾತ್ರಿವರೆಗೆ ಓದುವ ವಿದ್ಯಾರ್ಥಿಗಳಿಗೆ  ತೊಂದರೆಕೊಡುವ ಸ್ನೇಹಿತರೂ, ಪುಸ್ತಕದ ಹುಳುಗಳ ಹಾಗೆ ಓದುವ ವಿದ್ಯಾರ್ಥಿಗಳೂ ಇಲ್ಲಿರುತ್ತಾರೆ. 
ಪೋಷಕರು ನೂರಾರು ಕನಸುಗಳನ್ನು ಕಟ್ಟಿಕೊಂಡು ಉನ್ನತ ಶಿಕ್ಷಣಕ್ಕೆ ಮಕ್ಕಳನ್ನು ಕಳುಹಿಸಿದರೆ, ಕೆಲ ವಿದ್ಯಾರ್ಥಿಗಳು ತಾವು ರಾಯಲ್ ಫ್ಯಾಮಿಲಿ ಮಕ್ಕಳಂತೆ ಬದುಕಿ ಅಮೂಲ್ಯವಾದ ಜೀವನ ಹಾಳುಮಾಡಿಕೊಳ್ಳುತ್ತಾರೆ. ಪರೀಕ್ಷೆ ಮುಗಿದು ಅಂಕ ಪಟ್ಟಿ ಕೈಗೆ ಬಂದಾಗ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ  ಮನೆಗೆ   ಹಿಂತಿರುಗಿ, ಕೆಲಸಕ್ಕಾಗಿ ಊರೂರು ಸುತ್ತುವ ದೃಶ್ಯಗಳೂ ನಮ್ಮೆದುರಿಗೆ ನಡೆಯುತ್ತಿದೆ.
 
ಅದೇನೇ ಇರಲಿ, ಬಿಸಿಎಂ ಹಾಸ್ಟೆಲ್‌ಗಳಲ್ಲಿ ಓದಿ ಅತ್ಯುನ್ನತ ಸ್ಥಾನಕ್ಕೆ ಏರಿದವರಿದ್ದಾರೆ.  ಉತ್ತಮ ಬದುಕು ರೂಪಿಸಿಕೊಂಡವರಿದ್ದಾರೆ. ಎರಡು ವರ್ಷಗಳು ಮಾತ್ರ  ಹಾಸ್ಟೆಲ್‌ನಲ್ಲಿ ಇದ್ದರೂ ಅದು ಕಲಿಸುವ ಜೀವನ ಪಾಠಗಳು ನೂರಾರು. ನೆನಪುಗಳೂ ಸಾವಿರಾರು... 
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.