ADVERTISEMENT

ಬೆಟ್ಟದ ಮೇಲೇರಿ; ಬಂಡೆಯಲ್ಲಿ ಜಾರಿ...

ಪರಮೇಶ್ವರಯ್ಯ ಸೊಪ್ಪಿಮಠ
Published 14 ಮಾರ್ಚ್ 2018, 19:30 IST
Last Updated 14 ಮಾರ್ಚ್ 2018, 19:30 IST
ಬೆಟ್ಟದ ಮೇಲೇರಿ; ಬಂಡೆಯಲ್ಲಿ ಜಾರಿ...
ಬೆಟ್ಟದ ಮೇಲೇರಿ; ಬಂಡೆಯಲ್ಲಿ ಜಾರಿ...   

ಮೇಲಿಂದ ಇಳಿಬಿಟ್ಟ ಹಗ್ಗಕ್ಕೆ ಜೋತುಬಿದ್ದು ಮೇಲೇರುತ್ತಿದ್ದಂತೆ ಒಮ್ಮೆ ಕೆಳಗೆ ನೋಡಿದ್ದೇ, ‘ವಾವ್’ ಎಂದು ಉದ್ಗಾರ ತೆಗೆದು ಇನ್ನಷ್ಟು ಉತ್ಸಾಹದಿಂದ ಹಗ್ಗ ಹಿಡಿದು ಏರಿದಳು ಆ ಹುಡುಗಿ. ಕಾಲು ಜಾರುತ್ತಿದ್ದರೂ ಭಯಪಡದೇ ತದೇಕ ಚಿತ್ತದಿಂದ ಬೆಟ್ಟದ ನೆತ್ತಿ ತಲುಪಲು ಬೆವರು ಒರೆಸಿಕೊಳ್ಳುತ್ತ ಹಗ್ಗದೊಂದಿಗೆ ತಾನೂ ಅಲುಗಾಡುತ್ತಾ ಒಂದೊಂದೇ ಹೆಜ್ಜೆ ಇಟ್ಟು ಮೇಲೇರುತ್ತಿದ್ದಳು ಮತ್ತೊಬ್ಬಾಕೆ.

ಬಳ್ಳಾರಿ ಜಿಲ್ಲೆಯ ದಶಮಾಪುರದ ಬೆಟ್ಟಕ್ಕೆ ಇತ್ತೀಚೆಗೆ ಟ್ರೆಕ್ಕಿಂಗ್‌ಗೆಂದು ಬಂದಿದ್ದ ಮಕ್ಕಳಲ್ಲಿ ಪ್ರಕೃತಿ ಬಗ್ಗೆ ತಿಳಿದುಕೊಳ್ಳುವ ಹುಮ್ಮಸ್ಸು ಎದ್ದು ಕಾಣುತ್ತಿತ್ತು. ಮಕ್ಕಳಿಗಾಗಿ ಏರ್ಪಡಿಸಿದ್ದ ಪ್ರಕೃತಿ ಅರಿಯುವ ಶಿಬಿರವದು. ಅದರಲ್ಲಿ ನೂರಾರು ಮಕ್ಕಳು ಪಾಲ್ಗೊಂಡಿದ್ದರು. ಬಾಲಕಿಯರ ಸಂಖ್ಯೆಯೇ ಹೆಚ್ಚಾಗಿತ್ತು. ದಾವಣಗೆರೆಯ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿಯ ಎನ್.ಕೆ. ಕೊಟ್ರೇಶ್, ಶಶಿ ಕುಮಾರ್, ಹರ್ಷ ಮಾರ್ಗದರ್ಶನದಲ್ಲಿ ಶಿಬಿರ ನಡೆಯಿತು.

ಯಾವುದೇ ಚಾರಣ ಪ್ರಾರಂಭಿಸುವ ಮೊದಲು ಆ ಸ್ಥಳದ ಬಗ್ಗೆ ಮಾಹಿತಿ ಕಲೆ ಹಾಕಬೇಕು. ಕ್ರಮಿಸಬೇಕಾದ ದೂರದ ಕುರಿತು ತಿಳಿದಿರಬೇಕು. ಆ ಪ್ರದೇಶದಲ್ಲಿ ಚಟುವಟಿಕೆ ನಡೆಸಲು ಅಗತ್ಯ ಅನುಮತಿ ಪತ್ರ ಪಡೆದಿರಬೇಕು. ಇದನ್ನೆಲ್ಲ ಯೋಚಿಸಿಯೇ ಆಯೋಜಕರು ಶಿಬಿರಾರ್ಥಿಗಳಿಗೆ ಉತ್ತಮ ವ್ಯವಸ್ಥೆಯನ್ನೇ ಕಲ್ಪಿಸಿದ್ದರು.

ADVERTISEMENT

ದಶಮಾಪುರದ ಬೆಟ್ಟ ಏಕಶಿಲಾ ಬಂಡೆ. ಈ ಭಾಗದಲ್ಲಿ ಇದೇ ದೊಡ್ಡದು. ಪೂರ್ವಕ್ಕೆ ಬಲವಂತಪ್ಪನ ಬೆಟ್ಟ, ಪಶ್ಚಿಮಕ್ಕೆ ಆನೆಕಲ್ಲು ತಿಮ್ಮಪ್ಪನ ಗುಡ್ಡದಿಂದಾಗಿ ಈ ಪ್ರದೇಶದಲ್ಲಿ ಬೆಟ್ಟಗಳು ಸಾಲಾಗಿ ಬರುತ್ತವೆ. ಆ ಗುಡ್ಡಗಳ ಸಾಲಿನ ತಪ್ಪಲಿಗೆ ನಾವು ಹೋಗಬೇಕಿತ್ತು. ಬೆಳಿಗ್ಗೆ ಆರು ಗಂಟೆಗೆ ಎಲ್ಲಾ ಮಕ್ಕಳೂ ನಗರದ ಕೂಡ್ಲಿಗಿ ಸರ್ಕಲ್‌ ಬಳಿ ಹಾಜರಿದ್ದರು. 20 ಕಿಲೋಮೀಟರ್ ಪ್ರಯಾಣ ಮಾಡಿದ ನಂತರ ಶಿಬಿರದ ಸ್ಥಳವನ್ನು ತಲುಪಿದರು. ಮಕ್ಕಳಿಗೆ ಸುತ್ತಲ ಗುಡ್ಡಗಳು ತಂಗಾಳಿ ಕಳುಹಿಸುವ ಮೂಲಕ ಸ್ವಾಗತ ಕೋರುತ್ತಿದ್ದವು.

ನೀರಿನ ಬಾಟಲ್, ಚಿಕ್ಕದಾದ ಬ್ಯಾಟರಿ, ರಕ್ಷಣೆಯ ಜಾಕೆಟ್‍, ಟೋಪಿ, ಅಗತ್ಯ ಉಡುಪು, ಟ್ರೆಕ್ಕಿಂಗ್ ಶೂಗಳು ಅಲ್ಲದೇ ಅಗತ್ಯವಿರುವ ಸಾಮಗ್ರಿಗಳನ್ನು ಎಲ್ಲ ಮಕ್ಕಳು ತೆಗೆದುಕೊಂಡು ಬಂದಿದ್ದರು. ಉಪಾಹಾರದ ನಂತರ ಪರಿಚಯಾತ್ಮಕ ಕಾರ್ಯಕ್ರಮ ನಡೆಸುತ್ತಾ, ಅವರನ್ನು ಗುಂಪುಗಳಾಗಿ ವಿಂಗಡಿಸಲಾಯಿತು. ಸಾಹಸದ ಆಟಗಳನ್ನು ಆಡಿಸಲಾಯಿತು. ನಂತರ ಮಕ್ಕಳಿಗೆ ತರಬೇತುದಾರರಾದ ಕೋಟ್ರೇಶ ಅವರು ಸಾಹಸ, ಚಾರಣ ಮತ್ತು ಪ್ರಕೃತಿಯ ಕುರಿತಾದ ಮಹತ್ವದ ಅಂಶಗಳನ್ನು ತಿಳಿಸಿಕೊಡುತ್ತಾ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಚಿಕ್ಕ ಚಿಕ್ಕ ಕಲ್ಲು ಬಂಡೆಗಳನ್ನು ಹತ್ತುವ ಕೌಶಲವನ್ನು ಪ್ರತಿ ಮಗುವಿಗೂ ಹೇಳಿ ಕೊಡುತ್ತಿದ್ದುದು ಮಕ್ಕಳಿಗೆ ವಿಶಿಷ್ಟ ಅನುಭವ ನೀಡುತ್ತಿತ್ತು. ಮಧ್ಯಾಹ್ನವಾಗುತ್ತಾ ಬಿಸಿಲು ಏರುತ್ತಿದ್ದರೂ ಮಕ್ಕಳಲ್ಲಿ ಸುಸ್ತಾದ ಲಕ್ಷಣವೇ ಕಾಣಲಿಲ್ಲ. ಹತ್ತೋದು, ಇಳಿಯೋದು ಸಲೀಸಾಗಿ ಕಂಡರೂ ಅದು ಅಷ್ಟು ಸುಲಭವಾಗಿರಲಿಲ್ಲ. ಬಂಡೆ ಹತ್ತಿ ಇಳಿಯುವ ಫೋಟೊ ಕ್ಲಿಕ್ಕಿಸಿಕೊಳ್ಳುವಾಗಿನ ಅವರ ಉತ್ಸಾಹಕ್ಕೆ ಎಲ್ಲೆಯೇ ಇರಲಿಲ್ಲ. ಊಟದ ಸಮಯ ಮೀರಿದ್ದರೂ ಮಕ್ಕಳಿಗೆ ಅದರತ್ತ ಗಮನವೇ ಇರಲಿಲ್ಲ. ನಂತರ ಎಲ್ಲರನ್ನೂ ಒತ್ತಾಯದಿಂದ ಊಟಕ್ಕೆ ಕರೆದುಕೊಂಡು ಬರಲಾಯಿತು.

ಮಕ್ಕಳನ್ನು ಗುಂಪುಗಳಲ್ಲಿ ಕಾಡಿನ ಮಧ್ಯ ಟ್ರೆಕ್ಕಿಂಗ್‍ಗೆ ಬಿಟ್ಟಾಗ ಹಕ್ಕಿಗಳಂತೆ ಹಾರುತ್ತಾ ಹೊರಟರು. ಸುಮಾರು ನಾಲ್ಕೂವರೆ ಕಿ.ಮೀ ದೂರದ ತಿಮ್ಮಪ್ಪನ ಗುಡ್ಡವನ್ನು ಕೇವಲ ಒಂದು ಗಂಟೆಯೊಳಗೆ ತಲುಪಿದ್ದು ಅವರ ಉತ್ಸಾಹಕ್ಕೆ ಹಿಡಿದ ಕನ್ನಡಿಯಾಗಿತ್ತು. ಗುಡ್ಡದ ತಳದಲ್ಲಿ ಕುಳ್ಳಿರಿಸಿದ ನಂತರ ಮಕ್ಕಳು ತಮ್ಮ ಅನುಭವವನ್ನು ಹಂಚಿಕೊಂಡರು. ನಂತರ ಬಸ್‌ನಲ್ಲಿ ಶಿಬಿರದ ಸ್ಥಳಕ್ಕೆ ಕರೆತರಲಾಯಿತು. ಸಂಜೆಯ ತಿಂಡಿ ಸೇವಿಸಿದ ಮಕ್ಕಳಿಗೆ ರಾತ್ರಿ ಮಲಗಲು ಅಗತ್ಯವಾದ ಟೆಂಟ್‍ಗಳನ್ನು ಹಾಕುವ ವಿಧಾನವನ್ನು ಪ್ರಾಯೋಗಿಕವಾಗಿ ತಿಳಿಸುತ್ತ ಅವರ ವರ ಟೆಂಟ್‌ಗಳನ್ನು ಅವರವರೇ ಹಾಕಬೇಕೆಂಬ ಸೂಚನೆಗೆ ತಕ್ಕಂತೆ, ತಮ್ಮ ತಮ್ಮ ಟೆಂಟ್‍ಗಳನ್ನು ತಾವೇ ಹಾಕಿಕೊಂಡರು.

ದಿನವೆಲ್ಲ ದಣಿದ ಮಕ್ಕಳ ಮನಸ್ಸಿಗೆ ಮುದ ನೀಡಲು ಮನರಂಜನೆಗಾಗಿ ರಾತ್ರಿ ಫೈರ್ ಕ್ಯಾಂಪ್ ಆಯೋಜನೆ ಮಾಡಲಾಗಿತ್ತು. ಎಲ್ಲಾ ಮಕ್ಕಳು ಹಾಡು, ನೃತ್ಯ, ಮಿಮಿಕ್ರಿ ಮೂಲಕ ಉಲ್ಲಾಸದ ವಾತಾವರಣ ಸೃಷ್ಟಿಸಿದರು. ರಾತ್ರಿ ಹನ್ನೊಂದು ಗಂಟೆಯಾದರೂ ಉತ್ಸಾಹ ಕಡಿಮೆಯಾಗಲಿಲ್ಲ. ರಾತ್ರಿ ಕಾಡಿನ ಮಧ್ಯೆ ಪರಿಸರದಲ್ಲಿ ಮಕ್ಕಳು ಟೆಂಟ್‌ ಒಳಗಡೆ ಸುಖವಾಗಿ ನಿದ್ರೆಗೆ ಜಾರಿದರು. ಬೆಟ್ಟ ಗುಡ್ಡಗಳ ನಡುವಿನ ಪ್ರದೇಶವಾಗಿದ್ದರಿಂದ ಮುನ್ನೆಚ್ಚರಿಕೆಯಾಗಿ ಸಂಘಟಕರಲ್ಲಿ ಕೆಲವರು ರಾತ್ರಿ ಪೂರ್ಣ ನಿದ್ರೆ ಮಾಡದೆ ರಕ್ಷಣೆ ನೀಡಿದ್ದು ಅವರ ಬದ್ಧತೆಯನ್ನು ತೋರಿಸುತ್ತಿತ್ತು.

ಮರುದಿನ ಬೆಳಿಗ್ಗೆ ಆರು ಗಂಟೆಗೆ ಎದ್ದು ಎಲ್ಲರಿಗೂ ಸರಳ ವ್ಯಾಯಾಮ ಮತ್ತು ಫಿಟ್‌ನೆಸ್‍ಗೆ ಅಗತ್ಯವಾದ ಕೆಲವು ದೈಹಿಕ ವ್ಯಾಯಾಮಗಳನ್ನು ಮಕ್ಕಳಿಗೆ ಮಾಡಿಸಲಾಯಿತು. ಬೆಳಗಿನ ಉಪಾಹಾರದ ನಂತರ ನಂತರ ಬೆಟ್ಟ ಹತ್ತುವ ಮತ್ತು ಇಳಿಯುವ ವಿಧಾನವನ್ನು ಕಲಿಸಲಾಯಿತು.

ಸುಮಾರು ಅರವತ್ತರಿಂದ ಎಪ್ಪತ್ತು ಅಡಿ ಎತ್ತರದ ಚಿಕ್ಕ ಬೆಟ್ಟವನ್ನು ತಾಮುಂದು ನಾಮುಂದು ಎನ್ನುತ್ತಾ, ಒಬ್ಬರ ನಂತರ ಮತ್ತೊಬ್ಬರು ಹತ್ತಿದರು. ಗುಡ್ಡವನ್ನು ಏರುವ ಮೊದಲು ಮಕ್ಕಳು ಇಷ್ಟೊಂದು ಎತ್ತರ ಎನ್ನುತ್ತಿದ್ದರು. ಏರಿದ ನಂತರ ನನ್ನ ಕಾಲ ಕೆಳಗೆ ಈ ಗುಡ್ಡವಿದೆ ಎನ್ನುವ ಹೆಮ್ಮೆ ಅವರಲ್ಲಿ ಮೂಡಿತ್ತು. ಬೆಟ್ಟದ ತುದಿಯನ್ನು ತಲುಪಿದ ಮೇಲೆ ಇನ್ನೊಂದು ಬದಿಯಿಂದ ಸುಮಾರು ನೂರಎಂಬತ್ತು ಅಡಿ ಎತ್ತರದಿಂದ ಕೆಳಗಡೆ ಇಳಿಯುವ ಹೊಸ ಸಾಹಸದಲ್ಲಿ ಮಕ್ಕಳು ತಮ್ಮನ್ನು ತೊಡಗಿಸಿಕೊಂಡರು. ಮೊದಲಿಗೆ ಆತಂಕಗೊಂಡರೂ ನಂತರ ನಿಧಾನವಾಗಿ ಅದಕ್ಕೆ ಹೊಂದಿಕೊಂಡು ಇಳಿಯುವ ಸಾಹಸದಲ್ಲಿ ಪಾಲ್ಗೊಂಡಿತು. ನೆಲ ಸ್ಪರ್ಶಿಸಿದ ಮೇಲೆ ಸಂತಸದ ಕೇಕೆ ಗುಡ್ಡದ ನೆತ್ತಿಯನ್ನು ಮುಟ್ಟುತ್ತಿತ್ತು. ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ಎಲ್ಲರೂ ಅದ್ಭುತವಾದ ಅನುಭವವನ್ನು ಪಡೆದುಕೊಂಡಿದ್ದರು.

ಶಿಬಿರಕ್ಕೆ ತೆರೆ ಎಳೆಯುವುದಕ್ಕಿಂತ ಮುಂಚೆ ಒಂದು ಚಿಕ್ಕ ಕಾರ್ಯಕ್ರಮ ನಡೆಯಿತು. ಪ್ರತಿ ಮಗುವಿಗೂ ಆಕರ್ಷಕ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ನಗರಕ್ಕೆ ಮಾತ್ರ ಸೀಮಿತವಾಗಿದ್ದ ಇಂತಹ ವಿಭಿನ್ನ ಶಿಬಿರವನ್ನು ಗ್ರಾಮಾಂತರಕ್ಕೆ ತಂದಿರುವುದಲ್ಲದೆ, ಬಿಸಿಲಿಗೆ ಹೆಸರಾದ ನಾಡಿನಲ್ಲಿ ಇಂತಹ ಕೆಲಸಕ್ಕೆ ಕೈಹಾಕಿದ ಸಂಘಟಕರ ಸಾಹಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಶಿಬಿರ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸಿದ ಹಗರಿಬೊಮ್ಮನಹಳ್ಳಿಯ ಎಂ.ಸುಭಾಶ್ಚಂದ್ರ, ಕಿರಣ್, ನಿಜಾಮ್, ನಾನ್ಯ ನಾಯ್ಕ್ ಅವರಲ್ಲೂ ಸಂತೃಪ್ತ ಭಾವ.
⇒ಚಿತ್ರಗಳು: ಕಿರಣ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.