ADVERTISEMENT

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು!

ಮಹಿಂದ್ರಾ ಕ್ವಾಂಟೊ

ನೇಸರ ಕಾಡನಕುಪ್ಪೆ
Published 26 ಡಿಸೆಂಬರ್ 2012, 19:59 IST
Last Updated 26 ಡಿಸೆಂಬರ್ 2012, 19:59 IST

ಇಪ್ಪತ್ತು ವರ್ಷಗಳ ಹಿಂದೆ ಮಹೀಂದ್ರಾ ಕಂಪೆನಿ ಆಧುನಿಕ ಕಾರುಗಳನ್ನು ತಯಾರಿಸುತ್ತದೆ ಎಂದಿದ್ದರೆ ನಂಬಲು ಕಷ್ಟವಾಗುತ್ತಿತ್ತೇನೋ. ಏಕೆಂದರೆ ಆ ಸಂಸ್ಥೆಯ ನೈಪುಣ್ಯ ಕೇವಲ ಜೀಪ್ ಮಾದರಿಯ ವಾಹನಗಳನ್ನು ತಯಾರಿಸುವುದರಲ್ಲಿ ಮಾತ್ರವಿದೆ ಎಂಬ ಭಾವನೆ ಎಲ್ಲರದ್ದಾಗಿತ್ತು. ಪೊಲೀಸ್ ಇಲಾಖೆ, ರಸ್ತೆಗಳೇ ಇಲ್ಲದಿರುವ ಮಲೆನಾಡು ಪ್ರದೇಶ, ಹಳ್ಳಿಗಾಡುಗಳಲ್ಲಷ್ಟೇ ಮಹಿಂದ್ರಾಗೆ ಗ್ರಾಹಕರು ಇದ್ದರು. ಇನ್ನು ಕೆಲವು ಸರ್ಕಾರಿ ಇಲಾಖೆಗಳು ಅನಿವಾರ್ಯವಾಗಿ ಜೀಪ್‌ಗಳನ್ನು ಬಳಸುತ್ತಿದ್ದವು.

ಅಂಥಾ ಮಹೀಂದ್ರಾ ಕಂಪೆನಿ ಈಗ ಸಾಮಾನ್ಯ ಗ್ರಾಹಕರಿಗೂ ಇಷ್ಟವಾಗುವ ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳನ್ನು ನಿರ್ಮಿಸುತ್ತಿದೆ. ಸ್ಕಾರ್ಪಿಯೋ ಮೂಲಕ ಆರಂಭವಾದ ಈ ಯಾತ್ರೆಯ ಹಿಂದೆ ಅದಕ್ಕೂ ಮೊದಲಿನ ಬೊಲೆರೋ ಇತ್ತು. ಈಗ ಬೊಲೆರೋಗೂ ಹೊಸ ರೂಪ ಬಂದಿದೆ. ಕ್ಸೈಲೋ, ನಂತರ ಎಕ್ಸ್‌ಯುವಿ- 500 ಹೀಗೆ ಒಂದರ ಹಿಂದೆ ಒಂದರಂತೆ ಎಸ್‌ಯುವಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾ ಮಹೀಂದ್ರಾ ಸಂಸ್ಥೆ ಹೊಸತೊಂದು ಅಸ್ಮಿತೆಯನ್ನೇ ಪಡೆಯಿತು. ಈ ಪಟ್ಟಿಗೇ ಈಗ ಮಹೀಂದ್ರಾ ಕ್ವಾಂಟೊ.

ಎಸ್‌ಯುವಿ ಹೆಚ್ಚು ಲಾಭ ತಂದುಕೊಡುತ್ತದೆ ಎಂಬ ಗುಟ್ಟು ಮಹಿಂದ್ರಾಗೆ ಅರ್ಥವಾದ ದಿನದಿಂದ ಅದನ್ನು ಗಟ್ಟಿಯಾಗಿ ಹಿಡಿದುಕೊಂಡು ಬಿಟ್ಟಿದೆ. ಆದರೆ ಕ್ವಾಂಟೊ ವಾಸ್ತವದಲ್ಲಿ ಪರಿಪೂರ್ಣ ಎಸ್‌ಯುವಿ ಅಲ್ಲ. ಹಾಗೆಂದು ಅದನ್ನು ಎಸ್‌ಯುವಿ ಅಲ್ಲ ಎಂದು ಕರೆಯಲೂ ಸಾಧ್ಯವಿಲ್ಲ. ಆದರೆ ಕ್ವಾಂಟೊ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಎಸ್‌ಯವಿಯ ಎಲ್ಲ ಆಧುನಿಕ ಸೌಲಭ್ಯಗಳೂ, ಅದರ ಗಡಸುತನ, ಸುರಕ್ಷೆ, ಸ್ಪೋರ್ಟಿ ಲಕ್ಷಣಗಳನ್ನು ಉಳಿಸಿಕೊಂಡಿರುವುದೇ ಇದರ ವಿಶೇಷ.

ಕೆಲವೇ ದಿನಗಳ ಹಿಂದೆ ಪ್ರೀಮಿಯರ್ ಸಂಸ್ಥೆ ರಿಯೊ ಎಂಬ ಎಸ್‌ಯುವಿಯನ್ನು ಪರಿಚಯಿಸಿತ್ತು. ಇದು ಸಣ್ಣ ಎಸ್‌ಯುವಿ ಎಂಬ ಹೊಸ ವಿಭಾಗದ್ದು. ಈ ರೀತಿಯ ವಾಹನ ಭಾರತದಲ್ಲಿ ಮುಂಚೆ ಇರಲಿಲ್ಲ. ಇದರ ಪ್ರಭಾವದಲ್ಲಿ ಮಹಿಂದ್ರಾ ಈಗ ಕ್ವಾಂಟೋ ಪರಿಚಯಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ಕ್ವಾಂಟೊ ಸಹ ಮಿನಿ ಎಸ್‌ಯುವಿ. ಐದು ಮಂದಿ ಆರಾಮವಾಗಿ ಕೂರಬಹುದಾದ ಲಕ್ಷುರಿ ಕಾರು ಇದು. ಅಂತೆಯೇ ಉತ್ತಮ ಲಗೇಜ್ ಶೇಖರಣಾ ವ್ಯವಸ್ಥೆ ಇರುವ ಕಾರಣ ಇದನ್ನು ಬಳಕೆದಾರ ಪ್ರಿಯ ವಾಹನವನ್ನಾಗಿ ಮಾಡುತ್ತದೆ.

ಶಕ್ತಿಶಾಲಿ ಸುಂದರ!
ಕ್ವಾಂಟೊದಲ್ಲಿ ಶಕ್ತಿಶಾಲಿ ಎಂಜಿನ್ ಇದೆ. 1493 ಸಿಸಿ ಡೀಸೆಲ್ ಎಂಜಿನ್ ಇದೆ. 98.6 ಬಿಎಚ್‌ಪಿ ಹಾಗೂ 24.5 ಕೆಜಿಎಂ ಟಾರ್ಕ್ ಶಕ್ತಿಯ ಎಂಜಿನ್ ಇದೆ. ಹಾಗಾಗಿ ಅತ್ಯುತ್ತಮ ಪವರ್ ಕ್ವಾಂಟೊ ಪಡೆದಿದೆ. ಕನಿಷ್ಠ  1600 ಆರ್‌ಪಿಎಂ ಇರುವ ಕಾರಣ ಎಂತಹ ಪರಿಸ್ಥಿತಿಯಲ್ಲೂ, ಎಷ್ಟನೇ ಗಿಯರ್‌ನಲ್ಲಿ ಇದ್ದರೂ ಜರ್ಕ್ ಹೊಡೆಯಲು ಇದರ ಎಂಜಿನ್ ಬಿಡುವುದಿಲ್ಲ. ಕೇವಲ 16 ಸೆಕೆಂಡ್‌ಗಳಲ್ಲಿ 100 ಕಿಲೋಮೀಟರ್ ಹಾಗೂ ಗರಿಷ್ಟ 143 ಕಿಲೋಮೀಟರ್ ವೇಗವನ್ನು ಮುಟ್ಟಬಲ್ಲ ಸಾಮರ್ಥ್ಯ ಕ್ವಾಂಟೊಗೆ ಇದೆ.

ಚಾಲನೆ, ನಿಯಂತ್ರಣ
ಎಸ್‌ಯುವಿಗೆ ಇರಬೇಕಾದ ಗಡಸುತನ ಕ್ವಾಂಟೊಗೆ ಸಹಜವಾಗೇ ಇದೆ. ಪವರ್ ಸ್ಟೀರಿಂಗ್ ಜತೆ ಎಲೆಕ್ಟ್ರಾನಿಕ್ ವೆಹಿಕಲ್ ಸ್ಟಬಿಲೈಸರ್ ಇರುವ ಕಾರಣ ವಾಹನ ನಿಯಂತ್ರಣ ಸುಲಭ. ಎಂತಹ ತಿರುವುಗಳಲ್ಲೂ ನಿಯಂತ್ರಣ ಸಾಧಿಸಲು ಎಬಿಎಸ್ (ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ) ನೀಡಲಾಗಿದೆ. ಮುಂದಿನ ಎರಡು ಚಕ್ರಗಳಿಗೆ ಡಿಸ್ಕ್ ಬ್ರೇಕ್ ಹಾಗೂ ಹಿಂದಿನ ಚಕ್ರಗಳಿಗೆ ಡ್ರಮ್ ಬ್ರೇಕ್ ನೀಡಲಾಗಿದೆ.

ADVERTISEMENT

ಒಳಾಂಗಣ ಸುಂದರ
ಅತಿ ಸುಂದರ ವಿಶಾಲ ಒಳಾಂಗಣ ಇದೆ. ಕಾಲು ಚಾಚಿಕೊಳ್ಳಲು ಸಾಕಷ್ಟು ಜಾಗ ಹಾಗೂ ಸೆಖೆ ಆಗದೇ ಇರುವಂತೆ ಎತ್ತರವಾದ ಹೆಡ್ ಸ್ಪೇಸ್ ಇದೆ. ದಪ್ಪನೆಯ, ಆರಾಮದಾಯಕ ಸೀಟ್ ಇವೆ. ಅದರಲ್ಲಿ ಬೀಜ್ ಹಾಗೂ ಆಶ್ ಬಣ್ಣದ ಆಯ್ಕೆ ಇವೆ. ಅದರಂತೆಯೇ ಡ್ಯಾಶ್ ಬೋರ್ಡ್‌ಗೂ ಬಣ್ಣದ ಆಯ್ಕೆಯನ್ನು ನೀಡಲಾಗಿದೆ. ಅತಿ ಸುಲಭವಾಗಿ ಓದಬಲ್ಲ ಸ್ಪೀಡೋಮೀಟರ್ ಕನ್ಸೋಲ್ ಇರುವುದು ವಿಶೇಷ. ಸ್ಪೀಡೋ ಸ್ಪೋರ್ಟಿಯಾಗಿದ್ದು, ಆಧುನಿಕ ವಾಹನದ ಫೀಲ್ ನೀಡುತ್ತದೆ.

ಮೈಲೇಜ್ ಮೋಡಿ
ಉತ್ತಮ ಮೈಲೇಜ್ ಕ್ವಾಂಟೊ ನೀಡುತ್ತದೆ. ಲೀಟರ್ ಡೀಸೆಲ್‌ಗೆ ಉತ್ತಮ 12 ಕಿಲೋಮೀಟರ್ ಮೈಲೇಜ್ ನಗರ ಮಿತಿಯಲ್ಲೇ ದೊರೆಯುತ್ತದೆ. ಇನ್ನು ಸಹಜವಾಗೇ ಹೆದ್ದಾರಿ ಚಾಲನೆಯಲ್ಲಿ ಹೆಚ್ಚು ಮೈಲೇಜ್ ಸಿಗುತ್ತದೆ. ಒಟ್ಟು 55 ಲೀಟರ್ ಇಂಧನ ಸಂಗ್ರಹ ಸಾಮರ್ಥ್ಯ ಇದ್ದು, 660 ಕಿಲೋಮೀಟರ್ ದೂರಸಾಗುವ ಅನುಕೂಲ ಸಿಗುತ್ತದೆ.

ಬೆಲೆ ದುಬಾರಿ
ಬೆಲೆ ಕೊಂಚ ದುಬಾರಿ ಎನ್ನಬಹುದು. ಬೇಸಿಕ್ 5.80 ಲಕ್ಷ ರೂಪಾಯಿಂದ ಆರಂಭಗೊಂಡರೆ, ಟಾಪ್ ಎಂಡ್ 7.40 ಲಕ್ಷ ರೂಪಾಯಿ ಆಗುತ್ತದೆ. ಇಷ್ಟೇ ಬೆಲೆಗೆ ಹೆಚ್ಚು ಸೌಕರ್ಯ ಉಳ್ಳ ಬೊಲೆರೊ, ಕೊಂಚ ಹೆಚ್ಚು ಹಣ ವಿನಿಯೋಗಿಸಿದರೆ ಸ್ಕಾರ್ಪಿಯೋ ಸಿಗುತ್ತತೆ. ಆದರೆ ಸಣ್ಣ ಎಸ್‌ಯುವಿ ಸಾಕು ಎನ್ನುವವರಿಗೆ ಇದು ಜಾಣ ಆಯ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.