ಮೈಸೂರು ನಮ್ಮೂರು. ಮಂಡ್ಯ ರಮೇಶ್ ಅವರ ನಟನಾ ರಂಗದಲ್ಲಿ ಮೂರು ವರ್ಷ ಕೆಲಸ ಮಾಡಿದೆ. ರಂಗಭೂಮಿಯಲ್ಲಿ ಕೆಲಸ ಎಂದರೆ ನಟನೆ ಮಾತ್ರ ಮಾಡುವುದಲ್ಲ ವೇದಿಕೆಯ ಕಸ ಗುಡಿಸುವುದು, ಪರದೆ ಕಟ್ಟುವುದು, ಕಾಸ್ಟ್ಯೂಮ್‌ಗಳನ್ನು ಹೊಲೆಯುವುದು ಎಲ್ಲಾ ಮಾಡಬೇಕಿರುತ್ತದೆ. ಅಲ್ಲಿಯೇ ನಾನು ನನ್ನ ಜೀವನ ನಿರ್ವಹಣೆ ಕಲಿತೆ ಎನ್ನಬಹುದು.
ಕಾನ್ವೆಂಟ್‌ನಲ್ಲಿ ಓದಿದ ನನ್ನಂಥವರು ಎಂಜಿನಿಯರಿಂಗ್ ಪದವಿ ಪಡೆದು ಹೈಫೈಯಾಗಿ ಬದುಕು ಕಳೆಯಲು ಇಷ್ಟಪಡುತ್ತಾರೆ. ಆದರದು ನನಗಿಷ್ಟವಿಲ್ಲ. ನನ್ನ ಆಸೆಗಳೇ ಬೇರೆ. ಅದಕ್ಕೆ ಕಾರಣ ರಂಗಭೂಮಿ. ನಾನು ಎಲ್ಲಿಯೇ ಹೋದರೂ ಎಷ್ಟೇ ಜನಪ್ರಿಯ ನಟಿಯಾದರೂ ಮಂಡ್ಯ ರಮೇಶ್ ಅವರು ನಟಿಸಲು ಕರೆದರೆ ಒಲ್ಲೆ ಎನ್ನಲಾರೆ. ಎಷ್ಟೇ ಬಿಜಿಯಾಗಿದ್ದರೂ ನಾಟಕರಂಗದಿಂದ ಕರೆ ಬಂದಾಕ್ಷಣ ಹೊರಟುಬಿಡುವೆ. ಯಾಕೆಂದರೆ ರಂಗಭೂಮಿ ನನ್ನ ಮೊದಲ ಗಂಡ ಇದ್ದಂತೆ.
ರಂಗಭೂಮಿಯಿಂದ ನನ್ನ ಮೇಲೆ ನನಗೆ ಆತ್ಮವಿಶ್ವಾಸ ಹೆಚ್ಚಿತು. `ಚೋರ ಚರಣದಾಸ~, `ಅಗ್ನಿ ಮತ್ತು ಮಳೆ~, `ಸತ್ತು ಅಂದ್ರೆ ಸತ್ರಾ~ ಹೀಗೆ ಹಲವು ನಾಟಕಗಳಲ್ಲಿ ನಟಿಸಿದೆ. ಆಗ ನನಗೆ `ಪ್ರೀತಿ ಪ್ರೇಮ~ ಟೆಲಿಫಿಲ್ಮ್‌ನಲ್ಲಿ ನಟಿಸಲು ಕರೆ ಬಂತು. ಅದರಲ್ಲಿ ನಟಿಸಿದ ನಂತರ `ದೇವಿ~ಯಲ್ಲಿ ಬೆಸ್ತರ ಹುಡುಗಿಯಾಗಿ ನಟಿಸುವ ಅವಕಾಶ ಬಂತು.
ಮೊದಲೇ ನಾನು ಕಾನ್ವೆಂಟ್‌ನಲ್ಲಿ ಓದಿದವಳು. ಹಳ್ಳಿ ಶೈಲಿಯಲ್ಲಿ ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ನಿರ್ದೇಶಕ ರಮೇಶ್ ಇಂದಿರಾ ನನಗೊಂದು ಪುಸ್ತಕ ತಂದುಕೊಟ್ಟು ಹಳ್ಳಿ ಶೈಲಿಯ ಕನ್ನಡ ಕಲಿಯಲು ಹೇಳಿದರು. ತಪ್ಪು ಮಾಡಿದಾಗ ಬೈಯ್ಯದೆ ನನ್ನನ್ನು ತಿದ್ದಿದರು. ಅದರಿಂದ ಆ ಪಾತ್ರ ಯಶಸ್ವಿಯಾಯಿತು.
ಇನ್ನು `ಸಾವಿತ್ರಿ~ ಧಾರಾವಾಹಿಯಲ್ಲಿ ಆಧುನಿಕ ಮನಸ್ಥಿತಿಯ ಹುಡುಗಿಯಾಗಿ ನಟಿಸಿದೆ. `ಅನುವಾದ~ ಧಾರಾವಾಹಿಯಲ್ಲಿ ನಕ್ಸಲೈಟ್ ಪಾತ್ರದಲ್ಲಿ ಕಾಣಿಸಿಕೊಂಡೆ. ಜಯಂತ್, ಬಿ.ಸುರೇಶ್, ರಾಘವ ಹೀಗೆ ನಾನು ನಟಿಸಿದ ಧಾರಾವಾಹಿಯ ಎಲ್ಲಾ ನಿರ್ದೇಶಕರು ನನ್ನನ್ನು ನಿರುತ್ಸಾಹಗೊಳಿಸದೇ ಬೆಂಬಲಿಸಿದರು.
ಅದಕ್ಕೆ ತಕ್ಕಂತೆ ನಾನು ಬಯಸುವಂತೆ ಹೊಸ ರೀತಿಯ ಪಾತ್ರಗಳೇ ನನ್ನನ್ನು ಹುಡುಕಿಕೊಂಡು ಬರುತ್ತಿದ್ದರಿಂದ ಸಂತಸವಾಗುತ್ತಿತ್ತು. `ಸೊಸೆ~ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರ ಸಿಕ್ಕಿತು. ಅದನ್ನು ತುಂಬು ಮನಸ್ಸಿನಿಂದ ಎಂಜಾಯ್ ಮಾಡುತ್ತಾ ನಟಿಸುತ್ತಿದ್ದೇನೆ.
ನಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದರೂ, ಮನಃಶಾಸ್ತ್ರದಲ್ಲಿ ಪದವಿ ಓದುತ್ತಿರುವೆ. ಮೊದಲು ನಟನೆಯನ್ನು ವೃತ್ತಿಯಾಗಿ ತೆಗೆದುಕೊಳ್ಳಬೇಕೆಂದು ನಾನು ನಿರ್ಧರಿಸಿದಾಗ ಮನೆಯಲ್ಲಿ ಬೈದರು. ಆದರೆ ನನಗೆ ಯಶಸ್ಸು ಸಿಗುತ್ತಾ ಹೋದಂತೆ ಅವರು ಸುಮ್ಮನಾದರು.
ನಾನು ಸರಿದಾರಿಯಲ್ಲಿ ನಡೆಯುವ ವಿಶ್ವಾಸವನ್ನು ಅವರಲ್ಲಿ ಮೂಡಿಸಿರುವೆ. ಅದರಿಂದ ನನ್ನ ನಿರ್ಧಾರಗಳ ನಡುವೆ ಯಾರೂ ಬರುವುದಿಲ್ಲ. ಯಾವುದೇ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುವಾಗ ನನ್ನದೇ ಅಂತಿಮ ತೀರ್ಮಾನ ಇರುತ್ತದೆ.
ಕಿರುತೆರೆಯಲ್ಲಿ ಸಿಗುತ್ತಿರುವ ಅವಕಾಶಗಳಿಂದ ಖುಷಿ ಇದೆ. ಆದರೆ `ಸೊಸೆ~ ಮುಗಿದ ನಂತರ ಸಿನಿಮಾಗೆ ಹೋಗುವಾಸೆಯೂ ಇದೆ. ಮಧ್ಯದಲ್ಲಿ ಬಿಟ್ಟು ಹೋದರೆ ಧಾರಾವಾಹಿಯ ನನ್ನ ಪಾತ್ರಕ್ಕೆ ತೊಂದರೆಯಾಗುತ್ತದೆ. ಆದ ಕಾರಣ ಸುಮ್ಮನಿರುವೆ. ಅದಕ್ಕೆ ಇದುವರೆಗೂ ಸಿನಿಮಾದಲ್ಲಿ ನಟಿಸುವ ಯಾವ ಪ್ರಯತ್ನವನ್ನೂ ಮಾಡಿಲ್ಲ.
ಕಮಿಟ್‌ಮೆಂಟ್ ಮುಗಿದಾಕ್ಷಣ ಸಿನಿಮಾದಲ್ಲಿ ಅವಕಾಶಗಳನ್ನು ಅರಸುವೆ. ಅಲ್ಲಿಯೇ ಇರ‌್ತೀನೋ.. ವಾಪಸ್ ಬರ‌್ತೀನೋ.. ನೋಡಬೇಕು?
ಪ್ರತಿಯೊಬ್ಬ ನಟ-ನಟಿಯರಿಗೂ ಸಿನಿಮಾ ಸೇರಬೇಕು, ನಾಯಕಿಯಾಗಬೇಕು ಎಂದು ಇರುವ ಸಹಜ ಆಸೆ ನನಗೂ ಇದೆ. ಅದೇ ಕನಸು ಹೊತ್ತು ನಾನು ಸಿನಿಮಾರಂಗವನ್ನು ನೋಡುತ್ತಿದ್ದೇನೆ. ಆದರೆ ಅಲ್ಲಿ ನಾಯಕಿ ಪಾತ್ರ ಸಿಕ್ಕರೆ ಮಾತ್ರ ನಟಿಸುವೆ.
ನನ್ನ ಅಭಿನಯ ಸಾಮರ್ಥ್ಯದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇರುವುದರಿಂದ ನಾನು ಇಂಥ ನಿರ್ಧಾರಕ್ಕೆ ಬಂದಿದ್ದೇನೆ. ಸಣ್ಣಪುಟ್ಟ ಪಾತ್ರ ಮಾಡಿ ಆ ನಂತರ ನಾಯಕಿಯಾಗುವುದು ನನಗೆ ಬೇಕಿಲ್ಲ. ಮೊದಲ ಸಿನಿಮಾದಲ್ಲಿಯೇ ನಾನು ನಾಯಕಿಯಾಗಬೇಕು. ನನ್ನ ಪಾತ್ರಕ್ಕೆ ಸ್ಕೋಪ್ ಇದ್ದರೆ ಮತ್ತು ಅದು ಪ್ರಧಾನ ಪಾತ್ರವಾಗಿದ್ದರೆ ಮಾತ್ರ ನೆಗೆಟಿವ್ ರೋಲ್ ಒಪ್ಪಿಕೊಳ್ಳುವೆ.
ಒಂದೇ ರೀತಿಯ ಪಾತ್ರಗಳೆಂದರೆ ನನಗೆ ಬೋರು. ಹೊಸ ತರದ ಪಾತ್ರಗಳನ್ನು ಪ್ರಯತ್ನಿಸುತ್ತಲೇ ಇರಬೇಕು ಎಂಬ ಆಸೆ ನನ್ನದು. ಜೀವನದಲ್ಲಿ ನಾನು ಏನು ಅಲ್ಲವೋ ಅಂಥ ಪಾತ್ರ ಮಾಡಲು ನನಗಿಷ್ಟ.
ಉದಾಹರಣೆಗೆ ಹಳ್ಳಿ ಶೈಲಿಯ ಕನ್ನಡ ಕಲಿತು ನಟಿಸಿದ್ದು. ಹೀಗೆ ನನ್ನ ಬದುಕಿಗೆ ತದ್ವಿರುದ್ಧವಾದ ಪಾತ್ರಗಳೆಂದರೆ ನನಗೆ ಅಚ್ಚುಮೆಚ್ಚು. ಒಂದು ಪಾತ್ರ ಒಪ್ಪಿಕೊಂಡ ಮೇಲೆ ಅದಕ್ಕೆ ತಕ್ಕಂತೆ ಹೋಂವರ್ಕ್ ಮಾಡಿ ಬದ್ಧತೆಯಿಂದ ನಟಿಸುವುದು ನನ್ನ ನಿಯಮ.
ಸಿನಿಮಾ ಎಂಬುದು ಗ್ಲಾಮರ್ ಲೋಕ. ನನಗೆ ಸೂಕ್ತವಾಗಿ ಹೊಂದಿಕೆಯಾಗುವ ಪಾತ್ರಕ್ಕೆ ಎಕ್ಸ್‌ಪೋಸ್ ಅಗತ್ಯ ಇದೆ ಎಂದಾದರೆ ಮಾಡಲು ಸಿದ್ಧ. ಮನೆ ಬಿಟ್ಟು ಹೊರಟ ನಂತರ ನಾನು ನಿಖಿಲಾ ಅಲ್ಲ. ಪಾತ್ರವೇ ನಾನಾಗಿ ಅಭಿನಯಿಸುವಂಥ ಮನಸ್ಥಿತಿ ನನ್ನದು.
ಅದರಿಂದ ಆ ಪಾತ್ರಕ್ಕಾಗಿ ಎಕ್ಸ್‌ಪೋಸ್ ಮಾಡುತ್ತೇನೆ. ಆ ಬಗ್ಗೆ ಯಾರು ಏನೇ ಅಂದರೂ ನಾನು ಹಿಂಜರಿಯುವುದಿಲ್ಲ. ಗ್ಲಾಮರಸ್ ಪಾತ್ರ ಒಪ್ಪಿಕೊಂಡಷ್ಟೇ ಸಹಜವಾಗಿ ನಾನು ಭಿಕ್ಷುಕಿಯ ಪಾತ್ರವನ್ನೂ ಒಪ್ಪಿಕೊಳ್ಳುವೆ.
ನಟನೆ ಬಿಟ್ಟು ನನಗೆ ರೇಖಾ ಚಿತ್ರ ಬಿಡಿಸುವ ಹವ್ಯಾಸ ಇದೆ. ಪೆನ್ಸಿಲ್ ಮತ್ತು ರಬ್ಬರ್ ಎಂದರೆ ನನಗೆ ಅಚ್ಚುಮೆಚ್ಚು. ಆದರೆ ನಾನು ಬಿಡಿಸಿದ ಚಿತ್ರಕ್ಕೆ ಬಣ್ಣ ಹಚ್ಚುವ ಕೆಲಸ ಮಾತ್ರ ಇಷ್ಟವಿಲ್ಲ. ನನ್ನ ಕಪ್ಪು ಬಿಳುಪು ಚಿತ್ರಗಳಿಗೆ ಪೇಯಿಂಟ್ ಮಾಡಲು ಮನಸ್ಸು ಒಪ್ಪದು. ಇನ್ನು ಹೊರಗೆ ಸುತ್ತಾಡುವುದು, ಸಿನಿಮಾ ನೋಡುವುದು ತುಂಬಾ ಇಷ್ಟ.
ಕಲಿಕೆಗೆ ಅಗತ್ಯ ಇರುವ ಸಿನಿಮಾಗಳನ್ನು ಹೆಚ್ಚು ನೋಡ್ತೀನಿ. ಮನರಂಜನೆಗೂ ಕೆಲವೊಮ್ಮೆ ಸಿನಿಮಾ ನೋಡ್ತೀನಿ. ನಾನು ಒಪ್ಪಿಕೊಂಡ ಪಾತ್ರಕ್ಕೆ ಉಪಯೋಗ ಆಗುತ್ತದೆ ಎನಿಸಿದ ಸಿನಿಮಾಗಳನ್ನಂತೂ ಬಿಡದೇ ನೋಡ್ತೀನಿ. ಶೂಟಿಂಗ್ ಇಲ್ಲದ ದಿನಗಳ್ಲ್ಲಲಿ ಮಧ್ಯರಾತ್ರಿಯವರೆಗೂ ಸಿನಿಮಾಗಳನ್ನು ನೋಡುತ್ತೇನೆ.
ರಂಗಭೂಮಿ ಹಿನ್ನೆಲೆ ಇರುವುದರಿಂದ ನನ್ನ ಪಾತ್ರದ ಶೂಟಿಂಗ್ ಮುಗಿದಾಕ್ಷಣ ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ. ಕ್ಯಾಮೆರಾ ಕೆಲಸ, ಬೆಳಕಿನ ವಿನ್ಯಾಸ, ಸಂಕಲನದ ವಿಚಾರಗಳನ್ನು ತಂತ್ರಜ್ಞರೊಂದಿಗೆ ಚರ್ಚಿಸಿ ತಿಳಿದುಕೊಳ್ಳುವೆ. ಆದರೆ ಅವುಗಳನ್ನೆಲ್ಲಾ ಕಲಿಯಬೇಕೆಂಬ ಮನಸ್ಸಿಲ್ಲ. ಒಂದಲ್ಲಾ ಒಂದು ದಿನ ಸಾಕಷ್ಟು ಹಣ ಸಂಪಾದಿಸಿದಾಗ ಸಿನಿಮಾ ನಿರ್ಮಾಣ ಮಾಡುವ ದೊಡ್ಡ ಕನಸೊಂದಿದೆ.
ನಿದ್ರೆ ಮಾಡುವುದು ಎಂದರೆ ನನಗೆ ಪಂಚಪ್ರಾಣ. ಶೂಟಿಂಗ್ ಇಲ್ಲದಾಗ ಎಷ್ಟೋ ಬಾರಿ ಮಧ್ಯಾಹ್ನ ಮೂರು ಗಂಟೆಗೆ ಎದ್ದ ನಿದರ್ಶನಗಳೂ ಇವೆ. ಕೆಲವೊಮ್ಮೆ ಶೂಟಿಂಗ್ ನಡುವೆಯೂ ಕೂಡ ನಾನು ನಿದ್ರೆಗೆ ಜಾರುತ್ತೇನೆ. ಪ್ರಾಣಾಯಾಮ ಬಿಟ್ಟು ಬೇರೆ ಯಾವ ವ್ಯಾಯಾಮವನ್ನು ಮಾಡುವುದಿಲ್ಲ.
ಆದರೂ ಕೆಲವರು ನಿನ್ನದು ಯೋಗ್ಯ ಮೈಕಟ್ಟು ಎನ್ನುತ್ತಾರೆ ಆಶ್ಚರ್ಯವಾಗುತ್ತದೆ. ಇನ್ನು ಲವ್ ಮಾಡೋಕಂತೂ ಟೈಮಿಲ್ಲ. ಅದಕ್ಕೆ ಅಪ್ಪ-ಅಮ್ಮ ಹೇಳಿದ ಹುಡುಗನನ್ನು ಮರುಮಾತನಾಡದೇ ಮದುವೆಯಾಗ್ತೀನಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.