ADVERTISEMENT

ವಾಹನಕ್ಕೆ ಎಥನಾಲ್ ಬಲ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 19:30 IST
Last Updated 10 ಅಕ್ಟೋಬರ್ 2012, 19:30 IST
ವಾಹನಕ್ಕೆ ಎಥನಾಲ್ ಬಲ
ವಾಹನಕ್ಕೆ ಎಥನಾಲ್ ಬಲ   

ಡೀಸೆಲ್‌ಗೆ ಜತ್ರೊಪಾ ಬೀಜದ ತೈಲ ಬೆರೆಸಿದಂತೆ, ಪೆಟ್ರೋಲ್‌ಗೆ ಕಬ್ಬಿನಿಂದ ತೆಗೆದ ಎಥನಾಲ್ ಬಳಸುವ ಪದ್ಧತಿಯೂ ಇದೆ. ಇದನ್ನು ಮೊದಲು ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದು ಬ್ರೆಜಿಲ್. 37 ವರ್ಷಗಳ ಹಿಂದೆ ಜಗತ್ತಿನಲ್ಲಿ ಎಥನಾಲ್ ಇಂಧನ ಉತ್ಪಾದಿಸುತ್ತಿರುವ ಎರಡನೇ ಅತಿ ದೊಡ್ಡ ರಾಷ್ಟ್ರ ಬ್ರೆಜಿಲ್. ಬ್ರೆಜಿಲ್‌ನಲ್ಲಿ ಹೈಡ್ರಸ್ ಎಥನಾಲ್ (ಇ100) ಹಾಗೂ ಪೆಟ್ರೋಲ್ (ಇ20 ಹಾಗೂ ಇ25) ಲಭ್ಯ.

ಆಲ್ಕೋಹಾಲ್‌ನ ಒಂದು ರೂಪವಾಗಿರುವ ಎಥನಾಲ್, ಪೆಟ್ರೋಲ್ ಅಥವಾ ಡೀಸೆಲ್‌ಗೆ ಬೆರೆಸಿದಲ್ಲಿ ವಾಹನದ ಕಾರ್ಯಕ್ಷಮತೆ ಉತ್ತಮವಾಗುವುದರ ಜತೆಗೆ ವಾಹನದಿಂದ ವಾತಾವರಣಕ್ಕೆ ಬಿಡುಗಡೆಯಾಗುವ ಇಂಗಾಲದ ಡೈ ಆಕ್ಸೈಡ್ ಪ್ರಮಾಣವೂ ತಗ್ಗಲಿದೆ. ಕಬ್ಬನ್ನು ಅರೆದು ಅದರ ರಸದಿಂದ ಉತ್ಪಾದಿಸಲಾಗುವ ಎಥನಾಲ್‌ನಲ್ಲಿ ಕೈಗಾರಿಕಾ ಆಲ್ಕೋಹಾಲ್, ಪೋಟಬಲ್ ಆಲ್ಕೋಹಾಲ್ ಹಾಗೂ ಎಥನಾಲ್ ಎಂಬ ಮೂರು ಉತ್ಪನ್ನಗಳು ಲಭ್ಯ.

ಬ್ರೆಜಿಲ್‌ನಲ್ಲಿ 2011ರಲ್ಲಿ ಒಟ್ಟು 21.1 ಶತಕೋಟಿ ಲೀಟರ್‌ಗಳಷ್ಟು ಎಥನಾಲ್ ಇಂಧನ ಉತ್ಪಾದಿಸಲಾಗಿತ್ತು. ಅಂದರೆ ಜಗತ್ತಿನಲ್ಲಿ ಬಳಕೆಯಲ್ಲಿರುವ ಎಥನಾಲ್ ಇಂಧನದ ಶೇ 24.9ರಷ್ಟನ್ನು ಬ್ರೆಜಿಲ್ ಬಳಸುತ್ತಿದೆ. ಬ್ರೆಜಿಲ್‌ನಲ್ಲಿ ಯಥೇಚ್ಛವಾಗಿರುವ ಕೃಷಿ ಭೂಮಿ ಹಾಗೂ ಕಬ್ಬಿನ ಬೆಳೆಯಿಂದಾಗಿ ಎಥನಾಲ್ ಉತ್ಪಾದನೆ ಸಹಜವಾಗಿ ಅಧಿಕವಾಗಿದೆ.
 
ಹೀಗಾಗಿ ಸಾಕಷ್ಟು ಲೀಟರ್‌ಗಳಷ್ಟು ಲಭ್ಯವಿರುವ ಎಥನಾಲನ್ನು ಪೆಟ್ರೋಲ್‌ಗೆ ಬೆರೆಸಿ ವಾಹನಗಳಿಗೆ ಬಳಸುವ ಮೂಲಕ ಪೆಟ್ರೋಲ್ ಮೇಲಿನ ಹೆಚ್ಚಿನ ಅವಲಂಬನೆ ಹಾಗೂ ದರದಲ್ಲೂ ಕೊಂಚ ಇಳಿಕೆಯಾಗಿದೆ.

ಬ್ರೆಜಿಲ್‌ನಲ್ಲಿ 1976ರಿಂದಲೇ ಶೇ 10ರಿಂದ ಶೇ 22ರಷ್ಟು ಎಥನಾಲನ್ನು ಪೆಟ್ರೋಲ್‌ಗೆ ಬೆರೆಸಲಾಗುತ್ತಿತ್ತು. ಹೀಗೆ ಬೆರೆಸಲಾದ ಎಥನಾಲ್ ಇಂಧನ ಬಳಸುವ ಮುನ್ನ ವಾಹನದ ಎಂಜಿನ್‌ನಲ್ಲಿ ಕೊಂಚ ಮಾರ್ಪಾಡು ಅತ್ಯಗತ್ಯ. 1993ರಲ್ಲಿ ಪೆಟ್ರೋಲ್‌ಗೆ ಶೇ 22ರಷ್ಟು ಎಥನಾಲ್ ಬೆರಿಕೆ ಕಡ್ಡಾಯ ಮಾಡಿ ಬ್ರೆಜಿಲ್ ಸರ್ಕಾರ ಕಾಯ್ದೆಯನ್ನೇ ಹೊರಡಿಸಿತು.

2003ರಲ್ಲಿ ಕಾಯ್ದೆಯಲ್ಲಿ ಮತ್ತೆ ಮಾರ್ಪಾಡು ಮಾಡಿ ಶೇ 20ರಿಂದ ಗರಿಷ್ಠ ಶೇ 25ರಷ್ಟು ಎಥನಾಲ್ ಬೆರಸಬಹುದು ಎಂದು ಹೇಳಿತು. 2011ರಲ್ಲಿ ಕನಿಷ್ಠ ಮಿತಿಯನ್ನು ಶೇ 18ಕ್ಕೆ ಇಳಿಸಿತು. ಹೀಗಾಗಿ ಎಥನಾಲ್ ಇಂಧನ ಬಳಸದ ಲಘು ಮೋಟಾರು ವಾಹನಗಳೇ ಇಲ್ಲ.

ಇದೀಗ ಭಾರತವೂ ಸಹ ಶೇ 5ರಷ್ಟು ಎಥನಾಲ್ ಮಿಶ್ರಿತ ಪೆಟ್ರೋಲ್ ಬಳಸುವತ್ತ ಚಿಂತನೆ ನಡೆಸಿದೆ. ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯು ಮಾಡಿರುವ ಶಿಫಾರಸ್ಸಿನ ಮೇಲೆ ಈ ನಿರ್ಧಾರಕ್ಕೆ ಬರಲಾಗಿದೆ. ಇದರಿಂದಾಗಿ ಪೆಟ್ರೋಲ್‌ಗೆ ಶೇ 5ರ ದರದಲ್ಲಿ ಎಥನಾಲ್ ಮಿಶ್ರಣ ಮಾಡಿದರೆ ವಾರ್ಷಿಕ 105 ಕೋಟಿ ಲೀಟರ್‌ನಷ್ಟು ಎಥನಾಲ್‌ನ ಅಗತ್ಯ ಬೀಳಲಿದೆ.

ಭಾರತದಲ್ಲಿ ಸಕ್ಕರೆ ಕಾರ್ಖಾನೆಗಳ ಸಂಖ್ಯೆ ಏರುತ್ತಿದ್ದಂತೆ ಎಥನಾಲ್ ಉತ್ಪಾದನೆಯೂ ಹೆಚ್ಚಾಗುತ್ತಿದೆ. ಹೀಗಾಗಿ ತೈಲ ಕಂಪೆನಿಗಳಿಗೆ ಕೈಗೆಟಕುವ ಬೆಲೆಗೆ ಎಥನಾಲ್ ಸಿಗುತ್ತಿದೆ. ಪೆಟ್ರೋಲ್‌ಗೆ ಎಥನಾಲ್ ಸೇರಿಸುವುದರಿಂದ ಪೆಟ್ರೋಲ್ ಆಮದು ಮೇಲಿನ ಹೊರೆಯೂ ಇಳಿಮುಖವಾಗಲಿದೆ. ಎಥನಾಲನ್ನು ಕೇವಲ ಪೆಟ್ರೋಲ್‌ಗೆ ಮಾತ್ರವಲ್ಲ ಡೀಸೆಲ್‌ಗೂ ಬೆರೆಸಬಹುದು ಎಂದು ಭಾರತೀಯ ಸಕ್ಕರೆ ಕಾರ್ಖಾನೆ ಒಕ್ಕೂಟ ಹೇಳಿದೆ.
ಕರ್ನಾಟಕ ಈಗಾಗಲೇ ಶೇ 5ರಷ್ಟು ಎಥನಾಲ್ ಮಿಶ್ರಿತ ಡೀಸೆಲನ್ನು ಸಾರಿಗೆ ಬಸ್ಸುಗಳಲ್ಲಿ ಬಳಸುತ್ತಿದೆ.

ಒಂದೊಮ್ಮೆ ಶೇ 5ರಷ್ಟು ಎಥನಾಲನ್ನು ಪೆಟ್ರೋಲ್‌ಗೆ ಬೆರೆಸಿದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 15 ರೂಪಾಯಿ ಉಳಿಸಬಹುದು. ಜತೆಗೆ ವಾರ್ಷಿಕ 100 ಕೋಟಿ ಲೀಟರ್‌ನಷ್ಟು ಎಥನಾಲ್ ಬೇಕಾಗುವುದರಿಂದ ಪ್ರತಿವರ್ಷ 1500 ಕೋಟಿ ರೂಪಾಯಿ ಹಣವೂ ಉಳಿತಾಯವಾಗಲಿದೆ. 2007ರಲ್ಲೇ ಕೇಂದ್ರ ಸಚಿವ ಸಂಪುಟ ಈ ನಿಟ್ಟಿನಲ್ಲಿ ಚಿಂತಿಸಿದ್ದರೂ ಇನ್ನೂ ಅದು ಅನುಷ್ಠಾನಕ್ಕೆ ಮಾತ್ರ ಬಂದಿಲ್ಲ.

ಈ ನಡುವೆ ಸಕ್ಕರೆ ಕಾರ್ಖಾನೆಗಳು ವಾರ್ಷಿಕ 280 ಕೋಟಿ ಲೀಟರ್‌ನಷ್ಟು ಎಥನಾಲ್ ಉತ್ಪಾದಿಸುತ್ತಿವೆ. ಮಾರುಕಟ್ಟೆಯಲ್ಲಿ ಪ್ರತಿ ಲೀಟರ್ ಎಥನಾಲ್‌ಗೆ ರೂ. 35ರೂಪಾಯಿ ಇದೆ. ಆದರೆ ಸರ್ಕಾರಿ ಬೆಲೆ ರೂ. 31 ನಿಗದಿ ಮಾಡಿರುವುದು ಎಥನಾಲ್ ಉತ್ಪಾದಕರಿಗೆ ನಿರಾಶೆ ಮೂಡಿಸಿದೆ. ಹೀಗಾಗಿ ಸಕ್ಕರೆ ಕಾರ್ಖಾನೆಗಳು ಕೈಗಾರಿಕೆ ಹಾಗೂ ಆಲ್ಕೋಹಾಲ್ ಉತ್ಪಾದನೆಯತ್ತ ಹೆಚ್ಚು ಆಸಕ್ತವಾಗಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.