ADVERTISEMENT

ಸರಳತೆಯ ಸೌಂದರ್ಯ ಮತ್ತು ಸುಖ

ಬೆಳದಿಂಗಳು

ಸೃಜನಾನಂದ
Published 13 ಜನವರಿ 2016, 19:30 IST
Last Updated 13 ಜನವರಿ 2016, 19:30 IST

ಸರಳತೆ ಎನ್ನುವುದನ್ನು ಬಹುತೇಕ ಸಂದರ್ಭದಲ್ಲಿ ನಕಾರಾತ್ಮಕವಾಗಿ ಅರ್ಥೈಸಲಾಗುತ್ತದೆ. ಸರಳವಾಗಿ ಇರುವುದು ಸಾಮಾಜಿಕ ಸ್ಥಾನಮಾನಕ್ಕೆ ಕುಂದು ಎಂದು ಭಾವಿಸುವವರು ಇದ್ದಾರೆ.

ಈ ತಲೆಮಾರಿನ ಜಾಣ ಜಾಣೆಯರಂತೂ ಸರಳವಾಗಿ ಇರುವುದೆಂದರೆ ಲೌಕಿಕ ಸುಖದೊಂದಿಗೆ ರಾಜಿ ಮಾಡಿಕೊಳ್ಳುವುದು ಎಂದು ಭಾವಿಸಿದಂತಿದೆ. ಹಾಗಾಗಿಯೇ ನಮ್ಮ ಇಂದಿನ ಬದುಕು ಸರಳತೆಯಿಂದ ದೂರ ಇರುವುದಕ್ಕೆ ಹೆಚ್ಚು ಶ್ರಮವಹಿಸುತ್ತಿದೆ. ಸರಳವಾಗಿ ಉಣ್ಣುವುದು, ಉಡುವುದು ನಮಗೆ ಬೇಕಿಲ್ಲ.

ಸರಳವಾಗಿ ಮಾತನಾಡುವುದೂ ನಮಗೆ ಸಾಧ್ಯವಾಗುತ್ತಿಲ್ಲ. ಸರಳತೆಯಿಂದ ದೂರ ಇರುವುದಕ್ಕೆ ಕಷ್ಟ ಪಡಲು, ಹೆಚ್ಚು ದುಡಿಯಲು ಕೂಡ ನಾವು ತಯಾರಿದ್ದೇವೆ. ಅಂದರೆ, ಸರಳತೆ ಎನ್ನುವುದು ಒಂದು ಆತಂಕವಾಗಿ ನಮ್ಮನ್ನು ಕಾಡುತ್ತಿರುವಂತಿದೆ. ಆದರೆ, ವಾಸ್ತವ ಹಾಗೇನೂ ಇಲ್ಲ. ಸರಳತೆ ಎನ್ನುವುದು ಒಂದು ಅವಗುಣವೂ ಅಲ್ಲ, ಅದು ದುಃಸ್ವಪ್ನವಲ್ಲ, ಅದೊಂದು ಕೊರತೆಯೂ ಅಲ್ಲ. ಹಾಗೆ ನೋಡಿದರೆ ಸರಳತೆ ಎನ್ನುವುದು ಒಂದು ಗುಣ, ಅದೊಂದು ಮೌಲ್ಯ ಹಾಗೂ ಬದುಕಿನ ಚೆಲುವನ್ನು ಹೆಚ್ಚಿಸುವ ಜೀವನ ವಿಧಾನ.

ಸರಳತೆಯ ಅಭಿವ್ಯಕ್ತಿಗೆ ಪ್ರಕೃತಿಗಿಂತಲೂ ಉತ್ತಮವಾದ ಉದಾಹರಣೆ ಮತ್ತೊಂದಿಲ್ಲ. ಹರಿಯುವ ನೀರು, ಬಿಸಿಲೊಡ್ಡಿಗೊಂಡ ಮರಗಿಡಗಳ ಹಸಿರು, ಎಲೆಮರೆಯ ಹಣ್ಣು, ಪೂರ್ವದಲ್ಲಿ ನಕ್ಕು ಪಶ್ಚಿಮದ ಮುಸುಕಿನಲ್ಲಿ ಸೇರಿಕೊಳ್ಳುವ ಸೂರ್ಯ, ಚಂದ್ರನ ಬೆಳದಿಂಗಳು... ಯಾವುದರಲ್ಲಿ ಇದೆ ಹೇಳಿ ಆಡಂಬರ. ಸರಳತೆಗೆ ಅತ್ಯಂತ ಸರಳವಾದ ವ್ಯಾಖ್ಯಾನ– ಸಹಜತೆ!

ಬುದ್ಧ, ಗಾಂಧಿ, ತೆರೇಸಾ ಅಂಥವರ ಬದುಕು ಕೂಡ ಸರಳತೆಯ ಪಠ್ಯವೇ ಆಗಿದೆ. ದೊಡ್ಡವರ ಮಾತು ಬಿಡಿ, ತಿಳಿಕೊಳದ ಕಣ್ಣುಗಳ ಮಕ್ಕಳಿಗಿಂತಲೂ ಸರಳತೆಗೆ ಬೇರೆ ರಾಯಭಾರಿಗಳು ಬೇಕೆ? ಹೆತ್ತವರ ಲೌಕಿಕದ ಡೌಲಿಗೆ ಸೆಡ್ಡು ಹೊಡೆಯಲಿಕ್ಕೆ ಈ ಮಕ್ಕಳು ಹುಟ್ಟಿದಂತೆ ಕಾಣಿಸುತ್ತದೆ. ಆದರೆ, ಈ ಕಂದಮ್ಮಗಳನ್ನು ಕೂಡ ನಾವು ನಮ್ಮ ಒಣ ಹಮ್ಮಿನ ಅಚ್ಚಿಗೆ ಒಗ್ಗಿಸಿಬಿಡುತ್ತೇವೆ. ಹಾಗೆ ನೋಡಿದರೆ ಸರಳವಾಗಿರುವುದು ಸುಲಭವಾದುದೇನೂ ಅಲ್ಲ. ಆಡಂಬರಕ್ಕಿಂತಲೂ ಹೆಚ್ಚು ಶ್ರಮವನ್ನು ಸರಳತೆಯ ಸಿದ್ಧಿಗೆ ವಹಿಸಬೇಕಾಗುತ್ತದೆ.

ದೇಹದ ಜೊತೆಗೆ ಮನಸ್ಸನ್ನೂ ಅಂಕೆಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಅಂದಹಾಗೆ, ಸರಳವಾಗಿರುವುದು ಎಂದರೆ ಸುಖವಾಗಿರುವುದು ಎಂದರ್ಥ. ಇಡೀ ಜಗತ್ತು ಏಕೆ ಅಸುಖಿ ಆಗಿದೆಯೆಂದರೆ, ಅದಕ್ಕೆ ಸರಳವಾಗಿರುವುದು ಗೊತ್ತಿಲ್ಲ. ಸುಖದ ಹೆಸರಿನಲ್ಲಿ ನಾವು ಹೆಚ್ಚಿಸಿಕೊಳ್ಳುತ್ತಿರುವುದು ಸುಖವನ್ನೇ ಹೊರತು ಬೇರೇನಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.