ADVERTISEMENT

ಸವಾರಿಗೆ ಯಾವುದು ಹಿತಕರ?

ಕೋಲಿಯೋಸ್, ಫಾರ್ಚೂನರ್

ನೇಸರ ಕಾಡನಕುಪ್ಪೆ
Published 16 ಜನವರಿ 2013, 19:59 IST
Last Updated 16 ಜನವರಿ 2013, 19:59 IST
ಫಾರ್ಚೂನರ್
ಫಾರ್ಚೂನರ್   

ಏನಿದು ಬಿಸಿನೆಸ್ ಕ್ಲಾಸ್ ಎಸ್‌ಯುವಿ? ಸಾಮಾನ್ಯವಾಗಿ ಎಸ್‌ಯುವಿ ಎಂದರೆ ಕ್ರೀಡಾ ಉದ್ದೇಶಕ್ಕೆ ಬಳಕೆಯಾಗುವಂಥದ್ದು. ಆದರೆ ಇವು ಇತರ ಕಾರುಗಳಿಗಿಂತ ಶ್ರೇಷ್ಠ ಎಂಬ ಭಾವನೆ ಮೂಡಿಬಿಟ್ಟಿದೆ. ಅತಿ ಶ್ರೀಮಂತರಿಗಾಗಿ ಶ್ರೇಷ್ಠರಲ್ಲಿ ಶ್ರೇಷ್ಠರನ್ನು  ಸೃಷ್ಟಿಸುವ ಕ್ರಿಯೆಯಲ್ಲಿ ಬಿಸಿನೆಸ್ ಕ್ಲಾಸ್ ಎಸ್‌ಯುವಿ ರೂಪುಗೊಂಡಿದೆ.

ಈ ಬಗೆಯ ಕಾರುಗಳು ರಾಜಕಾರಣಿಗಳಿಗೂ ಇಷ್ಟ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹುಟ್ಟಿಕೊಳ್ಳುವ ಟ್ರೆಂಡ್ ಕೊಂಚ ನಿಧಾನವಾಗಿ ಭಾರತಕ್ಕೆ ಬರುತ್ತದೆ. ಅಲ್ಲಿ ರಾಜಕಾರಣಿಗಳು ಲಿಮೋಸಿನ್ ಅನ್ನು ಆರಂಭದಲ್ಲಿ ಹೆಚ್ಚು ಬಳಸಿಕೊಂಡು, ನಂತರ ಬಿಸಿನೆಸ್ ಕ್ಲಾಸ್ ಎಸ್‌ಯುವಿಗಳನ್ನು ಬಳಸುವತ್ತ ಚಿತ್ತ ಹರಿಸಿದ್ದರು.

ಲಿಮೋಸಿನ್ ಬಳಸಲು ವಿಶಾಲವಾದ ರಸ್ತೆಗಳು ಬೇಕು. ಏಕೆಂದರೆ ಸಾಮಾನ್ಯ ಕಾರುಗಳಿಗಿಂತ ದುಪ್ಪಟ್ಟು ಉದ್ದವಾಗಿರುತ್ತವೆ. ಹಾಗಾಗಿ ಭಾರತದ ರಸ್ತೆಗಳಲ್ಲಿ ಲಿಮೋಸಿನ್ ಬಳಕೆ ಕಷ್ಟವೇ ಸರಿ. ಆದರೆ ಎಸ್‌ಯುವಿಗಳಿಗೆ ಇಂಥ ಸಮಸ್ಯೆಯಿಲ್ಲ. ಗಾತ್ರದಲ್ಲಿ ದೊಡ್ಡವು ಎಂಬುದನ್ನು ಬಿಟ್ಟರೆ, ಭಾರತದ ರಸ್ತೆಗಳಿಗೆ ಹೇಳಿ ಮಾಡಿಸಿದಂತೆಯೇ ಇವೆ. ಅದರಲ್ಲೂ ಬಿಸಿನೆಸ್ ಕ್ಲಾಸ್ ಎಸ್‌ಯುವಿಗಳು ಪ್ರಯಾಣಿಕರನ್ನು ನಿಜಲೋಕದಿಂದ ಬೇರ್ಪಡಿಸಿ ಸ್ವರ್ಗವನ್ನೇ ಸೃಷ್ಟಿ ಮಾಡಿಬಿಡುತ್ತವೆ.

ಈ ವರ್ಗದಲ್ಲಿ ಹೆಸರು ಮಾಡಿದ್ದು ಮುಖ್ಯವಾಗಿ ಎರಡು ಕಾರುಗಳು. ಟಯೋಟಾ ಫಾರ್ಚೂನರ್ ಹಾಗೂ ರೆನೊ ಕೋಲಿಯೋಸ್. ಟಯೋಟಾ ಫಾರ್ಚೂನರ್ ಹಳೆಯ ಎಸ್‌ಯುವಿ. ಬಿಡುಗಡೆ ಆಗಿ ಆಗಲೇ 2 ವರ್ಷ ತುಂಬುತ್ತಿದೆ. ಆದರೆ ರೆನೊ ಕೋಲಿಯೋಸ್ ಹೊಸದು. ಜತೆಗೆ ಹೊಸ ತಂತ್ರಜ್ಞಾನ, ಹೊಸ ಭರವಸೆಗಳೊಂದಿಗೆ ಬಂದಿದೆ. ಅವರೆಡರ ನಡುವಣ ಹೋಲಿಕೆ ಮತ್ತು ವಿಶ್ಲೇಷಣೆ ಇಲ್ಲಿದೆ.

ಪಕ್ಕಾ ಎಸ್‌ಯುವಿ
ರೆನೊ ಕೊನೆಗೂ ಪಕ್ಕಾ ಎಸ್‌ಯುವಿಯನ್ನು ಭಾರತಕ್ಕೆ ಬಿಡುಗಡೆ ಮಾಡಿದೆ. ರೆನೊ ಡಸ್ಟರ್ ಭಾರತದಲ್ಲಿ ಸೂಪರ್ ಹಿಟ್ ಆಗುತ್ತಿದ್ದಂತೆ, ಒಂದರ ಹಿಂದೆ ಒಂದರಂತೆ ಹೊಸ ವಾಹನಗಳನ್ನು ರೆನೊ ಹೊರಬಿಡುತ್ತಿರುವುದು ಅಚ್ಚರಿ ಮೂಡಿಸಿದೆ.

ರೆನೋ ಸ್ಕಾಲಾ, ಪಲ್ಸ್, ಫ್ಯೂಯೆನ್ಸ್ ಹೊರಬಿಟ್ಟಂತೆ, ಬಿಸಿನೆಸ್ ಕ್ಲಾಸ್‌ನ ಕೋಲಿಯೋಸ್ ಅನ್ನೂ ಹೊರಬಿಟ್ಟಿದೆ. ಎಸ್‌ಯುವಿ ವಿಭಾಗದಲ್ಲಿ ಡಸ್ಟರ್ ಶ್ರೇಷ್ಠವೇ ಆಗಿದ್ದರೂ, ಕೋಲಿಯೋಸ್‌ನ ಜತೆ ಹೋಲಿಸಲಾಗದು. ಕೋಲಿಯೋಸ್ ಗರಿಷ್ಠ ಐಷಾರಾಮಿ, ನೈಜ ಎಸ್‌ಯುವಿ ಗುಣಲಕ್ಷಣಗಳನ್ನು ಹೊಂದಿದೆ. ಇದರ ಬೆಲೆಯೇ 23 ಲಕ್ಷ ರೂಪಾಯಿಗಳು. ಕಾಸಿಗೆ ತಕ್ಕ ಕಜ್ಜಾಯ ಎಂಬುದು ಇಲ್ಲಿ ನಿಜವಾಗುತ್ತಿದೆ.

ನೋಡಲು ಕೊಂಚ ಟಯೋಟಾ ಫಾರ್ಚೂನರ್ ಇದ್ದಂತೇ ಇದ್ದರೂ, ತನ್ನದೇ ಆದ ವಿಶೇಷತೆ ಕೋಲಿಯೋಸ್‌ಗೆ ಇದೆ. ಶಕ್ತಿಶಾಲಿ ಎಂಜಿನ್ ಹೊಂದಿರುವಂತೆಯೇ ಶಕ್ತಿಶಾಲಿ ನೋಟವೂ ಇದಕ್ಕಿದೆ! ಇದರ ತೂಕವೇ ಬರೋಬ್ಬರಿ 2300 ಕಿಲೋ ಗ್ರಾಂ! 4520 ಎಂಎಂ ಉದ್ದ, 1855 ಎಂಎಂ ಅಗಲ, 1690 ಎಂಎಂ ಎತ್ತರ ಇದೆ.

ADVERTISEMENT

ಹಾಗಾಗಿ ಅತಿ ಬಲಿಷ್ಠ ಹಾಗೂ ದೈತ್ಯ ನೋಟ ಇದಕ್ಕೆ ಸಿಕ್ಕಿದೆ. ರಸ್ತೆಯಲ್ಲಿ ತಕ್ಷಣವೇ ಇತರ ವಾಹನಗಳ ನಡುವೆ ಎದ್ದು ಕಾಣುತ್ತದೆ. ಅದರ ಜತೆಗೇ ಬಲಿಷ್ಠ ಮಸಲ್‌ಗಳುಳ್ಳ ಟೈರ್‌ಗಳು ಅದರ ಹೊರ ನೋಟಕ್ಕೆ ಪೂರಕವಾಗಿವೆ. ಅತ್ಯುತ್ತಮ ಗುಣಮಟ್ಟದ ವಿಶಾಲ ಕ್ಲಿಯರ್ ಲೆನ್ಸ್ ಹೆಡ್‌ಲೈಟ್ ಹಾಗೂ ಟೇಲ್ ಲೈಟ್‌ಗಳು ಗಮನ ಸೆಳೆಯುತ್ತವೆ.

ಕೋಲಿಯೋಸ್‌ನ ಮುಂಭಾಗದ ಎಂಜಿನ್ ಗ್ರಿಲ್‌ಗೂ ಬಲಿಷ್ಠತೆಯನ್ನು ತೋರಿಸುವ ಗುಣವಿದೆ. ಫಾಗ್‌ಲೈಟ್, ಇಂಡಿಕೇಟರ್ ಉಳ್ಳ ಮಿರರ್, ಹಿಂಭಾಗದಲ್ಲಿ ಸ್ಪಾಯ್ಲರ್ ಹಾಗೂ ಗಾಜಿನ ವೈಪರ್ ಇದರಲ್ಲಿ ಆಯ್ಕೆಯಾಗಿರದೇ ಕಡ್ಡಾಯ ಸೌಲಭ್ಯಗಳಾಗಿರುವುದು ವಿಶೇಷ.

ಶ್ರೇಷ್ಠ ಕಾರ್ಯಕ್ಷಮತೆ
ಅದ್ಭುತ 1996 ಸಿಸಿ ಡೀಸೆಲ್ ಎಂಜಿನ್ ಇದೆ. ಇದರ ದೇಹಕ್ಕೆ ಕೊಂಚ ಚಿಕ್ಕ ಎಂಜಿನ್ ಎಂದನ್ನಿಸುವುದು ಸಹಜ. ಇದರ ಪ್ರತಿಸ್ಪರ್ಧಿ ಟಯೋಟಾ ಫಾರ್ಚೂನರ್ 2982 ಸಿಸಿ ಎಂಜಿನ್ ಹೊಂದಿದೆ. ಅಂದರೆ ಸರಿಸುಮಾರು ಸಾವಿರ ಸಿಸಿ ಕಡಿಮೆ ಎನ್ನಬಹುದು.

ಸಹಜವಾಗೇ ಶಕ್ತಿ ಕಡಿಮೆ ಅನ್ನಿಸಿಯೇ ಬಿಡುತ್ತದೆ. ಆದರೆ ಅದೇ ಇದಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಗಾತ್ರದಲ್ಲೂ ಫಾರ್ಚೂನರ್‌ಗಿಂತ 200 ಎಂಎಂ ಚಿಕ್ಕದಾಗಿ ಇರುವ ಕಾರಣ ಶಕ್ತಿ ಸಾಕಾಗುತ್ತದೆ. ಫಾರ್ಚೂನರ್‌ನಷ್ಟೇ ಶಕ್ತಿ ಇದಕ್ಕೂ ಸಿಕ್ಕಿದೆ. ಗರಿಷ್ಠ 180 ಕಿಲೋಮೀಟರ್ ವೇಗ ಪಡೆಯುತ್ತದೆ.

ಫಾರ್ಚೂನರ್ ಸಹ ಇಷ್ಟೇ ವೇಗ ಪಡೆಯುತ್ತದೆ. 206 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಇರುವುದು ಇದರ ವಿಭಾಗಕ್ಕೆ ಬೇಕಾದಷ್ಟು. ಮಾರುತಿ ಸುಜುಕಿಯ ಗ್ರಾಂಡ್ ವಿಟಾರವನ್ನು ಇದು ಬಹುವಾಗಿ ಹೋಲುತ್ತದೆ.
ಬಳಕೆಯಾಗಿರುವ ತಂತ್ರಜ್ಞಾನಗಳೂ ಶ್ರೇಷ್ಠವಾಗಿವೆ. ಸಂಪೂರ್ಣ 6 ಗಿಯರ್‌ಗಳ ಆಟೋಮ್ಯೋಟಿಕ್ ಟ್ರಾನ್ಸ್‌ಮಿಷನ್ ವ್ಯವಸ್ಥೆ ಇದೆ.

ಸ್ವಯಂ ಚಾಲಿತ 4 ವೀಲ್ ಡ್ರೈವ್ ಹಾಗೂ 2 ವೀಲ್ ಡ್ರೈವ್‌ಗಳ ನಡುವೆ ಆಯ್ಕೆ ಸಿಗುತ್ತದೆ. ರಸ್ತೆ ಸ್ಥಿತಿಗತಿಗಳಿಗೆ ತಕ್ಕಂತೆ ತಂತಾನೇ 2 ವೀಲ್ ಅಥವಾ 4 ವೀಲ್ ಡ್ರೈವ್‌ಗೆ ಬದಲಿಸಿಕೊಳ್ಳುತ್ತದೆ. ಬೇಕಾದರೆ ಚಾಲಕನೇ ಆಯ್ಕೆ ಮಾಡಿಕೊಳ್ಳುವ ಮ್ಯೋನ್ಯುಯಲ್ ಸೌಲಭ್ಯವೂ ಇದೆ. ಜತೆಗೆ ಎಬಿಎಸ್, ಪಾರ್ಕಿಂಗ್ ಸೆನ್ಸರ್, ಸಂಪೂರ್ಣ ನಿಯಂತ್ರಣ ಸೌಲಭ್ಯ ಉಳ್ಳ ಸ್ಟೀರಿಂಗ್ ವೀಲ್ ಮನಸೂರೆಗೊಳ್ಳುತ್ತವೆ.

ಸುರಕ್ಷೆ ಮತ್ತು ಆರಾಮ
ಅದ್ಭುತ ಸುರಕ್ಷಾ ವಿಧಾನ ಬಳಕೆಯಾಗಿವೆ ಎನ್ನಬಹುದು. ಎಬಿಎಸ್, ಇಎಸ್‌ಪಿ ಸೌಲಭ್ಯಗಳ ಜತೆಗೆ ಎಲ್ಲ ಪ್ರಯಾಣಿಕರಿಗೂ ಏರ್ ಬ್ಯಾಗ್ ಸೌಲಭ್ಯ ಕಲ್ಪಿಸಲಾಗಿದೆ. ಮುಂಭಾಗದ ಇಂಪಾಕ್ಟ್ ಸೆನ್ಸರ್‌ಗಳು ಸೂಕ್ಷ್ಮವಾಗಿದ್ದು, ಏರ್‌ಬ್ಯಾಗ್‌ಗಳು ಉತ್ತಮವಾಗಿ ಪ್ರತಿಕ್ರಿಯಿಸುತ್ತವೆ. ಡಿಸ್ಕ್ ಬ್ರೇಕ್ ಇದೆ. ಪವರ್ ಬ್ರೇಕ್ ಇರುವ ಕಾರಣ, ನಿರಾಯಾಸದ ಬ್ರೇಕಿಂಗ್ ಅನುಭವ ಪಡೆಯಬಹುದು.

ಆರಾಮಕ್ಕೆ ಕೋಲಿಯೋಸ್ ಹೇಳಿ ಮಾಡಿಸಿದಂತಿದೆ. 5 ಮಂದಿ ಆರಾಮಾಗಿ ಕೂರಬಹುದು. ಫಾರ್ಚೂನರ್‌ನಂತೆ 7 ಮಂದಿ ಕೂರಲು ಆಗದು. ಮೊಬೈಲ್ ಫೋನ್ ಚಾರ್ಜಿಂಗ್, ಯುಎಸ್‌ಬಿ ಕನೆಕ್ಟಿವಿಟಿ, ಬ್ಲೂಟೂತ್, ವೈ-ಫೈ ಸಂಪರ್ಕ ಇದೆ. ಪ್ರತಿ ಆಸನಗಳಲ್ಳೂ ಬಾಟಲ್ ಹೋಲ್ಡರ್ ಇದೆ. ಜತೆಗೆ ಬಾಟಲ್ ಕೂಲರ್ ವ್ಯವಸ್ಥೆಯೂ ಇರಬೇಕಿತ್ತು.

ಸ್ಮಾರ್ಟ್ ಸ್ಟೋರೇಜ್ ಎಂಬ ಸೌಲಭ್ಯ ಇದ್ದು, ಸಿ.ಡಿ, ಮೊಬೈಲ್, ಪರ್ಸ್ ಮುಂತಾದ ಬೆಲೆಬಾಳುವ ಉಪಕರಣಗಳನ್ನು ಜೋಪಾನವಾಗಿ ಇಡಬಹುದು. ಪ್ರಖರ ಬೆಳಕು ತಡೆಯಲು ಸನ್ ಬ್ಲೈಂಡ್ ಇವೆ. ಶ್ರೇಷ್ಠ ಗುಣಮಟ್ಟದ 8 ದಿಕ್ಕುಗಳ ಧ್ವನಿಯ ಸ್ವೀಕರ್ ಸಿಸ್ಟಂ, ಮ್ಯೂಸಿಕ್ ಸಿಸ್ಟಂ ಇದೆ. ಎಲ್ಲ ಆಸನಗಳಿಗೂ ತಲುಪಬಲ್ಲ ಎಸಿ ಇರುವುದು ಹೆಚ್ಚುವರಿ ಆರಾಮವನ್ನು ನೀಡುತ್ತದೆ.

ಕೋಲಿಯೋಸ್ ಲೀಟರ್ ಡೀಸೆಲ್‌ಗೆ ಅತ್ಯುತ್ತಮ 13 ಕಿಲೋಮೀಟರ್ ಮೈಲೇಜ್ ನೀಡುತ್ತದೆ. 12 ಕಿಲೋಮೀಟರ್ ನೀಡುತ್ತದೆ. ಅಂದರೆ ಕೊಂಚ ಉತ್ತಮ ಮೈಲೇಜ್ ಭರವಸೆ ಕೋಲಿಯೋಸ್‌ನಲ್ಲಿದೆ.  

ಓಲ್ಡ್ ಈಸ್ ಗೋಲ್ಡ್!
ಹಳೆಯದೇ ಆದರೂ ಇದನ್ನು ಓಲ್ಡ್ ಈಸ್ ಗೋಲ್ಡ್ ಎನ್ನಬಹುದು. ಏಕೆಂದರೆ ಇದು ಸಾಬೀತಾದ ಎಸ್‌ಯುವಿ. ಬಿಸಿನೆಸ್ ಕ್ಲಾಸ್ ಎಸ್‌ಯುವಿ ಹೇಗಿರುತ್ತದೆ ಎಂದು ಭಾರತೀಯರಿಗೆ ಗೊತ್ತಾಗಿದ್ದೇ ಫಾರ್ಚೂನರ್ ಮೂಲಕ. ಈ ಮೂಲಕ ಟಯೋಟಾ ಮೊದಲಿನ ಸಾಲಲ್ಲಿ ನಿಂತಿದೆ ಎನ್ನಬಹುದು. ಫಾರ್ಚೂನರ್ ಎಲ್ಲ ಆಯಾಮಗಳಿಂದಲೂ ತನ್ನ ಶ್ರೇಷ್ಠತೆ ಕಾಪಾಡಿಕೊಳ್ಳುತ್ತದೆ.

ಫಾರ್ಚೂನರ್ ಸಹ ಕೋಲಿಯೋಸ್‌ನಂತೆಯೇ 23 ಲಕ್ಷ ರೂಪಾಯಿ ಆಗುತ್ತದೆ. ಆದರೆ ಫಾರ್ಚೂನರ್ ಕೊಂಚ ದೊಡ್ಡ ಕಾರು. ಗಾತ್ರವೇ ಮುಖ್ಯ ಎಂದು ತಿಳಿದುಕೊಳ್ಳುವ ಗ್ರಾಹಕರಿಗೆ, ಹೆಚ್ಚು ಆಸನಗಳು ಬೇಕು ಎಂಬ ಆಯ್ಕೆ ಬೇಕಾದವರಿಗೆ ಫಾರ್ಚೂನರ್ ಕೋಲಿಯೋಸ್‌ಗಿಂತಲೂ ಒಳ್ಳೆಯ ಆಯ್ಕೆಯೇ.

ದೊಡ್ಡ ದೇಹ
ಕೋಲಿಯೋಸ್‌ಗಿಂತ ಸುಮಾರು 200 ಎಂಎಂ ಉದ್ದ ಫಾರ್ಚೂನರ್‌ಗೆ ಇದೆ. 4705 ಎಂಎಂ ಉದ್ದ, 1840 ಎಂಎಂ ಉದ್ದ, 1850 ಎಂಎಂ ಎತ್ತರ ಇದ್ದು ಕೋಲಿಯೋಸ್‌ಗಿಂತ ಸಹಜವಾಗೇ ದೊಡ್ಡದಾಗಿ ಕಾಣುತ್ತದೆ. 220 ಎಂಎಂಗಳ ಗ್ರೌಂಡ್ ಕ್ಲಿಯರೆನ್ಸ್ ಇದ್ದು, ಕೋಲಿಯೋಸ್‌ಗಿಂತ (206 ಎಂಎಂ) ಹೆಚ್ಚು ಆಫ್ ರೋಡ್ ಅನುಭವ ನೀಡಬಲ್ಲದು. ಇದರ ಬಲಿಷ್ಠ ನೋಟವೇ ಇದರ ಪ್ಲಸ್ ಪಾಯಿಂಟ್.

ಮುಂಭಾಗದಲ್ಲಿನ ಬಾನೆಟ್ ಮೇಲಿನ ಏರ್ ಸ್ಕೂಪ್ ನಿಜಕ್ಕೂ ಕೆಲಸ ಮಾಡುತ್ತದೆ. ಡಮ್ಮಿ ಅಲ್ಲ. ಎಂಜಿನ್ ತಂಪಾಗಿಸಲು ತಣ್ಣಗಿನ ಗಾಳಿ ಇದರ ಮೂಲಕ ಹರಿಯುತ್ತದೆ. ಶ್ರೇಷ್ಠ ಗುಣಮಟ್ಟದ ಕ್ಲಿಯರ್ ಲೆನ್ಸ್ ಹೆಡ್‌ಲೈಟ್, ಟೈಲ್ ಲೈಡ್ ಇವೆ. ಕಾರಿನ ಮೇಲ್ಭಾಗದಲ್ಲಿ ಗ್ರ್ಯಾಬ್ ರೇಲ್‌ಗಳಿದ್ದು, ಲಗೇಜ್ ಕೊಂಡೊಯ್ಯಲು ಸಹಾಯಕಾರಿ. ಜತೆಗೆ ಅದು ನೋಟವನ್ನೂ ಇಮ್ಮಡಿಗೊಳಿಸಿದೆ. ಕಾರಿನ ಸುತ್ತಲೂ ಘರ್ಷಣೆ ವಿರೋಧಿ ರಕ್ಷಾ ಕವಚವಿದೆ.

ಉತ್ತಮ ಕಾರ್ಯಕ್ಷಮತೆ
ಕಾರ್ಯಕ್ಷಮತೆಯಲ್ಲಿ ಕೋಲಿಯೋಸ್‌ಗಿಂತಲೂ ಫಾರ್ಚೂನರ್ ಒಂದು ಕೈ ಮೇಲೆ ಎನ್ನಬಹುದು. 2982 ಸಿಸಿ ಡೀಸೆಲ್ ಎಂಜಿನ್ ಇದೆ. ಗರಿಷ್ಠ ವೇಗ 180 ಕಿಲೋಮೀಟರ್ ಇದ್ದು, ಇದು ಕೋಲಿಯೋಸ್‌ನಷ್ಟೆಯೇ ಇದೆ ಎನ್ನಬಹುದು. ಆದರೆ ತ್ವರಿತ ಗತಿಯ ವೇಗವರ್ಧನೆ ಇದೆ. ಹೆಚ್ಚು ಟಾರ್ಕ್ ಇರುವ ಕಾರಣ, ಕೊನೆಯ ಗಿಯರ್‌ಗಳಲ್ಲಿ ಇರುವಾಗಲೂ ನಿರಾಯಾಸದ ಚಾಲನೆಯನ್ನು ನೀಡುತ್ತದೆ.

ಅತಿ ಬಲಿಷ್ಠ 4 ವೀಲ್ ಡ್ರೈವ್ ಇದ್ದು ಎಂತಹ ಕಷ್ಟಕರ ರಸ್ತೆಯೂ ಇದಕ್ಕೆ ಕಷ್ಟವೇನಲ್ಲ. ಸೌಲಭ್ಯದಲ್ಲಿ ಅತ್ಯುತ್ತಮ ಎಂದೇ ಹೇಳಬಹುದು. ಒಳಾಂಗಣ ಅತ್ಯುತ್ತಮವಾಗಿದೆ. 7 ಮಂದಿ ಆರಾಮಾಗಿ ಕೂರಬಲ್ಲ ಬೀಜ್ ಬಣ್ಣದ ಸೀಟ್‌ಗಳಿವೆ. ವಿಶಾಲವಾದ ಕ್ಯಾಬಿನ್ ಇದ್ದು, ಡ್ಯಾಶ್‌ಬೋರ್ಡ್ ಮುದ ನೀಡುತ್ತದೆ.

ಬಹು ಮಾಹಿತಿ ತೋರಿಸುವ ಪರದೆ, ಕತ್ತಲಲ್ಲಿ ಉತ್ತಮ ಪ್ರಭೆ ಬೀರುವ ದೀಪಗಳು, ಡೋರ್‌ನ ಹ್ಯಾಂಡಲ್‌ಗಳಿಗೆ ಕ್ರೋಂ ಫಿನಿಷ್, ಕತ್ತಲು-ಬೆಳಕುಗಳಲ್ಲಿ ಸಮಾನವಾಗಿ ಕಾಣಬಲ್ಲ ಹಿಂಭಾಗದ ಮಿರರ್, ಅಕ್ಕಪಕ್ಕದ ಮಿರರ್‌ಗಳಲ್ಲಿ ಡೀಫಾಗರ್, ಮಳೆಯನ್ನು ಗುರುತಿಸಿ ವೈಪರ್ ಚಾಲೂ ಮಾಡುವ ಸೆನ್ಸರ್‌ಗಳು ಉತ್ತಮವಾಗಿದೆ. ಅಂತೆಯೇ ಆರಾಮ ನೀಡುವ ಸೌಲಭ್ಯಗಳಾದ ಬಾಟೆಲ್ ಹೋಲ್ಡರ್, ಪೇಪರ್ ಹೋಲ್ಡರ್ ಮುಂತಾದ ಎಲ್ಲ ಸಾಮಾನ್ಯ ಸೌಲಭ್ಯಗಳಿವೆ.

ಶಕ್ತಿಶಾಲಿ ಬ್ರೇಕ್
ಸುರಕ್ಷೆ ಕೋಲಿಯೋಸ್‌ನಷ್ಟೇ ಇದೆ. ಅದರಂತೆಯೇ ಫಾರ್ಚೂನರ್‌ನಲ್ಲೂ 6 ಏರ್ ಬ್ಯಾಗ್‌ಗಳು ಇವೆ. ಉತ್ತಮ ಇಂಪಾಕ್ಟ್ ಸೆನ್ಸರ್ ಅಳವಡಿಸಿಕೊಳ್ಳಲಾಗಿದೆ. ಎಬಿಎಸ್, ಎಎಸ್‌ಪಿ ಇದೆ. ಗರಿಷ್ಠ ವೇಗದಿಂದ ಕೇವಲ 50 ಮೀಟರ್ ಅಂತರದಲ್ಲಿ ನಿಲ್ಲಬಲ್ಲ ಶಕ್ತಿಶಾಲಿ ಪವರ್ ಬ್ರೇಕ್ ಇದೆ. ಮೈಲೇಜ್ ಸಹ ಉತ್ತಮ ಎಂದೇ ಅನ್ನಬಹುದು. ಲೀಟರ್ ಡೀಸೆಲ್‌ಗೆ 12 ಕಿಲೋಮೀಟರ್ ಮೈಲೇಜ್ ನೀಡುತ್ತದೆ.  ರ್ಚೂನರ್‌ನಲ್ಲಿ 7 ಮಂದಿ ಕೂರಬಹುದಾದ ಕಾರಣ ಹೆಚ್ಚು ಲಾಭಕರ ಎನ್ನಬಹುದೋ ಏನೋ! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.