ADVERTISEMENT

ಹೊಲ ಕಾಯುವ ತೋಳ; ಸರಿಸೃಪವಾದ ರೋಬೊ!

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 19:30 IST
Last Updated 6 ಸೆಪ್ಟೆಂಬರ್ 2017, 19:30 IST
ಹೊಲ ಕಾಯುವ ತೋಳ; ಸರಿಸೃಪವಾದ ರೋಬೊ!
ಹೊಲ ಕಾಯುವ ತೋಳ; ಸರಿಸೃಪವಾದ ರೋಬೊ!   

ಬೀಜಿಂಗ್‌ನಲ್ಲಿ ಇತ್ತೀಚೆಗಷ್ಟೇ ರೋಬೊ ಮೇಳ ನಡೆಯಿತಲ್ಲ; ಆ ಮೇಳಕ್ಕೆ ಥರಾವರಿ ರೋಬೊಟ್‌ಗಳು ಬಂದಿದ್ದವು. ಅದರಲ್ಲೂ ಲಂಬವಾದ ಗೋಡೆಯ ಮೇಲೆ ಹಲ್ಲಿಯಂತೆ ಸರಬರನೆ ನಡೆದಾಡುವ ಯಂತ್ರಮಾನವನೊಬ್ಬ ‘ತಂತ್ರಜ್ಞಾನ ಜಾತ್ರೆ’ಯಲ್ಲಿ ಎಲ್ಲರ ಗಮನಸೆಳೆದ.

ಹಲ್ಲಿಯ ಪಾದದ ಬೆರಳುಗಳಲ್ಲಿ ಇರುವ ತಟ್ಟೆಯಾಕಾರದ ಮೆದುವಾದ ಚರ್ಮ ತನ್ನೊಳಗೆ ನಿರ್ವಾತ ಸೃಷ್ಟಿಸಿಕೊಂಡು 90 ಡಿಗ್ರಿ ಕೋನದಲ್ಲೂ ಹಲ್ಲಿಯ ಸರಾಗ ಓಡಾಟಕ್ಕೆ ನೆರವಾಗುತ್ತದಲ್ಲ, ಅಂತಹದ್ದೇ ಚಲನೆಯ ವಿನ್ಯಾಸವನ್ನು ಈ ಯಂತ್ರಮಾನವ ಹೊಂದಿದ್ದಾನಂತೆ. ಇದರಿಂದ ಎಲ್ಲೆಂದರಲ್ಲಿ ಓಡಾಡುತ್ತಾ, ಭಿನ್ನವಾದ ಕೆಲಸ ಮಾಡಲು ಈ ರೋಬೊಗೆ ಸಾಧ್ಯವಾಗಿದೆ ಎನ್ನುತ್ತಾರೆ ಅದನ್ನು ಸೃಷ್ಟಿಸಿದ ಸ್ವಿಟ್ಸರ್ಲೆಂಡ್‌ನ ಇಪಿಎಫ್‌ಎಲ್‌ ಎಂಬ ಕಂಪೆನಿಯ ತಂತ್ರಜ್ಞರು.

ಏನೇನು ಮಾಡುತ್ತವೆ?: ಈ ರೋಬೊಗಳು ಸರಿಸೃಪಗಳಂತೆ ಸರಿಯುತ್ತವೆ, ಸಮತಟ್ಟಾದ ಗೋಡೆಯ ಮೇಲೆ 90 ಡಿಗ್ರಿ ಕೋನದಲ್ಲೂ ಬಿಗಿಯಾದ ಹಿಡಿತ ಸಾಧಿಸುವುದು ಅವುಗಳ ವಿಶೇಷ. ಗೋಡೆಯ ಮೇಲೆ ಹಲ್ಲಿಯಂತೆ ಸರಿದಾಡುವ ಅವುಗಳು ನೆಲದ ಮೇಲೆ ಮನುಷ್ಯರಂತೆ ಹೆಜ್ಜೆಯನ್ನೂ ಹಾಕುತ್ತವೆ. ಹೀಗಾಗಿ ಮಾಮೂಲಿ ರೋಬೊಗಿಂತ ಇವುಗಳು ಹೆಚ್ಚಿನ ಕೆಲಸ ತೆಗೆಯಲು ಸಾಧ್ಯ ಎಂದು ಅವರು ವಿವರಿಸುತ್ತಾರೆ.

ADVERTISEMENT

ಟಿಪ್ಸ್‌ ನೀಡುವ ಚಿಪ್‌
ಇತ್ತ ಬೀಜಿಂಗ್‌ನಿಂದ ಬಂದ ತಂತ್ರಜ್ಞಾನದ ಸಂದೇಶ ಇದಾದರೆ ಅತ್ತ ಬರ್ಲಿನ್‌ನಲ್ಲಿ ಬುಧವಾರವಷ್ಟೇ ಮುಗಿದ ತಂತ್ರಜ್ಞಾನ ಜಾತ್ರೆಯಿಂದಲೂ ಹಲವು ಹೊಸ ಗ್ಯಾಜೆಟ್‌ಗಳ ವರ್ತಮಾನ ಬಂದಿದೆ. ಅಂಥವುಗಳಲ್ಲಿ ಒಂದು ನಾಯಿಯ ಕಾಲರ್‌ ಚಿಪ್‌. ಜಿಪಿಎಸ್‌ ಇರುವ ನಾಯಿಯ ಕಾಲರ್‌ ಚಿಪ್‌ಗಳು ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿವೆ.

ನಾಯಿಯ ವರ್ತನೆಯನ್ನು ದಾಖಲಿಸುತ್ತಾ ಅದರ ಸ್ವಭಾವವನ್ನೂ ಅಭ್ಯಸಿಸುವ ಈ ಚಿಪ್‌, ಅದಕ್ಕೆ ಎಂತಹ ತರಬೇತಿಯ ಅಗತ್ಯವಿದೆ ಎಂಬುದರ ಕುರಿತು ಒಡೆಯನಿಗೆ ಟಿಪ್ಸ್‌ ಕೊಡುತ್ತದಂತೆ. ಚಿಪ್‌ನಲ್ಲಿ ಜಿಪಿಎಸ್‌ ಸಹ ಅಳವಡಿಸಿರುವ ಕಾರಣ ನಾಯಿ ತಪ್ಪಿಸಿಕೊಂಡರೂ ಪತ್ತೆ ಹಚ್ಚುವುದು ಸುಲಭವಾಗಿದೆ.

ಅಂದಹಾಗೆ, ಪ್ಯಾನಾಸೊನಿಕ್‌ ಕಂಪೆನಿ ಹೊಸ ವಾರ್ಡ್‌ರೋಬ್‌ ಸೃಷ್ಟಿಸಿದೆ. ಏನಪ್ಪ ಅದರ ವಿಶೇಷವೆಂದರೆ ನೀವು ಕಚೇರಿಯಿಂದ ಮನೆಗೆ ಬಂದು ಕೊಳೆಯಾದ ಬಟ್ಟೆಯನ್ನು ಕಳಚಿ ಈ ವಾರ್ಡ್‌ರೋಬ್‌ಗೆ ಹಾಕುತ್ತೀರಿ ಎಂದಿಟ್ಟುಕೊಳ್ಳಿ. ಬೆಳಿಗ್ಗೆ ಎದ್ದು ನೋಡುವ ಹೊತ್ತಿಗೆ ಅವುಗಳು ಮತ್ತೆ ಶುಚಿಗೊಂಡು, ಇಸ್ತ್ರಿ ಸಹ ಮಾಡಿಸಿಕೊಂಡು, ಮತ್ತೆ ಧರಿಸಲು ಸಿದ್ಧವಾಗಿ ಕುಳಿತಿರುತ್ತವೆ. ಆದರೆ, ಬಳಕೆದಾರರು ಸದ್ಯ ಒಂದು ಎಚ್ಚರಿಕೆಯನ್ನು ಮಾತ್ರ ವಹಿಸಲೇಬೇಕು.

ನೀವು ಶುಚಿಯಾದ ಬಟ್ಟೆಗಳನ್ನೇ ವಾರ್ಡ್‌ರೋಬ್‌ನಲ್ಲಿಟ್ಟರೆ ಅದು ಮತ್ತೆ ಒಗೆದು, ಇಸ್ತ್ರಿ ಮಾಡುತ್ತದೆ. ಹೀಗಾಗಿ ಕೊಳೆಯಾದ ಬಟ್ಟೆಗಳನ್ನು ಮಾತ್ರ ಇಡಬೇಕು. ಯಾರಿಗೆ ಗೊತ್ತು, ಮುಂದೆ ಕೊಳೆಯಾದ ಬಟ್ಟೆಗಳನ್ನು ಮಾತ್ರ ಹುಡುಕಿ ಶುಚಿಗೊಳಿಸುವ ವಾರ್ಡ್‌ರೋಬ್‌ ಬಂದರೂ ಬರಬಹುದು.

ಸಂಶೋಧಕರು ಇನ್ನೊಂದು ಹೊಸ ಡಿವೈಸ್‌ ಕಂಡು ಹಿಡಿದಿದ್ದಾರೆ. ದಿನದ ಯಾವುದೇ ಸಮಯದಲ್ಲಿ ಕೇವಲ 60 ಸೆಕೆಂಡ್‌ಗಳವರೆಗೆ ಆ ಸಾಧನವನ್ನು ಕುತ್ತಿಗೆ ಬಳಿ ಹಿಡಿದರೆ ಸಾಕು, ಅದು ಕತ್ತಿನ ಸ್ನಾಯುಗಳಿಗೆ ವ್ಯಾಯಾಮ ಮಾಡಿಸಿ, ಗಂಟಿನ ಆರೋಗ್ಯವನ್ನೂ ಕಾಪಾಡುತ್ತದಂತೆ!

ಸೆಲ್ಫಿ ಕಾಪ್ಟರ್‌
ಕತ್ತಿಗೂ ವ್ಯಾಯಾಮ ಮಾಡಿಸಿದ ಮೇಲೆ ಕತ್ತು ಮೇಲೆತ್ತಿ ಒಂದು ಸೆಲ್ಫಿ ತೆಗೆದುಕೊಳ್ಳಲು ಏನು ಕಷ್ಟ? ವೈಡ್‌ ಆ್ಯಂಗಲ್‌ ಸೆಲ್ಫಿಗಾಗಿ ಸದ್ಯ ನಾವೊಂದು ಸ್ಟಿಕ್‌ ಬಳಸುತ್ತಿದ್ದೀರಿ ತಾನೆ? ಅದಕ್ಕಾಗಿ ನೀವು ಇನ್ನುಮುಂದೆ ಅಷ್ಟೊಂದು ತ್ರಾಸು ಮಾಡಿಕೊಳ್ಳುವ ಅಗತ್ಯವಿಲ್ಲ.

ಏಕೆಂದರೆ, ನಾವೊಂದು (ಸೆಲ್ಫಿ ಕಾಪ್ಟರ್‌) ಹೊಸ ಸಾಧನ ಸೃಷ್ಟಿಸಿದ್ದೇವೆ ಎನ್ನುತ್ತಾರೆ ಬರ್ಲಿನ್‌ಗೆ ಆ ಹೊಸ ಸಾಧನ ತೆಗೆದುಕೊಂಡು ಬಂದಿದ್ದ ಎಲೆಕ್ಟ್ರಾನಿಕ್‌ ಸರಕುಗಳ ಉತ್ಪಾದಕರು. ಸ್ಮಾರ್ಟ್‌ಫೋನ್‌ ನಿಯಂತ್ರಿತ ಈ ಕ್ಯಾಮೆರಾ ಡ್ರೋಣ್‌ನಂತೆ 65 ಅಡಿ ಎತ್ತರಕ್ಕೆ ಹಾರಿ ಚಿತ್ರಗಳನ್ನು ಸೆರೆ ಹಿಡಿಯಲಿದೆಯಂತೆ. ಅಂದಹಾಗೆ, ಅದರ ಬೆಲೆ ₹ 25 ಸಾವಿರದ ಆಸುಪಾಸಿನಲ್ಲಿದೆ.

ಡೈಲಾಗ್‌ ಓವನ್‌
ಇಂತಹ ಎಲೆಕ್ಟ್ರಾನಿಕ್‌ ಸಾಧನಗಳ ಜತೆ ನಾವು ಮೋಜು ಮಾಡುತ್ತಾ ಕುಳಿತರೆ ಅವುಗಳೇನು ನಮಗೆ ಅಡುಗೆ ಮಾಡಿ ಊಟ ಹಾಕುತ್ತವೆಯೇ ಎಂಬ ಪ್ರಶ್ನೆ ಕೇಳಬೇಡಿ. ಜರ್ಮನಿಯ ಅಡುಗೆ ಸಾಮಾನುಗಳ ಉತ್ಪಾದಕ ಕಂಪೆನಿ ‘ಬುದ್ಧಿವಂತ ಓವನ್‌’ ಒಂದನ್ನು ಸೃಷ್ಟಿಸಿದೆ. ತನ್ನಲ್ಲಿ ಏನಿದೆ ಎಂಬುದನ್ನು ತಾನೇ ಕಂಡುಹಿಡಿದು ಅದಕ್ಕೆ ತಕ್ಕಂತೆ ತನ್ನ ಕಾರ್ಯಾಚರಣೆ ಬದಲು ಮಾಡಿಕೊಳ್ಳುತ್ತದಂತೆ. ಆಲೂಗಡ್ಡೆಯಾದರೆ ಕಡಿಮೆ ಕಾವು ಕೊಡುವ ಅದು, ತನ್ನಲ್ಲೇ ಇನ್ನೊಂದು ಬದಿಯಲ್ಲಿ ಕಾಲುಸೂಪು ಸಿದ್ಧಪಡಿಸಲು ಇಟ್ಟಿರುವ ಮೇಕೆಯ ಕಾಲನ್ನೂ ಹದವಾಗಿ ಬೇಯಿಸುತ್ತದಂತೆ. ಈ ಡೈಲಾಗ್‌ ಓವನ್‌ ಮುಂದಿನ ವರ್ಷ ಮಾರುಕಟ್ಟೆಗೆ ಬರಲಿದೆ.

ಬುದ್ಧಿವಂತ ತೋಳ
ನಮ್ಮ ಹಳ್ಳಿಗಳ ಹೊಲಗಳಲ್ಲಿ ಬೆದರು ಗೊಂಬೆ ನಿಲ್ಲಿಸುತ್ತಾರಲ್ಲ, ಹಾಗೆ ಜಪಾನ್‌ನಲ್ಲಿ ‘ಸೂಪರ್‌ ಮಾನ್‌ಸ್ಟರ್‌ ತೋಳ’ವನ್ನು ನಿಲ್ಲಿಸುವ ಖಯಾಲಿ ಬೆಳೆದಿದೆ. 50 ಸೆಂಟಿ ಮೀಟರ್‌ ಎತ್ತರದ ಈ ಎಲೆಕ್ಟ್ರಿಕ್‌ ತೋಳ, ಹೊಲಕ್ಕೆ ನುಗ್ಗುವ ಜಿಂಕೆ ಮತ್ತಿತರ ಪ್ರಾಣಿಗಳನ್ನು ತನ್ನಲ್ಲಿರುವ ಸೆನ್ಸರ್‌ ಮೂಲಕವೇ ಕಂಡುಹಿಡಿದು ಓಡಿಸುತ್ತದಂತೆ. 48 ಬಗೆಯ ಧ್ವನಿಗಳನ್ನು ಗುರುತಿಸುವ ಸಾಮರ್ಥ್ಯವನ್ನು ಕೂಡ ಅದು ಹೊಂದಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.