ADVERTISEMENT

ಹೊಸತನಗಳ ನಿರೀಕ್ಷೆಯಲ್ಲಿ ಆಟೊ ಎಕ್ಸ್ ಪೊ

ಇ.ಎಸ್.ಸುಧೀಂದ್ರ ಪ್ರಸಾದ್
Published 8 ಜನವರಿ 2014, 19:30 IST
Last Updated 8 ಜನವರಿ 2014, 19:30 IST
ಹೊಸತನಗಳ ನಿರೀಕ್ಷೆಯಲ್ಲಿ ಆಟೊ ಎಕ್ಸ್ ಪೊ
ಹೊಸತನಗಳ ನಿರೀಕ್ಷೆಯಲ್ಲಿ ಆಟೊ ಎಕ್ಸ್ ಪೊ   

ವಾಹನ ಪ್ರಪಂಚದ ಬಹು ನಿರೀಕ್ಷಿತ 12ನೇ ದೆಹಲಿ ಆಟೊ ಎಕ್ಸ್‌ಪೋಗೆ ಕ್ಷಣಗಣನೆ ಆರಂಭವಾಗಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ದೆಹಲಿಯಲ್ಲಿ ಜರುಗುವ ಈ ನಾಲ್ಕು ದಿನಗಳ ಎಕ್ಸ್‌ಪೊ ಫ್ರಾಂಕ್ಫರ್ಟ್‌ ಆಟೊ ಪ್ರದರ್ಶನದಷ್ಟೇ ಪ್ರಸಿದ್ಧಿ ಪಡೆದಿದೆ. ಭಾರತದಲ್ಲಿರುವ ವಾಹನ ಪ್ರೇಮಿಗಳು, ವರ್ಷದಿಂದ ವರ್ಷಕ್ಕೆ ಏರುತ್ತಿರುವ ವಾಹನ ಖರೀದಿದಾರರ ಸಂಖ್ಯೆಯಿಂದಾಗಿ ಜಗತ್ತಿನ ಕಾರು ತಯಾರಿಕಾ ಕಂಪೆನಿಗಳ ಪಾಲಿಗೆ ಇದೊಂದು ಬೃಹತ್‌ ಪ್ರದರ್ಶನ ವೇದಿಕೆ.

ಪ್ರತಿ ವರ್ಷ ಇದೇ ವೇಳೆಗೆ ಪ್ರಗತಿ ಮೈದಾನದಲ್ಲಿ ಆಟೊ ಎಕ್ಸ್‌ಪೊ ಏರ್ಪಾಡಾಗುತ್ತಿತ್ತು. ಆದರೆ ಈ ಬಾರಿಯ ಆಟೊ ಎಕ್ಸ್‌ಪೊ (ಫೆ.6ರಿಂದ 12ರವರೆಗೆ) ದೆಹಲಿಯ ಗ್ರೇಟರ್‌ ನೊಯ್ಡಾದಲ್ಲಿರುವ ಇಂಡಿಯಾ ಎಕ್ಸ್‌ಪೊ ಮಾರ್ಟ್‌ಗೆ ವರ್ಗಾವಣೆಯಾಗಿದೆ. ಹೀಗಾಗಿ ಎಲ್ಲಾ ರೀತಿಯ ಚಟುವಟಿಕೆಗಳು ಅಲ್ಲಿ ಗರಿಗೆದರುತ್ತಿವೆ. 58 ಎಕರೆ ಬೃಹತ್‌ ಪ್ರದರ್ಶನ ಸ್ಥಳ ಸಜ್ಜಾಗಿದೆ. ಕಾರುಗಳು, ದ್ವಿಚಕ್ರ, ತ್ರಿಚಕ್ರ ವಾಹನಗಳು, ಎಸ್‌ಯುವಿ, ಎಂಪಿವಿ ಹಾಗೂ ಬಹುಬಗೆಯ ಇಂಧನಗಳ ವಾಹನಗಳ ಮಳಿಗೆಗಳು ಪ್ರದರ್ಶನದಲ್ಲಿರಲಿವೆ.

ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿರುವ ದೇಶ ವಿದೇಶದ 52 ವಾಹನ ತಯಾರಿಕಾ ಕಂಪೆನಿಗಳು ನಿಗದಿತ ಸ್ಥಳದಲ್ಲಿ ಅದ್ಭುತ ಲೋಕ ಸೃಷ್ಟಿಸಲು ಕಲಾನಿರ್ದೇಶಕರ ನೆರವಿನಿಂದ ಸಿದ್ಧತೆಗಳನ್ನು ಆರಂಭಿಸಿವೆ. ಫೆ. 7ರಿಂದ 11ರವರೆಗೆ ಪ್ರಗತಿ ಮೈದಾನದಲ್ಲಿ ವಾಹನ ಬಿಡಿಭಾಗಗಳ ಮೇಳವನ್ನೂ ಆಯೋಜಿಸಿರುವುದರಿಂದ ಈ ಬಾರಿ ದೆಹಲಿಯಲ್ಲಿ ಸಂಭ್ರಮವೋ ಸಂಭ್ರಮ.

ಭಾರತದ ವಾಹನ ತಯಾರಿಕಾ ಕಂಪೆನಿಗಳ ಜತೆ ಜರ್ಮನಿ, ಕೊರಿಯಾ, ಇಟಲಿ, ಜಪಾನ್‌, ಅಮೆರಿಕ ಹಾಗೂ ಐರೋಪ್ಯ ರಾಷ್ಟ್ರಗಳು ಸೇರಿದಂತೆ ಹಲವಾರು ರಾಷ್ಟ್ರಗಳು ಈ ಬಾರಿಯ ಆಟೊ ಎಕ್ಸ್‌ಪೊದಲ್ಲಿ ಪಾಲ್ಗೊಳ್ಳುತ್ತಿವೆ. ಮಾರುತಿ ಸುಜುಕಿ, ಹ್ಯುಂಡೈ, ಆಡಿ, ಟಾಟಾ, ಸ್ಕೋಡಾ, ಸಾನಿಯಾ, ಫೋಕ್ಸ್‌ವ್ಯಾಗನ್‌, ಮಹಿಂದ್ರಾ, ಹೊಂಡಾ, ಬಜಾಜ್‌, ಹಾರ್ಲೆ ಡೇವಿಡಸ್ಸನ್‌, ಡಟ್ಸನ್‌, ಬಿಎಂಡಬ್ಲೂ, ಮರ್ಸಿಡಿಸ್‌ ಮುಂತಾದ ಕಂಪೆನಿಗಳು ತಮ್ಮ ಮುಂದಿನ ವರ್ಷದ ಯೋಜನೆಗಳ ಅನಾವರಣಕ್ಕೆ ಸಜ್ಜಾಗಿವೆ.

ನವ ತಾಣ: ಆಧುನಿಕ ಸೌಲಭ್ಯ

ಆಟೊ ಎಕ್ಸ್‌ಪೊ ಎಂದರೆ ಪ್ರಗತಿ ಮೈದಾನ ಎಂಬ ಮಾತು ಈ ಬಾರಿಯಿಂದ ಬದಲಾಗಲಿದೆ. ಏಕೆಂದರೆ ಗ್ರೇಟರ್‌ ನೊಯ್ಡಾ ಬಳಿಯ ನವ ತಾಣವು ಈ ಬಾರಿಯ ಆಟೊ ಎಕ್ಸ್‌ಪೊಗಾಗಿ ನವ ವಧುವಿನಂತೆ ಸಜ್ಜಾಗುತ್ತಿದೆ. ಈ ಕೇಂದ್ರದ ಆಯ್ಕೆಯ ಹಿಂದೆ ಸಾಕಷ್ಟು ಲೆಕ್ಕಾಚಾರಗಳಿವೆ.

ಇಂಡಿಯನ್‌ ಎಕ್ಸ್‌ಪೊ ಮಾರ್ಟ್‌ನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲು ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನೂ ಅಳವಡಿಸಲಾಗಿದೆಯಂತೆ. 2.35ಲಕ್ಷ ಚ.ಮೀ. ಪ್ರದೇಶದಲ್ಲಿರುವ ಈ ತಾಣದಲ್ಲಿ 75 ಸಾವಿರ ಚ.ಮೀ.ನಷ್ಟು ವಿಶಾಲವಾದ ಒಳಾಂಗಣವಿದೆ. ಇದರಲ್ಲಿ ಈ ಬಾರಿಯ ಆಟೊ ಎಕ್ಸ್‌ಪೊಗಾಗಿ 60 ಸಾವಿರ ಚದರ ಮೀಟರ್‌ ಸ್ಥಳಾವಕಾಶವನ್ನು ಬಳಸಿಕೊಳ್ಳಲಾಗುತ್ತಿದೆ.

ಉಳಿದಂತೆ ಈ ಪ್ರದರ್ಶನ ಕೇಂದ್ರದ 18 ಸಾವಿರ ಚದರ ಮೀಟರ್‌ ಪ್ರದೇಶವನ್ನು ಡ್ರೈವಿಂಗ್‌ ಸಿಮುಲೇಟರ್‌ಗಳು, ಮೋಟಾರು ಸೈಕಲ್‌ ಓಡಿಸುವ ಕೇಂದ್ರ, ವಿದ್ಯುತ್‌ ಚಾಲಿತ ಹಾಗೂ ಹೈಬ್ರಿಡ್‌ ವಾಹನಗಳ ಪ್ರಾಯೋಗಿಕ ಪರೀಕ್ಷೆ ಹಾಗೂ ವಿಂಟೇಜ್‌ ಕಾರುಗಳ ಪ್ರದರ್ಶನಕ್ಕಾಗಿ ಮೀಸಲಿಡಲಾಗಿದೆ. ಉಳಿದಂತೆ 32 ಸಾವಿರ ಚದರ ಮೀಟರ್‌ ಪ್ರದೇಶವನ್ನು ಅತಿ ಗಣ್ಯ ವ್ಯಕ್ತಿಗಳಿಗೆ, ಮಾಧ್ಯಮದವರಿಗೆ, ಅಧಿಕಾರಿಗಳಿಗೆ, ಆಹಾರ ಹಾಗೂ ಪಾನೀಯಗಳ ರೆಸ್ಟೊರಾಗಳಿಗೆ ಹಾಗೂ ಇತರ ಮನರಂಜನೆಗಾಗಿ ಮೀಸಲಿಡಲಾಗಿದೆ.

ಬಹು ನಿರೀಕ್ಷಿತ ಬಿಡುಗಡೆಗಳು
2013 ಎಂಬ ಕರಾಳ ವರ್ಷದ ನಂತರ ಭರವಸೆಯ ಹೊಸ ವರ್ಷವನ್ನು ಬರ ಮಾಡಿಕೊಂಡಿರುವ ಕಾರು ತಯಾರಿಕಾ ಕಂಪೆನಿಗಳು ಹೊಸ ಭರವಸೆಯೊಂದಿಗೆ ಆಟೊ ಎಕ್ಸ್‌ಪೊಗೆ ಸಜ್ಜಾಗಿವೆ. ವಾಹನ ತಯಾರಕರ ಹಾಗೂ ಗ್ರಾಹಕರ ನಡುವಿನ ದೊಡ್ಡ ಸಂಪರ್ಕ ಸೇತು ಇದಾದ್ದರಿಂದ ಹೊಸ ಬಿಡುಗಡೆಗಳು, ತಮ್ಮ ಉತ್ಪನ್ನದ ತಾಕತ್ತು, ಕಂಪೆನಿಯ ಇರುವಿಕೆ ಎಲ್ಲವನ್ನೂ ಜಗತ್ತಿಗೆ ಸಾರುವ ಸಕಾಲ ಇದು.

ಹೀಗಾಗಿ ಈ ಬಾರಿ 20 ಹೊಸ ಕಾರುಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಇವುಗಳಲ್ಲಿ ಸಣ್ಣ ಕಾರುಗಳಿಂದ ಹಿಡಿದು ಐಷಾರಾಮಿ ಕಾರುಗಳ ದೊಡ್ಡ ಸಾಲೇ ಇದೆ. ಹೀಗಾಗಿ ಕಾರು ತಯಾರಿಕಾ ದಿಗ್ಗಜರಾದ ಮಾರುತಿ ಸುಜುಕಿ, ಹ್ಯುಂಡೈ, ಫೋಕ್ಸ್‌ವ್ಯಾಗನ್‌, ಫೋರ್ಡ್‌, ಆಡಿ, ಷವರ್ಲೆ, ನಿಸ್ಸಾನ್‌, ಬಿಎಂಡಬ್ಲೂ, ಹೊಂಡಾ, ಟೊಯೊಟಾ, ಜಾಗ್ವರ್ ಲ್ಯಾಂಡ್‌ ರೋವರ್‌, ವೋಲ್ವೊ ಹಾಗೂ ಮರ್ಸಿಡಿಸ್‌ ಬೆಂಜ್‌ ಕಾರುಗಳು ಈ ಬಾರಿಯ ವೇದಿಕೆಯಲ್ಲಿ ಗಮನ ಸೆಳೆಯುವ ಸಾಧ್ಯತೆಗಳಿವೆ.

2010ರಲ್ಲಿ ಎಕ್ಸ್‌ ಆಲ್ಫಾ ಬಿಡುಗಡೆಯ ನಂತರ ಮಾರುತಿ ಸುಜುಕಿ ಕಂಪೆನಿಯ ಎಸ್‌ಯುವಿ ನಿರೀಕ್ಷೆಯಲ್ಲಿದ್ದ ಭಾರತದ ವಾಹನ ಪ್ರೇಮಿ­ಗಳಿಗೆ ಈ ಬಾರಿ ಆಟೊ ಎಕ್ಸ್‌ಪೊ ಮೂಲಕವಾದರೂ ಎಕ್ಸ್‌ ಆಲ್ಫಾ ರಸ್ತೆಗಿಳಿಯುವುದೇ ಎಂದು ಕಾದು ನೋಡುತ್ತಿದ್ದಾರೆ. ಇದರ ಜತೆ­ಯಲ್ಲಿ ಮಾರುತಿ ಹೊಸ ಬಗೆಯ ಎಸ್‌ಎಕ್ಸ್‌4, ಎ–ಸ್ಟಾರ್‌ ಮಾದರಿ­ಯನ್ನು ಪ್ರದರ್ಶನದ ವೇಳೆ ಅನಾವರಣ ಮಾಡುವ ಸಾಧ್ಯತೆ ಇದೆ.

ಇದರ ನಡುವೆ ಭಾರತದಂಥ ಬೃಹತ್‌ ಗ್ರಾಹಕ ವರ್ಗ ಹೊಂದಿರುವ ರಾಷ್ಟ್ರದಲ್ಲಿ ಒಂದಷ್ಟು ಲಾಭ ಗಳಿಸುವ ಪ್ರಯತ್ನ ನಡೆಸುತ್ತಿರುವ ವಿದೇಶಿ ಕಂಪೆನಿಗಳಲ್ಲಿ ಈ ಬಾರಿ ಹೋಂಡಾ ಹಲವು ಭರವಸೆಯೊಂದಿಗೆ ಹೊಸ ಕಾರುಗಳ ಬಿಡುಗಡೆಗೆ ವೇದಿಕೆ ಸಿದ್ಧಪಡಿಸಿಕೊಂಡಿದೆ ಎಂದು ಮೂಲಗಳು ಹೇಳಿವೆ. ಈ ಬಾರಿಯ ಆಟೊ ಎಕ್ಸ್‌ಪೊ ಮೂಲಕ ಅಮೆರಿಕ ಮೂಲದ ಜೀಪ್‌ (ಇದೀಗ ಇಟಲಿ ಮೂಲದ ಫಿಯೆಟ್‌ ಮಾಲಿಕತ್ವ ಹೊಂದಿದೆ) ಭಾರತದ ರಸ್ತೆಗಿಳಿಯಲಿದೆ.

ಬಾಲಿವುಡ್‌ ಹಾಗೂ ಆಟೊ ಎಕ್ಸ್‌ಪೊ

ADVERTISEMENT

ವಾಹನ ಪ್ರಪಂಚಕ್ಕೂ ಬಾಲಿವುಡ್‌ಗೂ ಅವಿನಾಭಾವ ಸಂಬಂಧ. ಜತೆಗೆ ವಾಹನ ಕ್ಷೇತ್ರದೊಂದಿಗೆ ಗುರುತಿಸಿಕೊಂಡಿರುವ ಮನರಂಜನಾ ಕ್ಷೇತ್ರದ ಬಹಳಷ್ಟು ಕಲಾವಿದರು ಆಟೊಎಕ್ಸ್‌ಪೊ ವೇಳೆ ದರ್ಶನ ನೀಡಿ ಗಮನ ಸೆಳೆಯುತ್ತಾರೆ. ಇವರ ಆಗಮನಕ್ಕಾಗಿಯೇ ಕಂಪೆನಿಗಳು ಸಾಕಷ್ಟು ತಯಾರಿ ನಡೆಸಿರುತ್ತಾರೆ.

ಈ ಹಿಂದಿನ ಶೋಗಳಲ್ಲಿ ಅಮಿತಾಭ್ ಬಚ್ಚನ್‌ ಆದಿಯಾಗಿ ಕತ್ರಿನಾ ಕೈಫ್‌, ಜಾನ್‌ ಅಬ್ರಾಹಮ್‌, ಫರ್‍ಹಾನ್‌ ಅಖ್ತರ್‌ ಮುಂತಾದವರು ಎಕ್ಸ್‌ಪೊಗೆ ಭೇಟಿ ಕೊಟ್ಟು ಗಮನ ಸೆಳೆದಿದ್ದರು. ಈ ವರ್ಷ ಯಾರು ಬರುತ್ತಾರೆ ಎಂಬ ಅಂಶವನ್ನು ಕಂಪೆನಿಗಳು ಗೌಪ್ಯವಾಗಿಟ್ಟಿವೆ. ಈ ನಡುವೆ ವಾಹನಗಳ ಪ್ರದರ್ಶನಕ್ಕೆ ಮತ್ತಷ್ಟು ಕಳೆಕಟ್ಟುವಂತೆ ಮಾಡಲು ರೂಪದರ್ಶಿಯರ ನೇಮಕಾತಿ ಆರಂಭವಾಗಿದೆ. ದೇಶದ ಸುಪ್ರಸಿದ್ಧ ಮಾಡೆಲ್‌ಗಳು, ವಿದೇಶಿ ರೂಪದರ್ಶಿಯರು ಈಗಾಗಲೇ ತಮ್ಮ ಅರ್ಜಿಯನ್ನು ಗುಜರಾಯಿಸಿದ್ದಾರೆ. ಒಟ್ಟಿನಲ್ಲಿ ರಂಗುರಂಗಿನ ಆಟೊ ಎಕ್ಸ್‌ಪೊಗೆ ವೇದಿಕೆ ಸಿದ್ಧವಾಗಿದೆ.

ಆಟೊ ಎಕ್ಸ್‌ಪೊದ ಐದು ಬಹು ನಿರೀಕ್ಷೆಗಳು

ಆರ್ಥಿಕ ಹಿಂಜರಿತ, ಬೆಲೆ ಏರಿಕೆ, ಇಂಧನ ಏರಿಕೆಯಿಂದಾಗಿ ಮಾರಾಟದಲ್ಲಿ ಗಣನೀಯ ಇಳಿಮುಖ ಕಂಡಿದ್ದ ವಾಹನ ಪ್ರಪಂಚ 2014ರ ಆಟೊ ಎಕ್ಸ್‌ಪೊದಲ್ಲಿ ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಮೂಲಕ ಭರವಸೆಯ ಬೆಳಕನ್ನು ಕಾಣ ಬಯಸಿದೆ. ಇದರಲ್ಲಿ ಐದು ಪ್ರಮುಖ ಕಾರು ತಯಾರಿಕಾ ಕಂಪೆನಿಗಳು ಈ ಬಾರಿ ನಿರೀಕ್ಷೆ ಹುಟ್ಟಿಸಿವೆ. ಅವುಗಳಲ್ಲಿ...

ಹೋಂಡಾ ಸಿಟಿ ಡೀಸೆಲ್‌
ಜಪಾನ್‌  ಕಾರು ತಯಾರಿಕಾ ಕಂಪೆನಿ ಹೋಂಡಾ, ತನ್ನ ಸಿಟಿ ಮಾದರಿಯ ಕಾರನ್ನು ಡೀಸೆಲ್‌ ಎಂಜಿನ್‌ ಅಳವಡಿಸುವ ಮೂಲಕ ನಾಲ್ಕನೇ ತಲೆಮಾರಿನ ಕಾರು ಬಿಡುಗಡೆಗೆ ಈ ವೇದಿಕೆಯನ್ನು ಬಳಸಿಕೊಳ್ಳುವ ನಿರೀಕ್ಷೆ ಇದೆ. 1.5 ಲೀ. ಸಾಮರ್ಥ್ಯದ ಐಡಿಟೆಕ್‌ ಎಂಜಿನ್‌ ಹೊಂದಿರುವ ಈ ಕಾರು 0ಯಿಂದ 100 ಕಿ.ಮೀ. ವೇಗವನ್ನು ಕೇವಲ 12.8 ಸೆಕೆಂಡುಗಳಲ್ಲಿ ಕ್ರಮಿಸಲಿದೆ. ಜತೆಗೆ ಪ್ರತಿ ಲೀಟರ್‌ ಡೀಸೆಲ್‌ಗೆ 26 ಕಿ.ಮೀ. ಇಂಧನ ಕ್ಷಮತೆ ಹೊಂದಿದೆ ಎನ್ನುವುದು ವಾಹನ ಪ್ರಪಂಚದಲ್ಲಿ ಭಾರೀ ಸದ್ದು ಮಾಡಿದೆ.

ನವೀಕೃತ ಮಹಿಂದ್ರಾ ಸ್ಕಾರ್ಪಿಯೊ
ಸಾಕಷ್ಟು ಎಸ್‌ಯುವಿಗಳ ಆಗಮನದಿಂದಾಗಿ ಮರೆಯಾಗಿದ್ದ ಸ್ಕಾರ್ಪಿಯೊ ಎಸ್‌ಯುವಿಯನ್ನು ನವೀಕರಿಸಿ ಮತ್ತೊಮ್ಮೆ ಮಾರು­ಕಟ್ಟೆಗೆ ಬಿಡುಗಡೆ ಮಾಡಲು ಮಹೀಂದ್ರಾ ಕಂಪೆನಿ ಸಿದ್ಧತೆ ನಡೆಸಿದೆ. ಫೆಬ್ರುವರಿಯ ಆಟೊ ಎಕ್ಸ್‌ಪೊದಲ್ಲಿ ಬಿಡುಗಡೆಯ ನಂತರ (ಮಾರ್ಚ್‌ ಅಥವಾ ಏಪ್ರಿಲ್‌) ಸ್ಕಾರ್ಪಿಯೊ ರಸ್ತೆಗಿಳಿಯಲಿದೆ. ಹೊಸ ಸ್ಕಾರ್ಪಿಯೊ ಅದೇ 2.2 ಲೀ. ಸಾಮರ್ಥ್ಯದ ಎಂಹಾಕ್‌ ಎಂಜಿನ್‌ ಹೊಂದಿದ್ದರೂ ಒಳಾಂಗಣ ಹಾಗೂ ಹೊರ ನೋಟದಲ್ಲಿ ಸಾಕಷ್ಟು ಬದಲಾವಣೆ ಇರಲಿದೆ ಎನ್ನುವುದು ವಾಹನ ಪಂಡಿತರ ಲೆಕ್ಕಾಚಾರ.

ಡಟ್ಸನ್‌ ಗೊ
ನಿಸ್ಸಾನ್‌ ತನ್ನ ಡಟ್ಸನ್‌ ಎಂಬ ಉತ್ಪನ್ನವನ್ನು ಭಾರತದಲ್ಲಿ ಬಿಡುಗಡೆ ಮಾಡಲು ವೇದಿಕೆ ಸಿದ್ಧಪಡಿಸಿಕೊಂಡಿದೆ. ಸಣ್ಣ ಕಾರು ಮಾದರಿಯ ಗೋ ಕಾರು ಏಪ್ರಿಲ್‌ ವೇಳೆಗೆ ಭಾರತದ ರಸ್ತೆಗೆ ಇಳಿಯಲಿದೆ. ಮೂರು ಸಿಲೆಂಡರ್‌ಗಳ 1.2 ಲೀ ಸಾಮರ್ಥ್ಯದ ಎಂಜಿನ್‌ ಹೊಂದಿರುವ ಈ ಕಾರಿನ ಬೆಲೆ 4 ಲಕ್ಷ ರೂಪಾಯಿಯ ಆಸುಪಾಸಿನಲ್ಲಿರಲಿದೆ. 2016ರ ವೇಳೆಗೆ ಕಂಪೆನಿ ಡಟ್ಸನ್‌ ಉತ್ಪನ್ನದ ಮೂರು ಇತರ ಮಾದರಿಯನ್ನು ಬಿಡುಗಡೆ ಮಾಡುವ ಗುರಿ ಹೊಂದಿದೆ ಎಂದು ಮೂಲಗಳು ಹೇಳಿವೆ.

ಹ್ಯುಂಡೈ ಗ್ರ್ಯಾಂಡ್‌ ಐ10 ಸೆಡಾನ್‌
ಗ್ರ್ಯಾಂಡ್‌ ಐ10 ಯಶಸ್ವಿಯಾದ ಬೆನ್ನಲ್ಲೇ ಅದೇ ಮಾದರಿಯ ಸೆಡಾನ್‌ (ಉದ್ದನೆಯ ಕಾರು) ಮಾದರಿಯನ್ನು ಬಿಡುಗಡೆ ಮಾಡಲು ಹ್ಯುಂಡೈ ತಯಾರಿ ನಡೆಸಿದೆ. ಸಣ್ಣ ಕಾರಿನಲ್ಲಿರುವ ಎಂಜಿನ್‌ಗೆ ದೊಡ್ಡ ಚಾಸೀಸ್‌ ಅಳವಡಿಸಲಾಗಿದೆ. ಪೆಟ್ರೋಲ್‌ ಮಾದರಿಯ ಕಾರು 1.2ಲೀ ಸಾಮರ್ಥ್ಯದ್ದಾಗಿದ್ದು, ಡೀಸೆಲ್‌ ಮಾದರಿಯ ಕಾರು 1.1ಲೀ ಸಾಮರ್ಥ್ಯದ ನಾಲ್ಕು ಸಿಲೆಂಡರ್‌ಗಳ ಎಂಜಿನ್‌ ಹೊಂದಿದೆ.

ಟಾಟಾ ನ್ಯಾನೊ ಡೀಸೆಲ್‌
ನ್ಯಾನೊ ಕಾರಿನ ಬಿಡುಗಡೆಯ ಮೂಲಕವೇ ದೆಹಲಿಯ ಆಟೊ ಎಕ್ಸ್‌ಪೊ ಜನಸಾಮಾನ್ಯರಿಗೆ ಚಿರಪರಿಚಿತವಾಗಿದ್ದು ಎಂದರೆ ತಪ್ಪಾಗಲಾರದು. ಈ ಬಾರಿಯ ಆಟೊ ಎಕ್ಸ್‌ಪೊದಲ್ಲೂ ನ್ಯಾನೊ ಸದ್ದು ಮಾಡಲಿದೆ. ಅದು ಡೀಸೆಲ್‌ ಮಾದರಿಯ ಬಿಡುಗಡೆಯ ಮೂಲಕ ಎಂದು ಮೂಲಗಳು ಹೇಳಿವೆ. ಆದರೂ ಡೀಸೆಲ್‌ ಬೆಲೆಯಲ್ಲಿ ಹೆಚ್ಚಳವಾಗುತ್ತಿರುವುದರಿಂದ ತನ್ನ ಈ ಕಾನ್ಸೆಪ್ಟ್‌ ಮಾದರಿಯ ಕಾರಿನ ಬಿಡುಗಡೆಯನ್ನು ತಡೆಹಿಡಿಯುವ ಸಾಧ್ಯತೆಯೂ ಇದೆ ಎಂದು ಅಂದಾಜು ಮಾಡಲಾಗಿದೆ.

ನ್ಯಾನೊ ಡೀಸೆಲ್‌ ಮಾದರಿಯಲ್ಲಿ ಎರಡು ಬಗೆಯ ಕಾರಿನ ಅಭಿವೃದ್ಧಿಗೆ ಟಾಟಾ ಕಾರ್ಯಯೋಜನೆ ರೂಪಿಸಿತ್ತು. ಅದರಲ್ಲಿ 2 ಸಿಲೆಂಡರ್‌ ಹಾಗೂ 3 ಸಿಲೆಂಡರ್‌ಗಳ ಡೀಸೆಲ್‌ ಎಂಜಿನ್‌ ಅಳವಡಿಸುವುದು ಅದರ ಯೋಜನೆ. ಆದರೆ ಇವುಗಳಲ್ಲಿ ಯಾವುದು ಮೊದಲು ಬಿಡುಗಡೆಯಾಗಲಿದೆ ಎನ್ನುವುದು ಇನ್ನೂ ಗೊತ್ತಾಗಬೇಕಿದೆ. ಏಕೆಂದರೆ ಟಾಟಾ ಕಂಪೆನಿಯ ಅಧಿಕಾರಿಗಳು ಈ ವಿಷಯವನ್ನು ಇನ್ನೂ ಅಧಿಕೃತವಾಗಿ ತಿಳಿಸಿಲ್ಲ.

ಝಗಮಗಿಸುವ ಬೆಳಕು, ರೂಪದರ್ಶಿಯರ ವನಪು ವೈಯಾರಗಳ ನಡುವೆ ರಾಜಗಾಂಭೀರ್ಯದಲ್ಲಿ ಗಮನ ಸೆಳೆಯುವ ವಾಹನಗಳು ಭವಿಷ್ಯದ ವಾಹನ ಪ್ರಪಂಚದ ದಿಸೆಯನ್ನು ನಿರ್ಧರಿಸಲಿವೆ. ಮುಂದಿನ ಎರಡು ವರ್ಷಗಳ ಕಾರ್ಯಯೋಜನೆಯೊಂದಿಗೆ ಹೊಸ ಮಾದರಿಗಳನ್ನು ಅನಾವರಣ ಮಾಡುವ ಕಾರು ತಯಾರಿಕಾ ಕಂಪೆನಿಗಳ ಪಾಲಿಗೆ ಇದೊಂದು ಪ್ರತಿಷ್ಠೆಯ ಪರೀಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.