ADVERTISEMENT

ಹೊಸ ಗ್ಯಾಜೆಟ್‌ಗಳ ಲೋಕದಲ್ಲಿ

ಜಕ್ಕಣಕ್ಕಿ ಎಂ ದಯಾನಂದ
Published 13 ಜೂನ್ 2018, 19:30 IST
Last Updated 13 ಜೂನ್ 2018, 19:30 IST
ಹೊಸ ಗ್ಯಾಜೆಟ್‌ಗಳ ಲೋಕದಲ್ಲಿ
ಹೊಸ ಗ್ಯಾಜೆಟ್‌ಗಳ ಲೋಕದಲ್ಲಿ   

ನೆಟ್‌ಗೇರ್‌ನ ವೈಫೈ ರೂಟರ್‌: ನೆಟ್‌ಗೇರ್‌ ಕಂಪನಿ  ಇತ್ತೀಚೆಗೆ ಪ್ರೊ ಗೇಮಿಂಗ್‌ ವೈಫೈ ರೂಟರ್‌ (ಎಕ್ಸ್‌ಆರ್ 500) ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರಲ್ಲಿ ಅತ್ಯಾಧುನಿಕ ತಂತ್ರಾಂಶವಿದ್ದು ನೆಟ್‌ವರ್ಕ್‌ ಸೌಲಭ್ಯವೂ ಉತ್ತಮವಾಗಿದೆ. ವೈರ್‌ ಮತ್ತು ವೈರ್‌ಲೆಸ್‌ ವಿಧಾನದಲ್ಲಿ ಕೆಲಸ ಮಾಡುತ್ತದೆ. ನೆಟ್‌ಗೇರ್‌ ಈ ವರ್ಷದ ಆರಂಭದಲ್ಲಿ ಲಾಸ್‌ ವೇಗಾಸ್‌ನಲ್ಲಿ ನಡೆದ ಕನ್ಸ್ಯೂಮರ್‌ ಎಲೆಕ್ಟ್ರಾನಿಕ್‌ ಶೋ (ಸಿಇಎಸ್)ನಲ್ಲಿ ಗೇಮಿಂಗ್‌ ರೂಟರ್‌ ಅನ್ನು ಪರಿಚಯಿಸಿತ್ತು. ಸದ್ಯ ಈ ಸಾಧನ ನೇಟ್‌ಗೇರ್‌ನ ಅಧಿಕೃತ ಪಾಲುದಾರ ಕಂಪನಿ, ರೀಸೆಲ್ಲರ್‌ ಛಾನೆಲ್‌ ಮತ್ತು ಈ–ಕಾಮರ್ಸ್ ಮಾರುಕಟ್ಟೆಗಳಲ್ಲಿ ದೊರೆಯುತ್ತಿದೆ.

ನೆಟ್‌ಗೇರ್‌ ಸಾಫ್ಟ್‌ವೇರ್‌ಗಾಗಿ ನೆಟ್‌ಡುಮಾ ಜತೆಗೆ ಕೈಜೋಡಿಸಿದೆ. ಡುಮಾದ ಒಎಸ್‌ಗಳು ಗೇಮಿಂಗ್‌ ಡ್ಯಾಶ್ ಬೋರ್ಡ್‌, ಜಿಯೊ ಫಿಲ್ಟರ್‌, ಕ್ವಾಲಿಟಿ ಸೇವೆ ಮತ್ತು ನೆಟ್‌ವರ್ಕ್‌ ನಿಗಾ ಸಾಮಾರ್ಥ್ಯವನ್ನು ಒಳಗೊಂಡಿದೆ.

ಎಕ್ಸ್‌ಆರ್ 500ವೈಫೈ ರೂಟರ್‌ (ಎಕ್ಸ್‌ಆರ್ 500)ವಿಪಿಎನ್‌ ಸೌಲಭ್ಯ ಒಳಗೊಂಡಿದ್ದು, ಬಳಕೆದಾರನ ನೆಟ್‌ವರ್ಕ್‌ ಗುರುತನ್ನು ರಕ್ಷಣೆ ಮಾಡುತ್ತದೆ. ಡಿಡಿಒಎಸ್‌ ದಾಳಿ ( Distributed Denial of Service) ಅನ್ನು ತಡೆಯುತ್ತದೆ.

ADVERTISEMENT

ವಿಶೇಷತೆಗಳು:
*ಸದ್ಯ ಭಾರತ ಮಾರುಕಟ್ಟೆಯಲ್ಲಿ ಲಭ್ಯವಿದೆ.
* 256 ಎಂಬಿ ಸಂಗ್ರಹ ಸಾಮರ್ಥ್ಯ ಮತ್ತು 512 ಎಂಬಿ ರ‍್ಯಾಮ್‌ ಹೊಂದಿದೆ.
*ಉತ್ತಮ ಗುಣಮಟ್ಟದ ಆಂಟೆನಾ ಇದೆ.
*ಬೆಲೆ: ₹23 ಸಾವಿರ.

*

ಡಬ್ಲ್ಯೂಎಚ್‌–11 ಹೆಡ್‌ಫೋನ್‌: ಪ್ರಮುಖ ಐಟಿ ಬ್ರ್ಯಾಂಡ್‌ ಮತ್ತು ಕಂಪ್ಯೂಟರ್‌ ಉಪಕರಣಗಳ ಕಂಪನಿ ಅಂಬ್ರೇನ್‌ ಇಂಡಿಯಾ ಆಡಿಯೊ ವಿಭಾಗ ಡಬ್ಲ್ಯೂಎಚ್–11 ಹೆಡ್‌ಫೋನ್‌ ಬಿಡುಗಡೆ ಮಾಡಿದೆ. ಉಪಯೋಗಿಸುವುದಕ್ಕೆ ಮತ್ತು ಇಟ್ಟುಕೊಳ್ಳಲು ಅನುಕೂಲಕರವಾಗಿದೆ. ಇದರಲ್ಲಿನ ಡಿಜಿಟಲ್‌ ಆ್ಯಂಪ್ಲಿಫೈಯರ್‌ ಅನಗತ್ಯ ಶಬ್ದವನ್ನು ನಿವಾರಣೆ ಮಾಡುತ್ತದೆ. ಇದೇ ವೇಳೆ ಸುಮಧುರವಾದ ಸಂಗೀತದ ಆನಂದ ನೀಡುತ್ತದೆ. ಈ ಹೆಡ್‌ಫೋನ್‌ನಲ್ಲಿ ಕರೆಗಳನ್ನು ಸ್ವೀಕರಿಸುವುದು ಅತ್ಯಂತ ಸುಲಭ. ಏಕೆಂದರೆ ಇದರಲ್ಲಿನ ಕಂಟ್ರೋಲ್‌ ಬಟನ್‌ಗಳನ್ನು ಅಷ್ಟು ಸರಳವಾಗಿ ರೂಪಿಸಲಾಗಿದೆ. ಈ ಸಾಧನ ಎಲ್ಲಾ ಪ್ರಮುಖ ರಿಟೇಲ್‌ ಮತ್ತು ಆನ್‌ಲೈನ್‌ ಪೋರ್ಟಲ್‌ಗಳಲ್ಲಿ ಲಭ್ಯವಿದೆ.

ವಿಶೇಷಗಳು:
*ವೇಗದ ಚಾರ್ಜಿಂಗ್‌ (90 ನಿಮಿಷ)
*ಎಂಟು ಗಂಟೆ ಕೇಳುವ ಸಾಮರ್ಥ್ಯ
*ಬೆಲೆ: ₹2,199

*

ಪೊಲಾರ್‌: ಸದ್ಯದಲ್ಲೇ ಪ್ರವರ್ಧಮಾನಕ್ಕೆ ಬರಲಿರುವ ಪಿಕೊಸ್ಟೋನ್‌ ಹೋಂ ಅಟೊಮೇಷನ್‌ ಕಂಪನಿ ಪೊಲಾರ್‌ ಎಂಬ ಸಾಧನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಕಂಪನಿಯ ಎರಡನೇ ಉತ್ಪನ್ನ. ಮೊದಲ ಸಾಧನ ‘ಬೇಸಿಕ್‌’ ಲೈಟ್ಸ್‌ ಮತ್ತು ಫ್ಯಾನ್‌ಗಳನ್ನು ನಿಯಂತ್ರಣದಲ್ಲಿಡುವ ಘಟಕವನ್ನು ರೂಪಿಸಿತ್ತು. ಈಗ ಮನೆಯನ್ನು ಮತ್ತಷ್ಟು ಸ್ಮಾರ್ಟ್‌ ಆಗಿಸಲು ಈ ಪೊಲಾರ್‌ ಬಳಸಬಹುದು. ಕೃತಕ ಬುದ್ಧಿಮತ್ತೆ (Artificial Intelligence) ಒಳಗೊಂಡಿರುವ ಇದು ಮನೆಯನ್ನು ಆಟೋಮೇಷನ್‌ಗೆ ಒಳಪಡಿಸಲು ಹೆಚ್ಚು ಸೂಕ್ತವಾಗಿದೆ. ಪೊಲಾರ್‌ನಿಂದ ಮನೆ, ಕಾರಿನ ಏ.ಸಿ ಯ ಕೆಲಸವನ್ನು ನಿಯಂತ್ರಿಸಬಹುದು.

*

ಮಕ್ಕಳ ಜೆಲ್ಲಿ ವಾಚ್‌: ಮಕ್ಕಳ ಮೇಲೆ ನಿಗಾ ಇಡಲು ರಿವರ್‌ಸಾಂಗ್‌ ಕಂಪನಿ ಜೆಲ್ಲಿ ವಾಚ್‌ ಎಂಬ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕೈಗೆ ಕಟ್ಟಿಕೊಳ್ಳಬಹುದಾದ ಇದು ಕರೆ (ಟಾಕಿಂಗ್) ಸೌಲಭ್ಯವನ್ನೂ ಹೊಂದಿದೆ. ಇದಕ್ಕಾಗಿ ಮೈಕ್ರೊ ಸಿಮ್‌ ಅಳವಡಿಸಬೇಕಾಗಿದೆ. ಇದರಲ್ಲಿನ ಆ್ಯಪ್‌ ತಿಂಗಳಿಗೆ ಕೇವಲ 30 ಎಂಬಿ ಡಾಟವನ್ನು ಮಾತ್ರ ಬಳಕೆ ಮಾಡುತ್ತದೆ. ಎಲ್‌ಸಿಡಿ ಸ್ಕ್ರೀನ್‌ ಹೊಂದಿರುವ ಇದರ ಬ್ಯಾಟರಿ (400 ಎಂಎಎಚ್‌) ಎರಡು ದಿನಗಳವರೆಗೆ ಬರುತ್ತದೆ. ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕಪಡುವ ಪೋಷಕರಿಗೆ ಇದು ಸೂಕ್ತವಾದ ಸಾಧನ.

‘ನಮ್ಮ ಈ ಸಾಧನ ಮಕ್ಕಳ ಮೇಲೆ ನಿಗಾವಹಿಸಲು ಮತ್ತು ಅವರ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದನ್ನು ದೂರದಿಂದಲೇ ತಿಳಿಯಲು ಹೆಚ್ಚು ನೆರವಾಗುತ್ತದೆ’ ಎನ್ನುತ್ತಾರೆ ರಿವರ್ ಸಾಂಗ್‌ನ ವ್ಯವಹಾರ ಮುಖ್ಯಸ್ಥ (ಭಾರತ) ಗುರುಬಿಂದರ್ ಸೋಧಿ.

*

ಹೈಪರ್ ಎಕ್ಸ್‌ ಗೇಮಿಂಗ್ ಹೆಡ್‌ಸೆಟ್‌: ಕಿಂಗ್‌ಸ್ಟನ್‌ ಟೆಕ್ನಾಲಜಿಯ ಗೇಮಿಂಗ್‌ ವಿಭಾಗದಿಂದ ಹೈಪರ್ ಎಕ್ಸ್‌ ಗೇಮಿಂಗ್ ಹೆಡ್‌ಸೆಟ್‌ ಉಪಕರಣವನ್ನು ಭಾರತದ ಮಾರುಕಟ್ಟೆಗೆ ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ಉಪಕರಣದ ಬೆಲೆ ₹4,200. ಬೆಲೆ ದುಬಾರಿ ಎನಿಸಿದರೂ, ಉಪಕರಣದಿಂದ ಪಡೆಯುವ ಅನುಭವ ಅದ್ಭುತವಾಗಿದೆ. ಅಡ್ಜೆಸ್ಟಬಲ್ (ಹೊಂದಾಣಿಕೆ ಮಾಡಬಹುದಾದ) ಸ್ಟೀಲ್‌ ಗೇರ್‌ ಮತ್ತು ಮೃದುವಾದ ಕುಷನ್‌ಗಳಿವೆ. ರೀಟೆಲ್‌ ಮತ್ತು ಇ–ಟೇಲ್‌ನಲ್ಲಿ ದೊರೆಯುತ್ತದೆ.

ವಿಪಿಆರ್‌ಒ ವಿ20 ಎಸ್ ಮೌಸ್‌: ವೈರ್‌ಲೆಸ್‌ ಬಿಡಿಭಾಗಗಳನ್ನು ತಯಾರು ಮಾಡುವ ರ‍್ಯಾಪ್ಪೊ ಕಂಪನಿ ‘ವಿಪಿಆರ್‌ಒ ವಿ20 ಎಸ್ ಮೌಸ್‌’ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ವಿಪಿಆರ್‌ಒ ಗೇಮಿಂಗ್ ಉತ್ಪನ್ನಗಳ ಸಾಲಿಗೆ ಇದು ಹೊಸ ಸೇರ್ಪಡೆ. ಇದರಲ್ಲಿ ಐದು ಬಟನ್‌ಗಳಿದ್ದು, ಒಂದೊಂದು ಬಟನ್‌ ಒಂದೊಂದು ಕಾರ್ಯನಿರ್ವಹಣೆಗೆ ಬಳಕೆಯಾಗುತ್ತದೆ. ಈ ಉತ್ಪನ್ನದ ಬೆಲೆ: ₹2,499

*


ಜೆಬಿಎಲ್‌ ಗೊ2 ಬ್ಲೂಟೂತ್‌ ಸ್ಪೀಕರ್: ಹರ್ಮನ್‌ ಇಂಟರ್‌ನ್ಯಾಷನಲ್ ಕಂಪನಿ ಇತ್ತೀಚೆಗೆ ಜೆಬಿಎಲ್‌ ಗೊ2 ಬ್ಲೂಟೂತ್‌ ಸ್ಪೀಕರ್ ಅನ್ನು ಬಿಡುಗಡೆ ಮಾಡಿದೆ. ’ಒಯ್ಯಲು ಸುಲಭವಾಗಿರುವುದರಿಂದ ಪ್ರವಾಸಿಗರಿಗೆ ಇದೊಂದು ಅತ್ಯುತ್ತಮ ಸಂಗಾತಿ’ ಎಂದು ಕಂಪನಿ ಹೇಳಿಕೊಂಡಿದೆ. ಈ ಉತ್ಪನ್ನದ ಬೆಲೆ ₹2,999

ಮೈ ಬಡ್ಡಿ ಎಕ್ಸ್‌ ಲ್ಯಾಪ್‌ಟಾಪ್‌ ಸ್ಟ್ಯಾಂಡ್: ಪೆಟ್ರೊನಿಕ್ಸ್‌ ಕಂಪನಿ ‘ಮೈ ಬಡ್ಡಿ ಎಕ್ಸ್ ಲ್ಯಾಪ್‌ಟಾಪ್ ಸ್ಟ್ಯಾಂಡ್ ಉತ್ಪನ್ನವನ್ನು ಬಿಡುಗಡೆ ಮಾಡಿದೆ.  ಇದು ಅಡ್ಜೆಸ್ಟಬಲ್ ಸ್ಟ್ಯಾಂಡ್‌ ಆಗಿದ್ದು, ನಿಂತಿದ್ದಾಗ, ಕುಳಿತಿದ್ದಾಗಲೂ ಬಳಕೆ ಮಾಡಬಹುದು. 20 ಕೆ.ಜಿ ತೂಕ ತಡೆಯುವ ಈ ಸಾಧನದ ಬೆಲೆ ₹7,999

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.