ADVERTISEMENT

ಪ್ರೇಮದ ಹೊನಲಲ್ಲಿ ತೇಲಿದ ಕಾಗದದ ದೋಣಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 5:13 IST
Last Updated 8 ಫೆಬ್ರುವರಿ 2018, 5:13 IST
ಪ್ರೇಮದ ಹೊನಲಲ್ಲಿ ತೇಲಿದ ಕಾಗದದ ದೋಣಿ
ಪ್ರೇಮದ ಹೊನಲಲ್ಲಿ ತೇಲಿದ ಕಾಗದದ ದೋಣಿ   

‘ಕೆಂಡಸಂಪಿಗೆ’ ಸಿನಿಮಾದ ತುಂಟ ಗೌರಿಯಾಗಿ ಹೈಕಳ ಹೃದಯ ಕದ್ದ ನಟಿ ಮಾನ್ವಿತಾ ಹರೀಶ್‌, ಮೊನ್ನೆ ‘ಪ್ರಜಾವಾಣಿ’ ಕಚೇರಿಗೆ ಬಂದಾಗ ಶಿಶಿರದ ಬೆಳಗಿನ ಬಿಸಿಲು ಆಗಷ್ಟೇ ಬಲಿಯುತ್ತಿತ್ತು. ಮೀಟಿಂಗ್‌ ಹಾಲ್‌ ಹೊಕ್ಕೊಡನೆ ‘ಚಳಿ ಸ್ವಲ್ಪ ಜಾಸ್ತೀನೇ ಇದೆಯಲ್ವಾ’ ಎನ್ನುತ್ತಾ, ಉಳಿದವರಿಂದ ಸಹಮತ ಗಿಟ್ಟಿಸಿದ ಅವರು, ‘ಎ.ಸಿ ಆಫ್‌ ಮಾಡಿಬಿಡಿ’ ಎಂದು ಹೇಳಿದರು. ಮರುಕ್ಷಣವೇ ಥಂಡಿ ಹವಾದಲ್ಲಿ ಬೆಚ್ಚನೆಯ ಅನುಭೂತಿ ನೀಡುವಂತಹ ಪ್ರೇಮ ಪತ್ರಗಳ ಓದಿಗೆ ಕುಳಿತುಬಿಟ್ಟರು. ಅಂದಹಾಗೆ, ‘ಕಾಮನಬಿಲ್ಲು’ ಏರ್ಪಡಿಸಿದ್ದ ಪ್ರೇಮಪತ್ರ ಸ್ಪರ್ಧೆ–2018ರ ತೀರ್ಪುಗಾರರಾಗಿ ಅವರು ಬಂದಿದ್ದರು.

‘ಪ್ರೇಮ ಪತ್ರಗಳನ್ನು ಓದುವುದು ಕಷ್ಟ ಆಗುತ್ತಿದೆಯೇನೋ’ ಎಂದು ಕಾಮನಬಿಲ್ಲು ತಂಡ ಮಾನ್ವಿತಾ ಅವರ ಕಾಲೆಳೆಯುವ ಯತ್ನ ಮಾಡಿತು. ‘ಹಾಗೇನಿಲ್ಲ, ಪ್ರೀತಿಯ ಸಂದೇಶ ಹೊತ್ತು ತರುವ ಪತ್ರಗಳನ್ನು ಓದುವ ಅಭ್ಯಾಸ ನನಗೆ ಚಿಕ್ಕಂದಿನಿಂದಲೂ ಇದೆ’ ಎಂದು ಅವರು ಥಟ್ಟನೆ ಮಾರುತ್ತರ ನೀಡಿದರು. ಆಗ ಹಾಲ್‌ನಲ್ಲಿದ್ದ ಎಲ್ಲರಿಗೂ ಏಕಕಾಲಕ್ಕೆ ಕಚಗುಳಿ ಇಟ್ಟಂತೆ ದೊಡ್ಡ ನಗುವಿನ ಅಲೆ.

‘ನಮ್ಮೂರು ಕಳಸ. ಬ್ಯಾಂಕ್‌ ಉದ್ಯೋಗಿಯಾಗಿದ್ದ ಅಪ್ಪ ಕೆಲಸದ ಮೇಲೆ ಬೇರೆ ಸ್ಥಳದಲ್ಲಿ ಇರುತ್ತಿದ್ದರು. ಆದರೆ, ಅಮ್ಮ ಮತ್ತು ನಾನು ಕಳಸದಲ್ಲೇ ಇದ್ದೆವು. ಅಪ್ಪ, ಆಗಾಗ ಅಮ್ಮನಿಗೆ ಲವ್‌ ಲೆಟರ್‌ ಬರೀತಾ ಇದ್ದರು. ಆಗಿನ್ನೂ ತುಂಬಾ ಚಿಕ್ಕವಳಾಗಿದ್ದ ನಾನು, ಅಕ್ಷರ ಕೂಡಿಸಿ, ಕೂಡಿಸಿ ಆ ಪತ್ರಗಳನ್ನು ಓದಲು ಯತ್ನಿಸುತ್ತಿದ್ದೆ. ಆಗ ಅಮ್ಮ ತಲೆಗೆ ತೆಗೆದು ಎರಡು ಬಿಡ್ತಾ ಇದ್ದರು’ ಎಂದು ಮನದುಂಬಿ ನಕ್ಕರು.

ADVERTISEMENT

ಸ್ಕೂಲು–ಕಾಲೇಜಿನಲ್ಲಿ ಓದುವಾಗ ಮಾನ್ವಿತಾ ಅವರಿಗೆ ಸಿಕ್ಕಾಪಟ್ಟೆ ಲವ್‌ ಲೆಟರ್‌ಗಳು ಬರುತ್ತಿದ್ದವಂತೆ. ಅವುಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಅಮ್ಮನಿಗೆ ತೋರಿಸಿ ನಗಾಡುತ್ತಿದ್ದರಂತೆ. ‘ನಮ್ಮಮ್ಮ ಆ ಪತ್ರಗಳನ್ನು ಓದಿ ಎಂಜಾಯ್‌ ಮಾಡುತ್ತಿದ್ದರು’ ಎಂದೂ ಹೇಳಿದರು ಈ ಗೌರಿ ಯಾನೆ ಚಿನ್ನಿ. ಬೆಚ್ಚನೆಯ ಮಾತುಗಳನ್ನಾಡುತ್ತಾ, ಬಿಸಿನೀರು ಗುಟುಗರಿಸುತ್ತಾ ಚಳಿಯನ್ನು ಆಚೆಗೆ ಓಡಿಸಿದ ಮೇಲೆ, ಪಕ್ಕಾ ವೃತ್ತಿಪರ ಮೌಲ್ಯಮಾಪಕರಂತೆ ಪತ್ರಗಳ ವಿಶ್ಲೇಷಣೆಗೆ ಶುರುವಿಟ್ಟರು. ಆ ವಿಶ್ಲೇಷಣೆಯನ್ನು ಅವರ ಮಾತುಗಳಲ್ಲೇ ಕೇಳಿ. ಓವರ್‌ ಟು ಮಾನ್ವಿತಾ...

ಅಬ್ಬಬ್ಬಾ, ಎಷ್ಟೊಂದು ಪತ್ರಗಳ ರಾಶಿ. ಒಂದಕ್ಕಿಂತ ಒಂದು ಕಲರ್‌ಫುಲ್‌. ಕೆಲವರಂತೂ ಹೃದಯದ ಚಿತ್ರದಲ್ಲೇ ಪ್ರೇಮಕಾವ್ಯ ಕೆತ್ತಿದ್ದಾರೆ. ಪ್ರೇಮಪತ್ರಗಳ ಜತೆಗೆ ಕಳುಹಿಸಿದ ತ್ರೀ–ಡಿ ಗ್ರೀಟಿಂಗ್‌ಗಳು ಕೂಡ ತುಂಬಾ ಕ್ಯೂಟ್‌ ಆಗಿವೆ. ನಾನು ತೀರ್ಪುಗಾರಳಾಗಿ ಬಂದಿರುವುದು ಪ್ರೇಮಪತ್ರ ಸ್ಪರ್ಧೆಗಾಗಿ ಅಲ್ವಾ? ಹಾಗಾಗಿ ಪತ್ರಗಳ ಬಣ್ಣಕ್ಕೆ ಮರುಳಾಗದೆ, ಕಂಟೆಂಟ್‌ ಬೆನ್ನಹಿಂದೆ ಬಿದ್ದೆ. ಅಂತಹ ಪತ್ರಗಳನ್ನೇ ಹೆಕ್ಕಿ ತೆಗೆದೆ. ಕೆಲವಂತೂ ತುಂಬಾ ಕಾವ್ಯಾತ್ಮಕವಾಗಿವೆ. ಮೊದಲ ಮೂರು ಸ್ಥಾನಕ್ಕೆ ಪತ್ರಗಳನ್ನು ಆಯ್ಕೆಮಾಡಬೇಕು ಎಂದಾಗ ಸೋಸುತ್ತಾ ಹೋಗಬೇಕಲ್ಲ? ಸಿನಿಮಾ ಸಾಹಿತ್ಯವನ್ನು ಕಾಪಿ–ಪೇಸ್ಟ್‌ ಮಾಡಿ ಬರೆದಂತಹ ಪತ್ರಗಳನ್ನು ಮೊದಲು ಪಕ್ಕಕ್ಕೆ ಎತ್ತಿಟ್ಟೆ.

‘ನನ್ನ ನಲುಮೆಯ ನವಿಲೇ’ ಎಂಬ ಒಕ್ಕಣೆ ಓದಿದಾಗ ನವಿಲಿಗೆ ಬರೆದ ಪತ್ರ ನಮಗೇಕೆ ಎಂಬ ಪ್ರಶ್ನೆ ಕಾಡಿತು. ‘ಉಸಿರೇ’ ಎಂಬ ಪದ ಕಣ್ಣಿಗೆ ಬಿದ್ದಾಗ ಸುದೀಪ್‌ ಸರ್‌ ನೆನಪಾದರು. ಅಯ್ಯೋ ಬಿಡಿ, ಜಯಂತ ಕಾಯ್ಕಿಣಿ ಸರ್‌ ಸಾಹಿತ್ಯವನ್ನು ಕಾಪಿ ಮಾಡಿದವರೆಷ್ಟೋ. ‘ನೆನಪುಗಳ ಮಾತು ಮಧುರ’ ಎಂಬ ಮಾತು ಎಷ್ಟು ಸಿನಿಮಾಗಳಲ್ಲಿ ಬಳಕೆಯಾಗಿಲ್ಲ ಹೇಳಿ? ಕ್ಲೀಷೆ ಅನಿಸುವಂತಹ ಪದಗಳಿದ್ದ ಪತ್ರಗಳು ಆಯ್ಕೆಯ ಜರಡಿಯಿಂದ ಜಾರಿ ಕೆಳಗೆ ಬಿದ್ದವು. ಗಟ್ಟಿ ಕಾಳುಗಳಷ್ಟೇ ಉಳಿದವು. ಈ ಹಂತದಲ್ಲೇ ನನಗೆ ಸವಾಲು ಎದುರಾಗಿದ್ದು. ಸರಳ ಭಾಷೆಯಲ್ಲಿ ನೈಜ ಪ್ರೇಮ ನಿವೇದನೆ ಮಾಡಿದ ಈ ಪತ್ರಗಳಲ್ಲಿ ಯಾವುದು ಫಸ್ಟ್‌, ಯಾವುದು ನೆಕ್ಸ್ಟ್‌; ಆಯ್ಕೆ ಮಾಡುವುದು ತುಂಬಾ ಕಷ್ಟ ಆಯ್ತು.

ಹುಡುಗಿಯೊಬ್ಬಳು ತಾನು ಒಂಬತ್ತನೇ ಕ್ಲಾಸಿನಲ್ಲಿ ಓದುತ್ತಿದ್ದಾಗ ಮಿಸ್‌ ಮಾಡಿಕೊಂಡ ಮೊದಲ ಲವ್‌ ಲೆಟರ್‌ ಕುರಿತು ಬರೆದ ಪತ್ರ ಆಪ್ತವಾಯಿತು. ಪ್ರತಿಯೊಬ್ಬರಲ್ಲೂ ಹೇಳಿಕೊಳ್ಳೋಕೆ ಇಂತಹ ಬಾಲ್ಯದ ಪ್ರೇಮಕಥೆ ಇದ್ದೇ ಇರ್ತದೆ, ಅಲ್ವಾ? ನೈಜವಾಗಿ ಹಾಗೂ ಅಷ್ಟೇ ಸಹಜವಾಗಿ ಮೂಡಿಬಂದ ಈ ಪತ್ರಕ್ಕೆ ಮೊದಲ ಬಹುಮಾನ ಸೂಕ್ತ ಅನಿಸಿತು.

ಶಿವಮೊಗ್ಗದಿಂದ ತರೀಕೆರೆಗೆ ಹೊರಟಿದ್ದ ರೈಲಿನಲ್ಲಿ ನಿತ್ಯ ಪಯಣಿಸುವ ಪ್ರಾಥಮಿಕ ಶಾಲಾ ಶಿಕ್ಷಕಿಗೆ ಸಹಪಯಣಿಗನೊಬ್ಬ ಬರೆದ ಪ್ರೇಮಪತ್ರವನ್ನು ಓದುತ್ತಾ ಹೋದಂತೆ ಅಲ್ಲಿನ ದೃಶ್ಯಗಳೆಲ್ಲ ಮನದಂಗಳಲ್ಲಿ ಮೆರವಣಿಗೆ ಹೊರಟವು. ದೊಡ್ಡವರಾಗಿ ಬೆಳೆದಂತೆ ಯಾರ ಮೇಲಾದರೂ ಕ್ರಶ್‌ ಆದಂತಹ ಅನುಭವ ಸಾಮಾನ್ಯವಾಗಿ ಎಲ್ಲರಿಗೂ ಆಗುವಂಥದ್ದೇ. ಈ ಪತ್ರವನ್ನು ಕಥೆಯಾಗಿ ವಿಸ್ತರಿಸಿದರೆ ಒಂದೊಳ್ಳೆಯ ಸಿನಿಮಾ ಆಗುತ್ತೆ ಅನಿಸಿತು.

ಓದುವಾಗ ಪರಸ್ಪರ ಪ್ರೀತಿಸಿದ ಸಹಪಾಠಿಗಳ ಮುಂದೆ ವೃತ್ತಿಯ ಆಯ್ಕೆ ಪ್ರಶ್ನೆ ಬಂದಾಗ ಅವರ ಸಂಬಂಧವೇ ಬ್ರೇಕ್‌ ಅಪ್‌ ಆಗುವಂತಹ ಹಂತ ತಲುಪಿದ ವಿಷಯವಸ್ತು ಇನ್ನೊಂದು ಪತ್ರದ್ದು. ಎಂಎನ್‌ಸಿ ಕಂಪನಿ ಸೇರಿದ ಹುಡುಗಿಗೆ ಕೃಷಿಯನ್ನು ಆಯ್ಕೆ ಮಾಡಿಕೊಂಡ ಹುಡುಗ ಬರೆದ ಪತ್ರವಿದು. ಪ್ರಸ್ತುತ ಸನ್ನಿವೇಶದಲ್ಲಿ ಬಹುಪಾಲು ಪ್ರೇಮಿಗಳಿಗೆ ಈ ಪತ್ರ ಕನೆಕ್ಟ್‌ ಆಗುತ್ತೆ. ಹೀಗಾಗಿ ಎರಡು ಮತ್ತು ಮೂರನೇ ಸ್ಥಾನಗಳು ಈ ಎರಡು ಪತ್ರಗಳಿಗೆ ಎಂದು ತೀರ್ಮಾನಿಸಿದೆ.

ಅಲ್ಲವೆ ಮತ್ತೆ, ಈಗೀಗ ಲವ್‌ ಲೆಟರ್‌ ಬರೆಯುವ ಸಂಸ್ಕೃತಿಯೇ ಕಡಿಮೆಯಾಗಿದೆ. ಸೋಶಿಯಲ್‌ ಮೀಡಿಯಾ, ವಾಟ್ಸ್‌ ಆ್ಯಪ್‌ಗಳ ಮೂಲಕ ಭಾವನೆ ಹಂಚಿಕೊಳ್ಳುವುದೇ ಎಲ್ಲರಿಗೂ ಸುಲಭ ಎನಿಸಿದೆ. ಇವುಗಳಲ್ಲಿ ಸಂವಹನ ಎನ್ನುವುದು ಒನ್‌ ಟಚ್‌ ಅವೇ, ಅಷ್ಟೇತಾನೆ? ಇಂತಹ ಸಂದರ್ಭದಲ್ಲಿ ಸಂಬಂಧಗಳು ಹಗುರವಾಗುತ್ತಿವೆ; ಅಳ್ಳಕ ಆಗುತ್ತಿವೆ. ಪ್ರೀತಿ ನಿಲ್ಲುತ್ತಿಲ್ಲ. ಈಗಿನ ಪೀಳಿಗೆಯ ಯಾರನ್ನೇ ಕೇಳಿದರೂ 5–6 ಬ್ರೇಕ್‌ ಅಪ್‌ಗಳ ಕಥೆಗಳು ತೆರೆದುಕೊಳ್ಳುತ್ತವೆ. ಪ್ರೇಮಪತ್ರಗಳು ಬರುವ ಕಾಲ ಯಾವಾಗಲೋ ಮುಗಿದುಹೋಗಿದೆ. ಈಗ ಪೋಸ್ಟ್‌ ಕಾರ್ಡ್‌ಗಳು ಬರುವುದೆಂದರೆ ವೈಕುಂಠ ಸಮಾರಾಧನೆಗೆ ಆಹ್ವಾನ ಹೊತ್ತು ಬರುವಂಥವು ಮಾತ್ರ. ಟೆಲಿಗ್ರಾಂ ಸಹ ಕಣ್ಮುಚ್ಚಿ ಆಯ್ತಲ್ಲ. ಸಂವಹನದ ಹಳೆಯ ಮಾದರಿಗಳಿಗೆ ಇದು ಕೊನೆಗಾಲವೇನೋ? ಅದೇ ಕಾರಣದಿಂದ ಭಾವನಾತ್ಮಕ ಸ್ಪರ್ಶ ಕೂಡ ಕಳೆದುಹೋಗುತ್ತಿದೆಯೇ?

ಯಾವಾಗಲೋ ಬಂದ ಪತ್ರವನ್ನು ಎಷ್ಟೋ ವರ್ಷಗಳ ಬಳಿಕ ಮತ್ತೆ ಓದುವ ಮಜವೇ ಬೇರೆ. ಅಂತಹ ಅನುಭೂತಿಗಾದರೂ ನೀವೂ ಪತ್ರ ಬರೆಯಿರಿ. ಆ ಪತ್ರ ಹುಡುಗ ಇಲ್ಲವೆ ಹುಡುಗಿಗೆ ಮಾತ್ರ ಆಗಿರಬೇಕು ಎಂದೇನಿಲ್ಲ. ನಿಮ್ಮ ಪ್ರೀತಿಗೆ ಪಾತ್ರರಾದ ಯಾರಿಗಾದರೂ ಬರೆಯಿರಿ, ಹಿರಿಯರಿಗೆ ಬರೆಯಿರಿ, ನೀವು ಓಡಾಡುವ ಬಸ್‌ಗೆ ಬರೆಯಿರಿ. ಮುದ್ದು ಮುದ್ದಾಗಿ ಬರೆಯಿರಿ. ಮುಂದಿನ ಸಲದ ಸ್ಪರ್ಧೆ ಸಂದರ್ಭದಲ್ಲಿ ನಾನೂ ಪ್ರೇಮಪತ್ರ ಬರೆಯುತ್ತೇನೆ; ಅದು ಮೆಟ್ರೊ ರೈಲಿಗೆ!

*****
ಕೊಟ್ಟ ಕಾಲ್‌ಶೀಟ್‌ಗಿಂತ ಎರಡು ಗಂಟೆಗಳಷ್ಟು ಹೆಚ್ಚಿನ ಸಮಯ ನಿಮ್ಮೊಂದಿಗೆ ಕಳೆದಿದ್ದೇನೆ ಎಂದು ತಮಾಷೆ ಮಾಡಿದ ಮಾನ್ವಿತಾ, ಕಾಮನಬಿಲ್ಲು ತಂಡದ ಜತೆ ಊಟಕ್ಕೆ ಬಂದರು. ಮುಂದೆ ಕುಳಿತಿದ್ದ ಜೋಡಿಯೊಂದರ ಮಾತುಕತೆ ಈ ನಟಿಯನ್ನು ಸೆಳೆಯಿತು. ಬ್ರೇಕ್‌ ಅಪ್‌ಗೆ ಸಂಬಂಧಿಸಿದ ಮಾತುಕತೆ ಅದಾಗಿತ್ತು. ಮೊದಲು ಇಂತಹ ಸಂಗತಿಗಳಿಗೆ ಬ್ರೇಕ್‌ ಬಿದ್ದು ಪ್ರೇಮ ಪುಷ್ಪಗಳು ಎಲ್ಲೆಡೆ ಅರಳಬೇಕು ಎಂದು ಹಾರೈಸಿದ ಮಾನ್ವಿತಾ ಎಲ್ಲರ ಮನದ ಮಾತಿಗೂ ಧ್ವನಿಯಾಗಿ ಬೀಳ್ಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.