ADVERTISEMENT

ಮಳಿಯೇ ನಮಿಗೆ ಹಬ್ಬ

ಮಳೆ ಅನುಭವ

ರವಿರಾಜ್‌ ಸಾಗರ್‌
Published 18 ಜುಲೈ 2018, 19:30 IST
Last Updated 18 ಜುಲೈ 2018, 19:30 IST
   

ಓಯ್, ಏನ್ ಗೊತ್ತಾ ..? ಮಳೆ ಶುರು ಆತು ಅಂದ್ರೆ ನಮ್ಮ ಕಡೆ ಹಬ್ಬಹಬ್ಬಕ್ಕೂ ಕೋಳಿ ಕಜ್ಜಾಯ. ಗದ್ದೆ ಬಿತ್ತಕ್ಕೆ ಶುರು ಆಗುತ್ತಿದ್ದಂಗೆ ಕೂರಿಗೆಹಬ್ಬ, ಚೌಡಿ ಹಬ್ಬ, ಮೈಲಮ್ಮನಹಬ್ಬ, ಹೊಳೆಹಬ್ಬ, ಆದ್ರೆ ಮಳೆಹಬ್ಬ ಒಂದಾ..ಎಲ್ಡಾ..ಇನ್ನೂ ಐದಾವೆ. ಅಷ್ಟೇ ಅಲ್ಲ ಮಳೆ ಶುರುವಾಗುತ್ತಿದ್ದಂಗೆ ಹುಲ್ಲಣಬಿ, ಎಣ್ಣೆ ಅಣಬಿ, ಹೆಗ್ಗಲಣಿಬಿ, ಕರೆ ಅಣಬಿ ಸುಗ್ಗಿ , ಕಾರೇಡಿ ಸುಗ್ಗಿ. ಕೆರೆ, ಹೊಳೆ ಸಾಲಲ್ಲಿ ಹತ್ತುಮೀನು ಸುಗ್ಗಿ.

ಹಾಗಾಗಿ ನಾವು ಸದಾ ಮಳಿಗಾಲವೇ ಇರಲಪ್ಪಾ ದೇವರೇ ಅಂತಾ ಬೇಡಿಕಿಂತಿದ್ದೆವು. ಜಡೀ ಮಳೀಗೆ ವರದಾನದಿ ಉಕ್ಕಿ ಊರೆಲ್ಲ ಮುಳುಗೋ ಭಯದಲ್ಲಿ ದನ, ಕರು, ಜನ ಎಲ್ಲಾ ಮನ್ಯಾಗೆ ಹೊಕ್ಕಂಡಿದ್ರೆ, ನಾವು ನೆರೆಯಲ್ಲಿ ಹುಡುಗ್ರು ಹುಡಿಗೀರೆಲ್ಲ ಈಜಾಡೋಕೋಗಿ ಬೈಸಿಕಿಂದು, ದೊಡ್ಡವರು ಬೈದ ಕತೆಯನ್ನೆಲ್ಲ ಶಾಲ್ಯಾಗೋಗಿ ಹಲ್ಟೇ ಹೋಡಿತಿದ್ದ ಮಜಾನೆ ಮಜಾ.

ಮೂರು ಕೀಲೋಮೀಟರ್ ಕೆಸರು ಗದ್ದೆ ಬಯಲಿನ್ಯಾಗೆ ನಡಕೊಂದು ಹೈಸ್ಕೂಲಿಗೆ ಹೋಕಿದ್ದ ನಾವು ಮೂರು ಹಳ್ಳ ಹಾದು ಶಾಲಿಗೆ ತಲುಪೋ ಹೊತ್ತಿಗೆ ಮೈಯೆಲ್ಲ ಒದ್ದೆ ಆಗೋದು ಮಾಮೂಲಿಯಾಗಿತ್ತು. ಎಂತಾ ಜಡಿಗಾಳಿ ಮಳೆ ಚಳಿಯೇ ಇರಲಿ ಶಾಲೆ ಮಾತ್ರ ಬಿಡುತ್ತಿರಲಿಲ್ಲ ಅಂದ್ರೆ ಶಾಲೇಲಿ ಕಲಿಯಲೇಬೇಕೆಂಬ ಹಟದ ಜೊತೆಗೆ ಎಂತಾ ಮಳೆಗೂ ಹೆದರೋ ಮಕ್ಕಳಲ್ಲ ನಾವು ಅನ್ನೋದು ನಮ್ಮ ಧಿಮಾಕಾಗಿತ್ತು.

ADVERTISEMENT

ಮಳೆಯಲ್ಲಿ ಒಂದು ಕೈಯಲ್ಲಿ ಕೊಡೆಹಿಡಕಂಡು ಇನ್ನೊಂದು ಕೈಯಲ್ಲಿ ಪ್ಯಾಂಟು ಮಡಚಿಕೊಳ್ಳುತ್ತ, ಒಂಚೂರು ಭಯದಿಂದ ನಾಜೂಕಾಗಿ ಲಂಗ ಎತ್ತಿಕೊಳ್ಳುತ್ತಾ ಹಳ್ಳ ದಾಟುತ್ತಿದ್ದ ಹುಡುಗಿಯರ ಹಿಂದೆ ಹಿಂದೆಯೇ ನಡೆಯುತ್ತಾ, ಬಿದ್ದರೆ ಎತ್ತೋಕೆ ಜೊತೆಯಿದ್ದೇವೆ ಎನ್ನುತ್ತಾ ಅವರನ್ನೇ ಹಿಂಬಾಲಿಸಿ ಶಾಲೆಗೆ ಹೋಗುತ್ತಿದ್ದೆವು. ಹುಡುಗೀರ ಕೊಡೆ ಗಾಳಿಗೆ ಹಾರಿ ಹೋಗಲಿ,ಅವಳು ನನ್ನ ಜೊತೆ ಕೊಡೆಯಲ್ಲಿ ಬರುವಂತಾಗಲಿ ಎಂದೆಲ್ಲ ಜಡಿಗಾಳಿ ಮಳೆಯಲ್ಲಿ ಬೇಡುತ್ತಿದ್ದೆವು. ಆ ದಿನಗಳು ಮತ್ತೊಮ್ಮೆ ಬರಬಾರದಾ ಎಂದೆಣಿಸಿದ್ದಿದೆ.

ನೀವೆಷ್ಟೇ ಮಳೆ ನೋಡಿರಬೈದು. ನಮ್ಮ ಶರಾವತಿ ಹಿನ್ನೀರಿನ ಮುಳುಗಡೆ ಊರಿನ ಸುತ್ತಾ ಬರೋ ಮಳೆಹಾಡು ಕೇಳೋ ಮಜವೇ ಬ್ಯಾರೆ ಐತಿ. ಅದೇನೋ ಉದ್ಧಾರ ಮಾಡ್ತೀವಿ ಅಂತಾ ಡ್ಯಾಂ ಕಟ್ಟಿ ಹರಿಯೋ ಶರಾವತಿ ಕೈ ಕಾಲು ಕಟ್ಟಿ ನಮ್ಮುನ್ನೆಲ್ಲ ಮುಳುಗಿಸಿದ್ರೂ ನಮಿಗಂತೂ ಮಳೆ ಮ್ಯಾಲೆ ಚೂರು ಸಿಟ್ಟಿಲ್ಲ. ಅದೆಷ್ಟು ಹುಚ್ಚು ಮಳೆಯಾದ್ರೂ ಬರಲಿ ನಾವು ಹೆದರಂಗಿಲ್ಲಾ ಅಷ್ಟೇ ಅಲ್ಲ ಮಳೆ ಹಬ್ಬವನ್ನೇ ಮಾಡೋ ಜನಾ ನಾವು.

ನಮ್ಮೂರಿನ್ಯಾಗೇ ಆರಿದ್ರಾ ಮಳೆ ಬರುತ್ತಿದ್ದಂಗೆ ನಮ್ಮಲ್ಲಿ ದೊಡ್ಡ ಹಬ್ಬವೋ ಹಬ್ಬ. ನಮ್ಮ ಮಲೆನಾಡಿನ ಕೆಲವು ಭಾಗದಲ್ಲಿ ಇದಕ್ಕೆ ‘ಆದ್ರೆಮಳೆ’ ಅಂತೀವಿ. ನಮ್ಮ ನಮ್ಮ ನೆಂಟರೆಲ್ಲ ಊರಾಗೆ ಸೇರಿಕಿಂದು ಆದ್ರೆಮಳೆ ಹಬ್ಬ ಎಂಬ ವಿಶಿಷ್ಟ ಮಳೆ ಹಬ್ಬ ಮಾಡಿ ದೇವರಿಗೆ, ಮರಗಳಿಗೆಲ್ಲ ಎಡೆ ಮಾಡಿ ,ಕುರಿ ಕಡಿದು ತಿಂದು ಭಿಂಗಿ ಕುಣಿತೀವಿ. .ಕೆಲವು ದೀವರ ಜನಾ ಇರೋ ಊರಾಗೇ ಕುಮಾರ ರಾಮನ ಮುಖವಾಡ ತೊಟ್ಟು ಕತ್ತಿ ಹಿಡಿದು ಡೊಳ್ಳಿನ ತಂಡಗಳೊಂದಿಗೆ ಸಂಭ್ರಮಿಸುತ್ತಾ ಮಳೆಯಲ್ಲೇ ಬಿಂಗಿ ಕುಣಿಯುವುದು ಬಾರಿ ವಿಶೇಷ. ಬಿಂಗಿ ಕುಣಿಯುವ ದೀವರು ಸಮುದಾಯದ ಊರುಗಳಾದ ನಮ್ಮ ಸಮೀಪದ ಚಿಕ್ಕನೆಲ್ಲೂರು, ಮನಮನೆ, ಮಾಗಡಿ, ಬರದವಳ್ಳಿ ಹೀಗೆ ಸಾಗರ ಸೊರಬದ ಹಲವು ಊರುಗಳಿಗೆ ಆದ್ರೆ ಮಳೆ ಮುಗಿಯುವವರಿಗ್ಯೂ ಎಂತಾ ಜಡಿಮಳೆಯೇ ಇರಲಿ ಲೆಕ್ಕಕ್ಕಿಲ್ಲದಂಗೆ ಊರೂರು ಸುತ್ತಾಡುತ್ತಿದ್ದವು.

ಮಳೆಯೇ ಅಪರೂಪವಾಗಿರುವ ನಮ್ಮ ರಾಯಚೂರಲ್ಲೀಗ ಹಳೇ ಮಳೆಹಾಡನ್ನೇ ಮನದಲ್ಲಿ ಗುನುಗುತ್ತಿದ್ದೇನೆ. ಮಳೆಯ ಸಂಭ್ರಮವನ್ನು ಮೈ ಮನಕ್ಕೆ ಆಹ್ವಾನಿಸಿಕೊಡು ಸವಿಯುವ ನಾನು ಊರಿಂದ ಬರಲೇಬೇಕೆಂದು ಕರೆಬಂದಾಗ ಮಾತ್ರ ಎಂತ ಬ್ಯುಸಿಯಲ್ಲೂ ಬಿಂಗಿಕುಣಿತಕ್ಕೆ ಆಗೀಗ ಹೋಗಿಬರುತ್ತಿದ್ದೇನೆ. ಆ ಸಂಭ್ರಮವನ್ನು ಮತ್ತೆ ಮತ್ತೆ ಅನುಭವಿಸಬೇಕೆನ್ನಿಸುತ್ತದೆ. ಅದು ಮರೆಯಬಹುದಾದ ಸಣ್ಣ ಸಂಭ್ರಮವಲ್ಲ. ಫಿಲ್ಟರ್‌ನಿಂದ ಬಂದ ಗುಟುಕು ನೀರು ಕುಡಿಯುವಾಗಲು ಜಡಿ ಮಳೆಯಲ್ಲಿ ಕೊಡೆಯಲ್ಲಿ ಸುರಿವ ತಣ್ಣನೆಯ ತಾಜಾ ಮಳೆನೀರು ಕಡಿದು ಬೆಚ್ಚಗೆ ಸಂಭ್ರಮಿಸುತ್ತಿದ್ದ ಆ ದಿನಗಳ ಮಳೆ ಹಾಡು ಮನದೊಳಗೆ ಸುಮಧುರ ಗಾನವಾಗಿ ಮೊಳಗುತ್ತಲೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.