ADVERTISEMENT

ಟೆನಿಸ್‌ನ ಹೊಸ ಸಾಮ್ರಾಟ ಅಲ್ಕರಾಜ್‌ !

​ಪ್ರವೀಣ ಕುಲಕರ್ಣಿ
Published 22 ಜುಲೈ 2023, 0:23 IST
Last Updated 22 ಜುಲೈ 2023, 0:23 IST
   

ಮಣ್ಣಿನ ಅಂಕಣವೇ ಆಗಿರಲಿ, ಹಾರ್ಡ್‌ (ಕಾಂಕ್ರೀಟ್‌) ಅಂಕಣವೇ ಆಗಿರಲಿ ಅಥವಾ ಹುಲ್ಲಿನ ಅಂಕಣವೇ ಆಗಿರಲಿ, ಟೆನಿಸ್‌ನಲ್ಲಿ ಈಗ ನಾನೇ ರಾಜ ಎನ್ನುತ್ತಾರೆ ಸ್ಪೇನ್‌ನ ಯುವ ಆಟಗಾರ ಕಾರ್ಲಸ್‌ ಅಲ್ಕರಾಜ್‌! ಕಳೆದ ವರ್ಷ ಯುಎಸ್‌ ಓಪನ್‌ ಟ್ರೋಫಿಯನ್ನು ಮುತ್ತಿಕ್ಕುವ ಮೂಲಕ ಗ್ರ್ಯಾನ್‌ ಸ್ಲಾಮ್‌ ಗೆದ್ದ ಜಗತ್ತಿನ ಕಿರಿಯ ಆಟಗಾರರಲ್ಲಿ ಒಬ್ಬರೆನಿಸಿದ ಅಲ್ಕರಾಜ್‌, ಈ ಬಾರಿ ವಿಂಬಲ್ಡನ್‌ ಅಂಗಳದಲ್ಲೂ ನಗು ಬೀರಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ನಂ. 1 ಪಟ್ಟಕ್ಕೆ ಏರಿದ ಅತ್ಯಂತ ಕಿರಿಯ ಆಟಗಾರ ಎಂಬ ಹಿರಿಮೆಗೂ ಪಾತ್ರವಾಗಿರುವ ಅವರು, ಹೊಸ ತಲೆಮಾರಿನ ಮಿನುಗುತಾರೆಯಾಗಿದ್ದಾರೆ. ವಿಂಬಲ್ಡನ್‌ನಲ್ಲಿ ದೈತ್ಯ ಪ್ರತಿಭೆ ಎನಿಸಿದ, ಅಜೇಯರಾಗಿ ಉಳಿದಿದ್ದ ನೊವಾಕ್‌ ಜೊಕೊವಿಕ್‌ ಅವರಿಗೇ ಸೋಲಿನ ರುಚಿ ತೋರಿಸುವ ಮೂಲಕ ತಾವೊಬ್ಬ ಹೊಸ ಸಾಮ್ರಾಟ ಎಂದು ಸಾರಿದ್ದಾರೆ. ಟೆನಿಸ್‌ ಜಗತ್ತಿನ ‘ಬಿಗ್‌ ಥ್ರೀ’ (ನೊವಾಕ್‌, ರೋಜರ್‌ ಫೆಡರರ್‌ ಮತ್ತು ರಾಫೆಲ್‌ ನಡಾಲ್‌) ಅವರ ಸ್ಥಾನವನ್ನು ತುಂಬುವವರು ಯಾರು ಎಂಬ ಪ್ರಶ್ನೆಗೂ ಉತ್ತರವಾಗಿ ನಿಂತಿದ್ದಾರೆ. ಹುಲ್ಲಿನ ಅಂಗಳದಲ್ಲಿ ನಡೆದ ಮೊನ್ನೆಯ ಫೈನಲ್‌ ಅಂತೂ ಅಲ್ಕರಾಜ್‌ ರಾಕೆಟ್‌ನಿಂದ ಬರೆದ ಒಂದು ದೃಶ್ಯಕಾವ್ಯವೇ ಆಗಿತ್ತು. ಅತ್ಯಂತ ಅನುಭವಿ ಹಾಗೂ ಬಲಾಢ್ಯ ಆಟಗಾರನ ಎದುರು ನಾಲ್ಕು ಗಂಟೆ, 42 ನಿಮಿಷಗಳ ಸಮರದಲ್ಲಿ ನರ್ವಸ್‌ ಆಗದೆ, ತಾಳ್ಮೆ ಕಳೆದುಕೊಳ್ಳದೆ ಗೆಲ್ಲುವ ಛಲದಿಂದ ಆಡಿದ ಈ ಆಟಗಾರನಲ್ಲಿರುವುದು ಎಂತಹ ಸವಾಲನ್ನೂ ಮೆಟ್ಟಿನಿಲ್ಲುವ ಆತ್ಮವಿಶ್ವಾಸ.

ಟೆನಿಸ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಸ್ವಿಟ್ಜರ್ಲೆಂಡ್‌ನ ರೋಜರ್‌ ಫೆಡರರ್‌ ಅವರು ಕ್ರೀಡೆಗೆ ವಿದಾಯ ಹೇಳಿದ ಹೊತ್ತಿನಲ್ಲೇ ಮೊದಲ ಗ್ರ್ಯಾನ್‌ ಸ್ಲಾಮ್‌ ಗೆದ್ದಿದ್ದ ಈ ಆಟಗಾರ, ಮುಂದೆ ಅದೆಷ್ಟು ದಾಖಲೆಗಳನ್ನು ಬರೆಯಲಿದ್ದಾರೋ? ಅಲ್ಕರಾಜ್‌ ನಂ. 1 ಪಟ್ಟಕ್ಕೆ ಏರಿದಾಗ ಅವರಿಗೆ 19 ವರ್ಷ, ನಾಲ್ಕು ತಿಂಗಳು ಮತ್ತು ಆರು ದಿನಗಳಾಗಿದ್ದವು. ಟೆನಿಸ್‌ ಚರಿತ್ರೆಯಲ್ಲಿ ಈ ಹಿಂದೆ ಯಾವೊಬ್ಬ ಆಟಗಾರನೂ ಹದಿಹರೆಯದಲ್ಲಿ ಈ ಎತ್ತರಕ್ಕೆ ಏರಿರಲಿಲ್ಲ.

ADVERTISEMENT

ಅಲ್ಕರಾಜ್‌ ಅವರ ಪಾದಚಲನೆ, ಮಿಂಚಿನ ವೇಗ, ಪ್ರತಿದಾಳಿ ನಡೆಸುವ ಸಾಮರ್ಥ್ಯದ ಕುರಿತು ಟೆನಿಸ್‌ ಪಂಡಿತರು ಮಾಡುತ್ತಿರುವ ವಿಶ್ಲೇಷಣೆಗಳಿಗೆ ಕೊನೆ–ಮೊದಲಿಲ್ಲ. ಸಂಶಯವೇ ಇಲ್ಲ, ಅವರೊಬ್ಬ ಆಲ್‌ ಕೋರ್ಟ್‌, ಆಲ್‌ರೌಂಡ್‌ ಆಟಗಾರ. ಅವರ ಬಲಶಾಲಿ ಬೇಸ್‌ಲೈನ್‌ ಮುಂಗೈ ಹೊಡೆತಗಳನ್ನು, ಅಷ್ಟೇ ಸೊಗಸಾದ ಹಿಂಗೈ ರಿಟರ್ನ್‌ಗಳನ್ನು ನೋಡುವ ಮಜವೇ ಬೇರೆ. ಆರು ಅಡಿ, ಒಂದು ಇಂಚು ಎತ್ತರದ ಅಲ್ಕರಾಜ್‌, ಒಬ್ಬ ಪರಿಪೂರ್ಣ ಅಥ್ಲೀಟ್‌. ಈ ಟೆನಿಸ್‌ ಆಟಗಾರನೊಳಗೆ ಒಬ್ಬ ರನ್ನರ್‌, ಜಿಮ್ನಾಸ್ಟಿಕ್‌ ಪಟು ಕೂಡ ಇರುವುದು ಸುಳ್ಳಲ್ಲ.

Spain

ಬೋರ್ನ್‌ ಬರ್ಗ್‌, ಮ್ಯಾಟ್ಸ್‌ ವಿಲೆಂಡರ್‌, ಬೋರಿಸ್‌ ಬೇಕರ್‌, ಪೀಟ್‌ ಸ್ಯಾಂಪ್ರಸ್‌ ಹಾಗೂ ಸ್ಪೇನ್‌ನವರೇ ಆದ ರಾಫೆಲ್‌ ನಡಾಲ್‌ ಎಲ್ಲರೂ 19ರ ಹರೆಯದಲ್ಲೇ ಮೊದಲ ಗ್ರ್ಯಾನ್‌ ಸ್ಲಾಮ್‌ ಗೆದ್ದವರು. ಆದರೆ, ಯಾರೊಬ್ಬರೂ ಆ ಕಿರಿಯ ವಯಸ್ಸಿನಲ್ಲಿ ವಿಶ್ವದ ನಂ. 1 ಆಟಗಾರನ ಪಟ್ಟಕ್ಕೆ ಏರಿರಲಿಲ್ಲ. ಆ ದೃಷ್ಟಿಯಲ್ಲಿ ಅಲ್ಕರಾಜ್‌ ಅವರು ಎತ್ತಿ ಹಿಡಿದ ರಾಕೆಟ್‌ ತುಸು ಎತ್ತರದಲ್ಲೇ ಇದೆ. ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಈ ಆಟಗಾರನಿಗೆ ಬಡತನದ ಕಷ್ಟವೂ ಗೊತ್ತು. ಯಶಸ್ಸಿನ ಹೆದ್ದಾರಿಯಲ್ಲಿ ಹೊರಟಿರುವ ಅಲ್ಕರಾಜ್‌, ತಾವು ಸವೆಸಿದ ಕಾಲುದಾರಿಯನ್ನು ಮರೆತಿಲ್ಲ. ದೈಹಿಕ ಸಾಮರ್ಥ್ಯದಷ್ಟೇ ಅವರ ಮಾನಸಿಕ ಶಕ್ತಿಯೂ ದೊಡ್ಡದು. 

‘ನಾನೇನು ವಿಶೇಷ ಆಟಗಾರನಲ್ಲ. ಆದರೆ, ವಿಶೇಷ ಸಾಧನೆಗೆ ಕಠಿಣ ಶ್ರಮ ಹಾಕುವ ಆಟಗಾರ’ ಎಂದೆನ್ನುವ ಅಲ್ಕರಾಜ್‌ ಫಿಲಾಸಫಿಯಲ್ಲಿ ಎಲ್ಲರಿಗೂ ಪಾಠವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.