ADVERTISEMENT

ಇವತ್ತಿಗೂ ಅಧಿಕಾರ ದುರುಪಯೋಗ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2016, 10:44 IST
Last Updated 11 ಫೆಬ್ರುವರಿ 2016, 10:44 IST
ಇವತ್ತಿಗೂ ಅಧಿಕಾರ ದುರುಪಯೋಗ
ಇವತ್ತಿಗೂ ಅಧಿಕಾರ ದುರುಪಯೋಗ   

ಐಎಎಸ್‌, ಐಪಿಎಸ್‌ ಮತ್ತು ಕೆಎಎಸ್‌ ಅಧಿಕಾರಿಗಳ ವರ್ಗಾವಣೆ ಮಾತ್ರ ಅಲ್ಲ, ಸಾಮಾನ್ಯ ವರ್ಗಾವಣೆ ಕೂಡ ವರ್ಷವಿಡೀ ನಡೆಯುತ್ತಿದೆ.
‘ಸಾರ್ವಜನಿಕ ಹಿತದೃಷ್ಟಿಯಿಂದ’ ಎಂದು ಉಲ್ಲೇಖಿಸಿ ವರ್ಗಾವಣೆ  ಮಾಡುವುದು ನಿರಂತರ  ಪ್ರಕ್ರಿಯೆ ಆಗಿಬಿಟ್ಟಿದೆ.

ಸಾಮಾನ್ಯ ವರ್ಗಾವಣೆಗೆ ರಾಜ್ಯ ಸರ್ಕಾರ 2001ರಲ್ಲಿ ಮಾರ್ಗ ಸೂಚಿಗಳನ್ನು ಪ್ರಕಟಿಸಿತ್ತು. ಅದರ ಪ್ರಕಾರ ‘ಎ’ ಮತ್ತು ‘ಬಿ’ ಗುಂಪಿನ ವೃಂದದಲ್ಲಿ ಒಟ್ಟು ಸಂಖ್ಯೆಯ ಶೇಕಡ 3ರಷ್ಟು ಮತ್ತು ‘ಸಿ’ ಮತ್ತು ‘ಡಿ’  ವೃಂದದಲ್ಲಿ ಶೇ 4.5ರಷ್ಟು ವರ್ಗಾವಣೆ ಮಾಡಬಹುದಾಗಿತ್ತು. ಇದನ್ನು ಕಳೆದ ವರ್ಷ ಬದಲಿಸಿ, ಒಟ್ಟು ಸಂಖ್ಯೆಯ ಶೇ 6ರಷ್ಟು ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಅಧಿಕಾರ ಪಡೆದುಕೊಳ್ಳಲಾಯಿತು. ವರ್ಗಾವಣೆಗೆ ಮೇ ಮತ್ತು ಜೂನ್‌ ತಿಂಗಳೆಂದು ಸಮಯ ಕೂಡ ನಿಗದಿಪಡಿಸಲಾಯಿತು. ನಿಗದಿತ ಅವಧಿ ಬಿಟ್ಟು, ಬೇರೆ ಸಂದರ್ಭಗಳಲ್ಲಿ ವರ್ಗಾವಣೆ ಮಾಡಲು ಮುಖ್ಯಮಂತ್ರಿಯವರಿಗೆ ವಿಶೇಷ ಅಧಿಕಾರ ಇದೆ. ಈ ಅಧಿಕಾರ ಇವತ್ತಿಗೂ ದುರುಪಯೋಗ ಆಗುತ್ತಿದೆ ಎಂಬ ಆರೋಪ ಇದೆ.

ನಿಯಮಗಳಲ್ಲಿ ಶೇ 6ರಷ್ಟು ವರ್ಗಾವಣೆ ಮಾಡಬಹುದು ಎಂದು ಹೇಳಿದ್ದರೂ ವಾಸ್ತವವಾಗಿ ವರ್ಷಕ್ಕೆ ಅದರ ಪ್ರಮಾಣ ಶೇ 20ರಷ್ಟು ದಾಟುತ್ತದೆ ಎನ್ನುತ್ತವೆ ಸಚಿವಾಲಯದ ಮೂಲಗಳು.

ಸಚಿವರು, ಶಾಸಕರು ಮುಂತಾದವರು ತಮಗೆ ಬೇಕಾದ ಅಧಿಕಾರಿ ಮತ್ತು ನೌಕರರ ವರ್ಗಾವಣೆಗೆ ಸತತವಾಗಿ ಪತ್ರಗಳನ್ನು ನೀಡುತ್ತಲೇ ಇರುತ್ತಾರೆ. ರಾಜಕೀಯ ಕಾರಣಕ್ಕೆ ಮುಖ್ಯಮಂತ್ರಿ ಕೂಡ ಇಲ್ಲ ಎನ್ನದೆ ವರ್ಗಾವಣೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇದು ಆಡಳಿತದ ಮೇಲೂ ಪರಿಣಾಮ ಬೀರುತ್ತಿದೆ ಎನ್ನುತ್ತವೆ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.