ADVERTISEMENT

ಅಂತಿಮ ರೂಪ ಪಡೆದ ಭಾರತದ ಪಡೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2011, 19:30 IST
Last Updated 17 ಜನವರಿ 2011, 19:30 IST

ಚೆನ್ನೈ (ಪಿಟಿಐ): ವಿಶ್ವಕಪ್ ಕ್ರಿಕೆಟ್‌ಗೆ ಭಾರತದ ಪಡೆಯು ಅಂತಿಮ ರೂಪ ಪಡೆದಿದೆ. ಮೂವತ್ತು ಸಂಭವನೀಯರ ಪಟ್ಟಿಯಲ್ಲಿನ ಆಟಗಾರನ್ನು ತೂಗಿ ನೋಡಿ, ಬಲವುಳ್ಳವರಿವರು  ಎಂದು ಲೆಕ್ಕಾಚಾರ ಮಾಡಿ ಹದಿನೈದರ ಪಟ್ಟಿಗೆ ಇಳಿಸಿದೆ ಕೃಷ್ಣಮಾಚಾರಿ ಶ್ರೀಕಾಂತ್ ನೇತೃತ್ವದ ಆಯ್ಕೆ ಸಮಿತಿ.

ಸೋಮವಾರ ಇಲ್ಲಿ ಸಭೆ ಸೇರಿದ್ದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರಾಷ್ಟ್ರೀಯ ಆಯ್ಕೆ ಸಮಿತಿಯು ಗಟ್ಟಿಗರ ತಂಡವನ್ನು ವಿಶ್ವಕಪ್‌ಗಾಗಿ ಕಟ್ಟಿದ್ದೇವೆಂದು ಹದಿನೈದು ಆಟಗಾರರ ಪಟ್ಟಿಯನ್ನು ಬಹಿರಂಗವಾಗಿ ತೆರೆದಿಟ್ಟಿತು. ಅದರಲ್ಲಿ ಕರ್ನಾಟಕಕ್ಕೆ ಸಂತಸ ನೀಡುವಂಥ ಹೆಸರೊಂದು ಇರಲಿಲ್ಲ. ಸಂಭವನೀಯರ ಪಟ್ಟಿಯಲ್ಲಿದ್ದ ವೇಗದ ಬೌಲರ್ ಆರ್. ವಿನಯ್‌ಕುಮಾರ್‌ಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುತ್ತದೆನ್ನುವ ಆಸೆಯು ಕಮರಿ ಹೋಯಿತು.

ಭಾರತದ ಅರ್ಧ ತಂಡವೇ ಕರ್ನಾಟಕವಾಗಿರುತ್ತಿದ್ದ ಕಾಲವೊಂದಿತ್ತು ಎಂದು ನೆನೆದು; ಈಗ ವಿಶ್ವಕಪ್ ಆಡುವ ದೇಶದ ಕ್ರಿಕೆಟ್ ತಂಡದಲ್ಲಿ ಕನ್ನಡ ನಾಡಿನವರು ಒಬ್ಬರೂ ಇಲ್ಲವೆಂದು ಕನ್ನಡಿಗರು ವೇದನೆ ಪಡಬೇಕಾಯಿತು. ತಂಡದಲ್ಲಿ ಸ್ಥಾನ ಪಡೆಯಲು ಬೌಲರ್‌ಗಳ ನಡುವೆ ಪ್ರಬಲ ಸ್ಪರ್ಧೆ ಇತ್ತು. ಆದ್ದರಿಂದ ವಿನಯ್‌ಕುಮಾರ್ ಕಡೆಗೆ ಆಯ್ಕೆಗಾರರು ತಿರುಗಿ ನೋಡಲಿಲ್ಲ. ಆದರೆ ಅಂತಿಮವಾಗಿ ತಂಡಕ್ಕೆ ಆಯ್ಕೆಯಾದ ಬೌಲರ್‌ಗಳು ಎಷ್ಟರ ಮಟ್ಟಿಗೆ ಕೋಟಿ ಕೋಟಿ ಕ್ರಿಕೆಟ್ ಪ್ರೇಮಿಗಳ ಹೃದಯ ಗೆಲ್ಲುತ್ತಾರೆಂದು ಕಾಯ್ದು ನೋಡಬೇಕು.

ದಕ್ಷಿಣ ಭಾರತದ ಇನ್ನೊಬ್ಬ ವೇಗಿ ಎಸ್.ಶ್ರೀಶಾಂತ್ ಅವರಿಗೂ ನಿರಾಸೆಯಾಗಿದೆ. ವಿಶ್ವಕಪ್‌ನಲ್ಲಿ ಆಡುವ ಬಲವಾದ ವಿಶ್ವಾಸ ಹೊಂದಿದ್ದ ಅವರ ಕನಸು ಕೂಡ ನುಚ್ಚುನೂರಾಗಿದೆ. ಹೀಗೆ ಭಾರಿ ನಿರೀಕ್ಷೆಯಿಂದ ಕಾಯ್ದಿದ್ದ ಕೆಲವು ಕ್ರಿಕೆಟಿಗರಿಗೆ ಆಯ್ಕೆಗಾರರು ಅಚ್ಚರಿ ನೀಡಿದ್ದಾರೆ. ಆಯ್ಕೆಯಾಗುವ ಅನುಮಾನದ ಸುಳಿಯಲ್ಲಿದ್ದವರನ್ನು ಅಂತಿಮ ಪಟ್ಟಿಗೆ ಸೇರಿಸಿಯೂ ಬೆರಗುಗೊಳಿಸಿದ್ದಾರೆ. ಹೀಗೆ ಆಯ್ಕೆಯಾದ ಇಬ್ಬರೆಂದರೆ ಆರ್.ಅಶ್ವಿನ್ ಮತ್ತು ಪಿಯೂಶ್ ಚಾವ್ಲಾ.

ರೋಹಿತ್ ಶರ್ಮ ಅವರಿಗೆ ಸ್ಥಾನ ಸಿಗುವುದೆನ್ನುವ ಲೆಕ್ಕಾಚಾರ ಮಾಡಲಾಗಿತ್ತು. ಆದರೆ ಆಯ್ಕೆಗಾರರು ಶರ್ಮ ತಂಡಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಿಲ್ಲ. ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾರ್ಥೀವ್ ಪಟೇಲ್ ಕೂಡ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಬಿಸಿಸಿಐ ಕಾರ್ಯದರ್ಶಿ ಹಾಗೂ ಆಯ್ಕೆ ಸಮಿತಿ ಸಂಚಾಲಕ ಎನ್. ಶ್ರೀನಿವಾಸನ್ ಅವರು ಸೋಮವಾರ ಪ್ರಕಟಿಸಿದ ಪಟ್ಟಿಯಲ್ಲಿ ಆರು ಪರಿಣತ ಬ್ಯಾಟ್ಸ್‌ಮನ್‌ಗಳು, ಅನುಭವಿ ಜಹೀರ್ ಖಾನ್ ಸೇರಿದಂತೆ ನಾಲ್ವರು ವೇಗಿಗಳು, ಹರಭಜನ್ ಸಿಂಗ್ ಅವರನ್ನೊಳಗೊಂಡಂತೆ ಮೂವರು ಸ್ಪಿನ್ನರ್‌ಗಳು ಹಾಗೂ ಯೂಸುಫ್ ಪಠಾಣ್ ರೂಪದಲ್ಲಿ ಒಬ್ಬ ಆಲ್‌ರೌಂಡರ್ ಕಾಣಿಸಿಕೊಂಡಿದ್ದಾರೆ.

ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತವು ಚಾಂಪಿಯನ್ ಪಟ್ಟ ಪಟೆಯುವ ನೆಚ್ಚಿನ ತಂಡವಾಗಿದೆ. ಬಾಂಗ್ಲಾದೇಶ ವಿರುದ್ಧ ಮೀರ್‌ಪುರದಲ್ಲಿ ಫೆಬ್ರುವರಿ 19ರಂದು ಉದ್ಘಾಟನಾ ಪಂದ್ಯದಲ್ಲಿ ಆಡಲಿರುವ ‘ದೋನಿ’ ಪಡೆಯು ‘ಸಮತೋಲನ’ದಿಂದ ಕೂಡಿದ್ದು ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಹಾಗೂ ಮಾಜಿ ಕ್ರಿಕೆಟಿಗ ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ಬಾಂಗ್ಲಾದೇಶ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಐರ್ಲೆಂಡ್ ಮತ್ತು ಹಾಲೆಂಡ್ ಜೊತೆಗೆ ‘ಬಿ’ ಗುಂಪಿನಲ್ಲಿರುವ ಭಾರತವು ವಿಶ್ವಕಪ್ ಹೊತ್ತಿಗೆ ಗಾಯಾಳುಗಳ ಸಮಸ್ಯೆಯಿಂದ ಮುಕ್ತವಾಗಬೇಕು. ಪ್ರಮುಖ ಆಟಗಾರರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಹಾಗೂ ಪ್ರವೀಣ್ ಕುಮಾರ್ ಗಾಯಾಳುಗಳ ಪಟ್ಟಿಯಲ್ಲಿದ್ದರೂ, ವಿಶ್ವಕಪ್ ಹೊತ್ತಿಗೆ ಚೇತರಿಸಿಕೊಂಡು ಆಡಲು ಸಜ್ಜಾಗುತ್ತಾರೆನ್ನುವ ಆಶಯವನ್ನು ಆಯ್ಕೆ ಸಮಿತಿ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.