ADVERTISEMENT

ಅಗ್ರ 10ರಲ್ಲಿ ಕಾಣಿಸಿಕೊಂಡ ಫೋರ್ಸ್ ಇಂಡಿಯಾ ಚಾಲಕರು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST
ಅಗ್ರ 10ರಲ್ಲಿ ಕಾಣಿಸಿಕೊಂಡ ಫೋರ್ಸ್ ಇಂಡಿಯಾ ಚಾಲಕರು
ಅಗ್ರ 10ರಲ್ಲಿ ಕಾಣಿಸಿಕೊಂಡ ಫೋರ್ಸ್ ಇಂಡಿಯಾ ಚಾಲಕರು   

ಗ್ರೇಟರ್ ನೋಯ್ಡಾ: ಬುದ್ಧ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ಶುಕ್ರವಾರ ಫಾರ್ಮುಲಾ-1 ಕಾರುಗಳು ಭಾರಿ ಸದ್ದು ಮಾಡುತ್ತಾ, ಮಿಂಚಿನ ವೇಗದಲ್ಲಿ ಸಂಚರಿಸಿದಾಗ ನೆರೆದಿದ್ದ ಪ್ರೇಕ್ಷಕರಿಗೆ ಅಚ್ಚರಿ. ಇಷ್ಟು ದಿನ ಕೇವಲ ಟಿವಿ ಮುಂದೆ ಕುಳಿತು ಫಾರ್ಮುಲಾ-1 ಕಾರುಗಳ ಅಬ್ಬರ ನೋಡುತ್ತಿದ್ದವರಿಗೆ ಪ್ರತ್ಯಕ್ಷವಾಗಿ ನೋಡಿದ ಸಂಭ್ರಮ. ಕೆಲವರು ಕಾರುಗಳ ಭಾರಿ ಸದ್ದಿಗೆ ಬೆದರಿ ಕಿವಿಗಳನ್ನು ಮುಚ್ಚಿಕೊಂಡರು.

ಭಾರತದ ನೆಲದಲ್ಲಿ ಇದೇ ಮೊದಲ ಬಾರಿಗೆ ಫಾರ್ಮುಲಾ-1 ಕಾರುಗಳು ಅಬ್ಬರ ತೋರಿವೆ. ಭಾನುವಾರ ನಡೆಯಲಿರುವ ಚೊಚ್ಚಲ ಇಂಡಿಯನ್ ಗ್ರ್ಯಾನ್ ಪ್ರಿ ರೇಸ್‌ಗೆ ಸಿದ್ಧತೆ ನಡೆಸುವ ನಿಟ್ಟಿನಲ್ಲಿ ಶುಕ್ರವಾರ ಎಲ್ಲ ತಂಡಗಳು ಬುದ್ಧ ಸರ್ಕ್ಯೂಟ್‌ನಲ್ಲಿ ಅಭ್ಯಾಸ ನಡೆಸಿದವು.

ಅಭ್ಯಾಸದ ಅವಧಿಯೇ ಪ್ರೇಕ್ಷಕರಿಗೆ ಸಾಕಷ್ಟು ರೋಮಾಂಚನ ಲಭಿಸಿದೆ. ಶನಿವಾರ ನಡೆಯುವ ಅರ್ಹತಾ ಸ್ಪರ್ಧೆ ಹಾಗೂ ಭಾನುವಾರ ನಡೆಯಲಿರುವ ಅಂತಿಮ ರೇಸ್‌ನಲ್ಲಿ ಇನ್ನಷ್ಟು ರೋಮಾಂಚನ ನಿರೀಕ್ಷಿಸಲಾಗಿದೆ.

ಹೊಸ ಟ್ರ್ಯಾಕ್‌ನಲ್ಲಿ ಭಾರಿ ದೂಳು ಇದ್ದ ಕಾರಣ ಚಾಲಕರು ಸಮಸ್ಯೆ ಅನುಭವಿಸಿದರು. ಹೆಚ್ಚಿನ ಎಲ್ಲ ಕಾರುಗಳೂ ಒಂದಲ್ಲ ಒಂದು ಸಂದರ್ಭ ಚಾಲಕನ ನಿಯಂತ್ರಣ ಕಳೆದುಕೊಂಡು ಟ್ರ್ಯಾಕ್‌ನ ಹೊರಭಾಗದಲ್ಲಿ ಸಂಚರಿಸಿದವು.
ಶುಕ್ರವಾರ ನಡೆದ `ಫ್ರೀ ಪ್ರಾಕ್ಟೀಸ್~ನಲ್ಲಿ ಫೆರಾರಿ ತಂಡದ ಫಿಲಿಪ್ ಮಸ್ಸಾ `ವೇಗ~ದ ಚಾಲಕ ಎನಿಸಿಕೊಂಡರು.

ಮಧ್ಯಾಹ್ನ ನಡೆದ ಎರಡನೇ ಅಭ್ಯಾಸದ ಅವಧಿಯಲ್ಲಿ ಅವರು 5.14 ಕಿ.ಮೀ ಉದ್ದದ ಲ್ಯಾಪ್‌ನ್ನು 1 ನಿಮಿಷ 25.706 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. ಬೆಳಗ್ಗಿನ ಅವಧಿಯಲ್ಲಿ ಮಸ್ಸಾ ಅವರ ಉತ್ತಮ ಸಮಯ 1:28.644 ಆಗಿತ್ತು. ಬುದ್ಧ ಟ್ರ್ಯಾಕ್ ಬಗ್ಗೆ ಮಸ್ಸಾ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. `ಈ ಟ್ರ್ಯಾಕ್ ಉತ್ತಮವಾಗಿದ್ದು. ವಿಶ್ವದ ಇತರ ಭಾಗಗಳಲ್ಲಿರವ ಟ್ರ್ಯಾಕ್‌ಗಳಿಂತ ಭಿನ್ನವಾಗಿದೆ~ ಎಂದಿದ್ದಾರೆ.

ಈಗಾಗಲೇ ಚಾಂಪಿಯನ್‌ಪಟ್ಟ ತಮ್ಮದಾಗಿಸಿಕೊಂಡಿರುವ ರೆಡ್‌ಬುಲ್ ತಂಡದ ಸೆಬಾಸ್ಟಿಯನ್ ವೆಟೆಲ್ ಅಭ್ಯಾಸದ ಅವಧಿಯಲ್ಲಿ ಎರಡನೇ ವೇಗದ ಚಾಲಕ (1:25.794) ಎನಿಸಿಕೊಂಡರು. ಫೆರಾರಿ ತಂಡದ ಫೆರ್ನಾಂಡೊ ಅಲೊನ್ಸೊ (1:25.930) ಮೂರನೇ ಸ್ಥಾನದಲ್ಲಿ ನಿಂತರು. ಬೆಳಗ್ಗಿನ ಅವಧಿಯಲ್ಲಿ ಕಾರಿನಲ್ಲಿ ತೊಂದರೆ ಕಾಣಿಸಿಕೊಂಡ ಕಾರಣ ಅವರು ಕೇವಲ ನಾಲ್ಕು ಲ್ಯಾಪ್‌ಗಳನ್ನು ಮಾತ್ರ ಪೂರೈಸಿದ್ದರು.

ಮೆಕ್‌ಲಾರೆನ್ ತಂಡದ ಲೂಯಿಸ್ ಹ್ಯಾಮಿಲ್ಟನ್ (1:26.454), ರೆಡ್‌ಬುಲ್‌ನ ಮಾರ್ಕ್ ವೆಬರ್ (1:26.500) ಮತ್ತು ಮೆಕ್‌ಲಾರೆನ್ ತಂಡದ ಜೆನ್ಸನ್ ಬಟನ್ (1:26.714) ಬಳಿಕದ ಸ್ಥಾನಗಳಲ್ಲಿ ನಿಂತರು.

ಆದರೆ ಲೂಯಿಸ್ ಹ್ಯಾಮಿಲ್ಟನ್ ಮತ್ತು ಸೌಬೆರ್ ತಂಡದ ಸೆರ್ಜಿಯೊ ಪೆರೆಜ್‌ಗೆ ಅಭ್ಯಾಸದ ವೇಳೆ ನಿಯಮ ಉಲ್ಲಂಘಿಸಿದ್ದಕ್ಕೆ ಪೆನಾಲ್ಟಿ ವಿಧಿಸಲಾಗಿದೆ. ಇವರು ಶನಿವಾರ ಅರ್ಹತಾ ಹಂತದಲ್ಲಿ ಪಡೆಯುವ ಸ್ಥಾನಕ್ಕಿಂತ ಮೂರು ಸ್ಥಾನಗಳಷ್ಟು ಹಿಂದಿನಿಂದ ಭಾನುವಾರ ರೇಸ್ ಆರಂಭಿಸಬೇಕಿದೆ.

ಫೋರ್ಸ್ ಇಂಡಿಯಾ ತಂಡದ ಇಬ್ಬರು ಚಾಲಕರೂ ಅಭ್ಯಾಸದಲ್ಲಿ ಪ್ರಭಾವಿ ಪ್ರದರ್ಶನ ನೀಡಿದರು. ಅಡ್ರಿಯಾನ್ ಸುಟಿಲ್ ಬೆಳಗ್ಗಿನ ಅವಧಿಯಲ್ಲಿ (1:28.705) ಎಂಟನೇ ಸ್ಥಾನದಲ್ಲಿದ್ದರೆ, ಮಧ್ಯಾಹ್ನ (1:27.316) ಏಳನೇ ಸ್ಥಾನ ತಮ್ಮದಾಗಿಸಿಕೊಂಡರು.

ಇದೇ ತಂಡದ ಪೌಲ್ ಡಿ ರೆಸ್ಟಾ (1:27.853) ಒಂಬತ್ತನೇ ಸ್ಥಾನ ಗಳಿಸಿದರು. ಕಣದಲ್ಲಿರುವ ಭಾರತದ ಏಕೈಕ ಚಾಲಕ, ಹಿಸ್ಪಾನಿಯ ತಂಡವನ್ನು ಪ್ರತಿನಿಧಿಸುತ್ತಿರುವ ನರೇನ್ ಕಾರ್ತಿಕೇಯನ್ (1:32.824) ಕೊನೆಯ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.