ADVERTISEMENT

ಅಣ್ಣಾಮಲೈ ತಂಡಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ಬೆಂಗಳೂರು: ಅಣ್ಣಾಮಲೈ ವಿ.ವಿ. ತಂಡದವರು ಜೈನ್ ವಿಶ್ವವಿದ್ಯಾಲಯ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ಕ್ರೀಡಾಕೂಟದ ಹಾಕಿ ಟೂರ್ನಿಯ ಪಂದ್ಯದಲ್ಲಿ ಗೆಲುವು ಸಾಧಿಸಿದರು.

  ಕರ್ನಾಟಕ ರಾಜ್ಯ ಹಾಕಿ ಸಂಸ್ಥೆಯ (ಕೆಎಸ್‌ಎಚ್‌ಎ) ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಅಣ್ಣಾಮಲೈ ತಂಡ 6-5ಗೋಲುಗಳಿಂದ ಬೆಂಗಳೂರಿನ ಸುರಾನಾ ಕಾಲೇಜು ತಂಡವನ್ನು ಟೈ ಬ್ರೇಕರ್‌ನಲ್ಲಿ ಸೋಲಿಸಿತು.

  ನಿಗದಿತ ವೇಳೆಗೆ ಪಂದ್ಯ 2-2ರಲ್ಲಿ ಡ್ರಾ ಆಗಿತ್ತು. ನಂತರ ಟೈ ಬ್ರೇಕರ್‌ನಲ್ಲಿ ಸುರಾನ ಕಾಲೇಜು ನಿರಾಸೆ ಅನುಭವಿಸಿತು.

  ವಿಜಯಿ ತಂಡದ ರಮೇಶಣ್ಣ 28ನೇ ನಿಮಿಷ ಹಾಗೂ ಮುದ್ದಪ್ಪ 43ನೇ ನಿಮಿಷದಲ್ಲಿ ಗೋಲು ಗಳಿಸಿದರು. ಇದಕ್ಕೆ ಪ್ರತಿಯಾಗಿ ಸುರಾನಾ ಕಾಲೇಜಿನ ಮಿಥುನ್ ಹಾಗೂ ಪಿ.ಆರ್. ಅಯ್ಯಪ್ಪ ಕ್ರಮವಾಗಿ 8 ಮತ್ತು 22ನೇ ನಿಮಿಷದಲ್ಲಿ ಗೋಲು ಕಲೆ ಹಾಕಿದ್ದರು.

ದಿನದ ಇನ್ನೊಂದು ಪಂದ್ಯದಲ್ಲಿ ಡಿ.ಬಿ ಜೈನ್ ತಂಡ 3-0ಗೋಲುಗಳಿಂದ ಶ್ರೀಲಂಕಾದ ರಾಯಲ್ ಕಾಲೇಜು ತಂಡವನ್ನು ಮಣಿಸಿತು. ವಿಜಯಿ ತಂಡದ ಆರ್ ರಾಜಕುಮಾರ್ 2ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು.

ಇದಕ್ಕೆ ತಕ್ಕ ಬೆಂಬಲ ನೀಡಿದ ಎಸ್. ಮೇಘನಾಥನ್ (36ನೇ ನಿಮಿಷ) ಹಾಗೂ ನೆಲ್ಸನ್ (47ನೇ ನಿ.) ಗೋಲು ಗಳಿಸಿದರು.

ಜೈನ್  ವಿ.ವಿ. ತಂಡ 5-0ರಲ್ಲಿ ಅಣ್ಣಾ ವಿ.ವಿ. ತಂಡವನ್ನು ಸೋಲಿಸಿತು. ಜೈನ್ ವಿ.ವಿ.ಯ ನರೇಶ್ (7 ಹಾಗೂ 23ನೇ ನಿ.), ರಾಕೇಶ್ (11ನೇ ನಿ), ಮೊಹಮ್ಮದ್ ನಯಿಮುದ್ದೀನ್ (37 ಹಾಗೂ 37ನೇ ನಿ) ಗೋಲು ತಂದಿಟ್ಟರು.

ಎಸ್‌ಬಿಎಂಜೆಸಿಗೆ ಗೆಲುವು: ಎಸ್‌ಬಿಎಂಜೆಸಿ ತಂಡದವರು ಟೇಬಲ್ ಟೆನಿಸ್ ಟೂರ್ನಿಯ `ಎ~ ಗುಂಪಿನ ಮಹಿಳೆಯರ ವಿಭಾಗದ ಪಂದ್ಯದಲ್ಲಿ ಗೆಲುವು ಪಡೆದರು. ಈ ತಂಡ 3-0ರಲ್ಲಿ ಎಸ್‌ಜೆಸಿಸಿ ತಂಡವನ್ನು ಮಣಿಸಿತು.

ಇದೇ ವಿಭಾಗದ ಇನ್ನೊಂದು ಪಂದ್ಯದಲ್ಲಿ ಸುರಾನಾ ಕಾಲೇಜ್ 3-0ರಲ್ಲಿ ಎಸ್‌ಆರ್‌ಎಂ ವಿ.ವಿ. ಎದುರು ಗೆಲುವು ಸಾಧಿಸಿತು.

ಸಿಎಂಎಸ್ ಜೈನ್ ಕಾಲೇಜಿಗೆ ನಿರಾಸೆ: ಸಿಎಂಎಸ್ ಜೈನ್ ಕಾಲೇಜು ತಂಡ ಟೇಬಲ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ `ಎ~ ಗುಂಪಿನ ಪಂದ್ಯದಲ್ಲಿ 1-3ರಲ್ಲಿ ಎಂಇಎಸ್ ಬೆಂಗಳೂರು ಎದುರು ಸೋಲು ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.