ADVERTISEMENT

ಅಥ್ಲೆಟಿಕ್ಸ್ ಜಗತ್ತು ತಲ್ಲಣ

ಉದ್ದೀಪನ ಮದ್ದು ಸೇವನೆ:

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 19:59 IST
Last Updated 15 ಜುಲೈ 2013, 19:59 IST

ಜಮೈಕಾ/ಕಿಂಗ್‌ಸ್ಟನ್ (ಐಎಎನ್‌ಎಸ್/ಸಿಎಂಸಿ): ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದ ಅಥ್ಲೀಟ್ ಅಸಾಫಾ ಪೊವೆಲ್ ಸೇರಿದಂತೆ ಕೆಲ ಖ್ಯಾತ ಅಥ್ಲೀಟ್‌ಗಳು ಉದ್ದೀಪನ ಮದ್ದು ಸೇವನೆ ಮಾಡಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ವಿಶ್ವ ಅಥ್ಲೆಟಿಕ್ಸ್ ಜಗತ್ತು ಆಘಾತಕ್ಕೆ ಒಳಗಾಗಿದೆ.

ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ಪದಕಗಳನ್ನು ಗೆದ್ದಿರುವ ಪೊವೆಲ್ 2008ರ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದರು. 2004ರ ಒಲಿಂಪಿಕ್ಸ್‌ನ 4ಷ100 ರಿಲೇಯಲ್ಲಿ ಚಿನ್ನ ಜಯಿಸಿದ್ದ ಜಮೈಕಾದ ಶೇರೊನ್ ಸಿಂಪ್ಸನ್, ಮಾಜಿ ವಿಶ್ವ ಚಾಂಪಿಯನ್ ಅಥ್ಲೀಟ್ ಅಮೆರಿಕದ ಟೈಸನ್ ಗೇ ಮದ್ದು ಸೇವನೆ ವಿವಾದದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಇವರು ಮದ್ದು ಸೇವನೆ ಮಾಡಿದ್ದನ್ನು ಜಮೈಕಾ ಉದ್ದೀಪನಾ ಮದ್ದು ತಡೆ ಘಟಕ (ಜೆಎಡಿಸಿಒ) ಖಚಿತಪಡಿಸಿದೆ. ಆದರೆ, ಮೂವರೂ ಅಥ್ಲೀಟ್‌ಗಳು ಇದನ್ನು ಅಲ್ಲಗೆಳೆದಿದ್ದಾರೆ.

`ಪೊವೆಲ್ ಸೇರಿದಂತೆ ಒಟ್ಟು ಐವರು ಜಮೈಕಾದ ಅಥ್ಲೀಟ್‌ಗಳು ಮದ್ದು ಸೇವನೆ ಮಾಡಿರುವುದು ಖಚಿತವಾಗಿದೆ. ಉಳಿದ ಅಥ್ಲೀಟ್‌ಗಳ  ಹೆಸರು ಬಹಿರಂಗಗೊಳಿಸಲು ಆಗದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಏನೂ ಇಲ್ಲ' ಎಂದು ಜೆಎಡಿಸಿಒ ಚೇರ್‌ಮನ್ ಹೆರ್ಬ್ ಎಲ್ಲಿಟ್ ಮಾಧ್ಯಮದವರಿಗೆ ತಿಳಿಸಿದರು.
ಜೂನ್ 20ರಿಂದ 23ರ ವರೆಗೆ ಕಿಂಗ್‌ಸ್ಟನ್‌ನಲ್ಲಿ ನಡೆದ ಜಮೈಕಾ ರಾಷ್ಟ್ರೀಯ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೆಟಿಕ್ಸ್‌ನಲ್ಲಿ ಮದ್ದು ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಪೊವೆಲ್, ಸಿಂಪ್ಸನ್ ಒಳಗೊಂಡಂತೆ ಇತರ ಐವರು ಅಥ್ಲೀಟ್‌ಗಳು ಪರೀಕ್ಷೆಗೆ ಒಳಗಾಗಿದ್ದರು. ಟೈಸನ್ ಉದ್ದೀಪನ ಮದ್ದು ಸೇವಿಸಿ ಸಿಕ್ಕಿ ಬಿದ್ದಿದ್ದು ಸಾಬೀತಾಗಿರುವ ಕಾರಣ ಮುಂದಿನ ತಿಂಗಳು ಮಾಸ್ಕೊದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಿಂದ ಈಗಾಗಲೇ ಹಿಂದೆ ಸರಿದಿದ್ದಾರೆ.

ಪೊವೆಲ್ ಹಾಗೂ ಸಿಂಪ್ಸನ್ ಅವರನ್ನು ಭಾನುವಾರ ಇಟಲಿಯ ಪೊಲೀಸರೂ ತನಿಖೆಗೆ ಒಳಪಡಿಸಿದ್ದರು. ಈ ಖ್ಯಾತ ಅಥ್ಲೀಟ್‌ಗಳ ಹೆಸರು ಮದ್ದು ಸೇವನೆಯ ವಿವಾದದ ಜೊತೆ ತಳಕು ಹಾಕಿಕೊಂಡಿರುವ ಕಾರಣ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ಹಿನ್ನಡೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.