ADVERTISEMENT

`ಅಧ್ಯಕ್ಷತೆ ವಹಿಸಿದರೆ ತಕ್ಕ ಪರಿಣಾಮ'

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2013, 19:59 IST
Last Updated 1 ಸೆಪ್ಟೆಂಬರ್ 2013, 19:59 IST

ಕೋಲ್ಕತ್ತ (ಐಎಎನ್‌ಎಸ್): ಎನ್. ಶ್ರೀನಿವಾಸನ್ ಸೆ. 29 ರಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದರೆ ಅವರು ಕಾನೂನಿನ ಪರಿಣಾಮ ಎದುರಿಸಬೇಕಾಗಬಹುದು ಎಂದು ಬಿಹಾರ ಕ್ರಿಕೆಟ್ ಸಂಸ್ಥೆ ಅಧಿಕಾರಿ ಆದಿತ್ಯ ವರ್ಮಾ ಹೇಳಿದ್ದಾರೆ.

`ನ್ಯಾಯಾಲಯದ ಅಂತಿಮ ತೀರ್ಪು ಹೊರಬೀಳುವವರೆಗೆ ಬಿಸಿಸಿಐನ ಯಾವುದೇ ಸಭೆಯ ನೇತೃತ್ವ ವಹಿಸುವುದಿಲ್ಲ ಎಂದು ಅವರು ಅಫಿದಾವಿತ್‌ನಲ್ಲಿ ತಿಳಿಸಿದ್ದಾರೆ. ಅವರು ಕಾನೂನಿಗಿಂತ ಮೇಲೆ ಇರುವ ವ್ಯಕ್ತಿ ಅಲ್ಲ. ಕಾನೂನು ಮುರಿಯುವ ಧೈರ್ಯ ತೋರಿದರೆ, ತಕ್ಕ ಪರಿಣಾಮವನ್ನು ಎದುರಿಸಲಿದ್ದಾರೆ' ಎಂದು ವರ್ಮಾ ತಿಳಿಸಿದ್ದಾರೆ.

ಐಪಿಎಲ್ ವಿವಾದಕ್ಕೆ ಸಂಬಂಧಿಸಿದಂತೆ ವರ್ಮಾ ಅವರು ಮುಂಬೈ ಹೈಕೋರ್ಟ್‌ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಿಂದಾಗಿ ಬಿಸಿಸಿಐಗೆ ಹಿನ್ನಡೆ ಉಂಟಾಗಿತ್ತು. ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದ ಕುರಿತು ತನಿಖೆ ನಡೆಸಲು ಬಿಸಿಸಿಐ ನೇಮಿಸಿದ್ದ ಆಯೋಗವು ಗುರುನಾಥ್ ಮೇಯಪ್ಪನ್ ಮತ್ತು ರಾಜ್ ಕುಂದ್ರಾ ಅವರಿಗೆ `ಕ್ಲೀನ್‌ಚಿಟ್' ನೀಡಿತ್ತು. ಈ ಕಾರಣ ಶ್ರೀನಿವಾಸನ್ ಮತ್ತೆ ಮಂಡಳಿಯ ಅಧ್ಯಕ್ಷರಾಗಲು ಸಿದ್ಧತೆ ನಡೆಸಿದ್ದರು.

ಆದರೆ ಇದೇ ಸಂದರ್ಭದಲ್ಲಿ ಆದಿತ್ಯ ವರ್ಮಾ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್ ಬಿಸಿಸಿಐ ನೇಮಿಸಿದ್ದ ತನಿಖಾ ಆಯೋಗವನ್ನು `ಅಸಾಂವಿಧಾನಿಕ ಹಾಗೂ ಕಾನೂನುಬಾಹಿರ' ಎಂದಿತ್ತು. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಬಿಸಿಸಿಐ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಇದರ ವಿಚಾರಣೆ ಸೆಪ್ಟೆಂಬರ್ 11 ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.