ADVERTISEMENT

ಅಫ್ಗಾನಿಸ್ತಾನದ ಮೊದಲ ಟೆಸ್ಟ್‌ ಭಾರತದಲ್ಲಿ

ಪಿಟಿಐ
Published 11 ಡಿಸೆಂಬರ್ 2017, 19:30 IST
Last Updated 11 ಡಿಸೆಂಬರ್ 2017, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಆರು ತಿಂಗಳ ಹಿಂದೆ ಟೆಸ್ಟ್ ಮಾನ್ಯತೆ ಪಡೆದ ಅಫ್ಗಾನಿಸ್ತಾನ ಕ್ರಿಕೆಟ್ ತಂಡ 2019–2020ರಲ್ಲಿ ಭಾರತದಲ್ಲಿ ಮೊದಲ ಟೆಸ್ಟ್ ಆಡಲಿದೆ. ಸೋಮವಾರ ಇಲ್ಲಿ ನಡೆದ ಬಿಸಿಸಿಐ ವಿಶೇಷ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಸಭೆಯ ನಂತರ ಈ ವಿಷಯ ತಿಳಿಸಿದ ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ‘ಅಫ್ಗಾನಿಸ್ತಾನ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ 2019ರಲ್ಲಿ ಆಡಬೇಕಾಗಿತ್ತು. ಆ ದೇಶದ ಜೊತೆ ಭಾರತ ಹಿಂದಿನಿಂದಲೇ ಉತ್ತಮ ಬಾಂಧವ್ಯ ಹೊಂದಿದೆ.

ಇದರ ಆಧಾರದಲ್ಲಿ ಮೊದಲ ಟೆಸ್ಟ್‌ಗೆ ನಾವೇ ಆತಿಥ್ಯ ವಹಿಸುವುದು ಒಳ್ಳೆಯದು ಎಂದು ನಿರ್ಣಯಿಸಲಾಗಿದೆ’ ಎಂದರು.

ADVERTISEMENT

ಜೂನ್‌ನಲ್ಲಿ ಅಫ್ಗಾನಿಸ್ತಾನ ಮತ್ತು ಐರ್ಲೆಂಡ್ ತಂಡಗಳು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಪೂರ್ಣ ಸದಸ್ಯತ್ವವನ್ನು ಪಡೆದುಕೊಂಡಿದ್ದವು. ಈ ಮೂಲಕ ಟೆಸ್ಟ್ ಆಡುವ 11 ಮತ್ತು 12ನೇ ರಾಷ್ಟ್ರಗಳಾಗಿ ಸೇರ್ಪಡೆಗೊಂಡಿದ್ದವು.

ಅಫ್ಗಾನಿಸ್ತಾನ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಅನೇಕ ಬಾರಿ ವಿವಿಧ ರೀತಿಯ ನೆರವು ನೀಡಿದೆ. ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಆ ರಾಷ್ಟ್ರದ ಕ್ರಿಕೆಟ್‌ ತಂಡದ ತವರಿನ ಪ‍ಂದ್ಯಗಳಿಗೂ ಆತಿಥ್ಯ ವಹಿಸಿತ್ತು. ರಶೀದ್ ಖಾನ್‌ ಮತ್ತು ಮಹಮ್ಮದ್ ನಬಿ ಅವರಿಗೆ ಐಪಿಎಲ್‌ನಲ್ಲಿ ಆಡಲು ಅವಕಾಶವನ್ನೂ ನೀಡಿತ್ತು.

ರಜಪೂತ್ ಸಂತಸ
ಅಫ್ಗಾನಿಸ್ತಾನದ ಮೊದಲ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಲು ಮುಂದಾಗಿರುವ ಬಿಸಿಸಿಐ ನಿರ್ಣಯಕ್ಕೆ ಆ ತಂಡದ ಮಾಜಿ ಕೋಚ್‌ ಲಾಲ್‌ಚಂದ್ ರಜಪೂತ್ ಸಂತಸ ವ್ಯಕ್ತಪಡಿಸಿದ್ದಾರೆ.

‘ಅಫ್ಗಾನಿಸ್ತಾನವು ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆಡಲಿದೆ ಎಂಬುದು ಖುಷಿಯ ವಿಷಯ. ಇದು ಆ ತಂಡಕ್ಕೆ ಎಲ್ಲ ಬಗೆಯಲ್ಲೂ ಬೆಳೆಯಲು ಸಹಕಾರಿಯಾಗಲಿದೆ’ ಎಂದು ಅವರು ಹೇಳಿದ್ದಾರೆ.

ನಾಲ್ಕು ವರ್ಷಗಳಲ್ಲಿ 81 ಪಂದ್ಯಗಳಿಗೆ ಆತಿಥ್ಯ
2019ರಿಂದ 2023ರ ವರೆಗೆ ಭಾರತ ವಿವಿಧ ಮಾದರಿಗಳ ಒಟ್ಟು 81 ಕ್ರಿಕೆಟ್ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಆದರೆ ವರ್ಷದಲ್ಲಿ ಒಬ್ಬ ಆಟಗಾರ ಆಡುವ ಪಂದ್ಯಗಳ ಸಂಖ್ಯೆಯನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ವಿಶೇಷ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ಭಾರತ ತಂಡದ ಭವಿಷ್ಯದ ಸರಣಿಗಳಲ್ಲಿ ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳೂ ಸೇರಿವೆ.

ಅಮಾನತು ಹಿಂದಕ್ಕೆ
ರಾಜಸ್ತಾನ ಕ್ರಿಕೆಟ್ ಸಂಸ್ಥೆಯ ಮೇಲಿನ ಅಮಾನತನ್ನು ವಾಪಸ್ ಪಡೆಯುವುದಕ್ಕೂ ನಿರ್ಣಯಿಸಲಾಗಿದೆ. ಐಪಿಲ್‌ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರು ತಂಡದ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಷರತ್ತಿನ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕ್ರಿಕೆಟ್ ಆಟಗಾರರನ್ನು ನಾಡಾ ಪರೀಕ್ಷೆಗೆ ಒಳಪಡಿಸುವುದು ಸರಿ ಅಲ್ಲ ಎಂಬ ನಿರ್ಧಾರಕ್ಕೆ ಬದ್ಧವಾಗಿರುವುದಕ್ಕೂ ಸಭೆಯಲ್ಲಿ ನಿರ್ಣಯಿಸಲಾಯಿತು.

ದಕ್ಷಿಣ ಆಫ್ರಿಕಾದಲ್ಲಿ ಅಭ್ಯಾಸ ಪಂದ್ಯ ಇಲ್ಲ
ಜವನರಿಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವ ಭಾರತ ತಂಡ ಅಲ್ಲಿ ಆಡಲು ಉದ್ದೇಶಿಸಿದ್ದ ಅಭ್ಯಾಸ ಪಂದ್ಯಗಳನ್ನು ರದ್ದುಗೊಳಿಸಲಾಗಿದೆ. ಇದಕ್ಕೆ ನಿಖರ ಕಾರಣ ನೀಡಲಿಲ್ಲ. ಈ ಸಂದರ್ಭದಲ್ಲಿ ಭಾರತ ತಂಡ ಅಭ್ಯಾಸದಲ್ಲಿ ಪಾಲ್ಗೊಳ್ಳಲು ಬಯಸಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.

‘ಯೂರೊಲಕ್ಸ್ ಬೊಲಂಡ್ ಪಾರ್ಕ್‌ನಲ್ಲಿ ಭಾರತ ತಂಡದ ಅಭ್ಯಾಸ ಪಂದ್ಯ ನಡೆಯಬೇಕಾಗಿತ್ತು. ಈ ಪಂದ್ಯ ಆಡುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ’ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಪ್ರಕಟಣೆ ತಿಳಿಸಿದೆ.

ಭಾರತದ ಮೊದಲ ಟೆಸ್ಟ್ ಜನವರಿ ಐದರಂದು ಕೇಪ್‌ಟೌನ್‌ನಲ್ಲಿ ಆರಂಭವಾಗಲಿದೆ. ಯುವ ವೇಗಿಗಳಾದ ಮಹಮ್ಮದ್ ಸಿರಾಜ್‌, ಆವೇಶ್ ಖಾನ್, ನವದೀಪ್ ಸಾಯ್ನಿ ಮತ್ತು ಬಾಸಿಲ್ ತಂಬಿ ಅವರನ್ನು ನೆಟ್‌ನಲ್ಲಿ ಬೌಲಿಂಗ್ ಮಾಡಲು ಭಾರತ ತಂಡ ಕರೆದುಕೊಂಡು ಹೋಗಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.