ADVERTISEMENT

ಅಭಿನವ್ ಮುಕುಂದ್ ಶತಕ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2011, 19:30 IST
Last Updated 5 ಆಗಸ್ಟ್ 2011, 19:30 IST
ಅಭಿನವ್ ಮುಕುಂದ್ ಶತಕ
ಅಭಿನವ್ ಮುಕುಂದ್ ಶತಕ   

ನಾರ್ತ್ ಹ್ಯಾಂಪ್ಟನ್: ಭುಜದ ಶಸ್ತ್ರ ಚಿಕಿತ್ಸೆಯಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ವೀರೇಂದ್ರ ಸೆಹ್ವಾಗ್ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಆದರೆ ಅಭ್ಯಾಸ ಪಂದ್ಯದಲ್ಲಿ ವೀರೂ ಗಳಿಸಿದ್ದು ಕೇವಲ 8 ರನ್. ಜೊತೆಗಾರ ಗೌತಮ್ ಗಂಭೀರ್ ಕೂಡ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ.

ನಾರ್ತ್ ಹ್ಯಾಂಪ್ಟನ್ ಎದುರು ಕೌಂಟಿ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಎರಡು ದಿನಗಳ ಅಭ್ಯಾಸ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆ 75 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 278 ರನ್ ಗಳಿಸಿತ್ತು.

ಅಭಿನವ್ ಮುಕುಂದ್ ಆಕರ್ಷಕ ಶತಕ ಗಳಿಸಿ ಗಮನ ಸೆಳೆದರು. 160 ಎಸೆತಗಳನ್ನು ಎದುರಿಸಿದ ಅವರು ಅಜೇಯ 113 ರನ್ ಗಳಿಸಿದರು. ಅವರ ಈ ಇನಿಂಗ್ಸ್‌ನಲ್ಲಿ 18 ಬೌಂಡರಿಗಳಿದ್ದವು. ಆದರೆ ಉಳಿದವರಿಗೆ ಅವಕಾಶ ಮಾಡಿಕೊಡಲು ಮುಕುಂದ್ ಪೆವಿಲಿಯನ್‌ಗೆ ಹಿಂತಿರುಗಿದರು.

ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್‌ಗೆ ಮುಂದಾಯಿತು. ಆದರೆ ಇನಿಂಗ್ಸ್ ಆರಂಭಿಸಿದ ಸೆಹ್ವಾಗ್ ಹಾಗೂ ಗಂಭೀರ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ತಂಡದ ಮೊತ್ತ 15 ರನ್‌ಗಳಿದ್ದಾಗ ಸೆಹ್ವಾಗ್ ವಿಕೆಟ್ ಒಪ್ಪಿಸಿದರು. ಅಷ್ಟರಲ್ಲಿ ಅವರು 25 ಎಸೆತ ಎದುರಿಸಿದ್ದರು. ಗಂಭೀರ್ ಕೂಡ ಅವರ ಹಾದಿ ಹಿಡಿದರು.

ಆದರೆ ಮುಕುಂದ್ ಹಾಗೂ ವಿ.ವಿ.ಎಸ್.ಲಕ್ಷ್ಮಣ್ ತಂಡಕ್ಕೆ ಆಸರೆಯಾದರು. ಇವರಿಬ್ಬರು ಮೂರನೇ ವಿಕೆಟ್‌ಗೆ 132 ರನ್ ಸೇರಿಸಿದರು. 70 ಎಸೆತ ಎದುರಿಸಿದ ಲಕ್ಷ್ಮಣ್ ಎಂಟು ಬೌಂಡರಿ ಸಮೇತ 49 ರನ್ ಗಳಿಸಿದರು.
 
ಅಭಿನವ್‌ಗೆ ಬಳಿಕ ಸುರೇಶ್ ರೈನಾ ಉತ್ತಮ ಸಾಥ್ ನೀಡಿದರು. ಆದರೆ ದೋನಿ ಕೇವಲ ಎರಡು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕ್ರೀಡಾಂಗಣಕ್ಕೆ ಆಗಮಿಸಿದ ಭಾರತೀಯ ಮೂಲದ ಪ್ರೇಕ್ಷಕರು ತಂಡವನ್ನು ಹುರಿದುಂಬಿಸಿದರು.

ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಹಾಗೂ ಪ್ರವೀಣ್ ಕುಮಾರ್ ಆಡುತ್ತಿಲ್ಲ. ಅವರಿಗೆ ವಿಶ್ರಾಂತಿ ನೀಡಲಾಗಿದೆ. ಈ ಪಂದ್ಯದಲ್ಲಿ ತಂಡವನ್ನು ಗಂಭೀರ್ ಮುನ್ನಡೆಸುತ್ತಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಎಡಗೈ ವೇಗಿ ಜಹೀರ್ ಖಾನ್ ಕೂಡ ಆಡುತ್ತಿದ್ದಾರೆ.

ಸ್ಕೋರ್ ವಿವರ:
ಭಾರತ: ಮೊದಲ ಇನಿಂಗ್ಸ್ 75 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 278

ಗೌತಮ್ ಗಂಭೀರ್ ಎಲ್‌ಬಿಬ್ಲ್ಯು ಬಿ ಡೇವಿಡ್ ವಿಲ್ಲಿ 18
ವೀರೇಂದ್ರ ಸೆಹ್ವಾಗ್ ಎಲ್‌ಬಿಡಬ್ಲ್ಯು ಬಿ ಡೇವ್ ಬರ್ಟನ್  08
ಅಭಿನವ್ ಮುಕುಂದ್ ಗಾಯಗೊಂಡು ನಿವೃತ್ತಿ  113
ವಿ.ವಿ.ಎಸ್.ಲಕ್ಷ್ಮಣ್ ಸಿ ನ್ಯೂಟನ್ ಬಿ ಲೀ ಡೆಗ್ಗೆಟ್  49
ಸುರೇಶ್ ರೈನಾ ಸಿ ಮರ್ಫಿ ಬಿ ಲ್ಯೂಕ್ ಇವಾನ್ಸ್  33
ಎಂ.ಎಸ್.ದೋನಿ ಸಿ ಮರ್ಫಿ ಬಿ ಲ್ಯೂಕ್ ಇವಾನ್ಸ್  02
ವೃದ್ಧಿಮಾನ್ ಸಹಾ ರನ್‌ಔಟ್ (ರಾಬ್ ವೈಟ್)  15
ಅಮಿತ್ ಮಿಶ್ರಾ ಬ್ಯಾಟಿಂಗ್  20
ಜಹೀರ್ ಖಾನ್ ಬ್ಯಾಟಿಂಗ್  06
ಇತರೆ (ಲೆಗ್‌ಬೈ-10, ವೈಡ್-3, ನೋಬಾಲ್-1)
 14
ವಿಕೆಟ್ ಪತನ: 1-15 (ಸೆಹ್ವಾಗ್; 6.6); 2-49 (ಗಂಭೀರ್; 19.1); 3-181 (ಲಕ್ಷ್ಮಣ್; 46.6); 4-231 (ದೋನಿ; 59.5); 5-237 (ರೈನಾ; 61.3); 6-269 (ಸಹಾ; 72.1).
ಬೌಲಿಂಗ್: ಡೇವ್ ಬರ್ಟನ್ 17-04-55-1, ಲ್ಯೂಕ್ ಇವಾನ್ಸ್ 19-2-60-2 (ನೋಬಾಲ್-1, ವೈಡ್ಸ್-2), ಡೇವಿಡ್ ವಿಲ್ಲಿ 10.5-1-51-1 (ವೈಡ್-1), ಲೀ ಡೆಗ್ಗೆಟ್ 19-03-52-1, ಪಾಲ್ ಬೆಸ್ಟ್ 9-0-50-0.
(ವಿವರ ಅಪೂರ್ಣ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.