ADVERTISEMENT

‘ಅಭಿಮಾನಿಗಳಲ್ಲಿ ವಿನಂತಿಸಿಕೊಳ್ಳಬೇಕಿಲ್ಲ’

ಕೋಚ್‌ ಸ್ಟೀಫನ್‌ ಕಾನ್‌ಸ್ಟೆಂಟೈನ್‌ ಅಭಿಪ್ರಾಯ

ಪಿಟಿಐ
Published 5 ಜೂನ್ 2018, 19:30 IST
Last Updated 5 ಜೂನ್ 2018, 19:30 IST
ಭಾರತ ಫುಟ್‌ಬಾಲ್‌ ತಂಡದ ಕೋಚ್‌ ಸ್ಟೀಫನ್‌ ಕಾನ್‌ಸ್ಟೆಂಟೈನ್‌
ಭಾರತ ಫುಟ್‌ಬಾಲ್‌ ತಂಡದ ಕೋಚ್‌ ಸ್ಟೀಫನ್‌ ಕಾನ್‌ಸ್ಟೆಂಟೈನ್‌   

ಮುಂಬೈ: ‘ನಾವು ಆಡುವ ಪಂದ್ಯಗಳನ್ನು ವೀಕ್ಷಿಸಲು ಅಭಿಮಾನಿಗಳಿಗಳಲ್ಲಿ ಮನವಿ ಮಾಡುವ ಅಗತ್ಯವಿಲ್ಲ’ ಎಂದು ಭಾರತ ಫುಟ್‌ಬಾಲ್‌ ತಂಡದ ಕೋಚ್‌ ಸ್ಟೀಫನ್‌ ಕಾನ್‌ಸ್ಟೆಂಟೈನ್‌ ಅಭಿಪ್ರಾಯಪಟ್ಟರು.

ಸೋಮವಾರ ಇಂಟರ್‌ಕಾಂಟಿನೆಂಟಲ್‌ ಫುಟ್‌ಬಾಲ್‌ ಕಪ್‌ ಟೂರ್ನಿಯಲ್ಲಿ ಕೀನ್ಯಾ ವಿರುದ್ಧ ನಡೆದ ಪಂದ್ಯದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಭಾರತ ತಂಡದ ನಾಯಕ ಸುನಿಲ್‌ ಚೆಟ್ರಿ ಅವರು ಕೀನ್ಯಾ ವಿರುದ್ಧದ ಪಂದ್ಯಕ್ಕೂ ಮೊದಲು ‘ನಾವು ಆಡುವ ಪಂದ್ಯಗಳನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದು ನಮ್ಮನ್ನು ಬೆಂಬಲಿಸಿ’ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಅವರು ಮನವಿ ಮಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗಿತ್ತು. ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಹಿರಿಯ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಅವರು ಚೆಟ್ರಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ADVERTISEMENT

ಈ ಕುರಿತು ಮಾತನಾಡಿದ ಅವರು, ‘ರಾಷ್ಟ್ರದ ತಂಡ ಆಡುವ ಪಂದ್ಯಗಳನ್ನು ವೀಕ್ಷಿಸಲು ಅಭಿಮಾನಿಗಳಿಗೆ ಕೇಳಬೇಕಿಲ್ಲ. ಕಳೆದ ಮೂರು ವರ್ಷಗಳಲ್ಲಿ ತಂಡವಾಗಿ ಸಾಕಷ್ಟು ಪ್ರಗತಿ ಹೊಂದಿದ್ದೇವೆ. ಅನೇಕ ಪಂದ್ಯಗಳಲ್ಲಿ ಗೆದ್ದಿದ್ದೇವೆ. ಈ ಪ್ರಗತಿಯ ಹಿನ್ನೆಲೆಯಲ್ಲಿ ಗಮನಿಸಿದರೆ, ನಿರೀಕ್ಷಿತ ಮಟ್ಟದಲ್ಲಿ ಜನರು ಕ್ರೀಡಾಂ ಗಣಕ್ಕೆ ಬರದಿರುವ ಸಂಗತಿ ಬೇಸರ ತರಿಸುತ್ತದೆ’ ಎಂದು ಸ್ಟೀಫನ್‌ ಹೇಳಿದರು.

‘ಆದರೆ, ಚೆಟ್ರಿ ಅವರ ಮನವಿಗೆ ಸಿಕ್ಕ ಪ್ರತಿಕ್ರಿಯೆ ಅಮೋಘವಾಗಿತ್ತು. ಕೀನ್ಯಾ ಎದುರಿನ ಪಂದ್ಯ ವೀಕ್ಷಣೆಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ನಮ್ಮ ಬೆಂಬಲಕ್ಕೆ ಬಂದ ಎಲ್ಲರಿಗೂ ವಿಶೇಷ ಧನ್ಯವಾದಗಳು. ಮುಂದಿನ ಎರಡು ಪಂದ್ಯಗಳನ್ನು ನೋಡಲು ಇದೇ ರೀತಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರುತ್ತಾರೆ ಎಂಬ ನಿರೀಕ್ಷೆಯಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.