ADVERTISEMENT

ಅಭ್ಯಾಸ ಪಂದ್ಯ: ಇಂಗ್ಲೆಂಡ್ ತಂಡಕ್ಕೆ ಭರ್ಜರಿ ಜಯ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 19:30 IST
Last Updated 11 ಅಕ್ಟೋಬರ್ 2011, 19:30 IST
ಅಭ್ಯಾಸ ಪಂದ್ಯ: ಇಂಗ್ಲೆಂಡ್ ತಂಡಕ್ಕೆ ಭರ್ಜರಿ ಜಯ
ಅಭ್ಯಾಸ ಪಂದ್ಯ: ಇಂಗ್ಲೆಂಡ್ ತಂಡಕ್ಕೆ ಭರ್ಜರಿ ಜಯ   

ಹೈದರಾಬಾದ್: ಮಂಗಳವಾರ ಸಂಜೆ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಯೊಂದಿಗೆ ಅಜೇಯ ಶತಕ ದಾಖಲಿಸಿದ ಜಾನಿ  ಬೈಸ್ಟೋ (ಅಜೇಯ 104; 53ಎಸೆತ, 6ಬೌಂಡರಿ, 8ಸಿಕ್ಸರ್) ಇಂಗ್ಲೆಂಡ್ ತಂಡವು ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಇಲೆವನ್ ವಿರುದ್ಧ 253 ರನ್‌ಗಳ ಭರ್ಜರಿ ಜಯ ಗಳಿಸಲು ಕಾರಣವಾದರು.

ರಾಜೀವಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಅಭ್ಯಾಸ ಪಂದ್ಯದಲ್ಲಿ ಎಚ್‌ಸಿಎ ತಂಡದ ವಿರುದ್ಧ ಇಂಗ್ಲೆಂಡ್ ತಂಡದ ಎಲ್ಲ ಬ್ಯಾಟ್ಸ್‌ಮನ್‌ಗಳೂ ಬ್ಯಾಟ್ ಝಳಪಿಸಿದರು. 50 ಓವರುಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 367 ರನ್ನುಗಳ ಬೃಹತ್ ಗುರಿಯನ್ನು ಎಚ್‌ಸಿಎ ಮುಂದೆ ಇಟ್ಟರು.
 
ನಂತರ ಗಾಯಕ್ಕೆ ಉಪ್ಪು ಸವರಿದಂತೆ ಸ್ಕಾಟ್ ಬೋರ್ಥವಿಕ್ (31ಕ್ಕೆ5) ಮತ್ತು ಸ್ಟುವರ್ಟ್ ಮೀಕರ್ (29ಕ್ಕೆ3) ಎಚ್‌ಸಿಎದ ಬ್ಯಾಟ್ಸ್‌ಮನ್‌ಗಳನ್ನು 114 ರನ್ನುಗಳ ಅಲ್ಪಮೊತ್ತಕ್ಕೆ ಆಲೌಟ್ ಮಾಡಿದರು.

ಟಾಸ್ ಗೆದ್ದ ಇಂಗ್ಲೆಂಡ್ ತಂಡದ ಆರಂಭವೂ ಉತ್ತಮವಾಗಿತ್ತು. ನಾಯಕ ಅಲಿಸ್ಟರ್ ಕುಕ್ (85; 74ಎಸೆತ, 11ಬೌಂಡರಿ, 1ಸಿಕ್ಸರ್) ಮತ್ತು ಕ್ರೇಗ್ ಕೀಸ್‌ವೆಟರ್ (71; 86ಎಸೆತ, 3ಬೌಂಡರಿ, 3ಸಿಕ್ಸರ್) ಇಬ್ಬರೂ ಮೊದಲ ವಿಕೆಟ್ ಜೊತೆಯಾಟದಲ್ಲಿ ಸೇರಿಸಿದ 159 ರನ್ನುಗಳು ಉತ್ತಮ ಅಡಿಪಾಯವಾದವು. 

ಐದನೇ ಕ್ರಮಾಂಕದಲ್ಲಿ ಬಂದ ಜಾನಿ ಅಕ್ಷರಶಃ ಬೌಲರ್‌ಗಳ ಎಲ್ಲ ಎಸೆತಗಳನ್ನೂ ಪುಡಿಗಟ್ಟಿದರು. 74 ನಿಮಿಷದಲ್ಲಿ ಭರ್ಜರಿ ಶತಕ ದಾಖಲಿಸಿ, ತಂಡಕ್ಕೆ ಬೃಹತ್ ಮೊತ್ತ ಪೇರಿಸಲು ನೆರವಾದರು.  ನಂತರ ಜೊನಾಥನ್ ಟ್ರಾಟ್ ಕೂಡ  (74; 68ಎಸೆತ, 6ಬೌಂಡರಿ) ಉತ್ತಮ ಕಾಣಿಕೆ ನೀಡಿದರು. ಎಚ್‌ಸಿಎದ ಮೇಧಿ ಹಸನ್ (63ಕ್ಕೆ3) ಒಬ್ಬರೇ ಯಶಸ್ವಿ ಬೌಲರ್ ಎನಿಸಿದರು.

ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್ ಇಲೆವೆನ್: 50 ಓವರ್‌ಗಳಲ್ಲಿ 4 ವಿಕೆಟ್‌ಗೆ 367 (ಅಲಸ್ಟರ್ ಕುಕ್ 85, ಕ್ರೇಗ್ ಕೀಸ್‌ವೆಟರ್ 71, ಜೊನಾಥನ್ ಟ್ರಾಟ್ 74, ಕೆವಿನ್ ಪೀಟರ್ಸನ್ 10, ಜೋನಾಥನ್ ಬೈಸ್ಟೋ ಅಜೇಯ 104, ಸಮಿತ್ ಪಟೇಲ್ 15, ಮೇಧಿ ಹಸನ್ 63ಕ್ಕೆ3); ಹೈದರಾಬಾದ್ ಸಿಎ ಇಲೆವೆನ್: 35.3 ಓವರ್‌ಗಳಲ್ಲಿ 114 (ಪಿಎ ರೆಡ್ಡಿ 37, ರವಿತೇಜಾ 27, ಖಲೀಲ್ 10, ಮೇದಿ ಹಸನ್ 13, ಸ್ಟುವರ್ಟ್ ಮೀಕರ್ 29ಕ್ಕೆ3, ಸ್ಕಾಟ್ ಬೋರ್ಥವಿಕ್ 31ಕ್ಕೆ5).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.