ADVERTISEMENT

ಅಮಾನತು ಶಿಕ್ಷೆಯಷ್ಟೇ ಸಾಲದು

​ಪ್ರಜಾವಾಣಿ ವಾರ್ತೆ
Published 16 ಮೇ 2012, 19:30 IST
Last Updated 16 ಮೇ 2012, 19:30 IST
ಅಮಾನತು ಶಿಕ್ಷೆಯಷ್ಟೇ ಸಾಲದು
ಅಮಾನತು ಶಿಕ್ಷೆಯಷ್ಟೇ ಸಾಲದು   

ನವದೆಹಲಿ (ಪಿಟಿಐ/ಐಎಎನ್‌ಎಸ್): ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಸಂಭ್ರಮದಲ್ಲಿ ಹುಳಿ ಹಿಂಡಿರುವ ಸ್ಪಾಟ್ ಫಿಕ್ಸಿಂಗ್ ಹಗರಣದ ಬಗ್ಗೆ ಕೇಂದ್ರ ಕ್ರೀಡಾ ಸಚಿವ ಅಜಯ್ ಮಾಕನ್ ಕಿಡಿಕಾರಿದ್ದಾರೆ.

ಅಪಾರ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳ ಮನಸ್ಸನ್ನು ಘಾಸಿಗೊಳಿಸಿರುವ ಈ ಪ್ರಕರಣಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಲಕ್ಷವೇ ಕಾರಣವೆಂದು ಬೇಸರ ವ್ಯಕ್ತಪಡಿಸುವ ಅವರು `ಆಟಗಾರರನ್ನು ಅಮಾನತು ಮಾಡಿದ್ದು ಸಾಕಾಗುವುದಿಲ್ಲ. ಅದಕ್ಕಿಂತ ಕಠಿಣ ಕ್ರಮಕ್ಕೆ ಕ್ರಿಕೆಟ್ ಮಂಡಳಿ ಮುಂದಾಗಬೇಕು~ ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

`ಬಿಸಿಸಿಐ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಬಾರದು. ಆರೋಪಿ ಆಟಗಾರರನ್ನು ಅಮಾನತು ಮಾಡಿದ್ದಾಗಿ ಹೇಳಿ ಸುಮ್ಮನಿರಲು ಸಾಧ್ಯವಿಲ್ಲ. ಅದು ಸಮಸ್ಯೆಯ ತಾಯಿ ಬೇರು ಹುಡುಕಿ ಅದಕ್ಕೆ ಕೊಡಲಿ ಪೆಟ್ಟು ನೀಡಬೇಕು~ ಎಂದರು.

ಹಣದ ಹೊಳೆ ಹರಿಯುವ ಐಪಿಎಲ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆದಿದ್ದು ಆಘಾತಕಾರಿ. ಇದು ಸುದ್ದಿವಾಹಿನಿ ನಡೆಸಿದ ಮಾರುವೇಷದ ಕಾರ್ಯಾಚರಣೆಯಿಂದ ಪತ್ತೆಯಾದ ದೊಡ್ಡ ಕಟುಸತ್ಯದ ಸಣ್ಣ ತುಣುಕು. ಟ್ವೆಂಟಿ-20 ಟೂರ್ನಿಯ ಒಡಲಾಳದಲ್ಲಿ ಹುದುಗಿರುವ ಇಂಥ ಇನ್ನೂ ಅನೇಕ ಮೋಸದ ಬೇರುಗಳನ್ನು ಕಿತ್ತುಹಾಕುವುದು ಅಗತ್ಯವೆಂದು ಅವರು ಅಭಿಪ್ರಾಯಟ್ಟರು.

ಟಿ.ಪಿ.ಸುಧೀಂದ್ರ ಹಾಗೂ ಮೋನಿಷ್ ಮಿಶ್ರಾ, ಅಮಿತ್ ಯಾದವ್,  ಶಲಭ್ ಶ್ರೀವಾಸ್ತವ ಹಾಗೂ ಅಭಿನವ್ ಬಾಲಿ (ಐಪಿಎಲ್‌ನಲ್ಲಿ ಆಡಿಲ್ಲ) ಅವರನ್ನು `ಸ್ಪಾಟ್ ಫಿಕ್ಸಿಂಗ್~ ಆರೋಪದ ಮೇಲೆ ಬಿಸಿಸಿಐ ಅಮಾನತುಗೊಳಿಸಿದೆ. ಆದರೆ ಇಷ್ಟು ಮಾತ್ರ ಪರಿಹಾರವಲ್ಲ ಎನ್ನುವುದು ಮಾಕನ್ ವಾದ.

ಈ ಪ್ರಕರಣದ ಬಿಸಿಯಲ್ಲಿಯೇ ಕ್ರೀಡಾ ಸಚಿವರು ಕ್ರಿಕೆಟ್ ಮಂಡಳಿಯು `ಮಾಹಿತಿ ಹಕ್ಕು ಕಾಯ್ದೆ~ (ಆರ್‌ಟಿಐ) ಅಡಿಯಲ್ಲಿ ಬರಬೇಕೆಂದು ಆಗ್ರಹಿಸಿದ್ದು, ಒಂದು ಕ್ರೀಡಾ ಫೆಡರೇಷನ್ ರೀತಿಯಲ್ಲಿ ಬಿಸಿಸಿಐ ಕೆಲಸ ಮಾಡುತ್ತಿದ್ದರೆ ಇಂಥ ದುರಂತಗಳನ್ನು ತಪ್ಪಿಸಬಹುದು ಎಂದು ಸಲಹೆ ಕೂಡ ನೀಡಿದ್ದಾರೆ.

ಬಿಸಿಸಿಐ ಛತ್ರಛಾಯೆಯಲ್ಲಿ ಇರುವ ಬದಲು ಐಪಿಎಲ್ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು ಎನ್ನುವ ಅಭಿಪ್ರಾಯಕ್ಕೆ ಒತ್ತು ನೀಡಿರುವ ಅವರು ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರು ಐಪಿಎಲ್ ಫ್ರಾಂಚೈಸಿಯಾದ ಚೆನ್ನೈ ಸೂಪರ್ ಕಿಂಗ್ಸ್ ಒಡೆಯರೂ ಆಗಿದ್ದಾರೆ ಎನ್ನುವ ಕಡೆಗೆ ಬೆರಳು ತೋರಿಸಿದ್ದಾರೆ.

`ಅವರು (ಬಿಸಿಸಿಐ) ಸರ್ಕಾರಕ್ಕೆ ತನ್ನ ಆರ್ಥಿಕ ವ್ಯವಹಾರಗಳ ವಿವರ ನೀಡುವುದಿಲ್ಲ. ಆದರೆ ಆರ್‌ಟಿಐ ವ್ಯಾಪ್ತಿಗಾದರೂ ಬರುವ ಮೂಲಕ ವಿಶ್ವಾಸಾರ್ಹತೆ ಹೆಚ್ಚಿಸಿಕೊಳ್ಳಬೇಕು~  ಎಂದು ಆಶಿಸಿದ್ದಾರೆ.

ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ ತಡೆ ಘಟಕದ ಕಾರ್ಯಕ್ಷಮತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮಾಕನ್ `ಸ್ಪಾಟ್ ಫಿಕ್ಸಿಂಗ್ ಬಲವಾಗಿ ಹರಡಿಕೊಂಡಿರುವ ಪಿಡುಗು. ಅದಕ್ಕೆ ಬಿಸಿಸಿಐ ಕೂಡ ಹೊಣೆ. ಅದು ಇನ್ನಾದರೂ ಕಠಿಣ ಕ್ರಮ ಕೈಗೊಂಡು ಮುಂದೆ ಇಂಥ ಘಟನೆಗಳು ನಡೆಯದಂತೆ ನಿಗ ಇಡಲು ಸೂಕ್ತ ಯೋಜನೆ ರೂಪಿಸಿಕೊಳ್ಳಬೇಕು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.