ಮೈಸೂರು: ಅಂಬಾ ವಿಲಾಸ್ ಅರಮನೆಯ ಉತ್ತರ ದ್ವಾರದ ಮುಂದೆ ಸೋಮವಾರ ಸಂಜೆ ಎಂದಿನಂತಿರಲಿಲ್ಲ. ರುಂ..ರುಂ.. ಎನ್ನುವ ಕಾರು ಮತ್ತು ಬೈಕುಗಳ ಸದ್ದು ಅರಮನೆಯ ಗೋಪುರಗಳನ್ನು ದಾಟಿ ಮುಗಿಲು ಮುಟ್ಟುತ್ತಿತ್ತು.
ಇದೇ ಪ್ರಥಮ ಬಾರಿಗೆ ಮೈಸೂರಿನಿಂದ ಆರಂಭವಾದ ಮಾರುತಿ ಸುಜುಕಿ ದಕ್ಷಿಣ್ ಡೇರ್ ರ‌್ಯಾಲಿಯ ನಾಲ್ಕನೇ ಆವೃತ್ತಿಯಲ್ಲಿ ಭಾಗವಹಿಸಿದ್ದ 100 ಕಾರುಗಳು ಮತ್ತು 20 ಬೈಕ್‌ಗಳ ಭರಾಟೆ ಇದು. ಏಪ್ರಿಲ್ 14ರಂದು ಬೆಂಗಳೂರಿನಲ್ಲಿ ಮುಕ್ತಾಯವಾಗಲಿರುವ ಈ ರ‌್ಯಾಲಿಗೆ ಚಲನಚಿತ್ರತಾರೆ ಪ್ರಣಿತಾ ಸೋಮವಾರ ಸಂಜೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಸ್ಪರ್ಧಿಗಳು ಪ್ರಶಸ್ತಿಯ ಬೆನ್ನತ್ತಿ ನಾಗಾಲೋಟ ಆರಂಭಿಸಲಿದ್ದಾರೆ.
ಕಳೆದ ತಿಂಗಳಷ್ಟೇ ನ್ಯೂಜಿಲೆಂಡ್‌ನಲ್ಲಿ ಅಂತರರಾಷ್ಟ್ರೀಯ ರ‌್ಯಾಲಿಯಲ್ಲಿ ಮೂರನೇ ಸ್ಥಾನ ಪಡೆದು ಬಂದಿರುವ ಗೌರವ್ ಗಿಲ್ ಅವರು ನೆವಿಗೇಟರ್ ಮೂಸಾ ಅವರೊಂದಿಗೆ ಕಣಕ್ಕಿಳಿದಿದ್ದಾರೆ. ಕಳೆದ ಬಾರಿಗೆ ದಕ್ಷಿಣ್ ಡೇರ್ ರ‌್ಯಾಲಿಯ ವಿಜೇತರಾದ ಬೆಂಗಳೂರಿನ ದಂಪತಿ ಸತೀಶ್ ಮತ್ತು ಸವೇರಾ ಈ ಬಾರಿಯೂ ಪಾರುಪತ್ಯ ಮೆರೆಯುವ ಹುಮ್ಮಸ್ಸಿನಲ್ಲಿದ್ದಾರೆ.
`ಮೈಸೂರಿನ ತಾರೆ~ ಲೋಹಿತ್ ವಿ ಅರಸ್ ಈ ಬಾರಿ ಥಾಯ್ಲೆಂಡ್‌ನ ನೇವಿಗೇಟರ್ ಚುಪಾಂಗ್ ಚೈ ವ್ಯಾನ್ ಅವರೊಂದಿಗೆ ಕಣಕ್ಕಿಳಿದಿದ್ದಾರೆ. ತಮ್ಮ ಮಹಿಂದ್ರಾ ಎಕ್ಸ್‌ಯುವಿ 500 ವಾಹನದಲ್ಲಿ ಮುನ್ನುಗ್ಗಲಿದ್ದಾರೆ. ಸಮಯ, ವೇಗ ಮತ್ತು ಅಂತರ (ಟಿಎಸ್‌ಡಿ) ಹಾಗೂ ಸ್ಟೇಜ್ ರೇಸ್ ಮಾದರಿಗಳಲ್ಲಿ ಈ ರ‌್ಯಾಲಿ ನಡೆಯಲಿದೆ.
ಒಟ್ಟು ಎರಡು ಸಾವಿರ ಕಿಲೋಮೀಟರ್ ಅಂತರದ ರ‌್ಯಾಲಿಯು 21 ಹಂತಗಳಲ್ಲಿ ನಡೆಯಲಿದೆ. ಪ್ರತಿದಿನವೂ ಸರಾಸರಿ 400 ಕಿಲೋಮೀಟರ್ ಅಂತರವನ್ನು ಸ್ಪರ್ಧಿಗಳು ಕ್ರಮಿಸಲಿದ್ದಾರೆ.
`ಇದೇ ಮೊದಲ ಬಾರಿಗೆ ಮೈಸೂರಿಗೆ ಬಂದಿದ್ದೇನೆ. ನ್ಯೂಜಿಲೆಂಡ್ ರೇಸ್‌ಗೂ ಈ ರೇಸ್‌ಗೂ ಬಹಳ ವ್ಯತ್ಯಾಸವಿದೆ. ಆದರೆ, ಒಳ್ಳೆಯ ಪ್ರದರ್ಶನದ ಮೂಲಕವೇ ಜನರ ಮೆಚ್ಚುಗೆ ಗಳಿಸುತ್ತೇನೆ. ಪ್ರತಿಯೊಂದು ರ‌್ಯಾಲಿಯೂ ನನಗೆ ಹೊಸ ಸವಾಲು~ ಎಂದು ಮುಗುಳ್ನಗೆ ಬೀರಿದ ಗೌರವ್ ಗಿಲ್ ತಮ್ಮ ಮಹೀಂದ್ರಾ ಅಚೀವರ್ ಅನ್ನು ಮುನ್ನುಗಿಸಿದರು.
ಉದ್ಘಾಟನೆ ಕಾರ್ಯಕ್ರಮದಲ್ಲಿ ರ‌್ಯಾಲಿಯ ಉಸ್ತುವಾರಿ ಅಧಿಕಾರಿ ಜಯದಾಸ್ ಮೆನನ್ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.