ADVERTISEMENT

ಅಲ್ಪ ಮೊತ್ತಕ್ಕೆ ಕುಸಿದ ಆಸ್ಟ್ರೇಲಿಯಾ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2010, 10:15 IST
Last Updated 27 ಡಿಸೆಂಬರ್ 2010, 10:15 IST
ಅಲ್ಪ ಮೊತ್ತಕ್ಕೆ ಕುಸಿದ ಆಸ್ಟ್ರೇಲಿಯಾ
ಅಲ್ಪ ಮೊತ್ತಕ್ಕೆ ಕುಸಿದ ಆಸ್ಟ್ರೇಲಿಯಾ   

ಆಯಷಸ್ ಕ್ರಿಕೆಟ್: ಮಿಂಚಿದ ಆಯಂಡರ್‌ಸನ್, ಟ್ರೆಮ್ಲೆಟ್; ಇಂಗ್ಲೆಂಡ್‌ಗೆ ಇನಿಂಗ್ಸ್ ಮುನ್ನಡೆ
ಮೆಲ್ಬರ್ನ್ (ಎಪಿ):
ಜೇಮ್ಸ್ ಆಯಂಡರ್‌ಸನ್ (44ಕ್ಕೆ 4) ಮತ್ತು ಕ್ರಿಸ್ ಟ್ರೆಮ್ಲೆಟ್ (26ಕ್ಕೆ 4) ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಆಸ್ಟ್ರೇಲಿಯಾ ತಂಡ ಆಯಷಸ್ ಕ್ರಿಕೆಟ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಕೇವಲ 98 ರನ್‌ಗಳಿಗೆ ಪತನಗೊಂಡಿದೆ.ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರದ ಆಟದ ಅಂತ್ಯಕ್ಕೆ ಇಂಗ್ಲೆಂಡ್ ತನ್ನ ಮೊದಲ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 157 ರನ್ ಗಳಿಸಿದೆ. ಈ ಮೂಲಕ ಪ್ರವಾಸಿ ತಂಡ 59 ರನ್‌ಗಳ ಮುನ್ನಡೆ ಗಳಿಸಿದ್ದು ಮೊದಲ ದಿನವೇ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ.

ಆಯಂಡ್ರ್ಯೂ ಸ್ಟ್ರಾಸ್ (64) ಮತ್ತು ಅಲಿಸ್ಟರ್ ಕುಕ್ (80) ಅವರು ಇಂಗ್ಲೆಂಡ್‌ಗೆ ಭರ್ಜರಿ ಆರಂಭ ನೀಡಿದ್ದು, ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ಇದಕ್ಕೂ ಮೊದಲು ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಆಯಂಡ್ರ್ಯೂ ಸ್ಟ್ರಾಸ್ ಆತಿಥೇಯರನ್ನು ಬ್ಯಾಟಿಂಗ್‌ಗೆ ಕಳುಹಿಸಿದರು. ಜೇಮ್ಸ್ ಆಯಂಡರ್‌ಸನ್ ಮತ್ತು ಟ್ರೆಮ್ಲೆಟ್ ಅವರು ನಾಯಕನ ನಿರ್ಧಾರ ಸರಿ ಎಂಬುದನ್ನು ತೋರಿಸಿಕೊಟ್ಟರು.

‘ಬಾಕ್ಸಿಂಗ್ ಡೇ’ ಟೆಸ್ಟ್‌ನ ಮೊದಲ ದಿನದಾಟ ವೀಕ್ಷಿಸಲು 84 ಸಾವಿರ ಮಂದಿ ನೆರೆದಿದ್ದರು. ದೊಡ್ಡ ಸಂಖ್ಯೆಯ ಪ್ರೇಕ್ಷಕರ ಮುಂದೆ ಅಲ್ಪ ಮೊತ್ತಕ್ಕೆ ಅಲೌಟ್ ಆಗುವ ದುರ್ಗತಿ ರಿಕಿ ಪಾಂಟಿಂಗ್ ಬಳಗಕ್ಕೆ ಒದಗಿತು. ಮೆಲ್ಬರ್ನ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಆಸೀಸ್ ಗಳಿಸುವ ಕನಿಷ್ಠ ಮೊತ್ತ ಇದಾಗಿದೆ.

ಆಯಂಡರ್‌ಸನ್ ಮತ್ತು ಟ್ರೆಮ್ಲೆಟ್ ಅವರ ನಿಖರ ಲೈನ್ ಹಾಗೂ ಲೆಂಗ್ತ್‌ನ್ನು ಅಂದಾಜಿಸಲು ಆಸೀಸ್ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಎಲ್ಲ 10 ಆಟಗಾರರು ವಿಕೆಟ್ ಹಿಂದುಗಡೆ ಕ್ಯಾಚಿತ್ತು ನಿರ್ಗಮಿಸಿದರು. ವಿಕೆಟ್ ಕೀಪರ್ ಮ್ಯಾಟ್ ಪ್ರಿಯೊರ್ ಆರು ಕ್ಯಾಚ್ ಪಡೆದರು. ಇತರ ನಾಲ್ಕು ಕ್ಯಾಚ್‌ಗಳು ಸ್ಲಿಪ್ ಹಾಗೂ ಗಲ್ಲಿ ಕ್ಷೇತ್ರದ ಫೀಲ್ಡರ್‌ಗಳ ಕೈಸೇರಿದವು.


ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಟ್ರೆಮ್ಲೆಟ್ ಅವರು ಶೇನ್ ವ್ಯಾಟ್ಸನ್ ವಿಕೆಟ್ ಪಡೆದು ಆಸೀಸ್ ಪತನಕ್ಕೆ ಚಾಲನೆ ನೀಡಿದರು. ಫಿಲಿಪ್ ಹ್ಯೂಸ್ (16) ಮತ್ತು ರಿಕಿ ಪಾಂಟಿಂಗ್ (10) ಎರಡನೇ ವಿಕೆಟ್‌ಗೆ ಸೇರಿಸಿದ 22 ರನ್‌ಗಳು ಅಸೀಸ್ ಪರ ದಾಖಲಾದ ಉತ್ತಮ ಜೊತೆಯಾಟ. 20 ರನ್ ಗಳಿಸಿದ ಮೈಕಲ್ ಕ್ಲಾರ್ಕ್ ಆಸೀಸ್ ತಂಡದ ‘ಗರಿಷ್ಠ ಸ್ಕೋರರ್’ ಎನಿಸಿದರು. ಐದು ಪಂದ್ಯಗಳ ಆ್ಯಷಸ್ ಟೆಸ್ಟ್ ಸರಣಿ ಇದೀಗ 1-1 ರಲ್ಲಿ ಸಮಬಲದಲ್ಲಿದೆ.

ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 42.5 ಓವರ್‌ಗಳಲ್ಲಿ 98 (ಮೈಕಲ್ ಕ್ಲಾರ್ಕ್ 20, ಫಿಲಿಪ್ ಹ್ಯೂಸ್ 16, ಜೇಮ್ಸ್ ಆಯಂಡರ್‌ಸನ್ 44ಕ್ಕೆ 4, ಕ್ರಿಸ್ ಟ್ರೆಮ್ಲೆಟ್ 26ಕ್ಕೆ 4, ಟಿಮ್ ಬ್ರೆಸ್ನನ್ 25ಕ್ಕೆ 2).ಇಂಗ್ಲೆಂಡ್: ಮೊದಲ ಇನಿಂಗ್ಸ್ 47 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 157 (ಆ್ಯಂಡ್ರ್ಯೂ ಸ್ಟ್ರಾಸ್ ಬ್ಯಾಟಿಂಗ್ 64, ಅಲಿಸ್ಟರ್ ಕುಕ್ ಬ್ಯಾಟಿಂಗ್ 80).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.