ADVERTISEMENT

ಆಘಾತದಿಂದ ಇಂಗ್ಲೆಂಡ್ ಹೊರಬರುವುದೇ?

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2011, 19:30 IST
Last Updated 5 ಮಾರ್ಚ್ 2011, 19:30 IST
ಆಘಾತದಿಂದ ಇಂಗ್ಲೆಂಡ್ ಹೊರಬರುವುದೇ?
ಆಘಾತದಿಂದ ಇಂಗ್ಲೆಂಡ್ ಹೊರಬರುವುದೇ?   

ಚೆನ್ನೈ: ಹೋದ ಮಾನವನ್ನು ಹಿಂಪಡೆಯುವುದು ಅಷ್ಟು ಸುಲಭವಲ್ಲ. ಯಶಸ್ಸು ಯಶಸ್ಸನ್ನು ಹಿಂಬಾಲಿಸುತ್ತಿರುತ್ತದೆ. ಆದರೆ ಒಮ್ಮೆ ಎಡವಿ ಬಿದ್ದರೆ ಆ ಕಹಿ ನೆನಪುಗಳು ಇರುವೆಯಂತೆ ಮೈಮುತ್ತಿಕೊಳ್ಳುತ್ತಿರುತ್ತವೆ. ದುರ್ಬಲ ತಂಡ ಹಾಗೂ ಕ್ರಿಕೆಟ್ ಶಿಶು ಎನಿಸಿಕೊಂಡಿರುವ ಐರ್ಲೆಂಡ್ ಎದುರು ಸೋಲು ಕಂಡಿರುವ ಇಂಗ್ಲೆಂಡ್ ಪರಿಸ್ಥಿತಿ ಈಗ ಅಧೋಗತಿ. ವಿಶ್ವಕಪ್ ಕ್ರಿಕೆಟ್ ಚಾಂಪಿಯನ್‌ಷಿಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾನುವಾರ ನಡೆಯಲಿರುವ ಪಂದ್ಯಕ್ಕೆ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುವಾಗ ಇಂಗ್ಲಿಷ್ ಆಟಗಾರರು ಅಷ್ಟೊಂದು ಉತ್ಸುಕರಾಗಿರಲಿಲ್ಲ. ಐರ್ಲೆಂಡ್ ನೀಡಿದ ಶಾಕ್‌ನಿಂದ ಹೊರಬರದ ಅವರನ್ನು ತಮಿಳರ ನಾಡಿನ ಉರಿ ಬಿಸಿಲು ಮತ್ತಷ್ಟು ಹೈರಾಣಾಗಿಸಿತ್ತು.

ವಿಶ್ವಕಪ್ ಇತಿಹಾಸದಲ್ಲಿ ಶಾಕ್ ಫಲಿತಾಂಶಗಳಲ್ಲಿ ಒಂದು ಎನಿಸಿರುವ ಐರ್ಲೆಂಡ್ ವಿರುದ್ಧದ ಸೋಲನ್ನು ಮರೆಯಲು ನಾಯಕ ಆ್ಯಂಡ್ರ್ಯೂ ಸ್ಟ್ರಾಸ್‌ಗೆ ಸಾಧ್ಯವಾಗುತ್ತಿಲ್ಲ. ಒಂಬತ್ತು ತಿಂಗಳ ಹಿಂದೆ ಟ್ವೆಂಟಿ-20 ವಿಶ್ವಕಪ್ ಗೆದ್ದ ತಂಡವೇ ಇದು ಎಂಬ ಅನುಮಾನವನ್ನು ಈ ಆಘಾತ ಸೃಷ್ಟಿಸಿದೆ. ಇಂಗ್ಲೆಂಡ್ ತಂಡದ ಅಭಿಮಾನಿಗಳು ಆ ಸಾಧನೆಯನ್ನಾದರೂ ಮರೆತಾರು, ಆದರೆ ಐರ್ಲೆಂಡ್ ವಿರುದ್ಧದ ಸೋಲನ್ನು ಮರೆಯಲಾರರು!

ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಇಂಗ್ಲೆಂಡ್ ಪಾಲಿಗೆ ಒಂದು ಸಿಹಿ ಸುದ್ದಿ ಇದೆ. ಏಕೆಂದರೆ ದಕ್ಷಿಣ ಆಫ್ರಿಕಾ ಎದುರಿನ ಕೊನೆಯ ಎಂಟು ಮುಖಾಮುಖಿಯಲ್ಲಿ ಏಳು ಬಾರಿ ಗೆಲುವು ಲಭಿಸಿದೆ. ಆದರೆ ಈ ಮಾತನ್ನು ಹರಿಣಗಳ ಪಡೆಯ ನಾಯಕ ಗ್ರೇಮ್ ಸ್ಮಿತ್ ಒಪ್ಪುವುದಿಲ್ಲ. ಪ್ರತಿ ಪಂದ್ಯ ಹೊಸದಾಗಿ ಆರಂಭವಾದಾಗ ಗೆಲುವಿನ ಸಾಧ್ಯತೆ 50:50 ಎನ್ನುತ್ತಾರೆ. ವಿಶೇಷವೆಂದರೆ ಪ್ರೋಟಿಯಸ್ ಬಲ ಸದಾ ವೇಗ.

ಆದರೆ ದೆಹಲಿಯಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಸ್ಪಿನ್ ಬಲದಿಂದಲೇ ಗೆಲುವು ಸಾಧಿಸಿದ್ದು ಅಚ್ಚರಿ ಮೂಡಿಸುವಂಥದ್ದು. ಮೊದಲ ಓವರ್ ಬೌಲ್ ಮಾಡಿದ್ದು ಜೋಹಾನ್ ಬೋಥಾ. ಇದುವರೆಗೆ ಈ ಚಾಂಪಿಯನ್‌ಷಿಪ್‌ನಲ್ಲಿ ಸ್ಮಿತ್ ಹೊರತುಪಡಿಸಿ ಮೂರು ಮಂದಿ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲು ಯಾವುದೇ ತಂಡದ ನಾಯಕರು ಪ್ರಯತ್ನಿಸಿಲ್ಲ. ಸ್ವದೇಶದ ಪಿಚ್‌ಗಳಲ್ಲಿ ಆಡುತ್ತಿರುವ ದೋನಿ ಕೂಡ!

ಈ ವಿಷಯಕ್ಕೆ ಸ್ಮಿತ್ ಅವರ ಬೆನ್ನು ತಟ್ಟಲೇಬೇಕು. ವಿಶ್ವಕಪ್‌ನಲ್ಲಿ ಯಶಸ್ಸು ಕಾಣುತ್ತಿರುವ ಸ್ಪಿನ್ನರ್‌ಗಳಲ್ಲಿ ಇಮ್ರಾನ್ ತಾಹಿರ್ ಕೂಡ ಒಬ್ಬರು. ಪಾಕ್ ಮೂಲದ ಈ ಲೆಗ್ ಸ್ಪಿನ್ನರ್ ಎರಡು ಪಂದ್ಯಗಳಲ್ಲಿ ಏಳು ವಿಕೆಟ್ ಕಬಳಿಸಿದ್ದಾರೆ. ಇದು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸವಾಲಾಗಿ ಪರಿಣಮಿಸಿದೆ. 22 ವರ್ಷ ವಯಸ್ಸಿಗೇ ನಾಯಕನಾಗಿ ನೇಮಕಗೊಂಡಿದ್ದ ಸ್ಮಿತ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ತಮ್ಮ ಸಾರಥ್ಯದಲ್ಲಿ ಆಡಿದ ಕೊನೆಯ 21 ಪಂದ್ಯಗಳಲ್ಲಿ ಸೋಲು ಕಂಡಿದ್ದು ಕೇವಲ ನಾಲ್ಕು ಬಾರಿ. ಭಾನುವಾರದ ಪಂದ್ಯ ಗೆದ್ದರೆ ದಕ್ಷಿಣ ಆಫ್ರಿಕಾದ ಕ್ವಾರ್ಟರ್ ಫೈನಲ್ ಸ್ಥಾನ ಬಹುತೇಕ ಖಚಿತ. ಹರಿಣಗಳ ಪಡೆ ಕೊನೆಯ ಎರಡೂ ಪಂದ್ಯದಲ್ಲಿ ಪಾರಮ್ಯ ಮೆರೆದಿದೆ.

 ಇದು ‘ಬಿ’ ಗುಂಪಿನಲ್ಲಿ ಈ ತಂಡಕ್ಕೆ ಸದ್ಯ ಅಗ್ರಸ್ಥಾನ ತಂದುಕೊಟ್ಟಿದೆ. ಹಾಲೆಂಡ್ ಎದುರು 231 ರನ್‌ಗಳಿಂದ ಗೆದ್ದಿದ್ದನ್ನು ಮರೆಯುವಂತಿಲ್ಲ. ಅದರಲ್ಲೂ ಎಬಿ ಡಿವಿಲಿಯರ್ಸ್ ಆಡಿದ ಎರಡೂ ಪಂದ್ಯಗಳಲ್ಲಿ ಶತಕ ಗಳಿಸಿದ್ದಾರೆ. ಹಾಶೀಮ್ ಆಮ್ಲಾ, ಜೀನ್ ಪಾಲ್ ಡುಮಿನಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ನಾಯಕ ಸ್ಮಿತ್ ಕೈಯಲ್ಲಿ ಸಾಕಷ್ಟು ಆಯ್ಕೆಗಳಿವೆ. ಹಾಗಾಗಿ ಇದು ಇಂಗ್ಲೆಂಡ್ ತಂಡದ ಆಟಗಾರರ ನಿದ್ದೆಗೆಡಿಸಿದೆ.

ಚೆಪಾಕ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ಇದುವರೆಗೆ ಏಕದಿನ ಪಂದ್ಯ ಆಡಿಲ್ಲ. ಪಿಚ್ ಹಾಗೂ ವಾತಾವರಣದ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲ. ಇದನ್ನು ಸದುಪಯೋಗಪಡಿಸಿಕೊಳ್ಳೋಣ ಎಂದರೆ ಇಂಗ್ಲೆಂಡ್ ತಂಡದ ಬೌಲಿಂಗ್ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲ. ಆಡಿದ ಮೂರು ಪಂದ್ಯಗಳಲ್ಲೂ ಎದುರಾಳಿ ತಂಡಗಳು ದೊಡ್ಡ ಮೊತ್ತ ಗಳಿಸಿರುವುದೇ ಅದಕ್ಕೆ ಸಾಕ್ಷಿ. ಜೊತೆಗೆ ಫೀಲ್ಡಿಂಗ್ ಸಮಸ್ಯೆಯೂ ಕಾಡುತ್ತಿದೆ.

ಪೀಟರ್ಸನ್, ಸ್ವಾನ್, ಕಾಲಿಂಗ್‌ವುಡ್ ಗಾಯದಿಂದ ಪೂರ್ಣವಾಗಿ ಸುಧಾರಿಸಿಕೊಂಡಿಲ್ಲ. ಹಾಗಾಗಿ ಇಂಗ್ಲೆಂಡ್ ತಂಡದ ಕ್ವಾರ್ಟರ್ ಫೈನಲ್ ಹಾದಿ ಅಷ್ಟೊಂದು ಸುಗಮವಾಗಿಲ್ಲ. ಆದರೆ ‘ಚೋಕರ್ಸ್‌’ ಎಂಬ ಹಣೆಪಟ್ಟಿ ದಕ್ಷಿಣ ಆಫ್ರಿಕಾ ತಂಡದ ಪಾಲಿಗೆ ದುಃಸ್ವಪ್ನವಾಗಿ ಕಾಡುತ್ತಿದೆ. ಇದು ಸ್ಮಿತ್‌ಗೆ ಕೂಡ ಗೊತ್ತಿದೆ. ಮೊದಲ ವಿಶ್ವಕಪ್ ಎತ್ತಿ ಹಿಡಿಯಲು ಪಣ ತೊಟ್ಟಿರುವ ಉಭಯ ತಂಡಗಳ ನಾಯಕರಿಗೆ ಈ ಪಂದ್ಯ ಮತ್ತೊಂದು ಅಗ್ನಿ ಪರೀಕ್ಷೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.