ADVERTISEMENT

ಆಟಗಾರರನ್ನು ಪರಿಚಯಿಸಿದ `ಬೆಂಗಾ ಬೀಟ್ಸ್'

ಚೊಚ್ಚಲ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್

​ಪ್ರಜಾವಾಣಿ ವಾರ್ತೆ
Published 30 ಜುಲೈ 2013, 19:59 IST
Last Updated 30 ಜುಲೈ 2013, 19:59 IST
ಬೆಂಗಳೂರಿನಲ್ಲಿ ಮಂಗಳವಾರ `ಬೆಂಗಾ ಬೀಟ್ಸ್' ಆಟಗಾರರನ್ನು ಪರಿಚಯಿಸಿಲಾಯಿತು. ಎಡದಿಂದ; ಅಪರ್ಣಾ ಬಾಲನ್, ಆದಿತ್ಯ ಪ್ರಕಾಶ್, ಅಕ್ಷಯ್ ದವಾಲ್ಕರ್,  ಅರವಿಂದ್ ಭಟ್, ಪಿ.ಕಶ್ಯಪ್ ಹಾಗೂ ಡೇನಿಯಲ್ ಫರಿದ್	 -ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಮಂಗಳವಾರ `ಬೆಂಗಾ ಬೀಟ್ಸ್' ಆಟಗಾರರನ್ನು ಪರಿಚಯಿಸಿಲಾಯಿತು. ಎಡದಿಂದ; ಅಪರ್ಣಾ ಬಾಲನ್, ಆದಿತ್ಯ ಪ್ರಕಾಶ್, ಅಕ್ಷಯ್ ದವಾಲ್ಕರ್, ಅರವಿಂದ್ ಭಟ್, ಪಿ.ಕಶ್ಯಪ್ ಹಾಗೂ ಡೇನಿಯಲ್ ಫರಿದ್ -ಪ್ರಜಾವಾಣಿ ಚಿತ್ರ   

ಬೆಂಗಳೂರು: ಸಾಕಷ್ಟು ಕುತೂಹಲ ಮೂಡಿಸಿರುವ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ಟೂರ್ನಿಗೆ ಬೆಂಗಾ   ಬೀಟ್ಸ್ ತಂಡ ಭರದಿಂದ ಸಿದ್ಧತೆ ನಡೆಸಿದೆ. ಐಪಿಎಲ್ ಮಾದರಿಯಲ್ಲಿ ರೂಪಿಸಲಾಗಿರುವ ಚೊಚ್ಚಲ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲು ಎದುರು ನೋಡುತ್ತಿದೆ.

ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಬೆಂಗಾ ಬೀಟ್ಸ್ ಫ್ರಾಂಚೈಸ್, ತಂಡದ ಪ್ರಮುಖ ಆಟಗಾರರನ್ನು ಪರಿಚಯಿಸಿತು. ಈ ವೇಳೆ ಮಾತನಾಡಿದ ತಂಡದ ಐಕಾನ್ ಆಟಗಾರ ಪಿ. ಕಶ್ಯಪ್, `ತಂಡದಲ್ಲಿ ನುರಿತ ಕೋಚ್ ಜೊತೆಗೆ ಉತ್ತಮ ಅಂತರರಾಷ್ಟ್ರೀಯ ಆಟಗಾರರಿದ್ದಾರೆ. ಲೀಗ್ ಟೂರ್ನಿ ಉದಯೋನ್ಮುಖ ಆಟಗಾರರಿಗೆ ವೇದಿಕೆಯಾಗುವ ಜೊತೆಗೆ ಹಣಕಾಸಿನ ಸಹಾಯವೂ ಸಿಗುತ್ತದೆ' ಎಂದು ನುಡಿದರು.

`ಬೆಂಗಳೂರು ನನಗೆ ತವರಿದ್ದಂತೆ. ಈ ಮೂರು ವರ್ಷ ನಾನು ಬೆಂಗಳೂರಿನಲ್ಲಿದ್ದೆ. ಕೋಚ್ ವಿಮಲ್ ಕುಮಾರ್ ಹಾಗೂ ಹಲವು ಉತ್ತಮ ಸ್ನೇಹಿತರಿದ್ದಾರೆ. ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿರುವುದು ಖುಷಿ ತಂದಿದೆ' ಎಂದ ಕಶ್ಯಪ್ `ವಿಶ್ವ ಚಾಂಪಿಯನ್‌ಷಿಪ್‌ಗಾಗಿ ಐದು ವಾರಗಳಿಂದ ಅಭ್ಯಾಸ ನಡೆಸುತ್ತಿದ್ದೇನೆ' ಎಂದಿದ್ದಾರೆ.

ತಂಡದ ಕೋಚ್ ವಿಮಲ್ ಕುಮಾರ್ ಮಾತನಾಡಿ, `ಕಶ್ಯಪ್, ಹು ಯೂನ್, ಕಾರಸ್ಟೇನ್ ಮೊಗೆನ್‌ಸೆನ್ ಅವರಂತಹ ಶ್ರೇಷ್ಠ ಆಟಗಾರರಿದ್ದು ತಂಡ ಸಮತೋಲನದಿಂದ ಕೂಡಿದೆ' ಎಂದು ನುಡಿದರು. `ಬಿಡ್ಡಿಂಗ್ ಪ್ರಕ್ರಿಯೆಯ ಏಳುಬೀಳುಗಳಿಂದಾಗಿ ಐಕಾನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅವರನ್ನು ತಂಡದಲ್ಲಿ ಹೊಂದುವುದು ಸಾಧ್ಯವಾಗಲಿಲ್ಲ' ಎಂದು ಪ್ರಶ್ನೆಯೊಂದಕ್ಕೆ ವಿಮಲ್ ಉತ್ತರಿಸಿದರು.

ಇನ್ನು, `ಬೆಂಗಳೂರು ತಂಡದಲ್ಲೇ ಆಡುತ್ತಿರುವುದು ಸಂತಸ ತಂದಿದೆ. ಉತ್ತಮ ಪ್ರದರ್ಶನ ತೋರುವ ನಿರೀಕ್ಷೆ ಇದೆ' ಎಂದು ರಾಜ್ಯದ ಆಟಗಾರರಾದ ಅರವಿಂದ್ ಭಟ್ ಹಾಗೂ ಆದಿತ್ಯ ಪ್ರಕಾಶ್ `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.