ಬೆಂಗಳೂರು: `ಭಾರತ ಕ್ರಿಕೆಟ್ ತಂಡದ ಸೋಲಿಗೆ ಆಟಗಾರರು ಆಯಾಸಗೊಂಡಿರುವುದು ಕೂಡ ಒಂದು ಕಾರಣ. ದಣಿವು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅದು ಪ್ರದರ್ಶನ ಮಟ್ಟದಲ್ಲಿ ಕುಸಿತಕ್ಕೆ ಕಾರಣವಾಗುತ್ತದೆ~ ಎಂದು ಕ್ರೀಡಾ ಮನಃಶಾಸ್ತ್ರ ತಜ್ಞೆ ಡಾ.ಚೈತನ್ಯಾ ಶ್ರೀಧರ್ ನುಡಿದಿದ್ದಾರೆ.
`ಆದರೆ ಭಾರತ ತಂಡದ ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಆಯಾಸವೊಂದೇ ಕಾರಣ ಎಂದು ಹೇಳಲಾಗದು. ಇಂಗ್ಲೆಂಡ್‌ನ ವಾತಾವರಣ, ಅಲ್ಲಿನ ಪರಿಸ್ಥಿತಿ, ಆಟಗಾರರು ಗಾಯಗೊಂಡಿರುವುದು ಕೂಡ ಕಳಪೆ ಪ್ರದರ್ಶನಕ್ಕೆ ಕಾರಣ~ ಎಂದು ಬೆಂಗಳೂರಿನ ಚೈತನ್ಯಾ `ಪ್ರಜಾವಾಣಿ~ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
ಭಾರತದ ಖ್ಯಾತ `ಕ್ರೀಡಾ ಮನಃಶಾಸ್ತ್ರ ತಜ್ಞೆ~ ಎನಿಸಿಕೊಂಡಿರುವ ಚೈತನ್ಯಾ ಏಳು ವರ್ಷಗಳಿಂದ ರಾಷ್ಟ್ರ ಮಟ್ಟದ ಕ್ರೀಡಾಪಟುಗಳು ಹಾಗೂ ತಂಡಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
`ಕ್ರೀಡೆಯಲ್ಲಿ ದೈಹಿಕ ಸಾಮರ್ಥ್ಯದಷ್ಟೇ ಮಾನಸಿಕವಾಗಿ ಸಮರ್ಥರಾಗಿರುವುದು ತುಂಬಾ ಮುಖ್ಯ. ಯಾವುದೇ ಸಂದರ್ಭದಲ್ಲೂ ನಕಾರಾತ್ಮಕವಾಗಿ ಯೋಚನೆ ಮಾಡಬಾರದು. ಜೊತೆಗೆ ಕ್ರೀಡೆಯಲ್ಲಿ ಎದುರಾಳಿ ಆಟಗಾರ ಏನು ಮಾಡುತ್ತಾನೆ ಎಂಬುದು ಮುಖ್ಯವಲ್ಲ; ಬದಲಾಗಿ ನಾವು ಯಾವ ರೀತಿ ಆ ಸನ್ನಿವೇಶಕ್ಕೆ ಸ್ಪಂದಿಸುತ್ತೇವೆ ಎಂಬುದು ಮುಖ್ಯ~ ಎಂದು ಅವರು ವಿವರಿಸಿದರು.
ಚೈತನ್ಯಾ ಈಗ ಜೈನ್ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಬೆಂಗಳೂರು ವಿವಿಯಿಂದ ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಅವರು ವೆಸ್ಟರ್ನ್ ಆಸ್ಟ್ರೇಲಿಯಾ ವಿವಿಯಲ್ಲಿ ಡಾಕ್ಟರೇಟ್ ಪದವಿ ಕೂಡ ಪಡೆದಿದ್ದಾರೆ.
ಭಾರತ ಹಾಕಿ ಆಟಗಾರರ ಮಾನಸಿಕ ಸಾಮರ್ಥ್ಯ ಹೆಚ್ಚಿಸಲು ಸಲಹೆಗಾರರಾಗಿ ನೇಮಕವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಗುರುವಾರ ತಂಡದ ಕೋಚ್ ಮೈಕಲ್ ನಾಬ್ಸ್ ಜೊತೆ ಮತ್ತೊವ್ಮೆು ಸಮಾಲೋಚನೆ ನಡೆಸಲಿದ್ದೇನೆ. ನಂತರ ಪ್ರತಿ ಆಟಗಾರರು ಹಾಗೂ ತಂಡದ ಜೊತೆ ಮಾತನಾಡಿ ಯೋಜನೆ ರೂಪಿಸುತ್ತೇನೆ~ ಎಂದು ಹೇಳಿದ್ದಾರೆ.
ಚೈತನ್ಯಾ 2003ರಲ್ಲಿ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಕೂಡ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.
ಪುರುಷರ ಹಾಕಿ ತಂಡಕ್ಕೆ ಸಲಹೆ ನೀಡಲಿರುವ ಮನಃಶಾಸ್ತ್ರ ತಜ್ಞೆ
ನವದೆಹಲಿ (ಪಿಟಿಐ): ಖ್ಯಾತ ಕ್ರೀಡಾ ಮನಃಶಾಸ್ತ್ರ ತಜ್ಞೆ ಬೆಂಗಳೂರಿನ ಡಾ.ಚೈತನ್ಯಾ ಶ್ರೀಧರ್ ಅವರನ್ನು ಹಾಕಿ ಆಟಗಾರರ ಮಾನಸಿಕ ಸಾಮರ್ಥ್ಯ ಹೆಚ್ಚಿಸಲು ಭಾರತ ತಂಡದ ಸಲಹೆಗಾರರನ್ನಾಗಿ ನೇಮಿಸಲು `ಹಾಕಿ ಇಂಡಿಯಾ~ ಮುಂದಾಗಿದೆ.
ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ದಕ್ಷಿಣ ಕೇಂದ್ರದಲ್ಲಿ ನಡೆಯುತ್ತಿರುವ ಹಾಕಿ ಶಿಬಿರದಲ್ಲಿ ಪಾಲ್ಗೊಂಡಿರುವ ಆಟಗಾರರಿಗೆ ಚೈತನ್ಯಾ ಮಾರ್ಗದರ್ಶನ ನೀಡಲಿದ್ದಾರೆ. ಈ ಸಂಬಂಧ `ಹಾಕಿ ಇಂಡಿಯಾ~ದಿಂದ ಅಧಿಕೃತ ನಿರ್ಧಾರ ಹೊರಬೀಳುವುದೊಂದೇ ಬಾಕಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.