ADVERTISEMENT

ಆಟದ ಅವಧಿಯಲ್ಲಿ 10 ನಿಮಿಷ ಕಡಿತ

ಹಾಕಿ: ಸೆಪ್ಟೆಂಬರ್‌ 1ರಿಂದ ಹೊಸ ನಿಯಮ ಜಾರಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 19:30 IST
Last Updated 20 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ): ಅಂತರರಾಷ್ಟ್ರೀಯ ಹಾಕಿ ಸಂಸ್ಥೆ (ಎಫ್‌ಐಎಚ್‌) ಹಾಕಿ ಕ್ರೀಡೆಯ  ನಿಯಮದಲ್ಲಿ ಕೆಲವು ಬದಲಾವಣೆ ತಂದಿದ್ದು, ಆಟದ ಅವಧಿಯನ್ನು 70 ನಿಮಿಷದಿಂದ 60ನಿಮಿಷಗಳಿಗೆ ಇಳಿಸಲಾಗಿದೆ. ಈ ನಿಯಮವು ಸೆಪ್ಟೆಂಬರ್‌ 1 ರಿಂದ ಕಾರ್ಯರೂಪಕ್ಕೆ ಬರಲಿದೆ.

ಲುಸಾನ್‌ನಲ್ಲಿ ಗುರುವಾರ ನಡೆದ ಎಫ್‌ಐಎಚ್‌ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.  ಈ ಬದಲಾವಣೆಯು  ಆಟದ ವೇಗ ಹಾಗೂ ರೋಚಕತೆಯನ್ನು ಹೆಚ್ಚಿಸುವುದಕ್ಕೆ ಸಹಕಾರಿಯಾಗಲಿದೆ ಎಂದು ಸಭೆ ಅಭಿಪ್ರಾಯಪಟ್ಟಿದೆ.

‘ಬ್ಯಾಸ್ಕೆಟ್‌ಬಾಲ್‌, ಅಮೆರಿಕ ಫುಟ್‌ಬಾಲ್‌ ಮತ್ತು ನೆಟ್‌ಬಾಲ್‌ ಸೇರಿದಂತೆ ಹಲವು ಕ್ರೀಡೆಗಳ ನಿಯಮಗಳಲ್ಲಿ ಈಗಾಗಲೇ ಸಾಕಷ್ಟು ಬದಲಾವಣೆ ಯಾಗಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಹಾಕಿ ಯಲ್ಲಿ ಯೂ ನಾಲ್ಕು ಕ್ವಾರ್ಟರ್‌ ಅವಧಿಯನ್ನು ಅಳವಡಿಸುವ ನಿರ್ಧಾರವನ್ನು ಕೈಗೊಳ್ಳಲಾಯಿತು’ ಎಂದು ಎಫ್‌ಐಎಚ್‌ ತನ್ನ ಪ್ರಕಟಣೆಯಲ್ಲಿ ಹೇಳಿದೆ.

‘ಮುಂಬರುವ ರಿಯೊ ಒಲಿಂಪಿಕ್ಸ್‌, ಚಾಂಪಿಯನ್ಸ್‌ ಟ್ರೋಫಿ, ವಿಶ್ವ ಲೀಗ್‌ನ ಹಂತ–2,   ಸೆಮಿಫೈನಲ್‌ ಮತ್ತು ಫೈನಲ್‌  ಹಾಗೂ ಒಲಿಂಪಿಕ್ಸ್‌ನ ಅರ್ಹತಾ ಸುತ್ತಿನ ಟೂರ್ನಿಗೆ ಅನ್ವಯವಾಗಲಿದೆ. ಆದರೆ ಮೇ.31ರಿಂದ ಜೂನ್‌ 15ರವರೆಗೆ ಹಾಲೆಂಡ್‌ನ ಹೇಗ್‌ನಲ್ಲಿ ನಡೆಯುವ  ವಿಶ್ವಕಪ್‌ಗೆ  ಅನ್ವಯವಾಗುವುದಿಲ್ಲ’ ಎಂದು  ತಿಳಿಸಲಾಗಿದೆ.

ಹಳೆಯ ನಿಯಮದ ಪ್ರಕಾರ  ಮೊದಲ ಹಾಗೂ ದ್ವಿತೀಯಾರ್ಧದ ಅವಧಿಯು ತಲಾ 35 ನಿಮಿಷಗಳಿಂದ ಕೂಡಿತ್ತು. ಆದರೆ ಈಗ ಪ್ರತಿ ಪಂದ್ಯವೂ 15 ನಿಮಿಷಗಳ ನಾಲ್ಕು ಕ್ವಾರ್ಟರ್‌ ಅವಧಿಯನ್ನು ಹೊಂದಿರಲಿದೆ.

ಮೊದಲ ಹಾಗೂ ಮೂರನೇ ಕ್ವಾರ್ಟರ್‌ ಅವಧಿಯ ಬಳಿಕ ಪ್ರತಿ ತಂಡಕ್ಕೂ ಎರಡು ನಿಮಿಷಗಳ ವಿರಾಮವಿರುತ್ತದೆ. ಆದರೆ ಈ ಮೊದಲಿದ್ದ 10 ನಿಮಿಷಗಳ ಮೊದಲಾರ್ಧದ ಅವಧಿಯ      ಬಿಡುವಿನ ವೇಳೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಹಾಕಿ ಇಂಡಿಯಾ ಲೀಗ್‌ನಲ್ಲಿ ಅಳವಡಿಸಲಾಗಿದ್ದ ಈ ನಿಯಮ ಟೂರ್ನಿಯ  ಎರಡೂ ಆವೃತ್ತಿಗಳಲ್ಲೂ  ಯಶಸ್ವಿಯಾಗಿತ್ತು. ಇದರಿಂದ  ಪ್ರೇರಣೆಗೊಂಡಿರುವ  ಎಫ್‌ಐಎಚ್‌ ಈ ನಿಯಮವನ್ನು ಜಾರಿಗೆ ತರುವ ತೀರ್ಮಾನಕ್ಕೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.