ADVERTISEMENT

ಆರೋಪ ಪಟ್ಟಿಯಲ್ಲಿ ಕ್ರೋನಿಯೆ ಹೆಸರು

2000 ದಲ್ಲಿ ನಡೆದಿದ್ದ `ಮ್ಯಾಚ್ ಫಿಕ್ಸಿಂಗ್' ಪ್ರಕರಣ

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 19:59 IST
Last Updated 22 ಜುಲೈ 2013, 19:59 IST

ನವದೆಹಲಿ (ಪಿಟಿಐ): ಹದಿಮೂರು ವರ್ಷಗಳ ಹಿಂದೆ ಕ್ರಿಕೆಟ್ ಜಗತ್ತನ್ನು ತಲ್ಲಣಗೊಳಿಸಿದ್ದ `ಮ್ಯಾಚ್ ಫಿಕ್ಸಿಂಗ್' ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸೋಮವಾರ ಇಲ್ಲಿನ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿದರು.

ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಹ್ಯಾನ್ಸಿ ಕ್ರೋನಿಯೆ ಹೆಸರೂ ಆರೋಪ ಪಟ್ಟಿಯಲ್ಲಿದೆ. ಆದರೆ 90 ಪುಟಗಳ ಆರೋಪ ಪಟ್ಟಿಯಲ್ಲಿ ಇತರ ಯಾವುದೇ ಕ್ರಿಕೆಟ್ ಆಟಗಾರರ ಹೆಸರು ಇಲ್ಲ.

ಕ್ರೋನಿಯೆ ಅಲ್ಲದೆ, ಬಾಲಿವುಡ್ ನಿರ್ಮಾಪಕ ಗುಲ್ಶನ್ ಕುಮಾರ್ ಸಹೋದರ ಕಿಶನ್ ಕುಮಾರ್, ಲಂಡನ್‌ನಲ್ಲಿ ನೆಲೆಸಿರುವ ಬುಕ್ಕಿ ಸಂಜೀವ್ ಚಾವ್ಲಾ, ಇತರ ಬುಕ್ಕಿಗಳಾದ ಮನಮೋಹನ್ ಕಟ್ಟರ್, ರಾಕೇಶ್ ಕಾಲ್ರ ಮತ್ತು ಸುನಿಲ್ ದಾರಾ ಅಲಿಯಾಸ್ ಬಿಟ್ಟೂ ಅವರ ಹೆಸರು ಆರೋಪ ಪಟ್ಟಿಯಲ್ಲಿದೆ.

ಚೀಫ್ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಅಮಿತ್ ಬನ್ಸಲ್ ರಜಾದಲ್ಲಿದ್ದ ಕಾರಣ ಮ್ಯಾಜಿಸ್ಟ್ರೇಟ್ ಆಕಾಶ್ ಜೈನ್‌ಗೆ ಪೊಲೀಸರು ಆರೋಪಪಟ್ಟಿ ಸಲ್ಲಿಸಿದರು. ಬನ್ಸಲ್ ಅವರು ಮಂಗಳವಾರ ಆರೋಪ ಪಟ್ಟಿಯನ್ನು ಪರಿಗಣಿಸಲಿದ್ದಾರೆ.

ಕಿಂಗ್ಸ್ ಸಮಿತಿಯ (ಕ್ರೋನಿಯೆ ಪ್ರಕರಣದ ಬಗ್ಗೆ ತನಿಖೆ ನಡೆಸಿತ್ತು) ವರದಿ, ಕ್ರೋನಿಯೆ ಅವರ ತಪ್ಪೊಪ್ಪಿಗೆ ಮತ್ತು ದೂರವಾಣಿ ಸಂಭಾಷಣೆಗಳನ್ನು ಆಧರಿಸಿ ಆರೋಪ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಚಾವ್ಲಾ ಮತ್ತು ಮನಮೋಹನ್ ಅವರು ಕ್ರಮವಾಗಿ ಬ್ರಿಟನ್ ಹಾಗೂ ಅಮೆರಿಕದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇಬ್ಬರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಿ ಭಾರತಕ್ಕೆ ಕರೆತರುವ ಪ್ರಕ್ರಿಯೆಯನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ.

2000 ದಲ್ಲಿ ದಕ್ಷಿಣ ಆಫ್ರಿಕಾ ತಂಡದ ಭಾರತದ ಪ್ರವಾಸದ ವೇಳೆ ಈ ಪ್ರಕರಣ ನಡೆದಿತ್ತು. ತಂಡದ ನಾಯಕನಾಗಿದ್ದ ಕ್ರೋನಿಯೆ ಬುಕ್ಕಿಗಳಿಂದ ಹಣ ಪಡೆದ ಆರೋಪಕ್ಕೆ ಗುರಿಯಾಗಿದ್ದರು. ಮೊದಲು ಈ ಆರೋಪವನ್ನು ಅವರು ನಿರಾಕರಿಸಿದ್ದರೂ, ಬಳಿಕ ತಪ್ಪು ಒಪ್ಪಿಕೊಂಡಿದ್ದರು. ಆದರೆ ಕ್ರೋನಿಯೆ 2002 ರಲ್ಲಿ ನಡೆದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದರು.

ಭಾರತ ತಂಡದ ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್, ಅಜಯ್ ಜಡೇಜ ಮತ್ತು ದಕ್ಷಿಣ ಆಫ್ರಿಕದ ಹರ್ಷೆಲ್ ಗಿಬ್ಸ್ ಅವರ ಹೆಸರು ಈ ವಿವಾದದಲ್ಲಿ ಕೇಳಿಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.