ADVERTISEMENT

ಆರ್ಚರಿ: ಪುರುಷ, ಮಹಿಳೆಯರಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2012, 18:30 IST
Last Updated 27 ಜುಲೈ 2012, 18:30 IST
ಆರ್ಚರಿ: ಪುರುಷ, ಮಹಿಳೆಯರಿಗೆ ನಿರಾಸೆ
ಆರ್ಚರಿ: ಪುರುಷ, ಮಹಿಳೆಯರಿಗೆ ನಿರಾಸೆ   

ಲಂಡನ್: ಭಾರತದ ಪುರುಷ ಮತ್ತು ಮಹಿಳಾ ತಂಡದವರು ಒಲಿಂಪಿಕ್ಸ್ ಆರ್ಚರಿ (ಬಿಲ್ಲುಗಾರಿಕೆ)ಯ ರ‌್ಯಾಂಕಿಂಗ್ ರೌಂಡ್‌ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಲಾರ್ಡ್ಸ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಪುರುಷರ ತಂಡ 12ನೇ ಸ್ಥಾನ ಪಡೆದರೆ, ಮಹಿಳೆಯರು ಒಂಬತ್ತನೇ ಸ್ಥಾನ ತಮ್ಮದಾಗಿಸಿಕೊಂಡರು.

ತಂಡ ಹಾಗೂ ವೈಯಕ್ತಿಕ ವಿಭಾಗದ ಸ್ಪರ್ಧೆಗಳಲ್ಲಿ ಎದುರಾಳಿ ಯಾರೆಂಬುದನ್ನು ನಿರ್ಧರಿಸಲು `ರ‌್ಯಾಂಕಿಂಗ್ ರೌಂಡ್~ ಸ್ಪರ್ಧೆ ನಡೆಸಲಾಗುತ್ತದೆ. ದೀಪಿಕಾ ಕುಮಾರಿ, ಬೊಂಬ್ಯಾಲ ದೇವಿ ಮತ್ತು ಚೆಕ್ರವೊಲು ಸ್ವರೊ ಅವರನ್ನೊಳಗೊಂಡ ಮಹಿಳಾ ತಂಡ 1938 (662+651+625) ಪಾಯಿಂಟ್ ಕಲೆಹಾಕಿತು.

ಒಟ್ಟು 1993 ಪಾಯಿಂಟ್ ಕಲೆಹಾಕಿದ ಕೊರಿಯಾ ಅಗ್ರಸ್ಥಾನ ಪಡೆಯಿತು. ಅಮೆರಿಕ (1979) ಮತ್ತು ಚೈನೀಸ್ ತೈಪೆ (1976) ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನಗಳನ್ನು ತಮ್ಮದಾಗಿಸಿಕೊಂಡವು.

ವೈಯಕ್ತಿಕ ರ‌್ಯಾಂಕಿಂಗ್‌ನಲ್ಲಿ ದೀಪಿಕಾ ಕುಮಾರಿ (662) ಎಂಟನೇ ಸ್ಥಾನದಲ್ಲಿ ನಿಂತರು. ಬೊಂಬ್ಯಾಲ ದೇವಿ (651) 22ನೇ ಸ್ಥಾನ        ಪಡೆದರೆ, ನೀರಸ ಪ್ರದರ್ಶನ ನೀಡಿದ ಸ್ವರೊ (625) ಅವರು 50ನೇ ಸ್ಥಾನ ಗಳಿಸಿದರು. ಲಂಡನ್‌ಗೆ ಆಗಮಿಸುವ ಮುನ್ನ ಜ್ವರದಿಂದ ಬಳಲಿದ್ದ     ದೀಪಿಕಾ ಮೊದಲ ಸುತ್ತಿನ ಪಂದ್ಯದಲ್ಲಿ ಬ್ರಿಟನ್‌ನ ಆಮಿ ಅಲಿವರ್ ವಿರುದ್ಧ ಪೈಪೋಟಿ ನಡೆಸುವರು.

ಬೊಂಬ್ಯಾಲ ದೇವಿ ಗ್ರೀಸ್‌ನ ಇವಾಂಜೆಲಿಯಾ ಪಾರಾ ವಿರುದ್ಧ ಪೈಪೋಟಿ ನಡೆಸಲಿದ್ದರೆ, ಸ್ವರೊ ಅಮೆರಿಕದ ಜೆನಿಫರ್ ನಿಕೊಲಸ್ ಅವರನ್ನು ಎದುರಿಸಲಿದ್ದಾರೆ.

ತಂಡ ವಿಭಾಗದಲ್ಲಿ ಭಾರತ ಮಹಿಳೆಯರು ಮೊದಲ ಪಂದ್ಯದಲ್ಲಿ ಡೆನ್ಮಾರ್ಕ್ ಜೊತೆ ಹಣಾಹಣಿ ನಡೆಸಲಿದ್ದಾರೆ. ಇದರಲ್ಲಿ ಗೆದ್ದರೆ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಬಲಿಷ್ಠ ದಕ್ಷಿಣ ಕೊರಿಯಾ ಎದುರಾಗಲಿದೆ. ಆದ್ದರಿಂದ ತಂಡ ವಿಭಾಗದಲ್ಲಿ ಭಾರತ ಪದಕ ಗೆಲ್ಲುವ ಸಾಧ್ಯತೆ ಕ್ಷೀಣಿಸಿದೆ.

ಪುರುಷರಿಗೂ ನಿರಾಸೆ: ಪದಕದ ಭರವಸೆಯೊಂದಿಗೆ ಲಂಡನ್‌ಗೆ ಬಂದಿಳಿದಿದ್ದ ಪುರುಷರ ತಂಡ ರ‌್ಯಾಂಕಿಂಗ್ ರೌಂಡ್‌ನಲ್ಲಿ ಕೊನೆಯ ಸ್ಥಾನ ಪಡೆಯಿತು. ರಾಹುಲ್ ಬ್ಯಾನರ್ಜಿ, ತರುಣ್‌ದೀಪ್ ರಾಯ್ ಮತ್ತು ಜಯಂತ ತಾಲೂಕ್ದಾರ್ ಅವರನ್ನೊಳಗೊಂಡ ತಂಡ ಒಟ್ಟು 1969 ಪಾಯಿಂಟ್ ಮಾತ್ರ ಕಲೆಹಾಕಿತು.

ಶನಿವಾರ ನಡೆಯುವ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತ ತಂಡ ಜಪಾನ್ ವಿರುದ್ಧ ಪೈಪೋಟಿ ನಡೆಸಲಿದೆ. ವೈಯಕ್ತಿಕ ವಿಭಾಗದಲ್ಲಿ ರಾಯ್ (664), ಬ್ಯಾನರ್ಜಿ (655) ಮತ್ತು ತಾಲೂಕ್ದಾರ್ (650) ಕ್ರಮವಾಗಿ 31, 46 ಮತ್ತು 53ನೇ ಸ್ಥಾನದಲ್ಲಿ ಕಾಣಿಸಿಕೊಂಡರು.

`ನಾವು ಮೂವರೂ ಜ್ವರದಿಂದ ಬಳಲಿದ್ದ ಕಾರಣ ಸರಿಯಾಗಿ ಅಭ್ಯಾಸ ನಡೆಸಲು ಆಗಲಿಲ್ಲ. ಇಲ್ಲಿಗೆ ಆಗಮಿಸಿದ ಬಳಿಕ ಮೊದಲ ಮೂರು ದಿನ ತರಬೇತಿಯಲ್ಲಿ ಪಾಲ್ಗೊಳ್ಳಲಿಲ್ಲ. ಎರಡು ದಿನಗಳ ಹಿಂದೆಯಷ್ಟೇ ಅಭ್ಯಾಸ ಆರಂಭಿಸಿದ್ದೆವು~ ಎಂದು ತಾಲೂಕ್ದಾರ್ ಪ್ರತಿಕ್ರಿಯಿಸಿದರು.

`ಜಪಾನ್ ವಿರುದ್ಧ ನಮಗೆ ಗೆಲ್ಲುವ ಸಾಧ್ಯತೆ 50-50 ರಷ್ಟಿದೆ. ಆದ್ದರಿಂದ ಇದಕ್ಕಿಂತಲೂ ಉತ್ತಮ ಪ್ರದರ್ಶನ ನೀಡುವುದು ಅಗತ್ಯ~ ಎಂದರು. ಕಳೆದ ತಿಂಗಳು ನಡೆದ ಒಲಿಂಪಿಕ್ ಅರ್ಹತಾ ಟೂರ್ನಿಯ ಫೈನಲ್‌ನಲ್ಲಿಭಾರತ ತಂಡ ಜಪಾನ್ ಎದುರು ಸೋಲು ಅನುಭವಿಸಿತ್ತು.

ಪುರುಷರ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕೊರಿಯಾ ಎರಡು ವಿಶ್ವದಾಖಲೆ ಸ್ಥಾಪಿಸಿತು. ಇಮ್ ಡಾಂಗ್ ಹ್ಯೂನ್, ಕಿಮ್ ಬಬ್‌ಮಿನ್ ಮತ್ತು ಹೊ ಕಿನ್ ಹೆಕ್ ಅವರನ್ನೊಳಗೊಂಡ ಕೊರಿಯಾ ತಂಡ ಒಟ್ಟು 2087 ಪಾಯಿಂಟ್‌ಗಳೊಂದಿಗೆ ವಿಶ್ವದಾಖಲೆಯ ಸಾಧನೆ ಮಾಡಿ ಅಗ್ರಸ್ಥಾನ ಪಡೆಯಿತು. ಈ ಹಿಂದಿನ ವಿಶ್ವದಾಖಲೆ ಕೂಡಾ ಕೊರಿಯಾ ತಂಡದ ಹೆಸರಿನಲ್ಲೇ ಇತ್ತು.

ವೈಯಕ್ತಿಕ ವಿಭಾಗದಲ್ಲಿ ಇಮ್ ಡಾಂಗ್ ಹ್ಯೂನ್ ಒಟ್ಟು 699 ಪಾಯಿಂಟ್ ಸಂಗ್ರಹಿಸಿ ತಮ್ಮದೇ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಮೂರು ಪಾಯಿಂಟ್‌ಗಳಿಂದ ಉತ್ತಮಪಡಿಸಿಕೊಂಡರು. ಅಂಟಾಲ್ಯದಲ್ಲಿ ಈ ವರ್ಷದ ಆರಂಭದಲ್ಲಿ ನಡೆದ ಸ್ಪರ್ಧೆಯಲ್ಲಿ ಅವರು 696 ಪಾಯಿಂಟ್ ಸಂಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.