ADVERTISEMENT

ಆಸರೆಯ ನಿರೀಕ್ಷೆಯಲ್ಲಿ ಬ್ಯಾಡ್ಮಿಂಟನ್ ಪ್ರತಿಭೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2011, 19:30 IST
Last Updated 5 ನವೆಂಬರ್ 2011, 19:30 IST
ಆಸರೆಯ ನಿರೀಕ್ಷೆಯಲ್ಲಿ ಬ್ಯಾಡ್ಮಿಂಟನ್ ಪ್ರತಿಭೆ
ಆಸರೆಯ ನಿರೀಕ್ಷೆಯಲ್ಲಿ ಬ್ಯಾಡ್ಮಿಂಟನ್ ಪ್ರತಿಭೆ   

ಕಳಸ: ಕುಬ್ಜರ ಬ್ಯಾಡ್ಮಿಂಟನ್‌ನಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡು ಅಗ್ರ ರ‌್ಯಾಂಕಿಂಗ್ ಗಳಿಸಿದ್ದು, ವಿಶ್ವ ಕುಬ್ಜರ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿರುವ ಕುದುರೆಮುಖದ ಕೆ.ಜಿ.ಪ್ರಭು ಈಗ ವಿದೇಶಕ್ಕೆ ತೆರಳಲು ಹಣವಿಲ್ಲದೆ ಸಂಕಷ್ಟದಲ್ಲಿದ್ದಾರೆ.

ಕುದುರೆಮುಖದ ಆಫೀಸರ್ಸ್‌ ಕ್ಲಬ್‌ನಲ್ಲಿ ಕ್ಲಬ್ ಬಾಯ್ ಆಗಿ ಕೆಲಸ ಮಾಡುವ ಪ್ರಭು ಕಳೆದ ಆಗಸ್ಟ್‌ನಲ್ಲಿ ಬೆಂಗಳೂರು ಮತ್ತು ಚೆನ್ನೈನಲ್ಲಿ ನಡೆದ 11ನೇ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಪಡೆದು ವಿಶ್ವ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿದ್ದಾರೆ.

ದಕ್ಷಿಣ ಅಮೆರಿಕಾದ ಗ್ವಾಟೆಮಾಲಾದಲ್ಲಿ ನವೆಂಬರ್ 19ರಿಂದ 27ರವರೆಗೆ ನಡೆಯುವ ಈ ಟೂರ್ನಿಯಲ್ಲಿ ಭಾಗವಹಿಸಲು 1.70 ಲಕ್ಷ ರೂಪಾಯಿ ಅಗತ್ಯ ಇದೆ. ಈ ಬಗ್ಗೆ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ಫಾರ್ ಚಾಲೆಂಜ್ಡ್ ಸಂಸ್ಥೆ ಪ್ರಭು ಅವರಿಗೆ ಪತ್ರ ಬರೆದಿದೆ.

ಆದರೆ ಇಷ್ಟು ಹಣವನ್ನು ಹೊಂದಿಸಲಾರದೆ ಪ್ರಭು ಕಂಗಾಲಾಗಿದ್ದಾರೆ. ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ತನ್ನ ಅಣ್ಣನ ಜೊತೆ ಕುದುರೆಮುಖಕ್ಕೆ ಬಂದ ಪ್ರಭು 1988ರಿಂದ ಕುದುರೆಮುಖ ಕ್ಲಬ್‌ನಲ್ಲಿ ಕ್ಲಬ್ ಬಾಯ್ ಕೆಲಸ ಮಾಡುತ್ತಿದ್ದಾರೆ. ಕ್ಲಬ್‌ನಲ್ಲಿ ಆಡಲು ಬರುವ ಅಧಿಕಾರಿಗಳಿಗೆ ಜೊತೆಗಾರರು ಇಲ್ಲದಿದ್ದಾಗ ತಾವೇ ಆಡುವ ಅನಿವಾರ್ಯತೆಯಿಂದಾಗಿ ಬ್ಯಾಡ್ಮಿಂಟನ್ ಕಲಿತು ಈ ಸಾಧನೆ ಮಾಡಿದವರು ಪ್ರಭು. 

 ಪಂದ್ಯಾವಳಿಗೆ ತೆರಳಲು ವಿಮಾನದ ವೆಚ್ಚ, ಶುಲ್ಕ ಮತ್ತು ಊಟ ವಸತಿಗೆಂದು ಒಟ್ಟು 1.70 ಲಕ್ಷ ರೂಪಾಯಿ ಹಣ ಹೊಂದಿಸುವಂತೆ ಸಂಸ್ಥೆ ಸೂಚನೆ ನೀಡಿದೆ. ಪ್ರಭು ಅವರ ವಾರ್ಷಿಕ ವೇತನ ರೂ. 40,000.  ಸಮಾಧಾನ ಎಂದರೆ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ ಪ್ರಭು ಅವರಿಗೆ ಆರ್ಥಿಕ ನೆರವು ನೀಡುತ್ತಿದೆ.

ಕೇವಲ ಮೂರು ಅಡಿ ಎತ್ತರದ ಪ್ರಭು, ಹಣಕಾಸಿನ ಸಮಸ್ಯೆಯಿಂದಾಗಿ ಇನ್ನಷ್ಟು ಕುಗ್ಗಿಹೋಗಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ತಂದೇ ತರುತ್ತೇನೆ ಎಂಬ ಆತ್ಮವಿಶ್ವಾಸ ಹೊಂದಿರುವ ಪ್ರಭು ಅವರಿಗೆ ನೆರವಾಗಬಯಸುವವರು (9448000074) ಸಂಪರ್ಕಿಸಬಹುದು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.