ADVERTISEMENT

ಆ್ಯಲನ್ ಐಸಾಕ್ ಐಸಿಸಿ ನೂತನ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 23 ಜೂನ್ 2012, 19:30 IST
Last Updated 23 ಜೂನ್ 2012, 19:30 IST
ಆ್ಯಲನ್ ಐಸಾಕ್ ಐಸಿಸಿ ನೂತನ ಅಧ್ಯಕ್ಷ
ಆ್ಯಲನ್ ಐಸಾಕ್ ಐಸಿಸಿ ನೂತನ ಅಧ್ಯಕ್ಷ   

ಕ್ವಾಲಾಲಂಪುರ (ಐಎಎನ್‌ಎಸ್): ನ್ಯೂಜಿಲೆಂಡ್‌ನ ಆ್ಯಲನ್ ಐಸಾಕ್ ಅವರು ಭಾನುವಾರ ಇಲ್ಲಿ ಆರಂಭವಾಗಲಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ವಾರ್ಷಿಕ ಮಹಾಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವರು.

ಭಾರತದ ಶರದ್ ಪವಾರ್ ಅವರ ಎರಡು ವರ್ಷಗಳ ಆಡಳಿತಾವಧಿಯು ಕೊನೆಗೊಂಡಿದೆ. ಅವರ ನಂತರ ಸರದಿ ಕ್ರಮದಲ್ಲಿ ಅವಕಾಶ ಪಡೆದಿರುವುದು ನ್ಯೂಜಿಲೆಂಡ್‌ನ ಐಸಾಕ್.

ಇಲ್ಲಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ಒಂದು ವಾರ ಕಾಲ ಐಸಿಸಿ ಮಹಾಸಭೆ ನಡೆಯಲಿದೆ. ಪ್ರಧಾನ ವ್ಯವಸ್ಥಾಪಕರ ಸಮಿತಿಯ (ಸಿಇಸಿ) ಸಭೆಯ ನಂತರ ಐಸಿಸಿಯ ವಿವಿಧ ಘಟಕಗಳ ಸಭೆ ನಡೆಯಲಿದೆ.

ಐಸಿಸಿ ಆಡಳಿತ ಮಂಡಳಿಯು ಅನೇಕ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಮಾಡಲಿದೆ. 2014ರ ಜೂನ್‌ನಿಂದ ಐಸಿಸಿಯಲ್ಲಿ ಚೇರ್ಮನ್ ಸ್ಥಾನವನ್ನು ರೂಪಿಸುವ ನಿಯಮಕ್ಕೆ ಕೂಡ ಒಪ್ಪಿಗೆ ಪಡೆಯುವ ನಿರೀಕ್ಷೆ ಇದೆ. ಈ ನಿಯಮ ಜಾರಿಗೆ ಬಂದರೆ ಅಧ್ಯಕ್ಷ ಸ್ಥಾನವು ಕೇವಲ ಪ್ರಾತಿನಿಧಿಕವಾಗಿ ಉಳಿಯಲಿದೆ. ನಿರ್ಣಯಗಳನ್ನು ಕೈಗೊಳ್ಳುವ ಅಧಿಕಾರ ಚೇರ್ಮನ್‌ಗೆ ಹೋಗುತ್ತದೆ. ಈ ಯೋಚನೆಗೆ ವಿವಿಧ ದೇಶಗಳ ಕ್ರಿಕೆಟ್ ಮಂಡಳಿಯ ಪ್ರತಿನಿಧಿಗಳು ಹೇಗೆ ಸ್ಪಂದಿಸುತ್ತಾರೆ ಎನ್ನುವುದು ಆಸಕ್ತಿ ಕೆರಳಿಸಿರುವ ಅಂಶ.

ಹರೂನ್ ಲಾರ್ಗಟ್ ನಂತರ ಪ್ರಧಾನ ಕಾರ್ಯನಿರ್ವಾಹಕ ಹುದ್ದೆಯ ಜವಾಬ್ದಾರಿ ವಹಿಸಿಕೊಳ್ಳಲಿರುವ ಡೇವಿಡ್ ರಿಚರ್ಡ್‌ಸನ್ ಅವರ ನೇಮಕಕ್ಕೆ ಕೂಡ ಇದೇ ಸಭೆಯಲ್ಲಿ ಅಂತಿಮ ಒಪ್ಪಿಗೆ ಸಿಗಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.