ADVERTISEMENT

ಇಂಗ್ಲೆಂಡ್‌ಗೆ ಸುಲಭ ಗೆಲುವು

ಕ್ರಿಕೆಟ್‌: ಮಾರ್ಗನ್‌, ಬೋಪಾರ ಶತಕ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ಡಬ್ಲಿನ್‌ (ಎಪಿ): ಎಯೋನ್‌ ಮಾರ್ಗನ್‌ ಹಾಗೂ ರವಿ ಬೋಪಾರ ಅವರ ಅಜೇಯ ಶತಕಗಳ ನೆರವಿನಿಂದ ಇಂಗ್ಲೆಂಡ್‌ ತಂಡದವರು ಇಲ್ಲಿ ನಡೆದ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಐರ್ಲೆಂಡ್‌ ತಂಡವನ್ನು ಮಣಿಸಿದ್ದಾರೆ.

ಐರ್ಲೆಂಡ್‌ ನೀಡಿದ 270 ರನ್‌ಗಳ ಗುರಿಯನ್ನು ಇಂಗ್ಲೆಂಡ್‌ ತಂಡದವರು 43 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ ಕಳೆದುಕೊಂಡು ತಲುಪಿದರು.

ಮೊದಲು ಬ್ಯಾಟ್‌ ಮಾಡಿದ ಐರ್ಲೆಂಡ್‌ ತಂಡಕ್ಕೆ ನೆರವಾಗಿದ್ದು ಆರಂಭಿಕ ಬ್ಯಾಟ್ಸ್‌ಮನ್‌ ವಿಲಿಯಮ್‌ ಪೋರ್ಟರ್‌ಫೀಲ್ಡ್‌. ಆದರೆ ಉಳಿದವ­ರಿಂದ ಉತ್ತಮ ಹೋರಾಟ ಮೂಡಿ­ಬರಲಿಲ್ಲ. 142 ಎಸೆತಗಳನ್ನು ಎದುರಿಸಿದ ಪೋರ್ಟರ್‌ಫೀಲ್ಡ್‌ ಒಂದು ಸಿಕ್ಸರ್‌ ಹಾಗೂ 14 ಬೌಂಡರಿಗಳ ನೆರವಿನಿಂದ 112 ರನ್‌ ಗಳಿಸಿದರು. ಅವರ ನೆರವಿನಿಂದಾಗಿ ಐರ್ಲೆಂಡ್‌ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 269 ರನ್‌ ಗಳಿಸಲು ಸಾಧ್ಯವಾಯಿತು.

ಸವಾಲಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ಆರಂಭದಲ್ಲಿಯೇ ಆಘಾತ ಅನುಭವಿಸಿತು. 48 ರನ್‌ ಗಳಿ­­ಸು­­­ವಷ್ಟ­­ರಲ್ಲಿ 4 ವಿಕೆಟ್‌ ಕಳೆದು­ಕೊಂ­ಡಿತ್ತು. ಆದರೆ ಮಾರ್ಗನ್‌ ಹಾಗೂ ಬೋಪಾರ ನಡುವಿನ ಐದನೇ ವಿಕೆಟ್‌ ಜೊತೆಯಾಟ ಪಂದ್ಯಕ್ಕೆ ಹೊಸ ತಿರುವು ನೀಡಿತು. ಇವರಿಬ್ಬರು ಮುರಿಯದ ಐದನೇ ವಿಕೆಟ್‌ಗೆ 226 ರನ್‌ ಸೇರಿಸಿದರು.

106 ಎಸೆತ ಎದುರಿಸಿದ ಮಾರ್ಗನ್‌ 8 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಮೇತ 124 ರನ್‌ ಗಳಿಸಿದರು. ಅಬ್ಬರಿಸಿದ ಬೋಪಾರ ಕೇವಲ 75 ಎಸೆತಗಳಲ್ಲಿ 101 ರನ್‌ ಕಲೆಹಾಕಿದರು, ಅದರಲ್ಲಿ 10 ಬೌಂಡರಿ ಹಾಗೂ 5 ಸಿಕ್ಸರ್‌ಗಳಿದ್ದವು.

ಸಂಕ್ಷಿಪ್ತ ಸ್ಕೋರ್‌: ಐರ್ಲೆಂಡ್‌: 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 269 (ವಿಲಿಯಮ್‌ ಪೋರ್ಟರ್‌ಫೀಲ್ಡ್‌ 112, ನಿಯಾಲ್‌ ಓಬ್ರಿಯನ್‌ 26, ಜಾನಿ ಮೂನಿ 27; ಬಾಯ್ಡ್‌ ರಂಕಿನ್‌ 46ಕ್ಕೆ4, ಜೇಮ್ಸ್‌ ಟ್ರೆಡ್‌ವೆಲ್‌ 35ಕ್ಕೆ2); ಇಂಗ್ಲೆಂಡ್‌: 43 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 274 (ಎಯೋನ್‌ ಮಾರ್ಗನ್‌ ಔಟಾಗದೆ 124, ರವಿ ಬೋಪಾರ ಔಟಾಗದೆ 101; ಟಿಮ್‌ ಮುರ್ತಾಗ್‌ 33ಕ್ಕೆ3). ಫಲಿತಾಂಶ: ಇಂಗ್ಲೆಂಡ್‌ಗೆ 6 ವಿಕೆಟ್‌ ಜಯ. ಪಂದ್ಯ ಶ್ರೇಷ್ಠ: ಎಯೊನ್‌ ಮಾರ್ಗನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.