ADVERTISEMENT

ಇಂಗ್ಲೆಂಡ್‌ ಸರಣಿಗೆ ಹ್ಯಾಜಲ್‌ವುಡ್‌ ಅಲಭ್ಯ

ಏಜೆನ್ಸೀಸ್
Published 28 ಮೇ 2018, 19:30 IST
Last Updated 28 ಮೇ 2018, 19:30 IST
ಜೋಶ್‌ ಹ್ಯಾಜಲ್‌ವುಡ್‌
ಜೋಶ್‌ ಹ್ಯಾಜಲ್‌ವುಡ್‌   

ಸಿಡ್ನಿ: ಆಸ್ಟ್ರೇಲಿಯಾದ ವೇಗದ ಬೌಲರ್‌ ಜೋಶ್‌ ಹ್ಯಾಜಲ್‌ವುಡ್‌ ಅವರು ಮುಂದಿನ ತಿಂಗಳು ನಡೆಯುವ ಇಂಗ್ಲೆಂಡ್‌ ಎದುರಿನ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಆಡುತ್ತಿಲ್ಲ. ಈ ವಿಷಯವನ್ನು ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಸೋಮವಾರ ತಿಳಿಸಿದೆ.

‘ಹ್ಯಾಜಲ್‌ವುಡ್‌ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಅವರಿಗೆ ಈಗ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಇಂಗ್ಲೆಂಡ್‌ ಎದುರಿನ ಸರಣಿಯಲ್ಲಿ ಪಾಲ್ಗೊಳ್ಳುವುದಿಲ್ಲ’ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾದ ಫಿಸಿಯೊ ಡೇವಿಡ್‌ ಬೀಕ್ಲಿ ತಿಳಿಸಿದ್ದಾರೆ.

ಜೋಶ್‌ ಬದಲಿಗೆ ಮಿಷೆಲ್‌ ನೆಸೆರ್‌, ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ADVERTISEMENT

ಸರ್ಫರಾಜ್‌ಗೆ ದಂಡ

ಲಂಡನ್‌: ತಂಡದ ಪಾಲಿನ ಓವರ್‌ಗಳನ್ನು ಪೂರೈಸಲು ನಿಗದಿಗಿಂತಲೂ ಹೆಚ್ಚು ಸಮಯ ತೆಗೆದುಕೊಂಡ ಕಾರಣ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್‌ ಅಹ್ಮದ್‌ಗೆ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಸೋಮವಾರ ದಂಡ ವಿಧಿಸಿದೆ.

ಅಂಗಳದ ಅಂಪೈರ್‌ಗಳಾದ ಪಾಲ್‌ ರೆಫೆಲ್‌, ರಾಡ್‌ ಟಕ್ಕರ್‌, ಮೂರನೇ ಅಂಪೈರ್‌ ಬ್ರೂಸ್‌ ಆಕ್ಸೆನ್‌ಫೋರ್ಡ್‌ ಮತ್ತು ನಾಲ್ಕನೇ ಅಂಪೈರ್‌ ರಾಬ್‌ ಬೇಲಿ ಅವರು ನಿಧಾನಗತಿಯ ಬೌಲಿಂಗ್‌ ಕುರಿತು ಪಾಕಿಸ್ತಾನ ತಂಡದ ವಿರುದ್ಧ ದೂರು ನೀಡಿದ್ದರು. ಇದರ ಆಧಾರದಲ್ಲಿ ಪಂದ್ಯದ ರೆಫರಿ ಜೆಫ್‌ ಕ್ರೋವ್‌ ಅವರು ಸರ್ಫರಾಜ್‌ಗೆ ಪಂದ್ಯದ ಸಂಭಾವನೆಯ ಶೇಕಡ 60 ಮತ್ತು ಉಳಿದ ಆಟಗಾರರಿಗೆ ಶೇಕಡ 30ರಷ್ಟು ದಂಡ ಹಾಕಿದ್ದಾರೆ.

ತಂಡ ಮುಂದಿನ 12 ತಿಂಗಳ ಅವಧಿಯಲ್ಲಿ ಮತ್ತೊಮ್ಮೆ ಇಂತಹ ತಪ್ಪು ಮಾಡಿದರೆ ಸರ್ಫರಾಜ್‌ ನಿಷೇಧಕ್ಕೆ ಗುರಿಯಾಗಲಿದ್ದಾರೆ.

ಟೆಸ್ಟ್‌: ಜದ್ರಾನ್‌ ಇಲ್ಲ

ನವದೆಹಲಿ: ಮಂಡಿ ನೋವಿನಿಂದ ಬಳಲುತ್ತಿರುವ ಅಫ್ಗಾನಿಸ್ತಾನದ ವೇಗದ ಬೌಲರ್‌ ದೌಲತ್‌ ಜದ್ರಾನ್‌ ಅವರು ಭಾರತದ ವಿರುದ್ಧದ ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

‘ಡೆಹ್ರಾಡೂನ್‌ನಲ್ಲಿ ನಡೆಯುತ್ತಿರುವ ತರಬೇತಿ ಶಿಬಿರದ ವೇಳೆ ಜದ್ರಾನ್‌ ಅವರ ಮಂಡಿಗೆ ಗಾಯವಾಗಿದೆ. ಒಂದು ತಿಂಗಳು ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದಾರೆ’ ಎಂದು ಅಫ್ಗಾನಿಸ್ತಾನ ಕ್ರಿಕೆಟ್‌ ಮಂಡಳಿ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.