ADVERTISEMENT

ಇಂದಿನಿಂದ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ :ಪ್ರಶಸ್ತಿಯ ವಿಶ್ವಾಸದಲ್ಲಿ ಸೈನಾ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 19:30 IST
Last Updated 15 ಅಕ್ಟೋಬರ್ 2012, 19:30 IST

ಡೆನ್ಮಾರ್ಕ್ (ಪಿಟಿಐ): ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸೈನಾ ನೆಹ್ವಾಲ್ ಮಂಗಳವಾರ ಇಲ್ಲಿ ಆರಂಭವಾಗಲಿರುವ ಡೆನ್ಮಾರ್ಕ್ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.

ಲಂಡನ್‌ನಲ್ಲಿ ಕಂಚಿನ ಗರಿ ಮೂಡಿಸಿದ ನಂತರ ಹೈದರಾಬಾದ್‌ನ ಆಟಗಾರ್ತಿ ಪಾಲ್ಗೊಳ್ಳುತ್ತಿರುವ ಮೊದಲ ಚಾಂಪಿಯನ್‌ಷಿಪ್ ಇದಾಗಿದೆ. ಪದಕ ಗೆದ್ದ ಸಂಭ್ರಮದಲ್ಲಿರುವ ಸೈನಾ ಚೀನಾ ಮಾಸ್ಟರ್ಸ್, ಜಪಾನ್ ಓಪನ್ ಮತ್ತು ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಂಡಿರಲಿಲ್ಲ.

ಇಲ್ಲಿ ಮೂರನೇ ಶ್ರೇಯಾಂಕ ಹೊಂದಿರುವ ಭಾರತದ ಆಟಗಾರ್ತಿ ಮೊದಲ ಸುತ್ತಿನ ಪಂದ್ಯದಲ್ಲಿ ಕೊರಿಯಾದ ಯೊಯೆನ್ ಜು ಬಾಯೆ ಎದುರು ಸೆಣಸಲಿದ್ದಾರೆ. ಎರಡು ಸಲ ಆಲ್ ಇಂಗ್ಲೆಂಡ್ ಚಾಂಪಿಯನ್ ಆಗಿದ್ದ ಟಿನೆ ಬೌನ್ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆಯಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ಜಯ ದೊರೆತರೆ, ವಿಶ್ವದಲ್ಲಿ ಅಗ್ರ ಶ್ರೇಯಾಂಕ ಹೊಂದಿರುವ ಚೀನಾದ ಯಿಹಾನ್ ವಾಂಗ್ ಎದುರಾಗುವ ಸಾಧ್ಯತೆಯಿದೆ.

`ಪದಕ ಗೆದ್ದ ಖುಷಿಯಲ್ಲಿದ್ದೇನೆ. ಐದು ವಾರಗಳಿಂದ ಕಠಿಣ ಅಭ್ಯಾಸ ನಡೆಸಿದ್ದೇನೆ. ಡೆನ್ಮಾರ್ಕ್ ಮತ್ತು ಮುಂದಿನ ವಾರ ನಡೆಯುವ ಫ್ರಾನ್ಸ್ ಓಪನ್ ಟೂರ್ನಿಗಳಲ್ಲಿ  ಉತ್ತಮ ಪ್ರದರ್ಶನ ನೀಡುತ್ತೇನೆ~ ಎಂದು ಹೈದರಾಬಾದ್‌ನ ಆಟಗಾರ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಡಬಲ್ಸ್‌ನಲ್ಲಿ ಕಣಕ್ಕಿಲ್ಲ: ಜ್ವಾಲಾ ಗುಟ್ಟಾ ಜೊತೆ ಮಹಿಳಾ ವಿಭಾಗದ ಡಬಲ್ಸ್‌ನಲ್ಲಿ ಆಡುತ್ತಿದ್ದ ಕರ್ನಾಟಕದ ಅಶ್ವಿನಿ ಪೊನ್ನಪ್ಪ  ಈ ಟೂರ್ನಿಯಲ್ಲಿ ಡಬಲ್ಸ್‌ನಲ್ಲಿ ಕಣಕ್ಕಿಳಿಯುತ್ತಿಲ್ಲ.


`ಮುಂಬರುವ ಎರಡು ಟೂರ್ನಿಗಳಲ್ಲಿ ಡಬಲ್ಸ್‌ನಲ್ಲಿ ಆಡುವುದಿಲ್ಲ. ಕೆಲ ದಿನಗಳಲ್ಲಿ ಮಹಾರಾಷ್ಟ್ರದ ಪ್ರಜ್ಞಾ ಗದ್ರೆ ಜೊತೆಗೂಡಿ ಆಡುತ್ತೇನೆ~ ಎಂದು ನುಡಿದಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಅವರು ತರುಣ್ ಕೋನಾ ಜೊತೆಗೂಡಿ ಆಡಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.