ADVERTISEMENT

ಇಂದು ಪಾಕಿಸ್ತಾನ ತಂಡದ ಆಗಮನ

ಟ್ವೆಂಟಿ-20 ಪಂದ್ಯ: ಸುಸೂತ್ರವಾಗಿ ನಡೆದ ಟಿಕೆಟ್ ಮಾರಾಟ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 19:59 IST
Last Updated 21 ಡಿಸೆಂಬರ್ 2012, 19:59 IST

ಬೆಂಗಳೂರು: ಐದು ವರ್ಷಗಳ ಬಿಡುವಿನ ಬಳಿಕ ಭಾರತದ ನೆಲದಲ್ಲಿ ಕ್ರಿಕೆಟ್ ಸರಣಿಯನ್ನಾಡಲಿರುವ ಪಾಕಿಸ್ತಾನ ತಂಡ ಶನಿವಾರ ಉದ್ಯಾನಗರಿಗೆ ಆಗಮಿಸಲಿದೆ.

ಪಾಕ್ ತಂಡದ ಆಟಗಾರರು ಲಾಹೋರ್‌ನಿಂದ ನವದೆಹಲಿ ಮಾರ್ಗವಾಗಿ ರಾತ್ರಿಯ ವೇಳೆ ಬೆಂಗಳೂರಿಗೆ ಬಂದಿಳಿಯುವರು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮೂಲಗಳು ತಿಳಿಸಿವೆ.

ಮಧ್ಯಾಹ್ನ 2.15 ಕ್ಕೆ ಲಾಹೋರ್‌ನಲ್ಲಿ ವಿಮಾನವೇರಲಿರುವ ಪಾಕ್ ತಂಡ 3.15ರ ಸುಮಾರಿಗೆ ನವದೆಹಲಿಗೆ ಆಗಮಿಸಲಿದೆ. ರಾಜಧಾನಿಯಲ್ಲಿ ಕೆಲ ಗಂಟೆಗಳ ಕಾಲ ತಂಗಲಿರುವ ತಂಡ ಆ ಬಳಿಕ ವಿಶೇಷ ವಿಮಾನದಲ್ಲಿ ರಾತ್ರಿಯ ವೇಳೆಗೆ ನಗರಕ್ಕೆ ಆಗಮಿಸಲಿದೆ.

ಪಾಕ್ ತಂಡ ತನ್ನ ಕಿರು ಪ್ರವಾಸದಲ್ಲಿ ಎರಡು ಟ್ವೆಂಟಿ-20 ಹಾಗೂ ಮೂರು ಏಕದಿನ ಪಂದ್ಯಗಳನ್ನಾಡಲಿದೆ. ಮೊದಲ ಟ್ವೆಂಟಿ-20 ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡಿಸೆಂಬರ್ 25 ರಂದು ನಡೆಯಲಿದೆ. ಎರಡನೇ ಟಿ-20 ಅಹಮದಾಬಾದ್‌ನಲ್ಲಿ ಡಿ. 28 ರಂದು ನಡೆಯಲಿದೆ.

ಏಕದಿನ ಸರಣಿಯ ಮೂರು ಪಂದ್ಯಗಳು ಕ್ರಮವಾಗಿ ಚೆನ್ನೈ (ಡಿ.30), ಕೋಲ್ಕತ್ತ (ಜನವರಿ 3) ಹಾಗೂ ದೆಹಲಿಯಲ್ಲಿ (ಜ.6) ನಡೆಯಲಿವೆ. ಪಾಕ್ ತಂಡ 2007 ರಲ್ಲಿ ಕೊನೆಯದಾಗಿ ಭಾರತದಲ್ಲಿ ಸರಣಿಯನ್ನು ಆಡಿತ್ತು. 2008ರಲ್ಲಿ ಮುಂಬೈ ಮೇಲಿನ ಉಗ್ರರ ದಾಳಿಯ ಘಟನೆಯ ಬಳಿಕ ಉಭಯ ದೇಶಗಳ ನಡುವಿನ ಕ್ರಿಕೆಟ್ ಸಂಬಂಧ ಮುರಿದುಬಿದ್ದಿತ್ತು.

2011ರ ಐಸಿಸಿ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಆಡಲು ಪಾಕ್ ತಂಡ ಭಾರತಕ್ಕೆ ಬಂದಿತ್ತು. ಆದರೆ ಕಳೆದ ಐದು ವರ್ಷಗಳಿಂದ ಎರಡೂ ತಂಡಗಳು ಯಾವುದೇ ಸರಣಿಯಲ್ಲಿ ಆಡಿಲ್ಲ.

ಟಿಕೆಟ್ ಮಾರಾಟ ಸುಸೂತ್ರ: ಮೊದಲ ಟ್ವೆಂಟಿ-20 ಪಂದ್ಯದ ಟಿಕೆಟ್‌ಗಾಗಿ ಅಭಿಮಾನಿಗಳು ಮುಗಿಬಿದ್ದರೂ, ಮಾರಾಟ ಪ್ರಕ್ರಿಯೆ ಸುಸೂತ್ರವಾಗಿ ನಡೆಯಿತು. ಆನ್‌ಲೈನ್ ಟಿಕೆಟ್ ಮಾರಾಟ ಕೆಲ ದಿನಗಳ ಹಿಂದೆ ಆರಂಭವಾಗಿದ್ದರೂ, ಚಿನ್ನಸ್ವಾಮಿ ಕ್ರೀಡಾಂಗಣದ ಕೌಂಟರ್‌ನಲ್ಲಿ ಶುಕ್ರವಾರ ಟಿಕೆಟ್ ಮಾರಾಟ ನಡೆಯಿತು.

ರೂ. 250 ಬೆಲೆಯ 5,500 ಟಿಕೆಟ್‌ಗಳು ಕೌಂಟರ್‌ನಲ್ಲಿ ಮಾರಾಟವಾದವು. ಟಿಕೆಟ್ ಗಿಟ್ಟಿಸಲಿಕ್ಕಾಗಿ ಅಭಿಮಾನಿಗಳು ಮಧ್ಯರಾತ್ರಿಯಿಂದಲೇ ಕ್ರೀಡಾಂಗಣದ ಬಳಿ ಜಮಾಯಿಸತೊಡಗಿದ್ದರು. ಬೆಳಿಗ್ಗೆ 8.00 ಗಂಟೆಗೆ ಟಿಕೆಟ್ ಮಾರಾಟ ಆರಂಭವಾಯಿತು. ಸುಮಾರು ಐದು ಗಂಟೆಗಳ ಅವಧಿಯಲ್ಲಿ ಎಲ್ಲ ಟಿಕೆಟ್‌ಗಳೂ ಮಾರಾಟವಾದವು.

ಟಿಕೆಟ್ ಗಿಟ್ಟಿಸಿದವರು ಜಗತ್ತನ್ನೇ ಗೆದ್ದ ರೀತಿಯಲ್ಲಿ ಸಂಭ್ರಮಿಸಿದರೆ, ಸಿಗದವರು ನಿರಾಸೆಯ ಮೊಗಹೊತ್ತು ಸ್ಥಳದಿಂದ ನಿರ್ಗಮಿಸಿದರು. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸರು ಯಶಸ್ವಿಯಾದರು.

ಐಸಿಸಿ ವಿಶ್ವಕಪ್ ಟೂರ್ನಿಯ ಸಂದರ್ಭ ಭಾರತ- ಇಂಗ್ಲೆಂಡ್ ನಡುವಿನ ಪಂದ್ಯದ ಟಿಕೆಟ್ ಮಾರಾಟದ ವೇಳೆ ಸಾಕಷ್ಟು ಗೊಂದಲ ಉಂಟಾಗಿತ್ತು. ಅಂತಹ ಘಟನೆ ತಪ್ಪಿಸಲು ಕೆಎಸ್‌ಸಿಎ ಎಚ್ಚರಿಕೆ ವಹಿಸಿತ್ತು. ಮಾತ್ರವಲ್ಲ ಪಂದ್ಯದ ಟಿಕೆಟ್‌ಗಳ ಎಲ್ಲ ವಿವರಗಳನ್ನು ಮೊದಲೇ ಸಾರ್ವಜನಿಕರಿಗೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.