ADVERTISEMENT

ಇಂದು ಸಚಿನ್ ಪ್ರತಿಮೆ ಅನಾವರಣ

ಬ್ರಾಡ್ಮನ್, ಶೇನ್ ವಾರ್ನ್ ಜೊತೆ ತೆಂಡೂಲ್ಕರ್

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2013, 19:59 IST
Last Updated 19 ಏಪ್ರಿಲ್ 2013, 19:59 IST

ಸಿಡ್ನಿ (ಪಿಟಿಐ): ಇನ್ನುಮುಂದೆ ಸಿಡ್ನಿಗೆ ಪ್ರವಾಸ ಮಾಡಿದವರಿಗೆ ಸಚಿನ್ ತೆಂಡೂಲ್ಕರ್ ಅವರನ್ನು ನೋಡಬಹುದು. ಆಶ್ಚರ್ಯಗೊಳ್ಳಬೇಡಿ. ಇದು ಅವರ ಮೇಣದ ಪ್ರತಿಮೆ ಅನಾವರಣ ಕುರಿತ ಸ್ದ್ದುದಿ. ತೆಂಡೂಲ್ಕರ್ ಅವರ ಮೇಣದ ಪ್ರತಿಮೆ ಶನಿವಾರ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ (ಎಸ್‌ಸಿಜಿ) ಅನಾವರಣಗೊಳ್ಳಲಿದೆ.

ಏಪ್ರಿಲ್ 24ರಂದು ಸಚಿನ್ 40ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು ಅವರ ಪ್ರತಿಮೆ ಎಸ್‌ಸಿಜಿಯಲ್ಲಿ ಅನಾವರಣಗೊಂಡು, ನಂತರ `ಡಾರ್ಲಿಂಗ್ ಹಾರ್ಬರ್'ನಲ್ಲಿರುವ ವಸ್ತು ಸಂಗ್ರಹಾಲಯದಲ್ಲಿ ಪ್ರವಾಸಿಗರನ್ನು ಆಕರ್ಷಿಸಲಿದೆ. ಈ ಪ್ರತಿಮೆಯನ್ನು ಸಿಡ್ನಿಯಲ್ಲಿರುವ ಮೇಡಮ್ ಟುಸ್ಸಾಡ್ಸ್ ವಸ್ತು ಸಂಗ್ರಹಾಲಯ ಸಿದ್ಧಪಡಿಸಿದೆ. ಆದ್ದರಿಂದ ಇದೂ  ಲಂಡನ್‌ನಲ್ಲಿರುವ ಮೇಣದ ಪ್ರತಿಮೆಯಂತೆಯೇ ಇರುವ ಸಾಧ್ಯತೆಯಿದೆ.

ಸಿಡ್ನಿ ಅಕ್ವೇರಿಯಂ ಸಮೀಪದಲ್ಲಿರುವ ಈ ವಸ್ತು ಸಂಗ್ರಹಾಲಯದಲ್ಲಿ ಈಗಾಗಲೇ ಆಸ್ಟ್ರೇಲಿಯಾದ ಪ್ರಸಿದ್ಧ ಕ್ರಿಕೆಟಿಗರಾದ ಬ್ರಾಡ್ಮನ್ ಮತ್ತು ಶೇನ್ ವಾರ್ನ್ ಅವರ ಮೇಣದ ಪ್ರತಿಮೆಗಳಿವೆ. ಅವುಗಳ ಜೊತೆಗೇ ತೆಂಡೂಲ್ಕರ್ ಪ್ರತಿಮೆಯೂ ಪ್ರದರ್ಶನಗೊಳ್ಳಲಿದೆ.

1998ರಲ್ಲಿ ಬ್ರಾಡ್ಮನ್ ಅವರ 90ನೇ ಹುಟ್ಟುಹಬ್ಬ ಸಂದರ್ಭ ಶುಭಾಶಯ ಹೇಳಲು ಸಚಿನ್ ಅಡಿಲೇಡ್‌ಗೆ ಬಂದಿದ್ದರು. ಆ ಸಂದರ್ಭ ಬ್ರಾಡ್ಮನ್ ಮತ್ತು ಶೇನ್ ವಾರ್ನ್ ಜೊತೆ ಫೋಟೋ ತೆಗೆಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ  ಸಚಿನ್ ಪ್ರತಿಮೆ ಇವರಿಬ್ಬರ ಪ್ರತಿಮೆ ಜೊತೆ ಕಾಣಿಸಿಕೊಳ್ಳುವುದಕ್ಕೆ ಮಹತ್ವ ಬಂದಿದೆ.
ಎಸ್‌ಸಿಜಿಯಲ್ಲಿ ಸಚಿನ್ ಮೂರು ಟೆಸ್ಟ್ ಕ್ರಿಕೆಟ್ ಶತಕಗಳನ್ನು ಬಾರಿಸಿದ್ದು, 2004ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ 241 ರನ್ ಸಿಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.