ADVERTISEMENT

ಇಂದು ಸಿಎಸ್‌ಕೆ–ಡೇರ್‌ ಡೆವಿಲ್ಸ್‌ ಹಣಾಹಣಿ

​ಪ್ರಜಾವಾಣಿ ವಾರ್ತೆ
Published 17 ಮೇ 2018, 19:30 IST
Last Updated 17 ಮೇ 2018, 19:30 IST
ಇಂದು ಸಿಎಸ್‌ಕೆ–ಡೇರ್‌ ಡೆವಿಲ್ಸ್‌ ಹಣಾಹಣಿ
ಇಂದು ಸಿಎಸ್‌ಕೆ–ಡೇರ್‌ ಡೆವಿಲ್ಸ್‌ ಹಣಾಹಣಿ   

ನವದೆಹಲಿ (ಪಿಟಿಐ): ಪ್ಲೇ ಆಫ್ ಹಂತಕ್ಕೇರಿ ನಿರಾಳವಾಗಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಐಪಿಎಲ್‌ನಲ್ಲಿ ಶುಕ್ರವಾರ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಸವಾಲನ್ನು ಎದುರಿಸಲಿದೆ.

ಮಹೇಂದ್ರ ಸಿಂಗ್ ದೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) 12 ಪಂದ್ಯಗಳಿಂದ 16 ಪಾಯಿಂಟ್ ಗಳಿಸಿ ಪಾಯಿಂಟ್‌ ಪಟ್ಟಿಯ ಎರಡನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆದ್ದು ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರುವುದು ತಂಡದ ಉದ್ದೇಶ. ಇನ್ನೊಂದೆಡೆ, ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಡೇರ್ ಡೆವಿಲ್ಸ್ ಗೆದ್ದು ಗೌರವ ಉಳಿಸಿಕೊಳ್ಳಲು ಶ್ರಮಿಸಲಿದೆ.

ಈ ಬಾರಿ ಆರಂಭದಿಂದಲೇ ಉತ್ತಮ ಆಟವಾಡುತ್ತ ಬಂದಿರುವ ಸಿಎಸ್‌ಕೆ ತಂಡ ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ ಒಳಗೊಂಡಂತೆ ಎಲ್ಲ ತಂಡಗಳ ವಿರುದ್ಧವೂ ಪಾರಮ್ಯ ಮೆರೆದಿದೆ. ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಒತ್ತಾಯಿಸಿದ ಪ್ರತಿಭಟನೆ ನಡೆದ ಕಾರಣ ಈ ತಂಡದ ತವರು ಪಂದ್ಯಗಳನ್ನು ಚೆನ್ನೈನಿಂದ ಪುಣೆಗೆ ವರ್ಗಾಯಿಸಲಾಗಿತ್ತು. ಅಲ್ಲೂ ತಂಡ ಉತ್ತಮ ಸಾಮರ್ಥ್ಯ ತೋರಿದೆ.

ADVERTISEMENT

ತಂಡದ ಆರಂಭಿಕ ಜೋಡಿ ಅಂಬಟಿ ರಾಯುಡು ಮತ್ತು ಶೇನ್‌ ವಾಟ್ಸನ್‌ ಗಮನಾರ್ಹ ಆಟ ಆಡಿದ್ದು ಭಾರಿ ಮೊತ್ತದ ಗುರಿ ಬೆನ್ನತ್ತುವುದರಲ್ಲೂ ಚಾಣಾಕ್ಷತನ ಮೆರೆದಿದ್ದಾರೆ. ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ರಾಯುಡು ಈ ವರೆಗೆ ಒಟ್ಟು 535 ರನ್‌ ಗಳಿಸಿದ್ದಾರೆ. ವಾಟ್ಸ್‌ನ್‌ ತಮ್ಮ ಖಾತೆಯಲ್ಲಿ 424 ರನ್‌ ಹೊಂದಿದ್ದಾರೆ.

ನಾಯಕ ಮಹೇಂದ್ರ ಸಿಂಗ್ ದೋನಿ ಸಂದರ್ಭಕ್ಕೆ ತಕ್ಕಂತೆ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ತೋರಿಸಿದ್ದು ಒಟ್ಟು 413 ರನ್‌ ಗಳಿಸಿದ್ದಾರೆ. ತಂಡದ ಬೌಲಿಂಗ್ ವಿಭಾಗ ವೈಯಕ್ತಿಕವಾಗಿ ಯಾರನ್ನೂ ಅವಲಂಬಿಸಿಲ್ಲ. ಸಂಘಟಿತವಾಗಿ ಬ್ಯಾಟ್ಸ್‌ಮನ್‌ಗಳನ್ನು ಮಣಿಸಲು ಈ ತಂಡದ ಬೌಲರ್‌ಗಳಿಗೆ ಸಾಧ್ಯವಾಗಿದೆ.

ಶಾರ್ದೂಲ್ ಠಾಕೂರ್ 11 ವಿಕೆಟ್‌ಗಳನ್ನು ಗಳಿಸಿದ್ದರೆ ಡ್ವೇನ್ ಬ್ರಾವೊ ಒಂಬತ್ತು ವಿಕೆಟ್‌ಗಳೊಂದಿಗೆ ಮಿಂಚಿದ್ದಾರೆ. ಸ್ಪಿನ್ ಜೋಡಿಯಾದ ಹರಭಜನ್ ಸಿಂಗ್ ಮತ್ತು ರವೀಂದ್ರ ಜಡೇಜ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಅಯ್ಯರ್ ಬಳಗಕ್ಕೆ ಗೌರವದ ಪ್ರಶ್ನೆ: ಹಿರಿಯ ಕ್ರಿಕೆಟಿಗ ರಿಕಿ ಪಾಂಟಿಂಗ್ ಅವರಿಂದ ತರಬೇತಿ ಪಡೆದಿರುವ ಡೆಲ್ಲಿ ತಂಡ ನಾಯಕತ್ವ ಬದಲಾದ ನಂತರ ಕೆಲವು ಪಂದ್ಯಗಳಲ್ಲಿ ಪುಟಿದೆದ್ದರೂ ನಂತರ ಸೋಲಿನ ದವಡೆಗೆ ಸಿಲುಕಿತ್ತು.

ಹೀಗಾಗಿ ಸಿಎಸ್‌ಕೆಗೆ ಈ ತಂಡ ಸುಲಭ ತುತ್ತಾಗಬಹುದು ಎಂಬ ಲೆಕ್ಕಾಚಾರ ಹಾಕಲಾಗಿದೆ. ಆದರೆ ಗೆದ್ದು ಗೌರವ ಉಳಿಸಿಕೊಳ್ಳುವುದಕ್ಕಾಗಿ ಶ್ರೇಯಸ್ ಅಯ್ಯರ್‌ ನಾಯಕತ್ವದ ತಂಡ ಪ್ರಯತ್ನಿಸಲಿದೆ. ಆದ್ದರಿಂದ ಕ್ರಿಕೆಟ್ ಪ್ರಿಯರು ರೋಚಕ ಪಂದ್ಯದ ಸವಿಯುಣ್ಣುವ ನಿರೀಕ್ಷೆಯಲ್ಲಿದ್ದಾರೆ.

ಆರ್‌ಸಿಬಿ ಎದುರಿನ ಕಳೆದ ಪಂದ್ಯದಲ್ಲಿ ಸಂದೀಪ್ ಲಮಿಚಾನೆ, ಅಭಿಷೇಕ್‌ ಶರ್ಮಾ ಮತ್ತು ಜೂನಿಯರ್ ಡಾಲಾ ಅವರಿಗೆ ತಂಡದ ಆಡಳಿತ ಅವಕಾಶ ನೀಡಿತ್ತು. ಲಮಿಚಾನೆ ಉತ್ತಮ ಬೌಲಿಂಗ್ ಮಾಡಿದ್ದು ಅಭಿಷೇಕ್‌ ಶರ್ಮಾ 19 ಎಸೆತಗಳಲ್ಲಿ 46 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಡಾಲಾ ನಿರಾಸೆ ಮೂಡಿಸಿದ್ದರು. ಆದ್ದರಿಂದ ಲಮಿಚಾನೆ ಮತ್ತು ಶರ್ಮಾ ಶುಕ್ರವಾರದ ಪಂದ್ಯದಲ್ಲೂ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆ ಇದೆ.

ಪಂದ್ಯ ಆರಂಭ: ರಾತ್ರಿ 8.00

ನೇರ ಪ್ರಸಾರ: ಸ್ಟಾರ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.