ADVERTISEMENT

ಇಟಲಿ ವನಿತೆಯರಿಗೆ ಮೂರನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 19:30 IST
Last Updated 25 ಫೆಬ್ರುವರಿ 2012, 19:30 IST

ನವದೆಹಲಿ: ಇಟಲಿ ಮತ್ತು ಕೆನಡಾ ಮಹಿಳೆಯರ ತಂಡಗಳು ಶನಿವಾರ ಸಂಜೆ ಒಲಿಂಪಿಕ್ ಹಾಕಿ ಅರ್ಹತಾ ಟೂರ್ನಿಯ ಮಹಿಳೆಯರ ವಿಭಾಗದಲ್ಲಿ ಕ್ರಮವಾಗಿ ಮೂರು ಮತ್ತು ಐದನೇ ಸ್ಥಾನ ಪಡೆದವು.

ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಇಟಲಿ 2-1ರಿಂದ ಉಕ್ರೇನ್ ತಂಡವನ್ನು ಸೋಲಿಸಿತು.

ಪ್ರಥಮಾರ್ಧದ ವಿರಾಮಕ್ಕೆ ಒಂದು ನಿಮಿಷ ಬಾಕಿಯಿದ್ದಾಗ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಇಟಲಿ ತಂಡದ ಡೋರಿಯಾನಾ ಪಡಾಲಿನೋ ಸ್ಕೂಪ್ ಮೂಲಕ ಗೋಲು ಗಳಿಸಿದರು.

ದ್ವಿತೀಯಾರ್ಧದಲ್ಲಿ ತೀವ್ರ ಹೋರಾಟ ನಡೆಸಿದ ಉಕ್ರೇನ್, 42ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಬೊಧಾನಾ ಸೆಡೋವಾ ಹೊಡೆದ ಗೋಲಿನಿಂದ 1-1ರ ಸಮಬಲ ಸಾಧಿಸಿತು.

ಆದರೆ 67ನೇ ನಿಮಿಷದಲ್ಲಿ ಇಟಲಿಯ ಸೆಲಿನಾ ಟ್ರ್ಯಾವರ್ಸೋ ಗಳಿಸಿದ ಫೀಲ್ಡ್ ಗೋಲಿನಿಂದ ಉಕ್ರೇನ್ ಗೆಲುವಿನ ಆಸೆ ಕಮರಿತು. ಇದಕ್ಕೂ ಮುನ್ನ ಬಿರುಸಿನ ಆಟಕ್ಕಿಳಿದ ಉಕ್ರೇನ್‌ನ ಒಬ್ಬ ಆಟಗಾರ್ತಿ ಹಳದಿ ಕಾರ್ಡು ಮತ್ತೊಬ್ಬ ಆಟಗಾರ್ತಿ ಹಸಿರು    ಕಾರ್ಡ್ ದರ್ಶನ ಮಾಡಬೇಕಾಯಿತು.

ಕೆನಡಾಕ್ಕೆ ಐದನೇ ಸ್ಥಾನ: ಸಂಘಟಿತ ಹೋರಾಟ ಪ್ರದರ್ಶಿಸಿದ ಕೆನಡಾ ವನಿತೆಯರು  ಒಲಿಂಪಿಕ್ ಅರ್ಹತಾ ಟೂರ್ನಿಯಲ್ಲಿ ಐದನೇ ಸ್ಥಾನ ಪಡೆಯಿತು.

ಮಧ್ಯಾಹ್ನ ನಡೆದ ಪಂದ್ಯದಲ್ಲಿ ಕೆನಡಾ ತಂಡವು 3-0ಯಿಂದ ಪೊಲೆಂಡ್ ತಂಡವನ್ನು ಸೋಲಿಸಿತು. ಕೆನಡಾದ ಥೀ ಕಲ್ಲಿ (18ನಿ), ಬ್ರಿಯೆನ್ನಾ ಸ್ಟೇರ್ಸ್‌ (40ನಿ) ಮತ್ತು ಸ್ಟೀಫನಿ ಜೇಮ್ಸನ್ (45ನಿ) ತಲಾ ಒಂದು ಗೋಲು ಗಳಿಸಿ, ತಂಡದ ಗೆಲುವಿಗೆ ಕಾರಣರಾದರು. ಲೀಗ್ ಹಂತದಲ್ಲಿಯೂ ಪೊಲೆಂಡ್ ಒಂದೂ ಪಂದ್ಯವನ್ನು ಗೆದ್ದಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.