ADVERTISEMENT

ಇದು ಮತ್ತೊಂದು ಸೋಲಿನ ಕಥೆ!

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಸಿಡ್ನಿ: ಮಹೇಂದ್ರ ಸಿಂಗ್ ದೋನಿ ಬಳಗ ಗೆಲುವನ್ನು ಮರೆತ ಹಾಗೆ ಕಾಣುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮುಖಭಂಗ ಅನುಭವಿಸಿದ್ದ ಭಾರತ ಇದೀಗ ಟ್ವೆಂಟಿ-20 ಸರಣಿಯ ಮೊದಲ ಪಂದ್ಯದಲ್ಲೂ ಮುಗ್ಗರಿಸಿದೆ.

ಎಎನ್‌ಜೆಡ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ 31 ರನ್‌ಗಳ ಜಯ ಸಾಧಿಸಿದ ಆಸ್ಟ್ರೇಲಿಯಾ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆಸೀಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 171 ರನ್ ಪೇರಿಸಿತು. ಮ್ಯಾಥ್ಯೂ ವೇಡ್ (72, 43 ಎಸೆತ, 5 ಬೌಂ, 3 ಸಿಕ್ಸರ್) ಅಬ್ಬರದ ಅರ್ಧಶತಕ ಆತಿಥೇಯ ತಂಡದ ಸವಾಲಿನ ಮೊತ್ತಕ್ಕೆ ಕಾರಣ.

ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 140 ರನ್ ಗಳಿಸಲಷ್ಟೇ ಶಕ್ತವಾಯಿತು. ಯುವ ಆಟಗಾರರ ಆಗಮನದಿಂದಾಗಿ `ಮಹಿ~ ಬಳಗದಿಂದ ಚೇತರಿಕೆಯ ಪ್ರದರ್ಶನ ನಿರೀಕ್ಷಿಸಲಾಗಿತ್ತು. ಆದರೆ ಸೋಲಿನ ದುರಂತ ಕತೆ ಮುಂದುವರಿದದ್ದು ಮಾತ್ರ ವಿಪರ್ಯಾಸ. ನಿಗದಿತ ಓವರ್‌ಗಳ ಪಂದ್ಯದಲ್ಲಿ ಪಳಗಿರುವ `ಸ್ಪೆಶಲಿಸ್ಟ್~ಗಳು ಕೂಡಾ ಎಡವಿದರು.

ಭಾರತದ ಪರ ಅಲ್ಪ ಹೋರಾಟ ನಡೆಸಿದ್ದು ನಾಯಕ ದೋನಿ (ಔಟಾಗದೆ 48, 43 ಎಸೆತ, 1 ಬೌಂ, 3 ಸಿಕ್ಸರ್) ಮಾತ್ರ. ಉಳಿದವರು ಆಸೀಸ್ ತಂಡದ ಶಿಸ್ತಿನ ಬೌಲಿಂಗ್ ಮುಂದೆ ಪರದಾಟ ನಡೆಸಿದರು. ಡೇವಿಡ್ ಹಸ್ಸಿ (4ಕ್ಕೆ 2) ಮತ್ತು ಡೇನಿಯಲ್ ಕ್ರಿಸ್ಟಿಯನ್ (35ಕ್ಕೆ 2) ಎದುರಾಳಿ ತಂಡದ ಬ್ಯಾಟಿಂಗ್‌ನ ಬೆನ್ನು ಮುರಿದರು.

ಭಾರತ ಎಂಟು ಓವರ್‌ಗಳಲ್ಲಿ 53 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಾಗಲೇ ಪಂದ್ಯದ ಫಲಿತಾಂಶ ಹೆಚ್ಚುಕಡಿಮೆ ಸ್ಪಷ್ಟವಾಗಿತ್ತು. ವೀರೇಂದ್ರ ಸೆಹ್ವಾಗ್ (4) ಮತ್ತು ಗೌತಮ್ ಗಂಭೀರ್ (20, 14 ಎಸೆತ) ಉತ್ತಮ ಆರಂಭ ನೀಡಲಿಲ್ಲ. ಟೆಸ್ಟ್ ಸರಣಿಯಲ್ಲಿ ತಕ್ಕಮಟ್ಟಿನ ಆಟವಾಡಿದ್ದ ವಿರಾಟ್ ಕೊಹ್ಲಿ (22, 21 ಎಸೆತ) ಹಾಗೂ ಸುರೇಶ್ ರೈನಾ (14) ತಂಡದ ನೆರವಿಗೆ ನಿಲ್ಲಲಿಲ್ಲ.

ಟೆಸ್ಟ್ ಸರಣಿಯ ಉದ್ದಕ್ಕೂ ಪ್ರೇಕ್ಷನಾಗಿಯೇ ಇದ್ದ ರೋಹಿತ್ ಶರ್ಮ ತಾವೆದುರಿಸಿದ ಮೊದಲ ಎಸೆತದಲ್ಲೇ ಔಟಾದರು. `ಪಾರ್ಟ್‌ಟೈಮ್~ ಬೌಲರ್ ಹಸ್ಸಿ ಬೌಲಿಂಗ್‌ನಲ್ಲಿ ಅವರು ಕ್ಲೀನ್ ಬೌಲ್ಡ್ ಆದರು.

ಗಂಭೀರ್ ಮತ್ತು ಕೊಹ್ಲಿ ಎರಡನೇ ವಿಕೆಟ್‌ಗೆ 30 ಎಸೆತಗಳಲ್ಲಿ 41 ರನ್ ಸೇರಿಸಿದಾಗ ಭಾರತ ಗೆಲುವಿನ ಭರವಸೆ ಮೂಡಿಸಿತ್ತು.

ಆದರೆ 34 ರನ್‌ಗಳ ಅಂತರದಲ್ಲಿ ಐದು ವಿಕೆಟ್‌ಗಳು ಉರುಳಿದ ಕಾರಣ ಸೋಲಿನ ಹಾದಿ ಹಿಡಿಯಿತು. ಮೂರು ಭರ್ಜರಿ ಸಿಕ್ಸರ್‌ಗಳ ಮೂಲಕ ದೋನಿ ಕೊನೆಯಲ್ಲಿ ಹೋರಾಟ ನಡೆಸಿದರೂ ಆಗಲೇ ಕಾಲ ಮಿಂಚಿಹೋಗಿತ್ತು.

ಮಿಂಚಿದ ವೇಡ್, ಹಸ್ಸಿ: ಮೋಡ ಕವಿದ ವಾತಾವರಣವಿದ್ದ ಕಾರಣ ದೋನಿ ಮೊದಲು ಫೀಲ್ಡ್ ಮಾಡಲು ನಿರ್ಧರಿಸಿದರು. ಅವರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ್ದು ಮ್ಯಾಥ್ಯೂ ವೇಡ್. ಈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಭಾರತದ ಎಲ್ಲ ಬೌಲರ್‌ಗಳನ್ನು ಲೀಲಾಜಾಲವಾಗಿ ಎದುರಿಸಿದರು. ರೈನಾ ಎಸೆತದಲ್ಲಿ ಔಟಾಗುವ ಮುನ್ನ ಅವರು ತಂಡವನ್ನು ಸುಭದ್ರ ಸ್ಥಿತಿಯಲ್ಲಿ ತಂದು ನಿಲ್ಲಿಸಿದ್ದರು.

ವೇಡ್ ಮರಳಿದ ಬಳಿಕ ಡೇವಿಡ್ ಹಸ್ಸಿ (42, 30 ಎಸೆತ, 1 ಬೌಂ, 3 ಸಿಕ್ಸರ್) ತಂಡದ ಇನಿಂಗ್ಸ್‌ಗೆ ಬಲ ತುಂಬಿದರು. ಇದರಿಂದ ಭಾರತಕ್ಕೆ ಸವಾಲಿನ ಗುರಿ ನೀಡಲು ಆಸ್ಟ್ರೇಲಿಯಾಕ್ಕೆ ಸಾಧ್ಯವಾಯಿತು. ಇದಕ್ಕೂ ಮುನ್ನ ಡೇವಿಡ್ ವಾರ್ನರ್ (14 ಎಸೆತಗಳಲ್ಲಿ 25) ದೋನಿ ಬಳಗದ ಬೌಲಿಂಗ್‌ನ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದರು.

ಆರ್. ವಿನಯ್ ಕುಮಾರ್ (4-0-28-1) ಅಲ್ಪ ಪ್ರಭಾವಿ ಎನಿಸಿದರು. ಪ್ರವೀಣ್ ಕುಮಾರ್ ಮೂರು ಓವರ್‌ಗಳಲ್ಲಿ 34 ರನ್ ಬಿಟ್ಟುಕೊಟ್ಟರು. ಆಸೀಸ್ ಇನಿಂಗ್ಸ್ ವೇಳೆ ಮಳೆ ಸುರಿದ ಕಾರಣ 20 ನಿಮಿಷಗಳ ಕಾಲ ಆಟಕ್ಕೆ ಅಡಚಣೆ ಉಂಟಾಗಿತ್ತು.

ಆಸ್ಟ್ರೇಲಿಯಾದ ನಾಯಕ ಜಾರ್ಜ್ ಬೈಲಿ, ಕ್ಸೇವಿಯರ್ ಡೊಹೆರ್ಟಿ, ಜೇಮ್ಸ ಫಾಲ್ಕನೆರ್ ಮತ್ತು ಭಾರತದ ರಾಹುಲ್ ಶರ್ಮ ಅವರಿಗೆ ಇದು     ಚೊಚ್ಚಲ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯವಾಗಿತ್ತು.

ಸ್ಕೋರು ವಿವರ
ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 171

ವಾರ್ನರ್ ಸಿ ರೈನಾ ಬಿ ಆರ್. ವಿನಯ್ ಕುಮಾರ್  25
ಮ್ಯಾಥ್ಯೂ ವೇಡ್ ಬಿ ಸುರೇಶ್ ರೈನಾ  72
ಟ್ರ್ಯಾವಿಸ್ ಬಿರ್ಟ್ ಸಿ ರೈನಾ ಬಿ ಆರ್. ಅಶ್ವಿನ್  17
ಡೇವಿಡ್ ಹಸ್ಸಿ ಬಿ ರಾಹುಲ್ ಶರ್ಮ  42
ಜಾರ್ಜ್ ಬೈಲಿ ಔಟಾಗದೆ  12
ಮಿಷೆಲ್ ಮಾರ್ಷ್ ಔಟಾಗದೆ  00
ಇತರೆ: (ಲೆಗ್‌ಬೈ-1, ವೈಡ್-2)  03
ವಿಕೆಟ್ ಪತನ: 1-38 (ವಾರ್ನರ್; 3.5), 2-79 (ಬಿರ್ಟ್; 9.6), 3-135 (ವೇಡ್; 15.4), 4-170 (ಹಸ್ಸಿ; 19.5)
ಬೌಲಿಂಗ್: ಆರ್. ಅಶ್ವಿನ್ 4-0-34-1, ಪ್ರವೀಣ್ ಕುಮಾರ್ 3-0-34-0, ಆರ್. ವಿನಯ್ ಕುಮಾರ್ 4-0-28-1, ಸುರೇಶ್ ರೈನಾ 3-0-22-1, ರಾಹುಲ್ ಶರ್ಮ 3.4-0-27-1, ರೋಹಿತ್ ಶರ್ಮ 0.2-0-2-0, ರವೀಂದ್ರ ಜಡೇಜ 2-0-23-0

ಭಾರತ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 140

ಗೌತಮ್ ಗಂಭೀರ್ ಸಿ ಮಾರ್ಷ್ ಬಿ ಡೇವಿಡ್ ಹಸ್ಸಿ  20
ವೀರೇಂದ್ರ ಸೆಹ್ವಾಗ್ ಸಿ ಹಸ್ಸಿ ಬಿ ಬ್ರೆಟ್ ಲೀ  04
ವಿರಾಟ್ ಕೊಹ್ಲಿ ಸಿ ವಾರ್ನರ್ ಬಿ ಬ್ರಾಡ್ ಹಾಗ್  22
ಸುರೇಶ್ ರೈನಾ ಬಿ ಡೇನಿಯಲ್ ಕ್ರಿಸ್ಟಿಯನ್  14
ರೋಹಿತ್ ಶರ್ಮ ಬಿ ಡೇವಿಡ್ ಹಸ್ಸಿ  00
ಮಹೇಂದ್ರ ಸಿಂಗ್ ದೋನಿ ಔಟಾಗದೆ  48
ರವೀಂದ್ರ ಜಡೇಜ ಸಿ ವಾರ್ನರ್ ಬಿ ಕ್ರಿಸ್ಟಿಯನ್  07
ಆರ್. ಅಶ್ವಿನ್ ಔಟಾಗದೆ  15
ಇತರೆ: (ಲೆಗ್‌ಬೈ-3, ವೈಡ್-6, ನೋಬಾಲ್-1)  10
ವಿಕೆಟ್ ಪತನ: 1-6 (ಸೆಹ್ವಾಗ್; 0.3), 2-47 (ಗಂಭೀರ್; 5.3), 3-53 (ಕೊಹ್ಲಿ; 6.4), 4-53 (ರೋಹಿತ್; 7.1), 5-72 (ರೈನಾ; 11.3), 6-81 (ಜಡೇಜ; 13.3).

ಬೌಲಿಂಗ್: ಬ್ರೆಟ್ ಲೀ 4-0-36-1, ಕ್ಸೇವಿಯರ್ ಡೊಹೆರ್ಟಿ 4-0-23-0, ಜೇಮ್ಸ ಫಾಲ್ಕನೆರ್ 2-0-18-0, ಡೇನಿಯಲ್ ಕ್ರಿಸ್ಟಿಯನ್ 4-0-35-2, ಡೇವಿಡ್ ಹಸ್ಸಿ 2-0-4-2, ಬ್ರಾಡ್ ಹಾಗ್ 4-0-21-1

ಫಲಿತಾಂಶ: ಆಸ್ಟ್ರೇಲಿಯಾಕ್ಕೆ 31 ರನ್ ಗೆಲುವು ಹಾಗೂ ಸರಣಿಯಲ್ಲಿ 1-0 ರಲ್ಲಿ ಮುನ್ನಡೆ
ಪಂದ್ಯಶ್ರೇಷ್ಠ: ಮ್ಯಾಥ್ಯೂ ವೇಡ್
ಮುಂದಿನ ಪಂದ್ಯ: ಫೆಬ್ರುವರಿ 3 (ಮೆಲ್ಬರ್ನ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.