ADVERTISEMENT

ಇಶಾಂತ್‌ಗೆ ಜ್ವರ; ದಿಂಡಾಗೆ ಕರೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2012, 19:30 IST
Last Updated 13 ನವೆಂಬರ್ 2012, 19:30 IST
ಇಶಾಂತ್‌ಗೆ ಜ್ವರ; ದಿಂಡಾಗೆ ಕರೆ
ಇಶಾಂತ್‌ಗೆ ಜ್ವರ; ದಿಂಡಾಗೆ ಕರೆ   

ಅಹಮದಾಬಾದ್: ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಇಶಾಂತ್ ಶರ್ಮ ಜ್ವರದಿಂದ ಬಳಲುತ್ತಿದ್ದಾರೆ. ಈ ಕಾರಣ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಪಶ್ಚಿಮ ಬಂಗಾಳದ ವೇಗಿ ಅಶೋಕ್ ದಿಂಡಾ ಅವರನ್ನು ಹೆಚ್ಚುವರಿ ಆಟಗಾರನನ್ನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

`ಇಶಾಂತ್ ಜ್ವರಕ್ಕೆ ಒಳಗಾಗಿದ್ದಾರೆ. ಮೊದಲ ಟೆಸ್ಟ್ ವೇಳೆಗೆ ಅವರು ಗುಣಮುಖರಾಗುವ ನಿರೀಕ್ಷೆ ಇದೆ. ಆದರೆ ಕಾಯ್ದಿರಿಸಿದ ಆಟಗಾರನನ್ನಾಗಿ ವೇಗಿ ಅಶೋಕ್ ದಿಂಡಾ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ತಕ್ಷಣವೇ ಅಹಮದಾಬಾದ್‌ಗೆ ಆಗಮಿಸುವಂತೆ ಸೂಚಿಸಲಾಗಿದೆ~ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆ ತಿಳಿಸಿದ್ದಾರೆ.

ಇಶಾಂತ್ ಮಂಗಳವಾರ ನಡೆದ ಅಭ್ಯಾಸಕ್ಕೆ ಆಗಮಿಸಿರಲಿಲ್ಲ. ಗುಣಮುಖರಾದರೂ ಅವರು ಮೊಟೇರಾ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ. ಏಕೆಂದರೆ ಇಬ್ಬರು ವೇಗಿಗಳನ್ನು ಮಾತ್ರ ಆಡಿಸಲಿರುವ ಕಾರಣ ಜಹೀರ್ ಖಾನ್ ಹಾಗೂ ಉಮೇಶ್ ಯಾದವ್ ಕಣಕ್ಕಿಳಿಯುವ ಸಾಧ್ಯತೆ ಇದೆ. ದಿಂಡಾ ಇದುವರೆಗೆ ಟೆಸ್ಟ್ ಆಡಿಲ್ಲ. ಅವರು ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.