ADVERTISEMENT

ಎಂಟರ ಘಟ್ಟಕ್ಕೆ ಮನು–ಸುಮಿತ್ ಜೋಡಿ

ಮಿಶ್ರಡಬಲ್ಸ್‌ ಕ್ವಾರ್ಟರ್‌ಗೆ ಪ್ರಣವ್–ಸಿಕ್ಕಿ ರೆಡ್ಡಿ

ಪಿಟಿಐ
Published 14 ಜುಲೈ 2017, 19:30 IST
Last Updated 14 ಜುಲೈ 2017, 19:30 IST
ಸುಮಿತ್‌ ರೆಡ್ಡಿ ಮತ್ತು ಮನು ಅತ್ರಿ
ಸುಮಿತ್‌ ರೆಡ್ಡಿ ಮತ್ತು ಮನು ಅತ್ರಿ   

ಕ್ಯಾಲ್ಗರಿ: ಭಾರತದ ಮನು ಅತ್ರಿ ಮತ್ತು ಬಿ. ಸುಮಿತ್ ರೆಡ್ಡಿ  ಜೋಡಿಯು ಇಲ್ಲಿ ನಡೆಯುತ್ತಿರುವ ಕೆನಡಾ ಓಪನ್ ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್‌ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು.

ಆದರೆ ಸಿಂಗಲ್ಸ್‌ನಲ್ಲಿ ಎಚ್‌.ಎಸ್. ಪ್ರಣಯ್ ಆಘಾತ ಅನುಭವಿಸಿದರು.

ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಮನು ಮತ್ತು ಸುಮಿತ್ ಅವರು 21–17, 17–21, 21–13 ಗೇಮ್‌ಗಳಿಂದ ಕೊರಿಯಾದ ಚೊಯ್ ಸಲ್ಗಾಯು ಮತ್ತು ಜೇ ಹ್ವಾನ್ ಜೋಡಿಯ ವಿರುದ್ಧ ಜಯಿಸಿದರು.

ADVERTISEMENT

45 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ  ಭಾರತದ ಜೋಡಿಯು ಮೊದಲ ಗೇಮ್‌ನಲ್ಲಿ  ಕೊರಿಯಾ  ಆಟ ಗಾರರ ಕಠಿಣ ಪೈಪೋಟಿಯನ್ನು ದಿಟ್ಟತನದಿಂದ ಎದುರಿಸಿ ಗೆದ್ದಿತು. ಆದರೆ ಎರಡನೇ ಗೇಮ್‌ನಲ್ಲಿ ಪರಸ್ಪರ ಹೊಂದಾಣಿಕೆಯ ಕೊರತೆಯಿಂದ ಕೆಲವು ಪಾಯಿಂಟ್‌ಗಳನ್ನು ಕೈಚೆಲ್ಲಿದ್ದು ದುಬಾರಿಯಾಯಿತು. ಆದ್ದರಿಂದ ಗೇಮ್‌ನಲ್ಲಿ ಸೋಲಬೇಕಾಯಿತು. ಆದರೆ ಮೂರನೇ ಗೇಮ್‌ನಲ್ಲಿ ಪುಟಿದೆದ್ದ ಮನು ಮತ್ತು ಸುಮಿತ್ ಅಮೋಘ ಆಟವಾಡಿದರು. ನಿಖರವಾದ ಡ್ರಾಪ್ ಮತ್ತು ಚುರುಕಾದ ಸ್ಮ್ಯಾಷ್‌ಗಳ ಮೂಲಕ ಎದುರಾಳಿ ಜೋಡಿಯ ಮೇಲೆ ಒತ್ತಡ ಹೇರಿದರು. ಗೇಮ್ ಜಯಿಸುವಲ್ಲಿಯೂ ಸಫಲರಾದರು.

ಮನು–ಸುಮಿತ್ ಅವರು ಎಂಟರ ಘಟ್ಟದಲ್ಲಿ ಕೊರಿಯಾದ ಕಿಮ್ ವೊನ್ ಹೊ ಮತ್ತು ಸಿಯಾಂಗ್ ಜೇ ಸಿಯೊ ಅವರನ್ನು ಎದುರಿಸಲಿದ್ದಾರೆ.

ಪ್ರಣವ್–ಸಿಕ್ಕಿಗೆ ಜಯ: ದ್ವಿತೀಯ ಶ್ರೇಯಾಂಕದ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಎನ್. ಸಿಕ್ಕಿ ರೆಡ್ಡಿ ಅವರ ಜೋಡಿಯು ಮಿಶ್ರ ಡಬಲ್ಸ್‌ ಕ್ವಾರ್ಟರ್‌ಫೈನಲ್ ಪ್ರವೇಶಿಸಿತು.

ಪ್ರೀಕ್ವಾರ್ಟರ್‌ ಫೈನಲ್‌ನಲ್ಲಿ ಪ್ರಣವ್ ಜೋಡಿಯು 21–11, 21–7ರಿಂದ ನೆದರ್ಲೆಂಡ್ಸ್‌ನ ರಾಬಿನ್ ಟೇಬಲಿಂಗ್ ಮತ್ತು ಚೆರೈಲ್ ಸೀನನ್ ವಿರುದ್ಧ ಜಯಿಸಿದರು. ಪ್ರಣವ್ ಮತ್ತು ಸಿಕ್ಕಿ ಅವರು ಈಚೆಗೆ ಸೈಯದ್ ಮೋದಿ ಇಂಟರ್‌ನ್ಯಾಷನಲ್ ಚಾಂಪಿಯನ್‌ಷಿಪ್‌ ಗೆದ್ದು ಕೊಂಡಿದ್ದರು. ಇದೀಗ ಮತ್ತೊಂದು ಪ್ರಶಸ್ತಿಯ ಮೇಲೆ ಕಣ್ಣಿಟ್ಟಿ ದ್ದಾರೆ. ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಕಿಮ್ ವೊನ್ ಹೊ ಮತ್ತು ಶಿನ್ ಸೆಯಾಂಗ್ ಚಾನ್ ವಿರುದ್ಧ ಆಡಲಿದ್ದಾರೆ.

ಇನ್ನೊಂದು ಪಂದ್ಯದಲ್ಲಿ ಕೊಹಿ ಗೊಂಡು ಮತ್ತು ವಕಾನಾ ನಾಗಹರಾ 21–9, 21–8ರಿಂದ ಭಾರತದ ತರುಣ್ ಕೊನಾ ಮತ್ತು ಮೇಘನಾ ಜಕ್ಕಂಪುಡಿ ವಿರುದ್ಧ ಸೋತರು.

ಪ್ರಣಯ್‌ಗೆ ನಿರಾಸೆ: ಪುರುಷರ ಸಿಂಗಲ್ಸ್‌ ನಲ್ಲಿ ಎರಡನೇ ಶ್ರೇಯಾಂಕದ ಪ್ರಣಯ್ 21–17, 14–21, 13–21 ಗೇಮ್‌ ಗಳಿಂದ ಒಂಬತ್ತನೇ ಶ್ರೇಯಾಂಕದ, ಕೊರಿಯಾದ ಜಿಯಾನ್ ಹೆಯಾಕ್ ಜಿನ್ ವಿರುದ್ಧ ಪರಾಭವಗೊಂಡರು.

ಇನ್ನೊಂದು ಪಂದ್ಯದಲ್ಲಿ ಕರಣ್ ರಾಜ್ನ ರಾಜರಾಜನ್ 18–21, 14–21ರಿಂದ ಜಪಾನ್‌ನ ಕೊಕಿ ವಾಟನಬೆ ವಿರುದ್ಧ ಸೋಲನುಭವಿಸಿದರು.

ಸ್ಪೇನ್‌ನ ಐದನೇ ಶ್ರೇಯಾಂಕದ ಆಟಗಾರ ಪಾಬ್ಲೊ ಅಬಿಯಾನ್ 21–15, 21–23, 21–14ರಿಂದ ಧಾರವಾಡದ ಹುಡುಗ ಅಭಿಷೇಕ್  ಎಲಿಗಾರ್ ವಿರುದ್ಧ ಜಯಿಸಿದರು.

ಕಾಮನ್‌ವೆಲ್ತ್‌ ಕ್ರೀಡಾಕೂಟದ ಚಾಂಪಿಯನ್ ಆಟಗಾರ ಪರುಪಳ್ಳಿ ಕಶ್ಯಪ್ 10–21, 21–10, 15–21 ರಿಂದ ವಾಟನಬೆ ವಿರುದ್ಧ ಸೋತು ನಿರ್ಗಮಿಸಿದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ಋತ್ವಿಕಾ ಶಿವಾನಿ ಗದ್ದೆ 13–21, 21–17, 19–21 ರಿಂದ ಎರಡನೇ ಶ್ರೇಯಾಂಕದ, ಜಪಾನಿನ ಅಯಾ ಒಹೊರಿ ವಿರುದ್ಧ  ಸೋಲನುಭವಿಸಿದರು.

ರಾಷ್ಟ್ರೀಯ ಚಾಂಪಿಯನ್ ರಿತುಪರ್ಣಾ ದಾಸ್ 21–9, 18–21, 16–21ರಿಂದ ಜಪಾನಿನ ಹರುಕೊ ಸುಜುಕಿ ವಿರುದ್ಧ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.