ADVERTISEMENT

ಎಂಟರ ಘಟ್ಟಕ್ಕೆ ರೋಜರ್‌ ಫೆಡರರ್‌

ಕ್ರೊವೇಷ್ಯಾದ ಮರಿನ್‌ ಸಿಲಿಕ್‌ ಮಿಂಚು

ಏಜೆನ್ಸೀಸ್
Published 27 ಅಕ್ಟೋಬರ್ 2017, 20:03 IST
Last Updated 27 ಅಕ್ಟೋಬರ್ 2017, 20:03 IST
ಎಂಟರ ಘಟ್ಟಕ್ಕೆ ರೋಜರ್‌ ಫೆಡರರ್‌
ಎಂಟರ ಘಟ್ಟಕ್ಕೆ ರೋಜರ್‌ ಫೆಡರರ್‌   

ಬಾಸೆಲ್‌: ಸ್ವಿಟ್ಜರ್‌ಲೆಂಡ್‌ನ ಆಟಗಾರ ರೋಜರ್ ಫೆಡರರ್‌, ಬಾಸೆಲ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಎಂಟರ ಘಟ್ಟ ಪ್ರವೇಶಿಸಿದ್ದಾರೆ.

ಗುರುವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಫೆಡರರ್‌ 6–1, 6–3ರ ನೇರ ಸೆಟ್‌ಗಳಿಂದ ಫ್ರಾನ್ಸ್‌ನ ಬೆನೆಟ್ ಪಿಯರ್ ಅವರನ್ನು ಸೋಲಿಸಿದರು.

ಇದರೊಂದಿಗೆ ಟೂರ್ನಿಯಲ್ಲಿ 15ನೇ ಬಾರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದರು. ಜೊತೆಗೆ ಪಿಯರ್ ವಿರುದ್ಧದ ಗೆಲುವಿನ ದಾಖಲೆಯನ್ನು 5–0ಗೆ ಹೆಚ್ಚಿಸಿಕೊಂಡರು.

ADVERTISEMENT

ಇಲ್ಲಿ ಅಗ್ರಶ್ರೇಯಾಂಕ ಹೊಂದಿರುವ ರೋಜರ್‌ ಆರಂಭಿಕ ಸೆಟ್‌ನಲ್ಲಿ ಆಕ್ರಮ ಣಕಾರಿ ಆಟ ಆಡಿದರು.

ಬಲಿಷ್ಠ ಹಿಂಗೈ ಮತ್ತು ಮುಂಗೈ ಹೊಡೆತಗಳ ಮೂಲಕ ಸುಲಭವಾಗಿ ಗೇಮ್‌ ಬೇಟೆಯಾಡಿದ ಅವರು ಸೇಂಟ್‌ ಜಾಕೊಬ್‌ಶೆಲ್ಲೆ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳನ್ನು ರಂಜಿಸಿದರು.

ಎರಡನೇ ಸೆಟ್‌ನಲ್ಲಿ ಫೆಡರರ್‌ ಆಟ ಇನ್ನಷ್ಟು ಕಳೆಗಟ್ಟಿತು. ಶರವೇಗದ ಸರ್ವ್‌ ಮತ್ತು ಆಕರ್ಷಕ ಡ್ರಾಪ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಅವರು 57ನೇ ನಿಮಿಷದಲ್ಲಿ ಗೆಲುವಿನ ತೋರಣ ಕಟ್ಟಿದರು.

ಗ್ರ್ಯಾನ್‌ಸ್ಲ್ಯಾಮ್‌ನಲ್ಲಿ 19 ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿರುವ ಫೆಡರರ್‌ ಮುಂದಿನ ಸುತ್ತಿನಲ್ಲಿ ಫ್ರಾನ್ಸ್‌ನ ಆಡ್ರಿಯನ್‌ ಮನ್ನಾರಿನೊ ವಿರುದ್ಧ ಸೆಣಸಲಿದ್ದಾರೆ.

16ರ ಘಟ್ಟದ ಇನ್ನೊಂದು ಹೋರಾಟದಲ್ಲಿ ಮನ್ನಾರಿನೊ 4–6, 6–1, 6–2ರಲ್ಲಿ ಕೆನಡಾದ ಡೆನಿಸ್‌ ಶಪೊವಾಲೊವ್‌ ಅವರನ್ನು ಸೋಲಿಸಿದರು.

ಹಾಲಿ ಚಾಂಪಿಯನ್‌ ಮರಿನ್‌ ಸಿಲಿಕ್‌ 6–3, 3–6, 6–3ರಲ್ಲಿ ಕ್ರೊವೇಷ್ಯಾದವರೇ ಆದ ಬೊರ್ನಾ ಕೊರಿಕ್‌ ವಿರುದ್ಧ ಗೆದ್ದರು.

ನಾಲ್ಕನೇ ಶ್ರೇಯಾಂಕಿತ ಆಟಗಾರ ವುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ 6–4, 6–4ರಲ್ಲಿ ಫ್ರಾನ್ಸ್‌ನ ಜೂಲಿಯನ್‌ ಬೆನ್ನೆಟೆಯು ಸವಾಲು ಮೀರಿದರು.

ಪೊಟ್ರೊ 2012 ಮತ್ತು 2013ರ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.