ಮೈಸೂರು: ಶ್ರೇಯಾಂಕರಹಿತ ಆಟಗಾರ, ಕರ್ನಾಟಕದ ರಶೀಂ ಸ್ಯಾಮುಯೆಲ್ ಗುರುವಾರ ರಘುವೀರ್ ಟೆನಿಸ್ ಅಕಾಡೆಮಿಯ ಅಂಗಳದಲ್ಲಿ ಎನ್. ಆರ್. ಗ್ರುಪ್ ಕಪ್ 30ಕೆ ಎಐಟಿಎ ಪುರುಷರ ಟೆನಿಸ್ ಟೂರ್ನಿಯ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡರು.
ಸಿಂಗಲ್ಸ್ ಫೈನಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಬೆಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿ ರಶೀಂ 6-4, 6-4ರ ನೇರ ಸೆಟ್‌ಗಳಲ್ಲಿ ತಮಿಳುನಾಡಿನ ಮುಕುಂದ್ ಎಸ್. ಕುಮಾರ್ ವಿರುದ್ಧ ಜಯಸಿದರು. ಹಲವು ತಿಂಗಳುಗಳ ನಂತರ ಮತ್ತೆ ಟೆನಿಸ್ ಅಂಗಳಕ್ಕೆ ಮರಳಿದ್ದ ರಶೀಂ ಸೆಮಿಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಆಟಗಾರ ಮೈಸೂರಿನ ಸೂರಜ್ ಪ್ರಬೋಧ್ ಅವರನ್ನೂ ಮಣಿಸಿದರು.
ರಶೀಂ 7-6(5), 6-3ರಿಂದ ಸೂರಜ್ ಅವರಿಗೆ ಸೋಲಿನ ರುಚಿ ತೋರಿಸಿದರು. ಉತ್ತಮ ಸರ್ವೀಸ್‌ಗಳ ಮೂಲಕ ಗಮನ ಸೆಳೆದ ಸೂರಜ್ ಮೊದಲ ಸೆಟ್‌ನಲ್ಲಿ ತೀವ್ರ ಪೈಪೋಟಿಯೊಡ್ಡಿದರೂ, ರಶೀಂ ಪಾಲಿಗೇ ಗೆಲುವು ಒಲಿಯಿತು. ಎರಡನೇ ಸೆಟ್‌ನಲ್ಲಿ ಪ್ರಾಬಲ್ಯ ಮೆರೆದ ರಶೀಂ ಫೈನಲ್ ಪ್ರವೇಶಿಸಿದರು.
ಇನ್ನೊಂದು ಸೆಮಿಫೈನಲ್‌ನಲ್ಲಿ ಮುಕುಂದ್ ಎಸ್. ಕುಮಾರ್ 6-4, 6-1ರಿಂದ ಕರ್ನಾಟಕದ ವಿಕ್ರಂ ನಾಯ್ಡು ಅವರನ್ನು ಪರಾಭವಗೊಳಿಸಿದರು.
ಫಹಾದ್-ಮುಕುಂದ್‌ಗೆ ಡಬಲ್ಸ್ ಪ್ರಶಸ್ತಿ: ಸಿಂಗಲ್ಸ್‌ನಲ್ಲಿ ರನ್ನರ್ಸ್ ಅಪ್ ಪ್ರಶಸ್ತಿ ಪಡೆದ ತಮಿಳುನಾಡಿನ ಮುಕುಂದ್ ಎಸ್. ಕುಮಾರ್, ಫಹಾದ್ ಮೊಹಮ್ಮದ್ ಅವರೊಂದಿಗೆ ಡಬಲ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಫೈನಲ್‌ನಲ್ಲಿ ಮುಕುಂದ್-ಫಹಾದ್ ಜೋಡಿಯು 6-4, 6-3ರಿಂದ ಗುಜರಾತಿನ ಜಯ್ ಸೋನಿ ಮತ್ತು ಸಮೀಪ್ ಮೆಹತಾ ಅವರನ್ನು ಸೋಲಿಸಿದರು.
ಸೆಮಿಫೈನಲ್ ಪಂದ್ಯಗಳಲ್ಲಿ ಫಹಾದ್-ಮುಕುಂದ್ ಜೋಡಿಯು 6-2, 7-6 (3) ಕರ್ನಾಟಕದ ನಿಶಾಂತ್ ರೆಬೆಲ್ಲೊ ಮತ್ತು ವಿಕ್ರಂ ನಾಯ್ಡು ವಿರುದ್ಧ ಜಯಿಸಿದರು. ಇನ್ನೊಂದರಲ್ಲಿ ಜಯ್ ಸೋನಿ ಮತ್ತು ಸಮೀಪ್ ಮೆಹತಾ 6-4, 6-4 ನೇರ ಸೆಟ್‌ಗಳಲ್ಲಿ ವರುಣ್ ಗೋಪಾಲ್ ಮತ್ತು ಎಂ.ಡಿ. ಪ್ರಶಾಂತ್ ವಿರುದ್ಧ ಗೆದ್ದರು.
ಒಂದು ದಿನ ಮೊದಲೇ ಫೈನಲ್: ವೇಳಾಪಟ್ಟಿಯ ಪ್ರಕಾರ ಶುಕ್ರವಾರ ಫೈನಲ್ ಪಂದ್ಯಗಳು ನಡೆಯಬೇಕಿತ್ತು. ಆದರೆ ದಾವಣಗೆರೆಯಲ್ಲಿ ನಡೆಯಲಿರುವ ಐಟಿಎಫ್ ಟೆನಿಸ್ ಟೂರ್ನಿಯಲ್ಲಿ ಭಾಗವಹಿಸಲಿದ್ದ ಆಟಗಾರರ ಮನವಿಯ ಮೇರೆಗೆ ಸಂಘಟಕರು ಗುರುವಾರ ಮಧ್ಯಾಹ್ನ ಸಿಂಗಲ್ಸ್, ಡಬಲ್ಸ್ ಫೈನಲ್ ಪಂದ್ಯಗಳನ್ನು ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.