ADVERTISEMENT

ಎಐಟಿಎ ಟೆನಿಸ್: ಸೌಜನ್ಯಾಗೆ ಸಿಂಗಲ್ಸ್ ಪ್ರಶಸ್ತಿ, ಸಾಕೇತ್ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 19:30 IST
Last Updated 17 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಆಂಧ್ರ ಪ್ರದೇಶದ ಸಾಕೇತ್ ಮೈನೇನಿ ಹಾಗೂ ಸೌಜನ್ಯಾ ಭಾವಿಶೆಟ್ಟಿ ಇಲ್ಲಿ ಮುಕ್ತಾಯಗೊಂಡ ಎಐಟಿಎ ಜೆಜಿಐ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆದರು.

ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಸಾಕೇತ್ 6-3, 6-3ರ ನೇರ ಸೆಟ್‌ಗಳಿಂದ ತಮಿಳುನಾಡಿನ ಮೋಹಿತ್ ಮಯೂರ್ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡರು.
ಈ ಆಟಗಾರ 2004ರಲ್ಲಿ ಚೆನ್ನೈಯಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು.

ಮಹಿಳೆಯರ ವಿಭಾಗದ ಫೈನಲ್ ಪಂದ್ಯದಲ್ಲಿ ಸೌಜನ್ಯಾ 6-7, 6-4, 6-1ರಲ್ಲಿ ಗೋವಾದ ಪಿ.ನತಾಶಾ ವಿರುದ್ಧ ಜಯ ಸಾಧಿಸಿ ಪ್ರಶಸ್ತಿ ಗೆದ್ದುಕೊಂಡರು.

ಮೊದಲ ಸೆಟ್‌ನಲ್ಲಿ ಸೋಲು ಅನುಭವಿಸಿದ ಸೌಜನ್ಯಾ ಮತ್ತೆ ಲಯ ಕಂಡುಕೊಂಡು ಮುಂದಿನ ಎರಡೂ ಸೆಟ್ ಗೆದ್ದುಕೊಂಡರು. ಎರಡನೇ ಸೆಟ್‌ನ ಒಂದು ಹಂತದಲ್ಲಿ 5-4ರಲ್ಲಿ ಮುನ್ನಡೆಯಲ್ಲಿದ್ದ ಎಡಗೈ ಆಟಗಾರ್ತಿ ನತಾಶಾ ವಿರುದ್ಧ ಅಲ್ಪ ಪ್ರತಿರೋಧ ಎದುರಿಸಿದರು.

ಫರೀಜ್-ವಿಜಯ್‌ಗೆ ಪ್ರಶಸ್ತಿ: ಇದೇ ಟೂರ್ನಿಯ ಪುರುಷರ ವಿಭಾಗದ ಡಬಲ್ಸ್‌ನ ಫೈನಲ್ ಪಂದ್ಯದಲ್ಲಿ ತಮಿಳುನಾಡಿನ ಮೊಹಮ್ಮದ್ ಫರೀಜ್-ವಿಜಯ್ ಸುಂದರ್ ಪ್ರಕಾಶ್ ಜೋಡಿ 6-2, 6-4ರಲ್ಲಿ ತಮ್ಮ ರಾಜ್ಯದ ಇಲ್ವಿನ್ ಆ್ಯಂಟೊನಿ-ಮೋಹಿತ್ ಮಯೂರ್ ಎದುರು ಜಯ ಪಡೆದು ಚಾಂಪಿಯನ್ ಆದರು.

ಪಶ್ವಿಮ ಬಂಗಾಳದ ಟ್ರೀಟಾ ಭಟ್ಟಾಚಾರ್ಯ-ಮಹಾರಾಷ್ಟ್ರದ ಸೋನಿಯಾ ದಯಾಲ್ ಜೋಡಿ ಮಹಿಳೆಯರ ವಿಭಾಗದ ಡಬಲ್ಸ್‌ನಲ್ಲಿ 6-4, 6-3ರಲ್ಲಿ ಕರ್ನಾಟಕದ ಶರ್ಮದಾ ಬಾಲು-ಶೀತಲ್ ಗೌತಮ್ ಅವರನ್ನು ಮಣಿಸಿ ಪ್ರಶಸ್ತಿ  ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.