ADVERTISEMENT

ಎಚ್‌ಎಎಲ್‌ಗೆ ಮಣಿದ ಬಿಇಎಲ್

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 19:30 IST
Last Updated 19 ಜೂನ್ 2011, 19:30 IST
ಎಚ್‌ಎಎಲ್‌ಗೆ ಮಣಿದ ಬಿಇಎಲ್
ಎಚ್‌ಎಎಲ್‌ಗೆ ಮಣಿದ ಬಿಇಎಲ್   

ಬೆಂಗಳೂರು: ಪಂದ್ಯದ ಎರಡನೇ ಅವಧಿಯಲ್ಲಿ ಗೋಲಿನ ಮಳೆಗೆರೆದ ಎಚ್‌ಎಎಲ್ ತಂಡದವರು ಬಿಡಿಎಫ್‌ಎ ಆಶ್ರಯದ ರಾಜ್ಯ ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಭರ್ಜರಿ ಗೆಲುವು ಪಡೆದರು.

ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಎಚ್‌ಎಎಲ್ 7-0 ಗೋಲುಗಳಿಂದ ಬಿಇಎಲ್ ತಂಡವನ್ನು ಮಣಿಸಿತು. ತಲಾ ಎರಡು ಗೋಲುಗಳನ್ನು ಗಳಿಸಿದ ಮುರಳಿ ಮತ್ತು ಹಮ್ಜಾ ಎಚ್‌ಎಎಲ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪಂದ್ಯದ ಮೊದಲ ಅವಧಿ ಗೋಲುರಹಿತವಾಗಿತ್ತು. ಬಿಇಎಲ್ ತಂಡದವರು ವಿರಾಮದವರೆಗೆ ಎಚ್‌ಎಎಲ್ ಮುನ್ನಡೆ ಆಟಗಾರರಿಗೆ ತಡೆಯೊಡ್ಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಎರಡನೇ ಅವಧಿಯಲ್ಲಿ ಪಂದ್ಯದ ಚಿತ್ರಣವೇ ಬದಲಾಯಿತು.

ಮುರಳಿ ಅವರು 51ನೇ ನಿಮಿಷದಲ್ಲಿ ತಂಡದ ಗೋಲಿನ ಖಾತೆಯನ್ನು ತೆರೆದರಲ್ಲದೆ, 57ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು. ಆರ್.ಸಿ. ಪ್ರಕಾಶ್ (66ನೇ ನಿಮಿಷ) ತಂಡಕ್ಕೆ ಮೂರನೇ ಗೋಲು ತಂದಿತ್ತರು.

ಈ ಹಂತದಲ್ಲಿ ಬಿಇಎಲ್ ತಂಡ ಪಂದ್ಯದ ಮೇಲಿನ ಹಿಡಿತ ಕೈಬಿಟ್ಟಿತ್ತು. ಹಮ್ಜಾ ಅವರು (70 ಹಾಗೂ 74) ನಾಲ್ಕು ನಿಮಿಷಗಳ ಅಂತರದಲ್ಲಿ ಎರಡು ಬಾರಿ ಚೆಂಡನ್ನು ಗುರಿ ಸೇರಿಸಿದರು. ಆ ಬಳಿಕ ಸತೀಶ್ ಕುಮಾರ್ (86) ಹಾಗೂ ಮಲೆಗಾಂಬ (88) ಅವರು ತಂಡದ ಗೆಲುವಿನ ಅಂತರ ಹಿಗ್ಗಿಸಿದರು.

ಬಿಡಬ್ಲ್ಯುಎಸ್‌ಎಸ್‌ಬಿಗೆ ಗೆಲುವು: ಸತೀಶ್ ಅವರು ತಂದಿತ್ತ ಎರಡು ಗೋಲುಗಳ ನೆರವಿನಿಂದ ಬಿಡಬ್ಲ್ಯುಎಸ್‌ಎಸ್‌ಬಿ ತಂಡದವರು `ಎ~ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 3-0 ರಲ್ಲಿ ಓರಿಯಂಟಲ್ ವಿರುದ್ಧ ಜಯ ಪಡೆದರು.

ಉದಯ್ ಕುಮಾರ್ ಅವರು 22ನೇ ನಿಮಿಷದಲ್ಲಿ ತಂಡಕ್ಕೆ ಮೊದಲ ಗೋಲು ತಂದಿತ್ತರೆ, ಸತೀಶ್ 48 ಹಾಗೂ 79ನೇ ನಿಮಿಷದಲ್ಲಿ ಎದುರಾಳಿ ರಕ್ಷಣಾ ವಿಭಾಗದಲ್ಲಿ ಬಿರುಕು ಉಂಟುಮಾಡಿ ಚೆಂಡನ್ನು ಗುರಿ ಸೇರಿಸುವಲ್ಲಿ ಸಫಲರಾದರು.

ಸೋಮವಾರ ನಡೆಯುವ ಪಂದ್ಯಗಳಲ್ಲಿ ಬೆಂಗಳೂರು  ಮಾರ್ಸ್‌- ಎಸ್‌ಡಬ್ಲ್ಯುಆರ್ ಮತ್ತು ಸಿಐಎಲ್- ಪೋಸ್ಟಲ್ ತಂಡಗಳು ಎದುರಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.