ನವದೆಹಲಿ (ಪಿಟಿಐ): ಎಂಟು ಬಾರಿಯ ವಿಶ್ವ ಚಾಂಪಿಯನ್ ಪಂಕಜ್ ಅಡ್ವಾಣಿ ಅವರು ಚೀನಾದ ಹೈನಾನ್ ದ್ವೀಪದ ರಾಜಧಾನಿ ಹೈಕೊದಲ್ಲಿ ಆರಂಭವಾದ ‘ಹೈಕೊ ವಿಶ್ವ ಓಪನ್ ಸ್ನೂಕರ್’ ಟೂರ್ನಿಯ ಎರಡನೇ ಸುತ್ತು ಪ್ರವೇಶಿಸಿದರು. ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಬೆಂಗಳೂರಿನ ಪಂಕಜ್ 7-87, 72-44, 61-24, 43-66, 0-76, 67-51, 19-83, 15-85, 119-0 ರಲ್ಲಿ ಚೀನಾದ ಕ್ಸಿಯಾವೊ ಗುವೊಡಾಂಗ್ ಅವರನ್ನು ಮಣಿಸಿದರು.
ಒಂಬತ್ತು ಫ್ರೇಮ್‌ಗಳ ಪಂದ್ಯದಲ್ಲಿ ಚೀನಾದ ಆಟಗಾರ ಪಂಕಜ್‌ಗೆ ಪ್ರಬಲ ಪೈಪೋಟಿ ನೀಡಿದರು. ಆರು ಫ್ರೇಮ್‌ಗಳ ಬಳಿಕ ಪಂಕಜ್ 4-2 ರ ಮುನ್ನಡೆ ಪಡೆದರು. ಆದರೆ ಮುಂದಿನ ಎರಡು ಫ್ರೇಮ್‌ಗಳನ್ನು ಗೆದ್ದುಕೊಂಡ ಕ್ಸಿಯಾವೊ 4-4 ರಲ್ಲಿ ಸಮಬಲ ಸಾಧಿಸಿದರು. ನಿರ್ಣಾಯಕ ಫ್ರೇಮ್‌ನಲ್ಲಿ ನಿಖರ ಪ್ರದರ್ಶನ ನೀಡಿದ ಭಾರತದ ಆಟಗಾರ 119-0 ರಲ್ಲಿ ರಲ್ಲಿ ಜಯ ಸಾಧಿಸಿ ಎರಡನೇ ಸುತ್ತಿಗೆ ಮುನ್ನಡೆದರು.
ಲಖನೌದಲ್ಲಿ ಹೋದ ವಾರ ನಡೆದ ರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಪಂಕಜ್ ಎರಡನೇ ಸುತ್ತಿನ ಪಂದ್ಯದಲ್ಲಿ ಚೀನಾದ ಡಿಂಗ್ ಜುನ್‌ಹುಯ್ ಅವರನ್ನು ಎದುರಿಸುವ ಸಾಧ್ಯತೆಯಿದೆ. ಭಾರತದ ಇನ್ನೊಬ್ಬ ಆಟಗಾರ ಆದಿತ್ಯ ಮೆಹ್ತಾ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು. ಇಂಗ್ಲೆಂಡ್‌ನ ಮೈಕಲ್ ವೈಟ್ 9-77, 78-7, 23-70, 74-49, 65-8, 69-67, 0-91, 60-29 ರಲ್ಲಿ ಆದಿತ್ಯ ವಿರುದ್ಧ ಜಯ ಸಾಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.